Header Ads Widget

ಸರ್ಚ್ ಕೂರ್ಗ್ ಮೀಡಿಯ

ತಾಲ್ಲೂಕು ಆರೋಗ್ಯ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ


ಮಡಿಕೇರಿ ಏ.20: ಪ್ರತಿಯೊಬ್ಬರೂ ಆರೋಗ್ಯವಂತರಾಗಿದ್ದಲ್ಲಿ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವಂತಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕರೆ ನೀಡಿದ್ದಾರೆ. 

ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಮತ್ತು ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾಗೃತಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. 

ಪ್ರತಿಯೊಬ್ಬರೂ ಆರೋಗ್ಯವಂತಾಗಿರಬೇಕು ಎಂಬ ಉದ್ದೇಶದಿಂದ ಸರ್ಕಾರ ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ಮೇಳ ಏರ್ಪಡಿಸಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು, ಆರೋಗ್ಯಯುತ ಬದುಕು ನಡೆಸುವಂತಾಗಬೇಕು ಎಂದು ಶಾಸಕರು ಹೇಳಿದರು. 

ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಿದ್ದಲ್ಲಿ ಕ್ರೀಯಾಶೀಲರಾಗಿ ಪ್ರತೀ ನಿತ್ಯ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬಹುದು. ಆರೋಗ್ಯ ಸರಿ ಇಲ್ಲದಿದ್ದಲ್ಲಿ ಒಂದು ರೀತಿಯ ಬೇಸರ, ತತ್ಸಾರ, ಜಿಗುಪ್ಸೆ ಮನೋಭಾವ ಉಂಟಾಗುತ್ತದೆ. ಆದ್ದರಿಂದ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸುವುದು ಅತ್ಯಗತ್ಯ ಎಂದು ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದರು.   

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಮಧುಮೇಹ ಇತರೆ ಕಾಯಿಲೆಗಳು ಸಾಮಾನ್ಯವಾಗಿದೆ. ಆದ್ದರಿಂದ ಈ ಕಾಯಿಲೆಗಳಿಗೆ ತುತ್ತಾಗದಂತೆ ಮುನ್ನೆಚ್ಚರ ವಹಿಸುವುದು ಅಗತ್ಯ ಎಂದರು. 

ಸರ್ಕಾರ ಬಡ ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಲಾಗುತ್ತಿದ್ದು, ಈ ಕಾರ್ಡ್ ಪಡೆಯುವಂತಾಗಬೇಕು. 5 ಲಕ್ಷ ರೂ.ವೆಚ್ಚದ ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಶೇ.75 ಕ್ಕಿಂತ ಹೆಚ್ಚು ಎಬಿಆರ್‍ಕೆ ಕಾರ್ಡ್ ವಿತರಿಸಲಾಗಿದೆ ಎಂದು ಶಾಸಕರು ಹೇಳಿದರು.   

ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ. ಆ ನಿಟ್ಟಿನಲ್ಲಿ ಕ್ಷಯರೋಗ ಬರದಂತೆ ಮುನ್ನೆಚ್ಚರವಹಿಸಬೇಕು. ಬಂದವರು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕರು ಸಲಹೆ ಮಾಡಿದರು. ರಾಷ್ಟ್ರದಲ್ಲಿ ಪೊಲಿಯೋ ನಿರ್ಮೂಲನೆಯಾಗಿದ್ದು, ಪೊಲಿಯೋ ಮತ್ತೆ ಬರದಂತೆ ಎಚ್ಚರವಹಿಸುವುದು ಅಗತ್ಯ ಎಂದರು. 

ಕೋವಿಡ್-19 ನಿಯಂತ್ರಣಕ್ಕೆ ಬಂದಿದೆ. ಆದರೂ ರಾಷ್ಟ್ರದ ನವದೆಹಲಿ, ಕೇರಳದಲ್ಲಿ ಕೋವಿಡ್-19 ಮತ್ತೆ ಕೇಳಿ ಬರುತ್ತಿದೆ. ಆದ್ದರಿಂದ ಕೋವಿಡ್-19 ನಿಯಂತ್ರಣ ಲಸಿಕೆಯನ್ನು ಅರ್ಹರೆಲ್ಲರೂ ಪಡೆಯಬೇಕು ಎಂದು ಅಪ್ಪಚ್ಚುರಂಜನ್ ಅವರು ಹೇಳಿದರು.

ದೇಶದಲ್ಲಿಯೇ ಕೋವಿಡ್ ನಿಯಂತ್ರಣ ಲಸಿಕೆ ತಯಾರಿಸಲಾಗಿದೆ. ಅರ್ಹರೆಲ್ಲರಿಗೂ ಪ್ರಥಮ ಮತ್ತು ದ್ವಿತೀಯ ಡೋಸ್‍ನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು, ಲಸಿಕೆ ಪಡೆಯುವಂತಾಗಬೇಕು ಎಂದು ಶಾಸಕರು ತಿಳಿಸಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೋವಿಡ್-19 ನಿಯಂತ್ರಣ ಲಸಿಕೆ ಮತ್ತು ತಪಾಸಣೆಯನ್ನು ಉಚಿತವಾಗಿ ಕಲ್ಪಿಸುತ್ತಿದೆ. ಆದರೆ ಅಮೇರಿಕಾ ದೇಶದಲ್ಲಿ ಕೋವಿಡ್-19 ಪರೀಕ್ಷೆಗೆ 12 ಸಾವಿರ ರೂ. ವೆಚ್ಚ ಭರಿಸಬೇಕಿದೆ ಎಂದು ಶಾಸಕರು ತಿಳಿಸಿದರು.  

ಜಿಲ್ಲೆಯ ಹಲವು ಕಡೆಗಳಲ್ಲಿ ಜನೌಷಧಿ ಮಳಿಗೆ ತೆರೆಯಲಾಗಿದ್ದು, ಕಡಿಮೆ ಬೆಲೆಯಲ್ಲಿ ಔಷಧಿ ಪಡೆಯಬಹುದು. ಹೀಗೆ ಸರ್ಕಾರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು ತಿಳಿಸಿದರು. 

ಜಿಲ್ಲೆಯಲ್ಲಿ ಆರೋಗ್ಯ ಮೇಳ ಯಶಸ್ಸಿಗೆ ಆಶಾ ಕಾರ್ಯಕರ್ತರು, ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲರ ಶ್ರಮ ಮೆಚ್ಚುವಂತದ್ದು ಎಂದು ಶಾಸಕರು ತಿಳಿಸಿದರು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಕೋವಿಡ್-19 ನಿಯಂತ್ರಣ ಲಸಿಕೆಯನ್ನು ಅರ್ಹರೆಲ್ಲರೂ ಪಡೆಯಬೇಕು. ಸರ್ಕಾರಿ ನೌಕರರಿಗೂ ಸಹ ಜ್ಯೋತಿ ಸಂಜೀವಿನಿ ಆರೋಗ್ಯ ಸೌಲಭ್ಯವಿದ್ದು, ಜ್ಯೋತಿ ಸಂಜೀವಿನಿ ಕಾರ್ಡ್ ಪಡೆಯಬೇಕು ಎಂದು ಅವರು ಸಲಹೆ ಮಾಡಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾತನಾಡಿ ಮಡಿಕೇರಿ ತಾಲ್ಲೂಕು ಆರೋಗ್ಯ ಮೇಳದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿ, ವಿವಿಧ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕದಡಿ 207 ಮಂದಿ, ಆರೋಗ್ಯ ಕಾರ್ಡ್‍ಗಾಗಿ 132 ಮಂದಿ, ಅಂಗಾಂಗ ನೋಂದಣಿ 5 ಮಂದಿ, ಕಣ್ಣು ದಾನಕ್ಕೆ 16 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.   

     ಕುಶಾಲನಗರದಲ್ಲಿ 2,156 ಮಂದಿ ನೋಂದಣಿ ಮಾಡಿಕೊಂಡಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ಗೆ 257 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 150 ಮಂದಿ ಆರೋಗ್ಯ ಕಾರ್ಡ್‍ಗೆ ನೋಂದಣಿ ಮಾಡಿಕೊಂಡಿದ್ದಾರೆ. 

 ಹಾಗೆಯೇ ಗೋಣಿಕೊಪ್ಪದಲ್ಲಿ 1206 ಮಂದಿ ನೋಂದಣಿ ಮಾಡಿಕೊಂಡಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ಗೆ 300 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಬುಧವಾರ ಜಿಲ್ಲೆಯ ಮೂರು ಕಡೆಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಸುಮಾರು 4,318 ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.   

        ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ವಿಶಾಲ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚೇತನ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ತಾ.ಪಂ.ಇಒ ಶೇಖರ್, ಜಿಲ್ಲಾ ಅಂಕಿತ ಅಧಿಕಾರಿ ಅನಿಲ್ ಧವನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ, ಡಿಡಿಪಿಐ ವೇದಮೂರ್ತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಶಿವಕುಮಾರ್ ಇತರರು ಇದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರೀಕಾಂತ್ ನಿರೂಪಿಸಿದರು. ಪಾಲಾಕ್ಷ ವಂದಿಸಿದರು. 

ಸಂಚಾರಿ ಪ್ರಯೋಗಾಲಯ ಮೂಲಕ ಆಹಾರ ಕಲಬೆರಕೆ ಪದಾರ್ಥಗಳ ಪತ್ತೆ ಹಚ್ಚುವ ಬಗ್ಗೆ ಮಾಹಿತಿ ನೀಡಿದ್ದು ಮೇಳದಲ್ಲಿ ಗಮನ ಸೆಳೆಯಿತು. ಆಯುಷ್ ಇಲಾಖೆ ಮೂಲಕ ಆಯುಷ್ ಪದ್ಧತಿಯ ಬಗ್ಗೆ ಮಾಹಿತಿ ನೀಡಲಾಯಿತು. ಕಣ್ಣು, ಕಿವಿ, ಮೂಗು, ಗಂಟಲು, ಮೂಳೆ, ಹೃದಯ ಸಂಬಂಧ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಹೀಗೆ ಹಲವು ರೋಗಗಳಿಗೆ ಸಂಬಂಧಿಸಿದಂತೆ ಆರೋಗ್ಯ ಮೇಳದಲ್ಲಿ ಪ್ರತ್ಯೇಕ ವಿಭಾಗಗಳನ್ನು ತೆರೆದು ತಪಾಸಣೆಗೆ ಅವಕಾಶ ಮಾಡಿದ್ದು ವಿಶೇಷವಾಗಿತ್ತು. ಕ್ಷಯರೋಗ ನಿಯಂತ್ರಣ ಮತ್ತಿತರ ಬಗ್ಗೆ ವಸ್ತುಪ್ರದರ್ಶನ ಮಳಿಗೆ ಗಮನ ಸೆಳೆಯಿತು.