Ad Code

Responsive Advertisement

ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ಏ.10ರಂದು


ಕೊಡಗು ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಇಲ್ಲಿಗೆ ಸಮೀಪದ ರಾಮಸ್ವಾಮಿ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ಏ.10ರಂದು ಜರುಗಲಿದೆ.

ಜಾತ್ರಾ ಮಹೋತ್ಸವವು ಏಪ್ರಿಲ್ 8ರಂದು ಆರಂಭವಾಗಲಿದ್ದು, 10 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವವು 10 ರಂದು ಅಭಿಜಿನ್ ಮುಹೂರ್ತದಲ್ಲಿ ವೇದ ಬ್ರಹ್ಮ ನರಹರಿ ಶರ್ಮಾ ಅವರ ನೇತೃತ್ವದಲ್ಲಿ ನೆರವೇರಲಿದೆ.

ಪೂಜಾ ಕೈಂಕರ್ಯಗಳ ಜೊತೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ದೇವಾಲಯ ಕಲಾ ಸಭಾಂಗಣದಲ್ಲಿ ನಡೆಯಲ್ಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್.ಸುರೇಶ್ ತಿಳಿಸಿದ್ದಾರೆ.

ಪೌರಾಣಿಕ ಹಿನ್ನೆಲೆ: ಕಣಿವೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯಿದ್ದು, ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಮರಳು ಮಿಶ್ರಿತ ಮಣ್ಣಿನಿಂದ ನಿರ್ಮಿಸಿದನೆಂದು ಹೇಳಲಾಗಿದೆ.

ರಾವಣನಿಂದ ಅಪಹರಣಕ್ಕೊಳಗಾದ ಸೀತೆಯನ್ನು ಲಕ್ಷ್ಮಣನೊಂದಿಗೆ ಹುಡುಕುತ್ತಾ ದಕ್ಷಿಣಾಭಿಮುಖವಾಗಿ ಬರುವ ಶ್ರೀ ರಾಮನು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಇಲ್ಲಿಯೇ ವಿಶ್ರಾಂತಿ ಪಡೆಯಲು ಮುಂದಾಗುತ್ತಾನೆ.

ಇಲ್ಲಿನ ಕಾವೇರಿ ನದಿ ದಡದಲ್ಲಿ ಈ ಮೊದಲೇ ತಪಸ್ಸಿಗೆ ಕುಳಿತಿದ್ದ ವ್ಯಾಘ್ರ ಮಹರ್ಷಿಗಳು ಶ್ರೀ ರಾಮನಿಗೆ ಆಜ್ಞೆ ಮಾಡಿ ಪೂಜಾ ಕೈಂಕರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರುವಂತೆ ಹೇಳುತ್ತಾರೆ. ಆದರೆ ಶಿವಲಿಂಗವನ್ನು ತರಲು ಹೋದ ಆಂಜನೇಯ ಬರಲು ತಡವಾಗುವುದನ್ನು ಮತ್ತು ಪೂಜೆಯ ಸಮಯ ಮೀರುತ್ತಿರುವುದನ್ನು ಅರಿತ ಶ್ರೀರಾಮ ಸ್ಧಳದಲ್ಲಿಯೇ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆ ಆರಂಭಿಸಿರುತ್ತಾನೆ.

ಅಷ್ಟರಲ್ಲಿ ಆಂಜನೇಯ ಶಿವಲಿಂಗವನ್ನು ತರುತ್ತಾನಾದರೂ, ಮರುಳಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಯಲ್ಲಿ ನಿರತನಾದ ರಾಮನ ಮೇಲೆ ಆಂಜನೇಯ ಅಸಮಾಧಾನಗೊಳ್ಳುತ್ತಾನೆ.

ಈ ನಡುವೆ ಆಂಜನೇಯನಿಗೆ ಬೇಸರವಾಗಬಾರದೆಂಬ ಕಾರಣಕ್ಕೆ ಆತ ಕಾಶಿಯಿಂದ ತಂದ ಶಿವಲಿಂಗವನ್ನು ಶ್ರೀ ರಾಮ ಸನ್ನಿಧಿಯ ಹಿಂಬದಿಯ ಬೆಟ್ಟದಲ್ಲಿ ಲಕ್ಷ್ಮಣನ ಮೂಲಕ ಪ್ರತಿಷ್ಠಾಪನೆ ಮಾಡಿಸುತ್ತಾನೆ. ಆಸ್ಧಳ ಇದೀಗ ಲಕ್ಷ್ಮಣೇಶ್ವರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದ್ದು, ಅತಿ ಅಪರೂಪದ ಲಕ್ಷ್ಮಣೇಶ್ವರ ಕ್ಷೇತ್ರವನ್ನು ಹೊಂದಿರುವ ಪೂಜಾ ಕ್ಷೇತ್ರವಾಗಿ ಕಣಿವೆ ಗ್ರಾಮ ಪ್ರಸಿದ್ಧಿ ಹೊಂದಿದೆ. ಹರಿಹರೇಶ್ವರ ಲಿಂಗವು ಸಹ ಇಲ್ಲಿ ಉದ್ಭವ ಮೂರ್ತಿಯಾಗಿ ಭಕ್ತರಿಂದ ಪೂಜಿಸಲ್ಪಡುತ್ತಿದೆ.

ಕಾಶಿಯಿಂದ ಗಂಗಾಜಲ: ಯುಗಾದಿ ಹಬ್ಬದ ಬಳಿಕ ಒಂದು ವಾರದ ನಂತರ ನಡೆಯುವ ಶ್ರೀ ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವದಂದು ಅಂಚೆಯ ಮೂಲಕ ಕಾಶಿಯಿಂದ ಗಂಗಾಜಲ ಬರುತ್ತದೆ. ಹೆಬ್ಬಾಲೆ ಅಂಚೆ ಕಚೇರಿಗೆ ಬರುವ ಗಂಗಾಜಲವನ್ನು ನಾದಸ್ವರ ಮಂಗಳ ವಾದ್ಯ ಹಾಗೂ ಪೂರ್ಣಕುಂಭಗಳೊಂದಿಗೆ ಕಣಿವೆಯ ಗ್ರಾಮಸ್ಥರು ದೇವಾಲಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಗ್ರಾಮಕ್ಕೆ ತಂದು ಶ್ರೀ ರಾಮಲಿಂಗೇಶ್ವರನಿಗೆ ಅಭಿಷೇಕಗೈದ ಬಳಿಕ ಅಲಂಕೃತವಾದ ಭವ್ಯ ರಥದಲ್ಲಿ ಶ್ರೀ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಭಕ್ತರ ಜಯ ಘೋಷದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.