Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮ ಪ್ರಗತಿಗೆ ಜಿಲ್ಲಾಧಿಕಾರಿ ಸೂಚನೆ


ಮಡಿಕೇರಿ ಏ.26: ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ಮಾಹಿತಿ ಪಡೆದರು.  

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನೆ ಮಾಡಿ, ಪ್ರಸಕ್ತ ಸಾಲಿನಲ್ಲಿ ಯೋಜನೆಗಳ ಪ್ರಗತಿಗೆ ಸೂಚಿಸಿದರು. 

ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮಗಳ ವಾರ್ಷಿಕ ಗುರಿಯನ್ನು ಶೇ.100 ರಷ್ಟು ಗುರಿ ಸಾಧಿಸುವಂತೆ ನಾನಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.  

‘2017 ರಲ್ಲಿ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮೌಲನಾ ಆಜಾದ್ ಮಾದರಿ ಶಾಲೆ ಆರಂಭಿಸಲಾಗಿದೆ. ಸದ್ಯ ನಿವೇಶನ ಇಲ್ಲದಿರುವುರಿಂದ ಹಾಗೂ ಕುಶಾಲನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಮೌಲನಾ ಆಜಾದ್ ಮಾದರಿ ಶಾಲೆಯನ್ನು ಸರ್ಕಾರಿ ಉರ್ದು ಶಾಲೆಗೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಯಿತು.’  

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಕುರಿ, ಕೋಳಿ, ಹಂದಿ ಸಾಕಾಣಿಕೆ, ಹೈನುಗಾರಿಕೆ ತರಬೇತಿಯನ್ನು ಪ್ರತ್ಯೇಕವಾಗಿ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.  

ಸಮಿತಿ ಸದಸ್ಯರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದು, ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ತಲುಪುವಂತಾಗಬೇಕು. ಜೊತೆಗೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಮತ್ತಷ್ಟು ಅರಿವು ಮೂಡಿಸಬೇಕು ಎಂದು ಸಲಹೆ ಮಾಡಿದರು. 

ಮತ್ತೊಬ್ಬ ಸದಸ್ಯರಾದ ಶೀಲ ಡಿಸೋಜ ಅವರು ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಯುವಜನರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. 

ಸಮಿತಿ ಸದಸ್ಯರಾದ ಚಂದ್ರಪ್ರಸಾದ್ ಅವರು ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮಗಳನ್ನು ಸಕಾಲದಲ್ಲಿ ತಲುಪಿಸುವ ನಿಟ್ಟಿನಲ್ಲಿ ಆರ್ಥಿಕ ವರ್ಷದ ಆರಂಭದಲ್ಲಿಯೇ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಸಲಹೆ ಮಾಡಿದರು. 

ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮಮತ ಅವರು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ಕಾನೂನು ಪದವೀದರರಿಗೆ ತರಬೇತಿ ಭತ್ಯೆ, ರಾಜ್ಯ ಅಭಿವೃದ್ಧಿ ವಲಯದಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆ(ಸಮುದಾಯ ಭವನ), ಮೊರಾರ್ಜಿ ದೇಸಾಯಿ ವಸತಿ ಶಾಲೆ, ಶಿಕ್ಷಣ ಮತ್ತು ಕಲಿಕಾ ಸಾಧನಗಳು, ವಿದ್ಯಾಸಿರಿ, ಹೀಗೆ ಹಲವು ಕಾರ್ಯಕ್ರಮಗಳನ್ನು ಕಲ್ಪಿಸಲಾಗುತ್ತದೆ. ಉನ್ನತ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.  

ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ನಗರಸಭೆ ವತಿಯಿಂದ ಕೌಶಲ್ಯ ತರಬೇತಿ, ಸ್ವ ಉದ್ಯೋಗ ಕಾರ್ಯಕ್ರಮ, ವಸತಿ ರೈತರಿಗೆ ಆಶ್ರಯ, ಬೀದಿ ವ್ಯಾಪಾರಿಗಳಿಗೆ ಸಹಾಯಧನ ಹೀಗೆ ಹಲವು ಕಾರ್ಯಕ್ರಮ ಕಲ್ಪಿಸಲಾಗುತ್ತಿದೆ ಎಂದರು. 

ಜಿಲ್ಲಾ ಪಂಚಾಯಿತ್ ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ ಅವರು ಮಾತನಾಡಿ ಎನ್‍ಆರ್‍ಎಲ್‍ಎಂ ಸಂಜೀವಿನಿ ಯೋಜನೆಯಲ್ಲಿ (ಸುತ್ತುನಿಧಿ ನೀಡುವುದು) ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಉಮಾ ಅವರು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು. 

ಮೀನುಗಾರಿಕೆ ಇಲಾಖೆ  ಉಪ ನಿರ್ದೇಶಕರಾದ ಕೆ.ಟಿ.ದರ್ಶನ್ ಅವರು ಮಾತನಾಡಿ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯಧನ ಮತ್ತು ಮೀನು ಮಾರುಕಟ್ಟೆ ಹಾಗೂ ಮತ್ಸವಾಹಿನಿಗೆ ಸಹಾಯಧನ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. 

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ಮಾತನಾಡಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿಯಲ್ಲಿ ಬಿತ್ತನೆ ಬೀಜ ವಿತರಣೆ, ಕೃಷಿ ಪ್ರಶಸ್ತಿ, ರೈತರಿಗೆ ತರಬೇತಿ ನೀಡುವ ಹಲವಾರು ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅರಿವು ಯೋಜನೆ ಮತ್ತು ಶ್ರಮಶಕ್ತಿ ಯೋಜನೆ ಮೈಕ್ರೋ ಸಾಲ ಯೋಜನೆಗಳ ಅನುಷ್ಠಾನ ಮಾಡಲಾಗುತ್ತಿದೆ ಎಂದರು. 

ವಕ್ಫ್ ಮಂಡಳಿಯ ಇರ್ಫಾನ್ ಅವರು ಹಲವು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಸಾಲ ಮಂಜೂರಾತಿ, ಸಾಲ ವಿತರಣೆ ಕೈಗೊಳ್ಳಲಾಗುತ್ತಿದೆ ಎಂದರು.  

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ ಇತರರು ಇದ್ದರು.