Header Ads Widget

Responsive Advertisement

‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಮಕ್ಕಂದೂರಿನಲ್ಲಿ ಚಾಲನೆ

‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಮಕ್ಕಂದೂರಿನಲ್ಲಿ ಚಾಲನೆ 


ಮಡಿಕೇರಿ ಮಾ.12: ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಮಕ್ಕಂದೂರಿನಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶನಿವಾರ ಚಾಲನೆ ನೀಡಿದರು.   

ಮಕ್ಕಂದೂರು ಗ್ರಾಮದ ರೈತರ ಮನೆಗಳಿಗೆ ತೆರಳಿ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ನೀಡಿದರು. 

ಈ ಸಂದರ್ಭದಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮನೆ ಮನೆಗೆ ಕಂದಾಯ ದಾಖಲೆಗಳನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ ಎಂದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಕೃಷಿಕರಿಗೆ ತಲುಪಿಸುವಲ್ಲಿ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಶಾಸಕರು ಹೇಳಿದರು.  

ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಪ್ರತೀ ಮೂರನೇ ಶನಿವಾರ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ‘ಜಿಲ್ಲಾಧಿಕಾರಿಯವರ ನಡಿಗೆ ಹಳ್ಳಿಯ ಕಡೆಗೆ’ ಕಾರ್ಯಕ್ರಮ ನಡೆಯುತ್ತಿದೆ. ಇದರ ಜೊತೆಗೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ದಾಖಲೆಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ 1.30 ಲಕ್ಷ ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು. 

ರಾಷ್ಟ್ರದಲ್ಲಿ ರೈತರು ಶೇ.70 ರಷ್ಟು ಇದ್ದು, ಕೃಷಿಯೇ ಪ್ರಧಾನ ಎಂಬುದನ್ನು ಮರೆಯುವಂತಿಲ್ಲ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ಅನುಕೂಲ ಮಾಡಬೇಕು ಎಂಬ ಉದ್ದೇಶದಿಂದ ಕಂದಾಯ ದಾಖಲೆ ಮನೆ ಬಾಗಿಲಿಗೆ ಜಾರಿಗೊಳಿಸಿದೆ. ಕಂದಾಯ ದಾಖಲೆಗಳಲ್ಲಿ ತಪ್ಪುಗಳಿದ್ದಲ್ಲಿ ಮಾರ್ಚ್, 22 ರಿಂದ 26 ರವರೆಗೆ ಉಚಿತವಾಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ಶಾಸಕರು ಹೇಳಿದರು. 

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳು ಎಲ್ಲರಿಗೂ ತಲುಪಬೇಕು. ತಹಶೀಲ್ದಾರ್ ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲುವುದು ತಪ್ಪಬೇಕು ಎಂದು ಹೇಳಿದರು. 

ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಚ್ಛಾಶಕ್ತಿಯಿಂದ ತಲುಪಿಸಲು ಪ್ರಯತ್ನಿಸಬೇಕು ಎಂದರು. 

ಯಾವುದೇ ಒಂದು ದಾಖಲೆಗಳನ್ನು ಪಡೆಯಲು ಇಂದೂ ಸಹ ಗ್ರಾಮೀಣ ಪ್ರದೇಶದ ಜನರು ಹರಸಾಹಸ ಪಡುತ್ತಾರೆ. ಅದನ್ನು ತಪ್ಪಿಸಬೇಕು. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕುಗ್ರಾಮಗಳಿಗೂ ಕಂದಾಯ ದಾಖಲೆಗಳನ್ನು ತಲುಪಿಸಬೇಕು ಎಂದು ವೀಣಾ ಅಚ್ಚಯ್ಯ ಅವರು ನುಡಿದರು. 

ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಸಮಿತಿ ರಾಜ್ಯ ಅಧ್ಯಕ್ಷರಾದ ರವಿಕುಶಾಲಪ್ಪ ಅವರು ಮಾತನಾಡಿ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆ ಮಾಡುವಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಯೋಜನೆ ಜಾರಿಗೆ ಬಂದಿದೆ ಎಂದು ತಿಳಿಸಿದರು. 

ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಬಿಲ್ಲನ್ನು ಕಾಲಕಾಲಕ್ಕೆ ಪಾವತಿಸಲಾಗುತ್ತದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಕಟ್ಟಕಡೆಯ ರೈತರ ಕಣ್ಣೀರು ಒರೆಸುವ ಕೆಲಸ ಆಗಬೇಕು. ಆದಿವಾಸಿಗಳಿಗೆ ಅರಣ್ಯ ಹಕ್ಕು ಪತ್ರ ತಲುಪಿಸಬೇಕು. ಸಾರ್ವಜನಿಕರ ಕೆಲಸವಾಗಬೇಕು. ಅಕ್ರಮ ಸಕ್ರಮ ಯೋಜನೆಯಡಿ ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ರವಿ ಕುಶಾಲಪ್ಪ ಅವರು ಹೇಳಿದರು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಕಂದಾಯ ದಾಖಲೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 1.30 ಲಕ್ಷ ಕಂದಾಯ ದಾಖಲೆಗಳನ್ನು ತಲುಪಿಸಲಾಗುವುದು ಎಂದರು. 

ಜಿಲ್ಲೆಯಲ್ಲಿ 84 ಸಾವಿರ ಪೈಕಿ ಆರ್‍ಟಿಸಿ ಇದ್ದು, ಇದನ್ನು ಪ್ರತ್ಯೇಕ ಆರ್‍ಟಿಸಿ ಮಾಡಲು ಮುಂದಾಗಲಾಗಿದೆ. ಆರ್‍ಟಿಸಿ ತಿದ್ದುಪಡಿ ಮಾಡುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 78 ಕಡೆಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲಾಗಿದ್ದು, ಜಿಲ್ಲೆಯ 104 ಗ್ರಾ.ಪಂ.ಗಳಲ್ಲಿಯೂ ಗ್ರಾಮ ಒನ್ ಸೇವೆಯನ್ನು ಆರಂಭಿಸಿ ಸೇವಾಸಿಂಧು ಸೌಲಭ್ಯದಡಿ  ಅಗತ್ಯ ದಾಖಲೆಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.  

ಬೆಳೆ ಪರಿಹಾರ ಸಂಬಂಧಿಸಿದಂತೆ ಬಾಕಿ ಇರುವುದಕ್ಕೆ ಬೆಳೆ ಪರಿಹಾರ ವಿತರಿಸಲಾಗುವುದು. ಹಾಗೆಯೇ 100 ಮಂದಿ ಪರವಾನಿಗೆ ಸರ್ವೇಯರ್‍ಗಳು ನೇಮಕವಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.  

ವಿಶೇಷ ಕಡತ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು. ಆ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಡಾ.ಬಿ.ಸಿ.ಸತೀಶ ಅವರು ವಿವರಿಸಿದರು.  

ಅರಣ್ಯ ಹಕ್ಕು ಕಾಯ್ದೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಒದಗಿಸಲಾಗುವುದು. ಅಕ್ರಮ ಸಕ್ರಮ ಯೋಜನೆಯಡಿ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.  

ಕಂದಾಯ ಇಲಾಖೆ ಪ್ರತಿಯೊಬ್ಬರಿಗೂ ಹತ್ತಿರವಾದ ಇಲಾಖೆಯಾಗಿದ್ದು, ಆ ನಿಟ್ಟಿನಲ್ಲಿ ಜನಸ್ನೇಹಿ ಮತ್ತು ಜನಪರವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಶ್ರಮಿಸಲಾಗುತ್ತದೆ ಎಂದರು.  

ಗ್ರಾ.ಪಂ.ಅಧ್ಯಕ್ಷರಾದ ಶ್ಯಾಮ್ ಸುಬ್ಬಯ್ಯ ಅವರು ಮಾತನಾಡಿ 2018 ರಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ತಲುಪಿಲ್ಲ. ಆದ್ದರಿಂದ ಅಂತಹ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕು ಎಂದರು.  

ಉಪಾಧ್ಯಕ್ಷರಾದ ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ತಹಶೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕರಾದ ಪ್ರಸಾದ್, ಗ್ರಾಮ ಲೆಕ್ಕಿಗರಾದ ಅಮೃತ, ರುದ್ರ, ಅಕ್ಷತಾ, ಸಂತೋಷ್ ಪಾಟೀಲ್, ಗ್ರಾ.ಪಂ. ಸದಸ್ಯರು ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,