"ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ" ಗ್ರಾಮ ವಾಸ್ತವ್ಯ ಕಾರ್ಯಕ್ರಮ: ಹಲವು ಜ್ವಲಂತ ಸಮಸ್ಯೆಗೆ ಸೂಕ್ತ ಪರಿಹಾರ: ಡಾ.ಬಿ.ಸಿ.ಸತೀಶ
ಮಡಿಕೇರಿ ಮಾ.19: ಕೃಷಿಕರಿಗೆ ಆರ್‍ಟಿಸಿ ಒದಗಿಸುವುದು, ರಸ್ತೆ ದುರಸ್ತಿ, ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಕಲ್ಪಿಸುವುದು. ಹೀಗೆ ಹಲವು ಅಹವಾಲುಗಳ ಬಗ್ಗೆ ಪೆÇನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಹೋಬಳಿಯ ಹುದಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ' ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಹೆಚ್ಚಾಗಿ ಕೇಳಿ ಬಂದವು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಬೆಳಕು ಚೆಲ್ಲಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಸರ್ಕಾರ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ' ಎಂಬ ಹೆಸರಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ಥಳೀಯ ಹಲವು ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ವಾಸ್ತವ್ಯ ಸಹಕಾರಿ ಆಗಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಹಂತ ಹಂತವಾಗಿ ಪ್ರಯತ್ನಿಸಲಾಗುವುದು ಎಂದರು.
ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಲಭ್ಯವಿರುವ ಕಡೆ ಜಾಗ ಒದಗಿಸಲಾಗುವುದು, ಸರ್ಕಾರಿ ಕಚೇರಿಗಳು, ವಸತಿ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಸ್ಮಶಾನಕ್ಕೆ ಭೂಮಿ ಹೀಗೆ ಹಲವು ಉದ್ದೇಶಗಳಿಗೆ ಭೂಮಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೇಳಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸ್ಥಳೀಯರಾದ ಕೆ.ಎಂ.ಸುರೇಂದ್ರ ಅವರು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಸದಾ ಇದ್ದು, ಅಧಿಕಾರಿಗಳು ಸ್ಪಂದಿಸುವಂತಾಗಬೇಕು. ಕೃಷಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಬೇಕು ಎಂದು ಅವರು ಕೋರಿದರು. ಹುದಿಕೇರಿ ಸೇರಿದಂತೆ 5 ಗ್ರಾಮಕ್ಕೆ ಇಬ್ಬರು ಲೈನ್‍ಮೆನ್ ಗಳು ಇದ್ದಾರೆ. ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಇಇ ಅಶೋಕ ಅವರು ಲೈನ್‍ಮೆನ್‍ಗಳ ಕೊರತೆ ನೀಗಿಸಲು 400 ಲೈನ್‍ಮೆನ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಬಾಡಗರಕೇರಿಗೆ ಹೋಗುವ ಎಂಡಿಆರ್ ರಸ್ತೆ ಮಳೆಗಾಲದಲ್ಲಿ ಮುಳುಗುತ್ತಿರುವುದರಿಂದ ಇದರ ಬಗ್ಗೆ ಗಮನಹರಿಸಬೇಕು ಎಂದು ಕೆ.ಎಂ.ಸುರೇಂದ್ರ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿರಾಜಪೇಟೆ ತಾಲ್ಲೂಕಿನ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾದ ಶಂಕರಿ ಪೆÇನ್ನಪ್ಪ ಅವರು ಜಮ್ಮಾ ಬಾಣೆಯಲ್ಲಿ ಕೃಷಿಕರು ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಅವರವರ ಖಾತೆಗೆ ಆರ್‍ಟಿಸಿ ಇಲ್ಲದಿರುವುದರಿಂದ ಸಹಕಾರ ಸಂಘಗಳಲ್ಲಿ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿಕರ ಖಾತೆಗೆ ಆರ್‍ಟಿಸಿ ಮಾಡಿಸಿಕೊಡುವಂತೆ ಕೋರಿದರು.
ಜಿಲ್ಲೆಯಲ್ಲಿ ಸಹಕಾರ ಸಂಘದಲ್ಲಿ ಶೇ.30 ರಷ್ಟು ಮಾತ್ರ ರೈತರು ಕೃಷಿ ಸಾಲ ಪಡೆದುಕೊಂಡಿದ್ದಾರೆ. ಉಳಿದವರು ಆರ್‍ಟಿಸಿ ಇಲ್ಲದೆ ಕೃಷಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಒಂದು ಕುಟುಂಬದ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇದ್ದು, ಮಕ್ಕಳ, ಮೊಮ್ಮಕ್ಕಳ ಹೆಸರಿಗೆ ಆರ್‍ಟಿಸಿ ಆಗಿರುವುದಿಲ್ಲ. ಇದು ಕೊಡಗು ಜಿಲ್ಲೆಯ ಸಮಸ್ಯೆಯಾಗಿದ್ದು, ಈ ಬಗ್ಗೆ ಗಮನಹರಿಸಬೇಕಿದೆ ಎಂದು ಮನವಿ ಮಾಡಿದರು.
ಗ್ರಾ.ಪಂ.ಅಧ್ಯಕ್ಷರಾದ ಚಂದ್ರಪ್ರಕಾಶ ಅವರು ಮಾತನಾಡಿ ಕುಟುಂಬದಲ್ಲಿ ಹೊಂದಾಣಿಕೆ ಇಲ್ಲದಿರುವುದರಿಂದ ಕೃಷಿಕರು ಆರ್‍ಟಿಸಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಟುಂಬದವರು ಹೊಂದಾಣಿಕೆಯಿಂದ ಹೋದರೆ ಆರ್‍ಟಿಸಿ ಮಾಡಿಸಿಕೊಳ್ಳಬಹುದಾಗಿದೆ. ಆದರೆ ಇದು ಆಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಜಿಲ್ಲಾಧಿಕಾರಿ ಅವರು ಮಾತನಾಡಿ 2000 ಇಸವಿಯಲ್ಲಿ ಆರ್‍ಟಿಸಿ ಕಂಪ್ಯೂಟರೈಸೇಷನ್ ಆಯಿತು. ಹಿಂದೆ ಕೈ ಬರಹದಲ್ಲಿ ಆರ್‍ಟಿಸಿ ಬರೆಯುತ್ತಿದ್ದರು ಎಂದು ಅವರು ತಿಳಿಸಿದರು.
ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರವನ್ನು ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಇದರಿಂದ ತುಂಬ ತೊಂದರೆಯಾಗುತ್ತಿದೆ ಎಂದು ಸಭೆ ಗಮನಕ್ಕೆ ತಂದರು .
ಜಿಲ್ಲಾಧಿಕಾರಿ ಅವರು ಮಾತನಾಡಿ ಜನನ ಮತ್ತು ಮರಣ ಪ್ರಮಾಣ ಪತ್ರ ನಿರ್ವಹಣೆಯನ್ನು ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿ ಅವರಿಗೆ ನೀಡಲಾಗಿತ್ತು. ಒಂದು ತಿಂಗಳ ಹಿಂದೆ ಸರ್ಕಾರ ಆದೇಶ ಮಾಡಿದ್ದು, ಈಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೋಂದಣಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ ಉಪ ನೋಂದಣಿ ಅಧಿಕಾರಿಯಾಗಿ ನೇಮಕ ಮಾಡಿರುವುದರಿಂದ ಇನ್ನೂ ಮುಂದೆ ಈ ರೀತಿಯ ವಿಳಂಬವಾಗುವುದಿಲ್ಲ ಎಂದು ಹೇಳಿದರು.
ವಿರಾಜಪೇಟೆಯ ಸೊಸೈಟಿಯೊಂದರಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಠೇವಣಿ ಇಟ್ಟ ಗ್ರಾಹಕರಿಗೆ ಹಣವನ್ನು ಹಿಂದಿರಿಗಿಸಿಲ್ಲ, ಇದರ ಬಗ್ಗೆ ಗಮನಹರಿಸಬೇಕು ಎಂದು ಪೆÇನ್ನಪ್ಪ ಅವರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿರಾಜಪೇಟೆ ತಾಲ್ಲೂಕು ಸಹಕಾರ ಇಲಾಖೆ ಸಿಡಿಒ ಮೋಹನ ಎಮ್.ಎಸ್ ಅವರು ಡಿಆರ್ ಅದೇಶದಂತೆ ತನಿಖೆ ನಡೆಸಲಾಗುತ್ತಿದೆ. ಠೇವಣಿ ಇಟ್ಟ ಗ್ರಾಹಕರ ಹಣವನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಅವರು ಮಾತನಾಡಿ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಠೇವಣಿದಾರರಿಗೆ ಹಣವನ್ನು ಹಿಂದಿರಗಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಕೆಬಿ ಪ್ರೌಢಶಾಲಾ ಜಾಗದ ದಾಖಲಾತಿ ಪರಿಶೀಲಿಸಿ ಸರ್ವೇ ಮಾಡಿ ಪೆÇೀಡಿ ಮಾಡಿಕೊಡಬೇಕು ಎಂದು ಪೆÇನ್ನಪ್ಪ ಅವರು ಮನವಿ ಮಾಡಿದರು.
ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿ ಕೆಬಿ ಪ್ರೌಢಶಾಲೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಪೋಡಿ ದಾಖಲೆ ಮಾಡಿಕೊಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳ ಆರ್‍ಟಿಸಿಯಲ್ಲಿ ನವೀಕರಣ ಮಾಡುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಹೊಣೆಗಾರಿಕೆಯನ್ನು ಬಿಇಒ ಹಾಗೂ ಡಿಡಿಪಿಐ ಅವರಿಗೆ ನೀಡಲಾಗಿದೆ ಎಂದರು.
ಶಾಲೆಯ ಹೆಸರಿನಲ್ಲಿ ಇದುವರೆಗೆ ಆರ್‍ಟಿಸಿ ಆಗದಿದ್ದಲ್ಲಿ ಶಾಲೆಗೆ ಸಂಬಂಧಿಸಿದವರು ತಹಶೀಲ್ದಾರರ ಜೊತೆ ಚರ್ಚಿಸಿ ಸರ್ವೇ ಮಾಡಿಸಿಕೊಳ್ಳಬೇಕು. ಹಾಗೂ ಶಾಲಾ ಕಟ್ಟಡ ನಿರ್ಮಿಸಲು ದಾನಿಗಳು ಜಾಗವನ್ನು ನೀಡಿದ್ದರೆ ದಾನಪತ್ರ ಇದ್ದು ನವೀಕರಣವಾಗದಿದ್ದರೆ, ಇದಕ್ಕೆ ಸಂಬಂಧಿಸಿದ ವಿಶೇಷ ಅಭಿಯಾನವನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.
ಕೊಣಗೇಂರಿಯ ನಿವಾಸಿಯೊಬ್ಬರು ರಸ್ತೆ ಇಲ್ಲದೇ ಸಮಸ್ಯೆಯಾಗುತ್ತಿದೆ. ಇದರಿಂದ ಹಿರಿಯರು ಮತ್ತು ಮಕ್ಕಳಿಗೆ ತೊಂದರಿಯಾಗುತ್ತಿದೆ. ಹಾಗೂ ಕುಡಿಯುವ ನೀರಿನ ಸಮಸ್ಯೆ ಇದ್ದು ನೀರಿನ ಅಭಾವ ಹೆಚ್ಚಾಗಿದೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ ಪ್ರತಿ ಮನೆಗೆ ನಲ್ಲಿ ನೀರು ಕಲ್ಪಿಸಲಾಗುತ್ತಿದ್ದು, 2023 ರ ಒಳಗೆ ರಾಜ್ಯದ ಪ್ರತಿ ಮನೆಗೂ ನಲ್ಲಿ ನೀರು ಕಲ್ಪಿಸುವ ಗುರಿ ಹೊಂದಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ. ಸುರೇಶ್ ಭಟ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ಅಬಕಾರಿ ಉಪ ಆಯುಕ್ತರಾದ ಜಗದೀಶ್ ನಾಯಕ್ ಇತರರು ಇದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network