ಕುಶಾಲನಗರದಿಂದ ಸಂಪಾಜೆವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಇಲ್ಲ; ಪ್ರತಾಪ್ ಸಿಂಹ ಸ್ಪಷ್ಟನೆ
ಮಡಿಕೇರಿ ಮಾ.19: ಕುಶಾಲನಗರದಿಂದ ಸಂಪಾಜೆ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಆಗುವುದಿಲ್ಲ ಎಂದು ಸಂಸದರಾದ ಪ್ರತಾಪ್ ಸಿಂಹ ಅವರು ಸ್ಪಷ್ಟ ಪಡಿಸಿದ್ದಾರೆ.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸದರು, ಕುಶಾಲನಗರದಿಂದ ಸಂಪಾಜೆಯವರೆಗೆ ಈಗಿರುವ ರಸ್ತೆ ಸ್ವಲ್ಪ ವಿಸ್ತರಣೆ ಆಗಲಿದೆ. ಸುಂಟಿಕೊಪ್ಪದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಆಗಲಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.
ಕುಶಾಲನಗರದಿಂದ ಸಂಪಾಜೆ ವರೆಗೆ 18 ಕಡೆ ತಡೆಗೋಡೆ ನಿರ್ಮಾಣವಾಗಿದೆ. 98 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ಹಾಗೂ ಇತರೆ ಕೆಲಸಗಳು ಆಗಿದೆ ಎಂದು ಸಂಸದರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಎಲ್ಲಾ ಜನ ಸಾಮಾನ್ಯರಿಗೂ ತಲುಪುವಂತೆ ಇದ್ದು, ಕೈಗಾರಿಕೆ, ಕೃಷಿ ಹೀಗೆ ಎಲ್ಲರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಮುಂಗಡಪತ್ರ ಆಗಿದೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
ಕೊಡಗು ಜಿಲ್ಲೆಗೆ ಬಜೆಟಿನಲ್ಲಿ ಮುಖ್ಯಮಂತ್ರಿ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಕೊಡವ ಜನಾಂಗದ ಅಭಿವೃದ್ಧಿಗಾಗಿ 10 ಕೋಟಿ ರೂ. ಬಜೆಟ್‍ನಲ್ಲಿ ಮುಖ್ಯಮಂತ್ರಿ ಅವರು ಪ್ರಕಟಿಸಿದ್ದಾರೆ ಎಂದು ಸಂಸದರು ತಿಳಿಸಿದರು.
ಕೊಡಗು ಜಿಲ್ಲೆಗೆ ವಿಶೇಷ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಖ್ಯಮಂತ್ರಿ ಅವರು ಘೋಷಿಸಿದ್ದಾರೆ. ಈಗಾಗಲೇ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಎಂಜಿನಿಯರಿಂಗ್ ಕಾಲೇಜು ಆರಂಭವಾಗಿ ಕಾರ್ಯನಿರ್ವಹಿಸುತ್ತಿವೆ. ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಕೊಡಗು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಆಗಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ಪ್ರತಾಪ್ ಸಿಂಹ ಅವರು ವಿವರಿಸಿದರು.
ಕೊಡಗು ಜನಸಂಖ್ಯೆಯಲ್ಲಿ ಪುಟ್ಟ ಜಿಲ್ಲೆಯಾದರೂ ಸಹ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಸರ್ಕಾರದಿಂದ ಆಗುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ಆ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ಕೆ, ಶಾಸಕರು, ವಿಧಾನ ಪರಿಷತ್ ಸದಸ್ಯರು ಹೀಗೆ ಎಲ್ಲರೂ ಕೈಜೋಡಿಸಿದ್ದಾರೆ ಎಂದು ಸಂಸದರು ನುಡಿದರು.
ಕಾಡಾನೆ ಹಾವಳಿ ನಿಯಂತ್ರಣ ಸಂಬಂಧಿಸಿದಂತೆ ರೈಲ್ವೆ ಕಂಬಿ ಅಳವಡಿಸುವ ನಿಟ್ಟಿನಲ್ಲಿ ಕೊಡಗು, ಹಾಸನ ಮತ್ತು ಚಿಕ್ಕಮಂಗಳೂರು ಜಿಲ್ಲೆಗೆ ಒಟ್ಟು 100 ಕೋಟಿ ರೂ.ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟಿನಲ್ಲಿ ಘೋಷಿಸಿದ್ದಾರೆ ಎಂದು ಸಂಸದರು ತಿಳಿಸಿದರು.
ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿಗೆ ಒಂಬತ್ತುವರೆ ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗೆ ನಾಲ್ಕುಪಥದ ರಸ್ತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒಂದು ವಾರದಲ್ಲಿ ತಾಂತ್ರಿಕ ಬಿಡ್ ತೆರೆಯಲಾಗುತ್ತದೆ. ಆ ನಿಟ್ಟಿನಲ್ಲಿ 4,500 ಕೋಟಿ ರೂ ವೆಚ್ಚದಲ್ಲಿ ಜೂನ್, ಜುಲೈ ತಿಂಗಳಲ್ಲಿ ಚಾಲನೆ ದೊರೆಯಲಿದೆ ಎಂದು ಸಂಸದರು ತಿಳಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ಎರಡು ವರ್ಷದೊಳಗೆ ಪ್ರತೀ ಮನೆಗೂ ನಲ್ಲಿ ನೀರು ಸಂಪರ್ಕ ಒದಗಿಸಲಾಗುವುದು ಎಂದು ಸಂಸದರು ಹೇಳಿದರು.
ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ/ ಪ್ರಸ್ತಾವ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು ಭಗವದ್ಗೀತೆಯಲ್ಲಿ ಬದುಕು ಹಾಗೂ ನೈತಿಕ ವಿಚಾರವಿದೆ. ಆದ್ದರಿಂದ ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು ಎಂದು ಸಂಸದರು ಸಲಹೆ ಮಾಡಿದರು.
ಭಗವದ್ಗೀತೆ ಒಂದು ರೀತಿ ನೀತಿ ಪಾಠವಿದ್ದಂತೆ. ಜೀವನದ ಮೌಲ್ಯ ತಿಳಿದುಕೊಳ್ಳಲು ಭಗವದ್ಗೀತೆ ಹೆಚ್ಚು ಸಹಕಾರಿ ಎಂದು ಸಂಸದರು ತಿಳಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಕಾರ್ಯ ಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಇತರರು ಇದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network