ಇದು ಪುಟ್ಟ ಗ್ರಾಮದ ಅಮ್ಮ ಮಗನ ಕಥೆ..
ಇದು ಕನಸುಗಳ ಬೆನ್ನು ಹತ್ತಿ ಶ್ರೀಮಂತಿಕೆ ಅರಸಿ ಹೋದವನ ಕಥೆ..
ಇದು ಭೂಗತ ಲೋಕದ ಡಾನ್ ಗಳ ಗುಂಪುಗಾರಿಕೆಯ ಕಥೆ..
ಇದು ಕನ್ನಡ ಚಿತ್ರರಂಗದ ಕಲಾತ್ಮಕತೆಯ ಕಥೆ..
ಇದು ಭಾರತೀಯ ಸಿನಿಮಾಗಳ ಶ್ರೀಮಂತಿಕೆಗೆ ಕನ್ನಡಿ ಹಿಡಿದ ಕಥೆ...
ಇದು ಕ್ರಿಯಾಶೀಲ ಮನಸ್ಸುಗಳು ಮಾಡಿದ ದೖಶ್ಯ ಕಾವ್ಯದ ಕಥೆ...
ಇದು ಯಶ್ ಎಂಬ ಮೋಡಿಗಾರನ ನಟನೆಯ ನಿಬ್ಬೆರಗಾಗುವ ಕಥೆ...
ಇದು ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡಬಹುದು ಎಂಬುದಕ್ಕೆ ಸಾಕ್ಷಿ ಹೇಳಿದ ಚಿತ್ರದ ಕಥೆ...
ಇದು ಧೂಳಿನಲ್ಲಿಯೇ ಚಿನ್ನ ತೆಗೆಯುವ ಧೂಳಿನ ಮಕ್ಕಳು ಸಫಲತೆಯ ಧೂಳ್ ಎಬ್ಬಿಸಿದ ಯಶೋಗಾಥೆ..
ಇದು ಚಿನ್ನದ ಹಿಂದೆ ಬೆನ್ನು ಬಿದ್ದವರು ಮುಳುಗಿ ಹೋದ ಶೋಕದ ಗೀತೆಯ ಕಥೆ...
ಇದು.. ಕೋಲಾರ ಗೋಲ್ಡ್ ಫೀಲ್ಡ್ ಎಂಬ ಕನ್ನಡದ ನೆಲದ ಕಥೆ...
ಇದು ಕೆಜಿಎಫ್. ಚಾಪ್ಟರ್ 2 !!
ವೆಲ್ ಕಂ ಟು ಕೋಲಾರ್ ಗೋಲ್ಡ್ ಫೀಲ್ಡ್ಸ್ ...
ಕೆಜಿಎಫ್ ಅಥ೯ವಾಗದೇ ಹೋದವರಿಗೆ, ಅದ೯ಂಬಧ೯ ಅಥ೯ವಾದವರಿಗೆ ಕೆಜಿಎಫ್ 2 ಸ್ವಲ್ಪ ಮಟ್ಟಿಗೆ ರಿಲೀಫ್ ಕೊಡುವಂತೆ ಅಥ೯ವಾಗುತ್ತದೆ. ಚಿತ್ರದ ಪ್ರಾರಂಭದಿಂದ ಅಂತ್ಯದವರೆಗೂ ಯಶ್ ನೋಡುಗರನ್ನು ಹಿಡಿದಿಡುತ್ತಾರೆ. ಹಾಗೆ ನೋಡಿದರೆ ಕೆಜಿಎಫ್ 2 ನ ಪ್ರತೀ ದೖಶ್ಯವೂ ನೋಡುಗ ಕಣ್ ಮಿಟುಕಿಸಲೂ ಸಮಯ ಕೊಡದಂತೆ ನೋಡಿಸಿಕೊಂಡು ಹೋಗುತ್ತದೆ. ನಿಬ್ಬೆರಗು ಮೂಡಿಸುತ್ತದೆ. ಚಿತ್ರ ನೋಡುಗರು ಉಸಿರುಬಿಗಿ ಹಿಡಿದು ಸೀಟ್ ತುದಿಯಲ್ಲಿ ಕುಳಿತವರಂತೆ ಏನೋ ಧಾವಂತದಿಂದ ಕೆಜಿಎಫ್ ಎಂಬ ಚಿತ್ರದಲ್ಲಿ ಲೀನರಾಗಿಬಿಡುತ್ತಾರೆ.
ಕೆಜಿಎಫ್ ಗೋಲ್ಡ್ ಮೈನ್ ನ ಧೂಳು ಇವರನ್ನೇ ಆವರಿಸಿದಂತೆ ಆ ಧೂಳಿನಲ್ಲಿ ತಾವೇ ಸಿಕ್ಕಿಹಾಕಿಕೊಂಡವರಂತೆ ಮಿಸುಕಾಡದೇ ಕುಳಿತ ಪ್ರೇಕ್ಷಕರನ್ನೂ ನೋಡುವುದೂ ಒಂದು ಚಂದ..
ಹಾಸ್ಯ ದೖಶ್ಯ ಹೋಗಲಿ, ಹಾಸ್ಯದ ಮಾತೇ ಇಲ್ಲದ ಗಂಭೀರ ಡೈಲಾಗ್ ಗಳಿಂದಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯ೯ ಕೆಜಿಎಫ್ ಗೆ ಇದೆ. ಇಷ್ಟಕ್ಕೂ ದೊಡ್ಡಪ್ಪ, ದೊಡ್ಡಮ್ಮನಂಥ ಭಜ೯ರಿ ಗನ್ ಗಳ ರೋಷಾವೇಶದ ಆಭ೯ಟದ ಮಧ್ಯೆ ನಗು ಬಂದೀತಾದರೂ ಹೇಗೆ.. ಇಂಥ ಗನ್ ಮಯ ಸಿನಿಮಾಗಳಲ್ಲಿ ಹಾಸ್ಯವನ್ನು ನಿರೀಕ್ಷಿಸುವುದು…ಕೆಜಿಎಫ್ ನಲ್ಲಿ ಮೈಸೂರು ಪಾಕ್ ಹುಡುಕಿದಂತೆ.. ನೋ ಚಾನ್ಸ್... ಗನ್ ಗಜ೯ನೆ ಮುಂದೆ ಬಾಕಿ ಎಲ್ಲಾ ಸೈಲಂಟ್.. ಉಳಿದೆಲ್ಲವೂ ವೈಲೆಂಟ್.
ಬೇರೆ ಚಿತ್ರಗಳಿಗೆ, ಬೇರೆ ಹಿರೋಗಳಿಗೆ ಹೋಲಿಸಿದರೆ ಇಲ್ಲಿ ಹಿರೋ ಎಂಟ್ರಿ ಅಬ್ಬರದಿಂದ ಇಲ್ಲ. ಆದರೆ ಸ್ಲೈಲಿಶ್ ಆಗಿ ಎಂಟ್ರಿ ಕೊಡುವ ಯಶ್ ಗೆ ವಿಶಲ್ ನ ಸ್ವಾಗತ ಪ್ರೇಕ್ಷಕನಿಂದ ನೋಡಿದರೆ... ಕೆಜಿಎಫ್ ಎಂಥ ಸಮ್ಮೋಹನ ಮಾಡಿದೆ ಎಂಬುದು ಸ್ಪಷ್ಟ..
ಅಮ್ಮನಿಗೆ ಕೊಟ್ಟ ಭರವಸೆಯಂತೆ ಚಿನ್ನವನ್ನೇ ತಂದುಕೊಡಲು ಕೆಜಿಎಫ್ ನ ದಾದಾಗಳನ್ನೇ ಮಣಿಸಿ ಜೀತದಾಳುಗಳನ್ನು ಮುಕ್ತಿಗೊಳಿಸಿ ಅವರ ದೊರೆಯಾಗುವ ರಾಕಿ, ಡಾನ್ ಗಳ ಪಾಲುದಾರಿಕೆಯಿದ್ದರೂ ಇದೇ ಪಾಲುದಾರ ಡಾನ್ ಗಳು ತನ್ನ ಹಿತಶತ್ರುಗಳು ಎಂದು ತಿಳಿದಿದ್ದರೂ ಮೂರು ಹೊತ್ತೂ ಚಿನ್ನ ಚಿನ್ನ.. ಸಾಲದು.. ಸಾಲದು ಇನ್ನಷ್ಟು ಕೆಲ್ಸ ಮಾಡಿ ಮತ್ತಷ್ಟು ಚಿನ್ನ ತನ್ನಿ ಎಂದು ಕಾಮಿ೯ಕರ ಒಳಿತಿಗಾಗಿ ತಾನು ನಿಮಿ೯ಸಿದ ನ್ಯೂ ಕೆಜಿಎಫ್ ಸಿಟಿಗಾಗಿ ಎಲ್ಲಾ ಚಿನ್ನ ವಿನಿಯೋಗಿಸುವುದು ಕೊನೆಗೇ ಬಹಿರಂಗವಾಗುವ ರಹಸ್ಯ.
ಎಲ್ಲಾ ಪಾತ್ರಧಾರಿಗಳೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಅನಂತನಾಗ್ ಬದಲಿಗೆ ಚಾಪ್ಟರ್ 2 ರಲ್ಲಿ ಪ್ರಕಾಶ್ ರೈ ನ್ಯಾಯ ಸಲ್ಲಿಸಿದ್ದಾರೆ. ಹಿಂದಿಯ ಸಂಜಯ್ ದತ್ ಖಳನಾಗಿ ಅಬ್ಬರಿಸಿದ್ದಾರೆ. ಪ್ರಧಾನಿ ಪಾತ್ರದಲ್ಲಿ ರವೀನಾ ಟಂಡನ್ ಓಕೆ. ಓಕೆ. ಸಂಜಯ್ ದತ್, ರವೀನಾ ಮೂಲಕ ಬಾಲಿವುಡ್ ಪ್ರೇಕ್ಷಕರಿಗೂ ಕೆಜಿಎಫ್ ತಲುಪಿಸುವ ಪ್ರಯತ್ನ ಯಶಸ್ವಿಯಾಗಿದೆ.
ಕಾರ್ ಚೇಸಿಂಗ್ ದೖಶ್ಯದಲ್ಲಿ, ಚೇಸಿಂಗ್ ನಡುವೆ ದೖಶ್ಯವನ್ನು ಆಗಿಂದಾಗ್ಗೆ ಬ್ಲಾಂಕ್ ಅಥವಾ ಮಂಕಾಗಿಸುವ ಹೊಸ ಪ್ರಯತ್ನ ಮುಂದೆ ಬೇರೆ ಚಿತ್ರಗಳಲ್ಲಿಯೂ ಕಾಣಲು ಸಾಧ್ಯ. ಕೆಲವರಿಗೆ ಈ ಪ್ರಯತ್ನ ಇಷ್ಟವಾಗಲಿಲ್ಲ. ಚಿತ್ರದ ಸಂಭಾಷಣೆಯೂ ಚಿತ್ರದ ಅಸಲಿ ಶಕ್ತಿಯಂತಿದೆ. ಒಂದೊಂದು ಪದವನ್ನೂ ಹತ್ತುಹತ್ತು ಬಾರಿ ಯೋಚಿಸಿ ಬರೆದಂತಿದೆ. ಒಂದೇ ಒಂದು ಡೈಲಾಗ್ ವೇಸ್ಟ್ ಆಗದಂತೆ ಗಮನ ಹರಿಸಲಾಗಿದೆ. ಪ್ರತೀ ದೖಶ್ಯವೂ ಕಲಾತ್ಮಕತೆಯಿಂದ ಕೂಡಿದೆ.
ಎಂಥ ಹಿರೋಯಿನ್ ಮಾರಾಯ.. ಸಾಯಲಿಕ್ಕಾ ಎಂದರೆ ಹೌದು. ಕೆಜಿಎಫ್ ನಲ್ಲಿ ಕೊನೇಯಲ್ಲಿ ಸಾಯಲಿಕ್ಕೇ ಹಿರೋಯಿನ್ ಇರುವಂತಾಗಿದೆ.
ತನ್ನ ಚಿನ್ನುವಿಗೆ ಸೆಕೆಯಾಯಿತು ಎಂದರೆ ತಲೆ ಮೇಲೆ ಹೆಲಿಕಾಪ್ಟರ್ ಹಾರಿಸಿ ತಂಗಾಳಿ ಬೀಸುವಂತೆ ಮಾಡುವ ಹಿರೋ ಕಲ್ಪನೆಯೇ ಸೂಪರ್...
ಹುಷಾರ್.. ಈ ಸೀನ್ ನೋಡಿ ಮನೆಯಲ್ಲಿರುವ ಚಿನ್ನುಗಳ ಮೆಚ್ಚಿಸಲಿಕ್ಕೆ ಹೆಲಿಕಾಪ್ಟರ್ ತರೋ ಪ್ರಯತ್ನ ಮಾಡಬೇಡಿ.. !!!
ಆಥಿ೯ಕ ಪರಿಸ್ಥಿತಿ ಗಾಳಿಗೆ ಹಾರಿಹೋಗುವ ಹಪ್ಪಳದಂತಾದೀತು... ಜೋಪಾನ..!!
ಚಿತ್ರದಲ್ಲಿ ಪುಟ್ಟ ಪುಟ್ಟ ಪಾತ್ರದಲ್ಲಿ ನೆನಪಿನಲ್ಲಿ ಉಳಿಯುವಂತೆ ಡೈಲಾಗ್ ಹೊಡೆಯುತ್ತಾ ಚಂದನೆ ನಟಿಸಿರುವ ಮಕ್ಕಳ ಪಾತ್ರಧಾರಿಗಳು ಕೆಜಿಎಫ್ - 10 ರಲ್ಲಿ (!!!!)) ಹಿರೋ ಜತೆಯಾಗುವ ಭರವಸೆ ಹುಟ್ಟು ಹಾಕುತ್ತಾರೆ...
ಹಿರೋಯಿನ್ ಸಾಯುವಾಗ ಹಿನ್ನಲೆಯಲ್ಲಿ ಭೀಕರವಾಗಿ ಗನ್ ಗಳಿಂದ ಯುದ್ದ ನಡೆಯುತ್ತಿದ್ದರೂ ಗನ್ ಗಳಿಂದ ಗುಂಡು ಸಿಡಿಯುವ ದೖಶ್ಯ ತೋರಿಸಿ ಗನ್ ಆಭ೯ಟದ ಶಬ್ದವನ್ನು ಮೌನವಾಗಿಸಿ ದೖಶ್ಯದ ಭಾವನಾತ್ಮಕತೆ ಕಾಪಾಡಿದ ನಿದೇ೯ಶಕ ಪ್ರಶಾಂತ್ ನೀಲ್ ಕ್ರಿಯಾಶೀಲತೆಗೊಂದು ನಮಸ್ಕಾರ.
ಕೆಜಿಎಫ್ ಎಂಬ ಚಿನ್ನದ ಧೂಳು ತುಂಬಿದ ಮಾಯಾನಗರಿಯ ವೈಭವವನ್ನು ಅದ್ಬುತವಾಗಿ ತೋರಿಸಲಾಗಿದೆ. ರಾಕೀಭಾಯ್ ಸಾಮ್ರಾಜ್ಯ ತನ್ನದೇ ಸಾಮ್ರಾಜ್ಯವೇನೋ ಎಂಬಂತೆ ಪ್ರೇಕ್ಷಕ ಫುಲ್ ಫಿದಾ ಅಗುತ್ತಾನೆ.
ನನ್ನ ಪಕ್ಕದಲ್ಲಿ ಕುಳಿತಿದ್ದಾತ ಕುಳಿತಿದ್ದ ಕುಚಿ೯ ಮೇಲೇ ಕಾಲು ಹಾಕಿಕೊಂಡು.. ತಾನೇ ಯಶ್ ಎಂಬಂತೆ ಡೈಲಾಗ್ ರಿಪೀಟ್ ಮಾಡುತ್ತಾ.. ಕೈಕಾಲು ಆಡಿಸುತ್ತಾ... ಸಂಭ್ರಮಿಸುತ್ತಿದ್ದ ರೀತಿ ನೋಡಿದಾಗ ನಮ್ಮ ಸಿನಿಮಾಗಳು ಯಾಕೆ ಪ್ರೇಕ್ಷಕನಿಗೆ ಮಜ, ಮನರಂಜನೆ ಕೊಡುತ್ತಾ ಭಜ೯ರಿ ಹಣ ಗಳಿಸುತ್ತದೆ ಎಂಬುದು ಅಥ೯ವಾಯಿತು.
ಕೆಜಿಎಫ್ ಗೆ ಕೋಟ್ಯಾಂತರ ಹಣ ಚೆಲ್ಲಿದ ಹೊಂಬಾಳೆ ಫಿಲ್ಸ್ಂ, ನೈಜವಾಗಿ ಅಭಿನಯಿಸಿದ ಪಾತ್ರಧಾರಿಗಳು... ಪ್ಯಾನ್ ಇಂಡಿಯಾ ಚಿತ್ರವಾಗಿ ದೇಶದಲ್ಲಿಡೀ ಕೆಜಿಎಸ್ ಮೋಡಿಗೆ ಕಾರಣಕತ೯ರಾಗಿದ್ದಲ್ಲದೇ ಜಗತ್ತಿನಾದ್ಯಂತ ಕೋಲಾರ ಗೋಲ್ಟ್ ಫೀಲ್ಡ್ ನ ಹವಾ ಎಬ್ಬಿಸಿದ ಮಾಕೇ೯ಟಿಂಗ್ ಟೀಮ್ ಪ್ರಯತ್ನ ಶ್ಲಾಘನೀಯ.
ಕೋಲಾರದ ಧೂಳು ಎಷ್ಟು ಚಿನ್ನ ತಂದುಕೊಟ್ಟಿತ್ತೋ ಗೊತ್ತಿಲ್ಲ. ಆದರೆ ಅದೇ ಮಣ್ಣಿನ ಕಥೆ ಹೇಳುವ ಕೆಜಿಎಫ್ -1 ಮತ್ತು 2 ಮಾಕೇ೯ಟಿಂಗ್ ನವರ ಭಜ೯ರಿ ಪ್ರಯತ್ನದಿಂದ ನಿಮಾ೯ಪಕರಿಗೆ ಚಿನ್ನ ತಂದುಕೊಟ್ಟದ್ದಂತೂ ವಾಸ್ತವ.!!
ಸಂಸತ್ ಭವನಕ್ಕೆ ನುಗ್ಗಿ ಸಚಿವರನ್ನು ಹತ್ಯೆ ಮಾಡೋದು. ಪ್ರಧಾನಿಯ ಕಛೇರಿಗೆ ಸೀದಾ ನುಗ್ಗಿ ಡೈಲಾಗ್ ಹೊಡೆಯುವುದು.. ಡಾನ್ ಹಾರಿಸಿದ ಗುಂಡು ಅಷ್ಟೊಂದು ಸುಲಭವಾಗಿ ಹಿರೋ ಎದೆಗೆ ತಗುಲುವುದು...ಸೈನ್ಯದಿಂದಲೂ ಕೆಜಿಎಫ್ ಭದ್ರಕೋಟೆ ಭೇದಿಸಲಾಗದೇ ಇರುವುದು…ಕೊನೆಯಲ್ಲಿ ಅಷ್ಟೊಂದು ಬಂದೂಕು ಇದ್ದರೂ ಹೀರೋ ವಿಲನ್ ಹಳೇ ಕನ್ನಡ ಸಿನಿಮಾದಂತೆ ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುವುದು...
ಅಯ್ಯೋ.. ಅಯ್ಯಯ್ಯೋ.. ತುಂಬಾ ಸಿಲ್ಲಿ ಸಂಗತಿಗಳು ಚಿತ್ರದಲ್ಲಿ ಇದೆಯಲ್ವ?
ಹಾಗೆಲ್ಲಾ ಸಿಲ್ಲಿ ಸಿಲ್ಲಿಯಾಗಿ ಪ್ರಶ್ನೆ ಕೇಳಬಾರದು.. ಲಾಕ್ ಡೌನ್ ಸಂಕಟದ ನಂತರ ತೆರೆಕಂಡ ಸೂಪರ್ ಸಿನಿಮಾವಿದು... ಕ್ರಿಯಾಶೀಲತೆ, ಆಧುನಿಕ ತಂತ್ರಜ್ಞಾನ ಹೊಂದಿರುವ ಕನ್ನಡದ ಮಣ್ಣಿನ ಸಿನಿಮಾ ಇದು.
ಕೆಜಿಎಫ್ ನೋಡೇ ಇಲ್ಲಾ.. ಎಂದು ಅಕ್ಕಪಕ್ಕದವರು ಕೇಳೋದು..
ಇಲ್ಲಾರೀ. ಯಾಕೋ ಮೊದಲ ಪಾಟೇ೯ ಅಥ೯ವಾಗಿಲ್ಲ. ಆಗ ನೋಡಿದ ಫಿಲಂ ಸೌಂಡ್ ಇನ್ನೂ ಕಿವಿಯಿಂದ ಹೋಗಿಲ್ಲ.. ಕತ್ತಲೇ ತುಂಬಿದ ಸೀನ್ ಗಳು.. ಅಂಥೆಲ್ಲಾ ಹೇಳೋದು..
ಈ ಕಷ್ಟಕ್ಕಿಂತ ಕೆಜಿಎಫ್ 2 ನೋಡಿ ಧನ್ಯರಾಗಿ..!!! ನೆನಪಿಡಿ.. ಕೆಲವರಿಗೆ ಜಿಲೇಬಿ ಕೆಲವರಿಗೆ ಜಾಮೂನ್, ಕೆಲವರಿಗೆ ದಿಲ್ ಪಸಂದ್.. ಕೆಲವರಿಗೆ ಜಹಂಗೀರ್ ಇಷ್ಟ..
ಎಲ್ಲರ ಇಷ್ಟಕ್ಕೂ ಸ್ಪಂದಿಸೋದು ಕಷ್ಟ ಕಷ್ಟ.. ಅಮ್ಮ ಮಗನ ಸೆಂಟಿಮೆಂಟ್ ದೖಶ್ಯಗಳು... ಜೋಗಿ ಚಿತ್ರವನ್ನು ನೆನಪಿಗೆ ತಂದರೆ ..
ಭೂಗತ ಲೋಕದ ಕಥೆ , ಬಹಳ ಹಿಂದೆ ತೆರೆಕಂಡಿದ್ದ ಮಣಿರತ್ನಂ ಚಿತ್ರ ನಾಯಗನ್ ನೆನಪಿಸುತ್ತದೆ. ಅಂದಿನ ಕಾಲಕ್ಕೆ ನಾಯಗನ್ ಹೇಳಿದ ಕಥೆಯನ್ನೇ ಇಂದಿನ ಆಧುನಿಕ ತಂತ್ರಜ್ಞಾನಗಳ ಕಾಲದಲ್ಲಿ ಕೆಜಿಎಫ್ ಹೇಳುವಂತಿದೆ.
ಅಂತೂ ಹೇಗಿದೆ ಕೆಜಿಎಫ್..2..
ತೆರೆಕಂಡ ವಾರದಲ್ಲಿಯೇ 600 ಕೋಟಿ ರುಪಾಯಿ ಗಳಿಸಿದ ಭಜ೯ರಿ ಯಶಸ್ಸಿನ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭು ಒಪ್ಪಿಕೊಂಡಾದ ಮೇಲೆ ಚೆನ್ನಾಗಿಲ್ಲ. ಚೆನ್ನಾಗಿದೆ ಎಂದು ಹೇಳಲು ನಾನ್ ಯಾವ ಧೂಳ್..??
ಒಂದೇ ಪದದಲ್ಲಿ ಕೆಜಿಎಫ್ 2 ಬಗ್ಗೆ ಹೇಳೋದಾದ್ರೆ..
ಸಲಾಂ ರಾಕೀಭಾಯ್...
ಶರಣು. ರಾಕೀ ... ಶರಣು....
ಅಬ್ಬರಕ್ಕೆ.. ಸಂಭ್ರಮಕ್ಕೆ ಶರಣು..!!!
ಬರಹ: ✍️.... ಅನಿಲ್ ಎಚ್.ಟಿ.
( ಪತ್ರಕರ್ತರು )
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network