ಗ್ರಾಮ ಒನ್ ಯೋಜನೆ ಜನರ ಸಮೀಪಕ್ಕೆ ತಲುಪಿಸಿ: ವಿ.ಪೊನ್ನುರಾಜ್
ಮಡಿಕೇರಿ ಏ.27: ಗ್ರಾಮ ಒನ್ ಯೋಜನೆಯನ್ನು ಜನರ ಸಮೀಪಕ್ಕೆ ತಲುಪಿಸುವಲ್ಲಿ ಮತ್ತಷ್ಟು ಪ್ರಯತ್ನ ಮಾಡಬೇಕು ಎಂದು ಇ-ಆಡಳಿತ ವಿಭಾಗದ ಸರ್ಕಾರದ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ತಿಳಿಸಿದ್ದಾರೆ.
ಗ್ರಾಮ ಒನ್ ಮತ್ತು ಸೇವಾ ಸಿಂಧು ಯೋಜನೆ ಪ್ರಗತಿ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಒಂದು ಊರು, ಸೇವೆಗಳು ಹಲವಾರು’ ಹೆಸರಿನಡಿ ಸರ್ಕಾರವು ಗ್ರಾಮ ಒನ್ ಯೋಜನೆ ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಹಲವು ಇಲಾಖೆಗಳ ಸೇವೆಗಳು ಸಕಾಲದಲ್ಲಿ ದೊರೆಯಬೇಕು. ಸರ್ಕಾರದ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಶ್ರಮಿಸಬೇಕು ಎಂದು ವಿ.ಪೊನ್ನುರಾಜ್ ಅವರು ಹೇಳಿದರು.
ಗ್ರಾಮ ಒನ್ ಯೋಜನೆಗೆ ಹಲವು ಇಲಾಖೆಗಳ ಮತ್ತಷ್ಟು ಸೇವೆಯನ್ನು ಸೇರ್ಪಡೆ ಮಾಡುವಲ್ಲಿ ಮುಂದಾಗಲಾಗಿದೆ. ಆ ದಿಸೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಗ್ರಾಮ ಒನ್ ಯೋಜನೆಯು ಸರ್ಕಾರದ ಅತ್ಯಂತ ಮಹತ್ವಾಂಕಾಕ್ಷೆ ನಾಗರಿಕ ಸ್ನೇಹಮಯಿ ಕಾರ್ಯಕ್ರಮವಾಗಿದೆ. ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಸ್ವಂತ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರದ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ತಿಳಿಸಿದರು.
ಗ್ರಾಮ ಒನ್ ಸೆಂಟರ್‍ಗಳು ಕ್ರೀಯಾಶೀಲ ಹಾಗೂ ಜನರಿಗೆ ಹತ್ತಿರವಾಗಿ ಕೆಲಸ ಮಾಡಬೇಕು. ಗ್ರಾಮ ಒನ್ ಸೆಂಟರ್‍ಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ಪಡೆದರು.
ತಮ್ಮ ತಮ್ಮ ಇಲಾಖೆಗಳಲ್ಲಿ ಸರ್ಕಾರದ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸಬೇಕು. ಆ ನಿಟ್ಟಿನಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚು ಸೇವೆಗಳನ್ನು ಸ್ಥಳೀಯರಿಗೆ ಕಲ್ಪಿಸಲು ಶ್ರಮಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯತಿಗಳು ಇದ್ದು, 98 ಗ್ರಾಮ ಪಂಚಾಯತ್‍ಗಳಲ್ಲಿ ಈಗಾಗಲೇ ಗ್ರಾಮ ಒನ್ ಸೇವೆ ಕಲ್ಪಿಸಲಾಗಿದೆ. ಬಾಕಿ ಗ್ರಾಮ ಪಂಚಾಯತ್‍ಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಸೇವಾ ಸಿಂಧು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಆಧಾರ್, ಪ್ರಾದೇಶಿಕ ಸಾರಿಗೆ, ಇ-ಸ್ಟಾಂಪ್ ಸೇರಿದಂತೆ ಇದುವರೆಗೆ ಸುಮಾರು 13,991 ಸೇವೆಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಗ್ರಾಮ ಒನ್ ಸೆಂಟರ್‍ಗಳು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಲಿವೆ. ಗ್ರಾಮ ಒನ್ ಸೆಂಟರ್‍ಗಳನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಒಂದು ಕೊಠಡಿ ನೀಡಿದರೆ ಗ್ರಾಮ ಒನ್ ಕಾರ್ಯನಿರ್ವಹಣೆಗೆ ಸಹಕಾರಿ ಆಗಲಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಇ ಆಡಳಿತ ವಿಭಾಗದ ಸರ್ಕಾರದ ಕಾರ್ಯದರ್ಶಿ ಪೊನ್ನುರಾಜ್ ಅವರು ಈ ಬಗ್ಗೆ ಪ್ರಸ್ತಾವನೆ ಕಳಿಸುವಂತೆ ಸಲಹೆ ಮಾಡಿದರು.
ಗ್ರಾಮ ಒನ್ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಚೈಸ್‍ಗಳು ಪಡಿತರ ಚೀಟಿ, ಪಾನ್ ಕಾರ್ಡ್, ಮ್ಯೂಟೇಷನ್ ಪ್ರತಿ ಹೀಗೆ ಹಲವು ಸೇವೆಗಳನ್ನು ಸೇರ್ಪಡೆ ಮಾಡಬಹುದಾಗಿದೆ ಎಂದು ಗಮನಕ್ಕೆ ತಂದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ತೋಟಗಾರಿಕೆ, ಹೀಗೆ ಹಲವು ಇಲಾಖೆಗಳ ಮತ್ತಷ್ಟು ಸೇವೆಗಳನ್ನು ಸೇರ್ಪಡೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಗ್ರಾಮ ಒನ್ ಯೋಜನೆಯ ಮೂಲಕ ನಾಗರಿಕರ ಮನೆ ಬಳಿಯೇ ಸೇವಾ ಸಿಂಧು ವೇದಿಕೆಯ ಮೂಲಕ ಹಲವು ಸೇವೆಗಳು ಲಭ್ಯವಾಗಲಿವೆ ಎಂದು ತಿಳಿಸಿದರು.
ಇ-ಆಡಳಿತ ವಿಭಾಗದ ಯೋಜನಾ ನಿರ್ದೇಶಕರಾದ ವರಪ್ರಸಾದ್ ರೆಡ್ಡಿ ಅವರು ಸದ್ಯದಲ್ಲಿಯೇ ಗ್ರಾಮ ಒನ್‍ಗೆ ವಿವಿಧ ಇಲಾಖೆಗಳ ಸೇವೆಗಳು ಮತ್ತಷ್ಟು ಸೇರ್ಪಡೆಗೊಳ್ಳಲಿವೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಬಿಸಿಎಂ. ಅಧಿಕಾರಿ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ಯೋಗಾನಂದ, ಪ್ರಕಾಶ್ ಅವರು ಹಲವು ಮಾಹಿತಿ ನೀಡಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network