Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೃಷಿ ಕುರಿತಾದ ರಾಷ್ಟ್ರೀಯ ಸಮ್ಮೇಳನ-ʻಮುಂಗಾರು ಅಭಿಯಾನ–2022ʼ


ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಇಂದು ನವದೆಹಲಿಯ ʻಎನ್ಎಎಸ್‌ಸಿʼ ಸಂಕೀರ್ಣದಲ್ಲಿ ʻ2022-23ನೇ ಸಾಲಿನ ಮುಂಗಾರು ಅಭಿಯಾನಕ್ಕಾಗಿ ಕೃಷಿ ಕುರಿತ ರಾಷ್ಟ್ರೀಯ ಸಮ್ಮೇಳನʼವನ್ನು ಉದ್ಘಾಟಿಸಿದರು. 

2ನೇ ಮುಂಗಡ ಅಂದಾಜಿನ (2021-22) ಪ್ರಕಾರ, ದೇಶದ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು 3160 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ, ಇದು ಸಾರ್ವಕಾಲಿಕ ದಾಖಲೆಯಾಗಲಿದೆ ಎಂದು ಸಚಿವರು ಸಂತೃಪ್ತಿ ವ್ಯಕ್ತಪಡಿಸಿದರು.  

ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯು ಕ್ರಮವಾಗಿ 269.5 ಮತ್ತು 371.5 ಲಕ್ಷ ಟನ್‌ಗೆ ತಲುಪಲಿದೆ. ಮೂರನೇ ಸುಧಾರಿತ ಅಂದಾಜಿನ ಪ್ರಕಾರ, 2020-21 ರಲ್ಲಿ ತೋಟಗಾರಿಕೆ ಉತ್ಪಾದನೆಯು 3310.5 ಲಕ್ಷ ಟನ್‌ಗಳಷ್ಟಿದೆ, ಇದು ಭಾರತೀಯ ತೋಟಗಾರಿಕೆ ಉತ್ಪಾದನೆಯಲ್ಲಿ ಇದುವರೆಗಿನ ಗರಿಷ್ಠ ಪ್ರಮಾಣವೆನಿಸಿದೆ. ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಕೀಟನಾಶಕಗಳು ಮತ್ತು ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಸಚಿವರು ಹೇಳಿದರು. 

ಯೂರಿಯಾ ಬದಲಿಗೆ ಅದರ ಸ್ಥಾನವನ್ನು ನ್ಯಾನೊ-ಯೂರಿಯಾದಿಂದ ತುಂಬಲು ಕಾರ್ಯತಂತ್ರ ರೂಪಿಸಬೇಕು ಎಂದು ಅವರು ಸೂಚಿಸಿದರು. ಸರ್ಕಾರವು ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಒತ್ತು ನೀಡುವುದನ್ನು ಮುಂದುವರಿಸುತ್ತದೆ ಎಂದು ಅವರು ಘೋಷಿಸಿದರು. ರಫ್ತಿನ ಬಗ್ಗೆ ಮಾತನಾಡಿದ ಸಚಿವರು, ಪ್ರಸ್ತುತ ಕೃಷಿ ರಫ್ತುಗಳು ಹೆಚ್ಚಾಗಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ಗುಣಮಟ್ಟದ ಉತ್ಪನ್ನಗಳ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ರಫ್ತುದಾರರು ಮತ್ತು ರೈತರು ಇಬ್ಬರೂ ಪ್ರಯೋಜನ ಪಡೆಯಬೇಕು ಎಂದರು.

ಹಿಂದಿನ ಬೆಳೆ ಋತುಗಳಲ್ಲಿ ಸಾಧನೆಯನ್ನು ಪರಾಮರ್ಶಿಸುವುದು ಮತ್ತು ಮೌಲ್ಯಮಾಪನ ಮಾಡುವುದು, ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ ಖಾರಿಫ್ ಋತುವಿನ ಬೆಳೆವಾರು ಗುರಿಗಳನ್ನು ನಿಗದಿಪಡಿಸುವುದು, ನಿರ್ಣಾಯಕ ಒಳಹರಿವುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಬೆಳೆಗಳ ಉತ್ಪಾದನೆ, ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವುದು ಈ ಸಮಾವೇಶದ ಉದ್ದೇಶವಾಗಿದೆ.  

ಈಗಾಗಲೇ ಅತ್ಯಧಿಕ ಉತ್ಪಾದನೆಯಾಗುತ್ತಿರುವ ಅಕ್ಕಿ ಮತ್ತು ಗೋಧಿಯಂತಹ ಉತ್ಪನ್ನಗಳ ಬದಲಿಗೆ, ಭೂಮಿಯ ಬಳಕೆಯನ್ನು ಬೇರೆಡೆಗೆ ತಿರುಗಿಸಲು ಕೃಷಿ-ಪರಿಸರ ಆಧಾರಿತ ಬೆಳೆ ಯೋಜನೆ ರೂಪಿಸುವುದು ಸರಕಾರದ ಆದ್ಯತೆಯಾಗಿದೆ. ಅಕ್ಕಿ ಮತ್ತು ಗೋಧಿಯಂತಹ ಉತ್ಪನ್ನಗಳ ಬದಲಿಗೆ ಎಣ್ಣೆ ಕಾಳುಗಳು ಮತ್ತು ದ್ವಿದಳ ಧಾನ್ಯಗಳು ಹಾಗೂ ಹೆಚ್ಚಿನ ಮೌಲ್ಯದ ರಫ್ತು ಗಳಿಸುವ ಬೆಳೆಗಳಂತಹ ಕೊರತೆ ಇರುವ ಉತ್ಪನ್ನಗಳನ್ನು ಬೆಳೆಯುವತ್ತ ಗಮನ ಹರಿಸುವುದು ಇದರ ಉದ್ದೇಶವಾಗಿದೆ.

ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಮತ್ತು ತಾಳೆ ಎಣ್ಣೆ ಉತ್ಪಾದನೆಯನ್ನು ಉತ್ತೇಜಿಸುವತ್ತ ಗಮನ ಹರಿಸುವ ಮೂಲಕ ಸರಕಾರವು ಬೆಳೆ ವೈವಿಧ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ದೇಶದಲ್ಲಿ ಬೆಳೆ ವೈವಿಧ್ಯೀಕರಣ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ನೀತಿ ಚೌಕಟ್ಟನ್ನು ಅಂತಿಮಗೊಳಿಸಲು ಪ್ರಮುಖ ರಾಜ್ಯಗಳು, ಸಂಶೋಧಕರು, ಕೈಗಾರಿಕೆಗಳು ಮತ್ತು ನೀತಿ ನಿರೂಪಕರಂತಹ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆಗಳನ್ನು ನಡೆಸಲಾಗಿದೆ.  ಕೃಷಿಯನ್ನು ಸುಸ್ಥಿರ, ಲಾಭದಾಯಕವಾಗಿಸಲು ಮತ್ತು ಕೊರತೆ ಎದುರಿಸುತ್ತಿರುವ ಉತ್ಪನ್ನಗಳ ವಿಚಾರದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಎಲ್ಲಾ ರಾಜ್ಯಗಳು ಬೆಳೆ ವೈವಿಧ್ಯೀಕರಣದದತ್ತ ಕೆಲಸ ಮಾಡಬೇಕು ಎಂದರು.

2022-23ನೇ ಸಾಲಿನಲ್ಲಿ ಒಟ್ಟು 3,280 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದಿಸುವ  ರಾಷ್ಟ್ರೀಯ ಗುರಿಯನ್ನು ಸಮಾವೇಶದಲ್ಲಿ ನಿಗದಿಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 3,160 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. 2022-23ರಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಉತ್ಪಾದನೆಯ ಗುರಿಯನ್ನು ಕ್ರಮವಾಗಿ 295.5 ಮತ್ತು 413.4 ಲಕ್ಷ ಟನ್‌ಗಳಿಗೆ ನಿಗದಿಪಡಿಸಲಾಗಿದೆ.  2021-22ರಲ್ಲಿ 115.3 ಲಕ್ಷ ಟನ್‌ಗಳಷ್ಟಿರುವ ನ್ಯೂಟ್ರಿ-ಏಕದಳ ಧಾನ್ಯಗಳ ಉತ್ಪಾದನೆಯನ್ನು 2022-23ರಲ್ಲಿ 205.0 ಲಕ್ಷ ಟನ್‌ಳಿಗೆ ಹೆಚ್ಚಿಸಬೇಕಾಗಿದೆ. ಅಂತರಬೆಳೆ ಮತ್ತು ಬೆಳೆ ವೈವಿಧ್ಯೀಕರಣ ಮತ್ತು ʻಎಚ್‌ವೈವಿʼಗಳ ಪರಿಚಯ ಹಾಗೂ ಕಡಿಮೆ ಇಳುವರಿ ನೀಡುವ ಪ್ರದೇಶಗಳಲ್ಲಿ ಸೂಕ್ತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಿ, ಒಟ್ಟಾರೆ ಬೆಳೆ ಪ್ರದೇಶವನ್ನು ಹೆಚ್ಚಿಸುವ ಕಾರ್ಯತಂತ್ರ ಹೊಂದಲಾಗಿದೆ. 

ಕಾರ್ಯದರ್ಶಿ (ಕೃಷಿ ಮತ್ತು ರೈತರ ಕಲ್ಯಾಣ) ಶ್ರೀ ಮನೋಜ್ ಅಹುಜಾ ಅವರು ಮಾತನಾಡಿ, “2015-16ರಿಂದ ಈಚೆಗೆ ದೇಶವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಏರಿಕೆ ಪ್ರವೃತ್ತಿಯನ್ನು ಕಾಯ್ದುಕೊಂಡಿದೆ ಎಂದು ಹೇಳಿದರು. ಕಳೆದ 6 ವರ್ಷಗಳಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯು 251.54 ದಶಲಕ್ಷ ಟನ್‌ಗಳಿಂದ 316.01 ದಶಲಕ್ಷ ಟನ್‌ಗಳಿಗೆ, ಅಂದರೆ ಶೇ.25 ರಷ್ಟು ಹೆಚ್ಚಾಗಿದೆ. ಎಣ್ಣೆ ಬೀಜಗಳು ಇದೇ ಪ್ರವೃತ್ತಿಯನ್ನು ಅನುಸರಿಸಿವೆ. ಜೊತೆಗೆ 2015-16ರಲ್ಲಿ 25.25 ದಶಲಕ್ಷ ಟನ್‌ಗಳಷ್ಟಿದ್ದ ಇವುಗಳ ಉತ್ಪಾದನೆ 2021-22ರಲ್ಲಿ 37.15 ದಶಲಕ್ಷ ಟನ್‌ಗಳಿಗೆ, ಅಂದರೆ ಶೇ.42 ರ ಬೆಳವಣಿಗೆಗೆ ಸಾಕ್ಷಿಯಾಗಿದೆ. 2021-22ರಲ್ಲಿ ಭಾರತದ ಕೃಷಿ ಉತ್ಪನ್ನಗಳ ರಫ್ತು ಶೇ.19.92ರಷ್ಟು ಏರಿಕೆಯಾಗಿ 50.21 ಶತಕೋಟಿ ಡಾಲರ್ (376575 ಕೋಟಿ ರೂ.) ತಲುಪಿದೆ. ಗೋಧಿ, ಇತರ ಧಾನ್ಯಗಳು, ಅಕ್ಕಿ (ಬಾಸ್ಮತಿ ಹೊರತುಪಡಿಸಿ), ಸೋಯಾ, ಕಚ್ಚಾ ಹತ್ತಿ, ತಾಜಾ ತರಕಾರಿ ಮತ್ತು ಸಂಸ್ಕರಿಸಿದ ತರಕಾರಿಗಳು ಮುಂತಾದ ಸರಕುಗಳು ಹೆಚ್ಚು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ,ʼʼ ಎಂದು ಹೇಳಿದರು.

"ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಕೃಷಿ ಮತ್ತು ತೋಟಗಾರಿಕೆ ವಲಯಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ತ್ವರಿತಗೊಳಿಸಬೇಕಾಗಿದೆ. ಸರಕಾರವು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳು, ಸುಧಾರಣೆಗಳು ಮತ್ತು ರೈತರಿಗೆ ಹೆಚ್ಚಿನ ಆದಾಯದ ಮೇಲೆ ಗಮನ ಕೇಂದ್ರೀಕರಿಸುವ ನೀತಿಗಳನ್ನು ಅಳವಡಿಸಿಕೊಂಡಿದೆ. ಎಲ್ಲಾ ಎಣ್ಣೆಕಾಳುಗಳಿಗಾಗಿ 3 ವರ್ಷಗಳ ಅವಧಿಗೆ ʻಸೀಡ್‌ ರೋಲಿಂಗ್ ಪ್ಲ್ಯಾನ್ʼ (2021-22 ರಿಂದ 2023-24) ಕ್ರಿಯಾ ಯೋಜನೆಯನ್ನು 381.95 ಕೋಟಿ ರೂ.ಗಳ ಅನುದಾನದೊಂದಿಗೆ ರೂಪಿಸಲಾಗಿದ್ದು, ಮುಂದಿನ 3 ವರ್ಷಗಳಲ್ಲಿ ಒಟ್ಟು 14.7 ಲಕ್ಷ ಕ್ವಿಂಟಾಲ್ಗಳಷ್ಟು ಗುಣಮಟ್ಟದ ಹೊಸ ಅಧಿಕ ಇಳುವರಿಯ ಬೀಜಗಳನ್ನು ಉತ್ಪಾದಿಸಲಾಗುವುದು,ʼʼ ಎಂದು ಹೇಳಿದರು.

ಖಾರಿಫ್ ಋತುವಿನಲ್ಲಿ ಬೆಳೆ ನಿರ್ವಹಣೆಯ ಕಾರ್ಯತಂತ್ರಗಳ ಬಗ್ಗೆ ವಿವರ ನೀಡಿದ  ಕೃಷಿ ಆಯುಕ್ತ ಡಾ. ಎ. ಕೆ. ಸಿಂಗ್ ಅವರು, “ಸರಕಾರದ ಸಮಯೋಚಿತ ಮಧ್ಯಪ್ರವೇಶದಿಂದಾಗಿ ದೇಶವು ಸಾರ್ವಕಾಲಿಕ ಅತ್ಯಧಿಕ ಆಹಾರ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ತೋಟಗಾರಿಕೆ ಉತ್ಪಾದನೆಯನ್ನು ದಾಖಲಿಸಿದೆ,ʼʼ ಎಂದು ಹೇಳಿದರು. ಈಗ ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮತ್ತು ನ್ಯೂಟ್ರಿ-ಧಾನ್ಯಗಳ ಮೇಲೆ ವಿಶೇಷ ಗಮನವನ್ನು ಹರಿಸಲಾಗುತ್ತಿದೆ. ಮುಂಗಾರಿನ ನಂತರ, ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಬೇಸಿಗೆಯಲ್ಲಿ ಸುಮಾರು 55.76 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮಾಡಲಾಗುತ್ತಿದೆ. ಸರಕಾರದ ನೀತಿಗೆ ಅನುಗುಣವಾಗಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಕೃಷಿಯಲ್ಲಿ ಹೆಚ್ಚಳವಾಗಿದ್ದು, ಭತ್ತವನ್ನು ಬೆಳೆಯುವ ಪ್ರದೇಶದಲ್ಲಿ ಇಳಿಕೆ ಕಂಡುಬಂದಿದೆ. ಸರಕಾರವು ಬೀಜ ಮತ್ತು ರಸಗೊಬ್ಬರಗಳ ಅಗತ್ಯವನ್ನು ಗಮನಿಸಿದ್ದು, ಅವುಗಳ ಸಮಯೋಚಿತ ಪೂರೈಕೆಯನ್ನು ಖಚಿತಪಡಿಸುತ್ತದೆ,ʼʼ ಎಂದು ಹೇಳಿದರು. (ವಿವರವಾದ ಪ್ರಸ್ತುತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ರಸಗೊಬ್ಬರ ಇಲಾಖೆ ಕಾರ್ಯದರ್ಶಿ  ಮಾತನಾಡಿ, ಮುಂಬರುವ ಋತುವಿಗೆ ರಸಗೊಬ್ಬರಗಳು ಸ್ಥಳೀಯವಾಗಿ ಲಭ್ಯವಾಗುವ ಕುರಿತು ಚರ್ಚಿಸಿದರು. ನ್ಯೂಟ್ರಿ-ಸಿರಿಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು 2023 ಅನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸಲು ಕೈಗೊಂಡ ಹೊಸ ಉಪಕ್ರಮಗಳ ಬಗ್ಗೆ ವಿವರ ನೀಡಲಾಯಿತು. ʻರಾಷ್ಟ್ರೀಯ ಕೃಷಿ ವಿಕಾಸ ಯೋಜನೆʼ (ಆರ್.ಕೆ.ವಿ.ವೈ) ಅಡಿಯಲ್ಲಿ ʻಕೆಫೆಟೇರಿಯಾ ವಿಧಾನʼ ಹಾಗೂ ಕೃಷಿ ಯಾಂತ್ರೀಕರಣಕ್ಕಾಗಿ ಉಪ-ಯೋಜನೆಗಳನ್ನು ರಾಜ್ಯಗಳ ಪ್ರಯೋಜನಗಳಿಗಾಗಿ ಹಂಚಿಕೊಳ್ಳಲಾಗಿದೆ. ʻಡಿಜಿಟಲ್ ಕೃಷಿʼ, ʻಪಿಎಂ-ಕಿಸಾನ್ʼ ಮತ್ತು ʻನೈಸರ್ಗಿಕ ಕೃಷಿʼಯ ಬಗ್ಗೆಯೂ ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು. 

ಹೆಚ್ಚುವರಿ ಕಾರ್ಯದರ್ಶಿಗಳು (ಕೃಷಿ), ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ(ಐಸಿಎಆರ್) ಹಿರಿಯ ಅಧಿಕಾರಿಗಳು ಮತ್ತು ವಿವಿಧ ರಾಜ್ಯ ಸರಕಾರಗಳ ಅಧಿಕಾರಿಗಳು ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗುಜರಾತ್, ಅಸ್ಸಾಂ, ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ತಮ್ಮ ಪ್ರಗತಿಯನ್ನು ಹಂಚಿಕೊಂಡವು. ಇದರ ನಂತರ,   ಋತುವಿನಲ್ಲಿ ಪ್ರದೇಶ ವ್ಯಾಪ್ತಿ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಲು ಕೃಷಿ ಉತ್ಪಾದನಾ ಆಯುಕ್ತರು ಮತ್ತು ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.