Header Ads Widget

Responsive Advertisement

ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ಮಾರಾಟ ಸಮಿತಿಗಳ ಸದಸ್ಯರುಗಳಿಗೆ ಎರಡು ದಿನ ವಿವಿಧ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ಮಾರಾಟ ಸಮಿತಿಗಳ ಸದಸ್ಯರುಗಳಿಗೆ ಎರಡು ದಿನ ವಿವಿಧ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ


ಮಡಿಕೇರಿ ಮಾ.30:‌ ಬೀದಿಬದಿ ವ್ಯಾಪಾರಿಗಳು ಮೊದಲಿಗೆ ಶುಚಿತ್ವಕ್ಕೆ  ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಪ್ಲಾಸ್ಟಿಕ್‍ಗಳನ್ನು ಬಳಸಬಾರದು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು ಜೊತೆಗೆ ಕಾನೂನು ಪಾಲನೆ ಮಾಡಿಕೊಂಡು ನಗರದ ಶುಚಿತ್ವಕ್ಕೆ ಎಲ್ಲರೂ ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು  ಹೇಳಿದರು.

ದೀನ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ಮಾರಾಟ ಸಮಿತಿಗಳ ಸದಸ್ಯರುಗಳಿಗೆ ಎರಡು ದಿನ ವಿವಿಧ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರಕ್ಕೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ ಪೂವಯ್ಯ ಅವರು ಬುಧವಾರ ಚಾಲನೆ ನೀಡಿ ಮಾತನಾಡಿದರು.

ಒಬ್ಬ ವ್ಯಕ್ತಿ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಯಾವುದಾದರೊಂದು ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ನಡೆಸುವಂತಾಗಬೇಕು ಎಂಬ ದೃಷ್ಟಿಯಿಂದ ಸರ್ಕಾರವು ಹಲವಾರು ಸವಲತ್ತುಗಳನ್ನು ನೀಡಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಎರಡು ವರ್ಷಗಳಿಂದ ಕೋವಿಡ್‍ನಿಂದಾಗಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೆ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿತ್ತು. ಅಂತವರಿಗೆ ಸರ್ಕಾರ ವತಿಯಿಂದ ಸಹಾಯ ಧನವನ್ನು ನೀಡಲಾಗಿದೆ ಎಂದರು. 

ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ವತಿಯಿಂದ ವ್ಯಾಪಾರಕ್ಕಾಗಿ ಕಾರ್ಡ್ ಮತ್ತು ಜಾಗವನ್ನು ನಿಗದಿ ಪಡಿಸಲಾಗುವುದು. ಕಾರ್ಡ್ ಪಡೆದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ವ್ಯಾಪಾರಿಗಳಿಗೆ ನಿಗದಿಪಡಿಸಿದ ಜಾಗದಲ್ಲಿ ಮಾತ್ರ ಅವರು ವ್ಯಾಪಾರ ಮಾಡಬೇಕು ಎಂದು ಅವರು ಹೇಳಿದರು.

ಪಾದಚಾರಿಗಳಿಗೆ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತ್ತಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಫುಟ್‍ಪಾತಿನಲ್ಲಿ ವ್ಯಾಪಾರ ಮಾಡದೆ ಜನರಿಗೆ ಫುಟ್‍ಪಾತಿನಲ್ಲಿ ನಡೆದಾಡಲು ಅವಕಾಶ ಮಾಡಿಕೊಡಬೇಕು ಎಂದರು.

ನಗರಸಭೆ ಪೌರಾಯುಕ್ತರಾದ ರಾಮ್‍ದಾಸ್ ಅವರು ಮಾತನಾಡಿ ಮಡಿಕೇರಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಬೀದಿಬದಿಯಲ್ಲಿ  ವ್ಯಾಪಾರವನ್ನು ಮಾಡಿಕೊಂಡು ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಪ್ರಧಾನಮಂತ್ರಿ ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವನವನ್ನು ನಡೆಸಲು ಸರ್ಕಾರದ ವತಿಯಿಂದ ಹತ್ತು ಸಾವಿರ ಸಹಾಯ ಧನವನ್ನು ಸಾಲದ ರೂಪದಲ್ಲಿ ನೀಡಲಾಗಿತ್ತು. ಅದರ ಸದುಪಯೋಗವನ್ನು ಎಲ್ಲರು ಪಡೆದುಕೊಂಡಿದ್ದಾರೆ. ಇನ್ನೂ ಯಾರಾದರೂ ಸೌಲಭ್ಯವನ್ನು ಪಡೆಯದೆ ಇದ್ದರೆ ಅಂತವರು ಸಾಲ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೊದಲ ಕಂತಿನಲ್ಲಿ ಹತ್ತು ಸಾವಿರ ಸಾಲ ಪಡೆದು ತಿಂಗಳ ಕಂತಿನಲ್ಲಿ ಸಾಲ ಮುಗಿಸಿದವರಿಗೆ, ಎರಡನೇ ಕಂತಿನ ರೂಪದಲ್ಲಿ ಇಪ್ಪತ್ತು ಸಾವಿರವನ್ನು ಸಾಲದ ರೂಪದಲ್ಲಿ ನೀಡಲಾಗುವುದು. ಇದರ ಸದುಪಯೋಗವನ್ನು ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

 ಜಿಲ್ಲಾ ಕಾನೂನು ಪ್ರಾಧೀಕಾರ ವಕೀಲರಾದ ಪದ್ಮ, ಸಂಚಾರಿ ಪೋಲೀಸ್ ಉಪನಿರೀಕ್ಷಕರಾದ ಪದ್ಮನಾಭ, ತಾಲ್ಲೂಕು ಆಹಾರ ಸುರಕ್ಷತಾಧಿಕಾರಿ ಕೆ.ಆರ್.ನವೀನ್ ಕುಮಾರ್ ಅವರು ಬೀದಿಬದಿ ವ್ಯಾಪಾರಿಗಳಿಗೆ ಹಲವು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರ ಸಭಾ ಉಪಾಧ್ಯಕ್ಷರಾದ ಸವಿತಾ ರಾಕೇಶ್, ಜಿಲ್ಲಾ ಕೌಶಲ್ಯ ಅಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖಾ ಗಣಪತಿ, ನಗರ ಸಭಾ ಸದಸ್ಯರು ಇತರರು ಇದ್ದರು. ಸುಶಿಲ ಪ್ರಾರ್ಥಿಸಿದರು, ಜಯಲಕ್ಷ್ಮಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.