ಪಕ್ಷಿಗಳ ಪ್ರಾಮುಖ್ಯತೆ ತಿಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಹಾಗೂ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಇದುವರೆಗೆ ಏಳು ‘ಹಕ್ಕಿ ಹಬ್ಬ’ಗಳು ರಾಜ್ಯದ ವಿವಿಧೆಡೆ ನಡೆದಿದ್ದು, ಇದೀಗ 8ನೇ ಆವೃತ್ತಿಯ ಹಕ್ಕಿ ಹಬ್ಬಕ್ಕೆ ಪಕ್ಷಿಪ್ರೇಮಿಗಳನ್ನು ಸ್ವಾಗತಿಸಲು ಕಿತ್ತಳೆನಾಡು ಸಜ್ಜುಗೊಂಡಿದೆ.
ಏ.8ರವರೆಗೆ ಮೂರು ದಿನಗಳವರೆಗೆ ನಡೆಯಲಿರುವ ‘ಕರ್ನಾಟಕ ಹಕ್ಕಿ ಹಬ್ಬ’ದಲ್ಲಿ ರಾಜ್ಯದ ವಿವಿಧ ಭಾಗದ 70 ಮಂದಿ ಪಕ್ಷಿಪ್ರೇಮಿಗಳು ಭಾಗವಹಿಸಲು ನೋಂದಣಿ ಮಾಡಿಸಿಕೊಂಡಿದ್ದು, ಕೊಡಗಿನ 10 ಮಂದಿ ಪಕ್ಷಿ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ದೇಶ ವಿದೇಶಗಳ ವಿವಿಧ ಜಾತಿಯ ಪಕ್ಷಿಗಳು ಕೊಡಗಿಗೆ ವಲಸೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಪಕ್ಷಿಗಳ ವೀಕ್ಷಣೆಗೆ ಸೂಕ್ತವಾದ ಒಟ್ಟು 7 ಸ್ಥಳಗಳನ್ನು ಅರಣ್ಯ ಇಲಾಖೆ ಆಯ್ಕೆ ಮಾಡಿದೆ. ಅಲ್ಲಿ ಪ್ರಾಯೋಗಿಕವಾಗಿ ವೀಕ್ಷಣೆಯನ್ನೂ ನಡೆಸಲಾಗಿದೆ. ಮಡಿಕೇರಿ ಅರಣ್ಯ ಭವನದ ಸುತ್ತಮುತ್ತ ಎರಡು, ಗಾಳಿಬೀಡು ವ್ಯಾಪ್ತಿಯಲ್ಲಿ ಎರಡು ಹಾಗೂ ನಿಶಾನೆ ಮೊಟ್ಟೆಯ 3 ಸ್ಥಳಗಳಲ್ಲಿ ಹಕ್ಕಿಗಳ ಅಧ್ಯಯನ ನಡೆಯಲಿದೆ ಎಂದು ಮಡಿಕೇರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರು ತಿಳಿಸಿದ್ದಾರೆ.
ಕಪ್ಪು ಜುಟ್ಟಿನ ಗಿಡುಗನ ಅಧ್ಯಯನ:
ಈ ಬಾರಿ ‘ಕಪ್ಪು ಜುಟ್ಟಿನ ಗಿಡುಗ’ ಪಕ್ಷಿಯನ್ನು ಕೇಂದ್ರೀಕರಿಸಿ ಅಧ್ಯಯನ ಹಾಗೂ ವೀಕ್ಷಣೆ ನಡೆಯಲಿದೆ. ಈ ಪಕ್ಷಿಯು ಏಪ್ರಿಲ್‌ನಿಂದ ಜೂನ್ ವೇಳೆಯಲ್ಲಿ ಚೀನಾ ಹಾಗೂ ಹಿಮಾಲಯ ಭಾಗದಿಂದ ಜಿಲ್ಲೆಗೆ ವಲಸೆ ಬರುತ್ತದೆ. ಅದು ಮಡಿಕೇರಿಯ ಸುತ್ತಮುತ್ತ ಕಂಡುಬಂದಿರುವುದರಿಂದ ಮಡಿಕೇರಿ ಸುತ್ತಮುತ್ತಲ ಏಳು ಕಡೆಗಳಲ್ಲಿ ಪಕ್ಷಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಕೃತಿಯಲ್ಲಿ ಪ್ರತಿ ಪ್ರಾಣಿ ಹಾಗೂ ಪಕ್ಷಿಗೂ ತನ್ನದೇ ಪ್ರಾಮುಖ್ಯತೆಯಿದೆ. ಮಕ್ಕಳಿಗೆ ಹುಲಿ ಹಾಗೂ ಆನೆ ಬಗ್ಗೆ ಮಾತ್ರ ತಿಳಿಸುತ್ತೇವೆ. ಆದರೆ ಹಕ್ಕಿಗಳ ಮಹತ್ವದ ಅರಿವು ಕಡಿಮೆಯಿರುವುದರಿಂದ ಪಕ್ಷಿಗಳ ಪ್ರಾಮುಖ್ಯತೆ ತಿಳಿಸುವ ಉದ್ದೇಶದಿಂದ ಪ್ರತೀವರ್ಷ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ ಎಂದು ಪೂವಯ್ಯ ತಿಳಿಸಿದ್ದಾರೆ.
ಪ್ರತಿ ವರ್ಷವೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ‘ಹಕ್ಕಿ ಹಬ್ಬ’ ನಡೆಯುತ್ತದೆ. ಈಗಾಗಲೇ ರಂಗನತಿಟ್ಟು, ಬಳ್ಳಾರಿ, ದಾಂಡೇಲಿ, ಚಿಕ್ಕಬಳ್ಳಾಪುರ, ಕಾರವಾರ, ಮಂಗಳೂರಿನಲ್ಲೂ ಹಕ್ಕಿ ಹಬ್ಬ ನಡೆದಿದ್ದು, 7ನೇ ಆವೃತ್ತಿ ಹಬ್ಬವು ಕಳೆದ ವರ್ಷ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿತ್ತು. ಈ ಬಾರಿ ಕೊಡಗಿನಲ್ಲಿ 8ನೇ ಆವೃತ್ತಿಯ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊಡಗಿನಲ್ಲೇ 300 ಜಾತಿಯ ಪಕ್ಷಿಗಳಿವೆ. ಕೊಡಗಿನ ಪಕ್ಷಿ ತಜ್ಞರಾದ ನರಸಿಂಹನ್, ಡಾ.ಸುಬ್ರಹ್ಮಣ್ಯ, ಡಾ.ಆನಂದ್, ಬಿಶನ್ ಮೊಣ್ಣಪ್ಪ, ನಿಸರ್ಗ, ನೀತಿ ಅವರೂ ಅಧ್ಯಯನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷಿಗಳ ವೀಕ್ಷಣೆ ಜೊತೆಗೆ ಏ.9 ಮತ್ತು 10ರಂದು ತಜ್ಞರೊಂದಿಗೆ ಸಂವಾದವನ್ನೂ ಏರ್ಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಪಕ್ಷಿಪ್ರೇಮಿಗಳು ಕ್ಯಾಮೆರಾ ಹಿಡಿದು ಜಿಲ್ಲೆಯತ್ತ ಧಾವಿಸಲಿದ್ದಾರೆ. ಅವರ ಸ್ವಾಗತಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಅರಣ್ಯ ಸಚಿವರಿಂದ ಚಾಲನೆ:
‘ಕರ್ನಾಟಕ ಹಕ್ಕಿ ಹಬ್ಬ’ ದ8ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮ ಏ.8 ರಂದು ಸಂಜೆ 4.30 ಗಂಟೆಗೆ ನಗರದ ಕ್ರಿಸ್ಟಲ್ ಕೋರ್ಟ್‌ನಲ್ಲಿ ನಡೆಯಲಿದೆ.
ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಉಮೇಶ್ ವಿಶ್ವನಾಥ ಕತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಎಸ್.ರವಿಕುಶಾಲಪ್ಪ, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಮದನ್ ಗೋಪಾಲ್, ನಗರಸಭೆ ಅಧ್ಯಕ್ಷೆ ಎನ್.ಪಿ.ಅನಿತಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ವಿಜಯ್ ಕುಮಾರ್ ಗೋಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ರಾಜೀವ್ ರಂಜನ್, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಆರ್.ಕೆ.ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ, ಕಾರ್ಯ ಯೋಜನೆ, ಸಂಶೋಧನೆ ಮತ್ತು ತರಬೇತಿ ಹಾಗೂ ಹವಾಮಾನ ಬದಲಾವಣೆ) ಮಧು ಶರ್ಮಾ, ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ(ಪರಿಸರ) ವಿಜಯ ಮೋಹನ್ ರಾಜ್ ವಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಇತರರೂ ಭಾಗವಹಿಸಲಿದ್ದಾರೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network