Header Ads Widget

Responsive Advertisement

ಕಾಪಾಳ ಸಮಾಜದವರ ಸ್ಥಿತಿಗತಿ ಆಲಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು

ಕಾಪಾಳ ಸಮಾಜದವರ ಸ್ಥಿತಿಗತಿ ಆಲಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು

ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಮುಂದಿನ ಕ್ರಮ: ಜಯಪ್ರಕಾಶ ಹೆಗ್ಡೆ 


ಮಡಿಕೇರಿ ಏ.05: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಮತ್ತು ಸದಸ್ಯರಾದ ಎಚ್.ಎಸ್.ಕಲ್ಯಾಣ್ ಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ.ಸುವರ್ಣ, ಅರುಣ್ ಕುಮಾರ್, ಶಾರದ ನಾಯ್ಕ, ಇತರರು ಕೊಡಗು ಜಿಲ್ಲೆಯ ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕಾಪಾಳ ಸಮಾಜದವರ ಸ್ಥಿತಿಗತಿ ಆಲಿಸಿದರು. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರು ಮತ್ತು ಸದಸ್ಯರ ತಂಡವು ಕಕ್ಕಬ್ಬೆ ಗ್ರಾ.ಪಂ.ವ್ಯಾಪ್ತಿಯ ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ ಕಾಪಾಳ ಸಮಾಜದವರು ವಾಸಿಸುತ್ತಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಸುದೀರ್ಘವಾಗಿ ಚರ್ಚಿಸಿ ಮಾಹಿತಿ ಪಡೆದರು. 

ಆರಂಭದಲ್ಲಿ ಮಾತನಾಡಿದ ಕಾಪಾಳ ಸಮಾಜದ ಪ್ರಮುಖರಾದ ಕಾಪಾಳರ ತಮ್ಮಯ್ಯ ಅವರು ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ 32 ಮನೆಗಳಿದ್ದು, ಸುಮಾರು 200 ಕ್ಕಿಂತ ಕಡಿಮೆ ಜನಸಂಖ್ಯೆ ಇದ್ದಾರೆ. ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಕಾಪಾಳ ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.   

ದಟ್ಟ ಕಾನನದಲ್ಲಿ ವಾಸಿಸುತ್ತಿದ್ದ ಕಾಪಾಳ ಜನಾಂಗದವರನ್ನು ಅಂದಿನ ರಾಜರು ನಾಲ್ಕುನಾಡು ಅರಮನೆ ‘ಕಾವಲು ಕಾಯಲು’ ಕರೆದುಕೊಂಡು ಬಂದರು. ಕಾಪಾಳರು ಎಂದರೆ ಕಾವಲುಗಾರರು, ಕಾಪಾಡುವವರು, ರಕ್ಷಕರು ಎಂಬ ಅರ್ಥವಿದೆ ಎಂದು ಕಾಪಾಳರ ತಮ್ಮಯ್ಯ ಅವರು ತಿಳಿಸಿದರು.  

ಅಂದಿನ ರಾಜರು ಕಾಪಾಳ ಸಮಾಜದವರಿಗೆ ಸ್ವಲ್ಪ ಜಾಗ ನೀಡಿ ನಾಲ್ಕುನಾಡು ಅರಮನೆ ಕಾವಲುಗಾರರನ್ನಾಗಿ ನೇಮಿಸಿಕೊಂಡಿದ್ದರು. ಕಾಪಾಳ ಸಮಾಜವು ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ತುಂಬಾ ಹಿಂದೆ ಉಳಿದಿದ್ದು, ಕಾಪಾಳ ಜನಾಂಗಕ್ಕೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ, ಆದ್ದರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಅವರು ಕೋರಿದರು.   

ಈ ಸಂದರ್ಭದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಅವರು ಕಾಪಾಳ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದವರು ಮತ್ತು ಸರ್ಕಾರಿ ಉದ್ಯೋಗ ಪಡೆದಿರುವವರು ಎಷ್ಟು ಮಂದಿ ಎಂದು ಮಾಹಿತಿ ಪಡೆದರು. 

ಈ ಸಂದರ್ಭದಲ್ಲಿ ಒಂದಿಬ್ಬರು ಪದವಿ ಹಂತಕ್ಕೆ ಓದಿದ್ದಾರೆ. ಅದು ಬಿಟ್ಟು ಯಾರೂ ಸಹ ಸರ್ಕಾರಿ ಉದ್ಯೋಗವನ್ನು ಪಡೆದಿಲ್ಲ ಎಂದು ಕಾಪಾಳರ ಪ್ರಮುಖರೊಬ್ಬರು ಮಾಹಿತಿ ನೀಡಿದರು.  

ಕಾಪಾಳರು ಕೊಡಗಿನ ಮೂಲ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಕೊಡವ ಸಂಸ್ಕøತಿ, ಸಂಪ್ರದಾಯ ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಕುಡಿಯರ ಭರತ್‍ಚಂದ್ರ ದೇವಯ್ಯ ಮತ್ತು ಕಾಪಾಳ ಜನಾಂಗದ ಪ್ರಮುಖರಾದ ಪೊನ್ನಪ್ಪ ಅವರು  ಮಾತನಾಡಿ ಕಾಪಾಳ ಸಮುದಾಯದ ಬಗ್ಗೆ ಕುಲಶಾಸ್ತ್ರ ಅಧ್ಯಯನ ಆಗಬೇಕು. ತಾತ ಮುತ್ತಾತಂದಿರ ಹೆಸರಿನಲ್ಲಿ ಭೂಮಿ ಇದೆ. ಆದರೆ ಮಕ್ಕಳ ಹೆಸರಿಗೆ ಆರ್‍ಟಿಸಿ ಆಗಿಲ್ಲ ಎಂದು ಅವರು ತಿಳಿಸಿದರು. ಪಂಚಾಯಿತಿ ವತಿಯಿಂದ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಒದಗಿಸುವಂತಾಗಬೇಕು ಎಂದು ಅವರು ಕೋರಿದರು. 

ಮಾಹಿತಿ ಆಲಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಅವರು ಏಪ್ರಿಲ್, 06 ರಂದು ಜಿಲ್ಲಾಧಿಕಾರಿ ಅವರ ಜೊತೆ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕಾಪಾಳರ ಸ್ಥಿತಿಗತಿ ಬಗ್ಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು.  

ಹಿಂದುಳಿದ ವರ್ಗಗಳ ಜಾತಿ ವರ್ಗೀಕರಣ ಪಟ್ಟಿಯಲ್ಲಿ ಕೆಟಗರಿ-01 ರ ಕ್ರಮ ಸಂಖ್ಯೆ 26 ರಲ್ಲಿ ‘ಕೊಡಗು ಕಾಪಾಳ’ ಎಂದು ಇದೆ. ತಮ್ಮ ಜೀವನ ಶೈಲಿಯನ್ನು ಗಮನಿಸಿದಾಗ ಬುಡಕಟ್ಟು ಸಂಸ್ಕøತಿ, ಸಂಪ್ರದಾಯ ಹೊಂದಿದ್ದು, ಆ ನಿಟ್ಟಿನಲ್ಲಿ ವರದಿ ತಯಾರಿಸಿ ಪರಿಶಿಷ್ಟ ಪಂಗಡ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ತಿಳಿಸಿದರು. 

ಕೆಟಗರಿ-01 ರಲ್ಲಿ ಇದ್ದರೂ ಸಹ ಅಲೆಮಾರಿ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳು ಸಿಗಲಿದ್ದು, ಹೆಚ್ಚಿನ ಸೌಲಭ್ಯ ಪಡೆಯುವಂತಾಗಲು ಸಹಕಾರಿಯಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಆ ನಿಟ್ಟಿನಲ್ಲಿ ಬುಧವಾರ ನಡೆಯುವ ಸಭೆಯಲ್ಲಿ ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ಕೆ.ಜಯಪ್ರಕಾಶ ಹೆಗ್ಡೆ ಅವರು ಹೇಳಿದರು. 

ಪ್ರತಿಯೊಬ್ಬರೂ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ ಎಂದು ಅಧ್ಯಕ್ಷರು ನುಡಿದರು. 

ಬಡತನದಲ್ಲಿದ್ದರೂ ಸಹ ತಾವು ವಾಸಿಸುತ್ತಿರುವ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಿರುವುದಕ್ಕೆ ಕೆ.ಜಯಪ್ರಕಾಶ ಹೆಗ್ಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

‘ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಸಣ್ಣ ಸಣ್ಣ ಸಮಾಜಗಳು ವಾಸಿಸುವ ಪ್ರದೇಶಗಳಿಗೆ ತೆರಳಿ ಮಾಹಿತಿ ಪಡೆಯಲಾಗುತ್ತಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂಬುದು ಹಿಂದುಳಿದ ವರ್ಗಗಳ ಆಯೋಗದ ಆಶಯವಾಗಿದೆ. ಆ ನಿಟ್ಟಿನಲ್ಲಿ ತಮ್ಮ ಬೇಡಿಕೆ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಪ್ರಯತ್ನಿಸಲಾಗುವುದು ಎಂದು ಜಯಪ್ರಕಾಶ ಹೆಗ್ಡೆ ಅವರು ನುಡಿದರು.’ 

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕಾಪಾಳ ಸಮಾಜ ಬಿಟ್ಟು ಹೋಗಿದೆ ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ನಗರಸಭೆ ಅಧ್ಯಕ್ಷರು ಗಮನ ಸೆಳೆದಿದ್ದರು. ಆ ನಿಟ್ಟಿನಲ್ಲಿ ಕಾಪಾಳ ಜನಾಂಗ ವಾಸಿಸುವ ಪ್ರದೇಶವನ್ನು ವೀಕ್ಷಿಸಿ, ಇಲ್ಲಿನ ಕಾಪಾಳ ಜನರ ಸ್ಥಿತಿಗತಿ ಆಲಿಸಲು ಭೇಟಿ ನೀಡಲಾಗಿದೆ. ಆ ನಿಟ್ಟಿನಲ್ಲಿ ಕಾಪಾಳರ ಸ್ಥಿತಿಗತಿ ಗಮನಿಸಲಾಗಿದ್ದು, ಸಂಕಷ್ಟದಿಂದ ಬದುಕು ದೂಡುತ್ತಿದ್ದಾರೆ ಎಂದರು.  

ಕಾಪಾಳ ಜನಾಂಗವು ಸ್ಥಿತಿಗತಿಯನ್ನು ಅವಲೋಕಿಸಿದಾಗ ಬುಡಕಟ್ಟು ಸಂಸ್ಕøತಿ, ಸಂಪ್ರದಾಯವನ್ನು ಹೊಂದಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ತಿಳಿಸಿದರು. 

ಕಕ್ಕಬ್ಬೆ ಗ್ರಾ.ಪಂ.ಅಧ್ಯಕ್ಷರಾದ ಕಲಿಯಂಡ ಸಂಪನ್ ಅಯ್ಯಪ್ಪ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ್, ತಾಲ್ಲೂಕು ಅಧಿಕಾರಿ ರಾಜಶೇಖರ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕರಾದ ಕವಿತಾ ಇತರರು ಇದ್ದರು. 

ಕಾಪಾಳರ ಸ್ಥಿತಿಗತಿ ಆಲಿಸುವ ಸಂದರ್ಭದಲ್ಲಿ ಕಾಪಾಳ ಸಮಾಜದ ಪ್ರಮುಖರು ದುಡಿ ನುಡಿಸಿದರು. ಮಹಿಳೆಯರು ನೃತ್ಯ ಮಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಾಪಾಳರ ಪ್ರಕಾಶ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು. 

ನಂತರ ಕಾಪಾಳರ ಹಿರಿಯರೊಂದಿಗೆ ಮಾತುಕತೆ ನಡೆಸಿದರು. ಕಾಪಾಳರು ವಾಸಿಸುವ ಸ್ಥಳದಿಂದ ನಾಲ್ಕುನಾಡು ಅರಮನೆಗೆ ನಡೆದುಕೊಂಡು ಹೋಗಿ ಅರಮನೆ ವೀಕ್ಷಿಸಿದರು. ಅದಕ್ಕೂ ಮೊದಲು ಯವಕಪಾಡಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. 

ಕಾಪಾಳ ಸಮಾಜದ ಪ್ರಕಾಶ ಅವರು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದ ಮನವಿ ಪತ್ರದ ವಿವರ  ಇಂತಿದೆ: ಕೊಡಗು ರಾಜರಾಗಿದ್ದ ದೊಡ್ಡವೀರರಾಜರ ಆಳ್ವಿಕೆಯ ಸಂದರ್ಭದಲ್ಲಿ ಕಾಪಾಳ ಜನಾಂಗದವರು ಬೆಟ್ಟಗುಡ್ಡಗಳಿಂದ ಕೂಡಿದ ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸವಾಗಿದ್ದರು. ಪರಿಸರ ಕಾಳಜಿ, ಪ್ರಕೃತಿಯ ಮೇಲಿದ್ದ ಭಕ್ತಿ, ಆರಾದನೆ, ಪರಿಸರದ ಜೊತೆಗಿನ ಅವಿನಾಭಾವ ಸಂಬಂಧ, ಹಾಗೆಯೇ ವೈದ್ಯಕೀಯವಾಗಿ ಪ್ರಾಕೃತಿಕವಾಗಿ ಸಿಗುವ ಔಷಧ ಗಿಡ ಮೂಲಿಕೆಗಳ ಸಂಗ್ರಹ ಮತ್ತು ಔಷಧ ತಯಾರಿಸಿ ಬಳಸುವ ವಿಧಾನ ರೀತಿ ನಿಯಮಗಳಲ್ಲಿ ವಿಶೇಷವಾದ ಜ್ಞಾನ ಶಕ್ತಿ ಹೊಂದಿದ್ದರು.

 ಕಾಪಾಳರ ಜೀವನವೇ ಪ್ರಕೃತಿಯೊಂದಿಗೆ ಬೆರೆತು ಹೋಗಿದೆ ಎಂದೇ ಹೇಳಬಹುದು. ಅಂತಹ ಸಂದರ್ಭದಲ್ಲಿ ದೊಡ್ಡ ವೀರರಾಜರು ನಾಲ್ಕುನಾಡು ಅರಮನೆ ನಿರ್ಮಾಣ ಕಾರ್ಯ ಕೈಗೊಂಡಿದ್ದರು. ಪ್ರಕೃತಿಯೊಂದಿಗಿನ ಸಂಬಂಧ ಹಾಗೂ ಔಷಧ ಗಿಡಮೂಲಿಕೆಗಳ ಬಗ್ಗೆ ಇದ್ದ ಜ್ಞಾನ ಶಕ್ತಿಯನ್ನು ಅರಿತ ರಾಜರು ಕಾಪಾಳರನ್ನು ಅವರ ವೈಯಕ್ತಿಕ ಔಷಧ ಉಪಚಾರದ ವಿಷಯವಾಗಿಯೂ, ಸದೃಡ ಮೈಕಟ್ಟನ್ನು ನೋಡಿ ನಾಲ್ಕುನಾಡು ಅರಮನೆಗೆ ತಂದಿರಿಸಿದರು. 

ಕಾಪಾಳರ ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಯನ್ನು ಕಂಡ ರಾಜರು ಅವರ ಜೊತೆಯಲ್ಲಿ ಇರಿಸಿಕೊಂಡು ನಾಲ್ಕುನಾಡು ಅರಮನೆಯ ಸುತ್ತಮುತ್ತ ಕಾವಲು ಕಾಯುತ್ತಾ ಇಲ್ಲಿಯೇ ಜೀವನ ಮಾಡಿ ಎಂದು ಅರಮನೆಯ ಹಿಂದುಗಡೆ ಭೂಮಿಯನ್ನು (ಅಂದಾಜು 60 ಏಕರೆ) ಜಮ್ಮಾವನ್ನು ನೀಡಿದ್ದಾರೆ ಎಂದು ಹಿರಿಯರು ತಲಾತಲಾಂತರದಿಂದ ಹೇಳುತ್ತಾ ಬಂದಿದ್ದಾರೆ. 

ಅದು ಇಲ್ಲಿಯವರೆಗೂ ಬಂದು ಈಗಿನ ಕಾಪಾಳರ ಹಿರಿಯರು ಕೂಡ ಅದನ್ನೇ ಹೇಳುತ್ತಿದ್ದಾರೆ. ರಾಜರು ಕಾಪಾಳರನ್ನು ಆಗಿನ ಸಮಯದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿದುದ್ದರಿಂದ ಬುಡಕಟ್ಟು ಜನಾಂಗದವರೆಂದು ಪರಿಗಣಿಸಿದರು. ಇದರ ಬಗ್ಗೆ ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಕೊಡಗಿನ ಹಾಲೇರಿ ರಾಜವಂಶವು ಭಾಗ 1 ರ ಪುಸ್ತಕದ 205 ನೇ ಪುಟದಲ್ಲಿ ಉಲ್ಲೇಖವಾಗಿದೆ.

 ಇದರಂತೆಯೇ ನಮಗೆ ರಾಜರು ನಾಲ್ಕುನಾಡು ಅರಮನೆ ಹಿಂದುಗಡೆ ಇರುವ ಭೂ ಪ್ರದೇಶದಲ್ಲಿ ವಾಸ್ತವ್ಯ ಮಾಡಿ, ಕೃಷಿ ಕಾಯಕ ಮಾಡಿಕೊಂಡಿರಲು ಅನುವು ಮಾಡಿ ಕೊಟ್ಟು ಬದುಕಲು ಅವಕಾಶ ಕಲ್ಪಿಸಿಕೊಟ್ಟರು. ಆದರೆ ಕ್ರಮೇಣ ರಾಜರು ನಮ್ಮಿಂದ ದೂರವಾದರು. ಹಾಗೆಯೇ ರಾಜರು ನಮಗೆ ಕೊಟ್ಟ 60 ಎಕರೆ ಭೂಮಿ (ಜಮ್ಮ) ನಶಿಸಿ ಹೋಗಿ ಈಗ 15.20 ಎಕರೆಯಷ್ಟು ಭೂಮಿ ಮಾತ್ರ ಉಳಿದಿದೆ.

ಜನಾಂಗದ ಜೀವನ ಹಾಗೂ ಸ್ಥಿತಿಗತಿಗಳು: ಕಾಪಾಳ ಜನಾಂಗದವರ ಜೀವನ ಇನ್ನೂ ಕೂಡ ಯಾವುದೇ ಒಂದು ಹಂತಕ್ಕೆ ತಲುಪಿಲ್ಲ. ಇದಕ್ಕೆ ಮುಖ್ಯ ಕಾರಣ ವಿದ್ಯಾಭ್ಯಾಸದ ಕೊರತೆ. ವಿದ್ಯಾಭ್ಯಾಸಕ್ಕೆ ಆರ್ಥಿಕ ಸ್ಥಿತಿ ಹದಗೆಟ್ಟಿರುವುದೇ ಕಾರಣ. ಶಿಕ್ಷಣದಲ್ಲಿಯೂ ಆರ್ಥಿಕ ಸ್ಥಿತಿಗತಿಯಲ್ಲಿಯೂ ಸಾಮಾಜಿಕವಾಗಿಯೂ ತುಂಬಾ ಹಿಂದೆ ಉಳಿದಿರುವಂತಹ ಒಂದು ಚಿಕ್ಕ ಜನ ಸಮುದಾಯವಾಗಿರುತ್ತದೆ. ಕೂಲಿಯೇ ನಮ್ಮ ಜೀವನ. 

ಹಬ್ಬ, ಮದುವೆ, ತಿಥಿ, ನಾಮಕರಣದಂತಹ ಕಾರ್ಯಗಳನ್ನು ನಾವು ಮಾಡಬೇಕಾದರೆ ಸಾಹುಕಾರರ ಬಳಿ ಮಾತನಾಡಿ ಅವರ ಕೈಯಿಂದ ಸಾಲದ ರೂಪದಲ್ಲಿ ಆರ್ಥಿಕ ನೆರವು ಪಡೆದುಕೊಳ್ಳುತ್ತೇವೆ. ಅದರಿಂದಲೇ ನಮ್ಮ ಕಾರ್ಯವನ್ನು ನೆರೆವೇರಿಸಿ ಕೊಳ್ಳುತ್ತಿದ್ದೇವೆ. ಕೂಲಿ ಬಿಟ್ಟರೆ ಬೇರೆ ಯಾವುದೇ ಆದಾಯ ನಮಗಿಲ್ಲ. ನಮ್ಮ ಆರೋಗ್ಯ ಕೆಟ್ಟರು ದೊಡ್ಡ ಚಿಕಿತ್ಸೆಗೆ ಬೇಕಾದ ಆರ್ಥಿಕ ಸೌಲಭ್ಯವಿಲ್ಲದಿರುವುದರಿಂದ ಆಸ್ಪತ್ರೆ ಕಡೆ ಮುಖ ಮಾಡದೆ ಮನೆಯಲ್ಲಿಯೇ ಪ್ರಾಣ ಬಿಟ್ಟಿದು ಇದೆ. ಕೊಡಗಿನ ವೀರರು ಅವರ ಆಳ್ವಿಕೆಯ ಸಮಯದಲ್ಲಿ ನಮ್ಮನ್ನು ಬುಡಕಟ್ಟು ಜನಾಂಗವೆಂದು ಪರಿಗಣಿಸಿದ್ದರು. 

ಜನಾಂಗದ ಆಚಾರ, ವಿಚಾರ ಪದ್ಧತಿಗಳು: ಕೊಡಗಿನ ಮೂಲ ಕೊಡವರ ಆಚಾರ, ವಿಚಾರ, ಭಾಷೆ, ಸಂಸ್ಕøತಿ, ಪರಂಪರೆಯನ್ನು ಕಾಪಾಳರು ಅನುಸರಿಸಿಕೊಂಡು ಬರುತ್ತಿದ್ದೇವೆ. ಮದುವೆ, ಹಬ್ಬ, ತಿಥಿ ಕರ್ಮಾಂತರಗಳನ್ನು ಮೂಲ ಕೊಡವರ ಮಾದರಿಯಲ್ಲಿಯೇ ನಾವು ಮಾಡುತ್ತಿದ್ದೇವೆ.

ಕೊಡಗಿನ ಕುಲದೇವರಾದ ಶ್ರೀ ಇಗ್ಗುತ್ತಪ್ಪ, ಮಾತೆ ಕಾವೇರಿಯನ್ನು ಕಾಪಾಳರೂ ಕೂಡ ನಮ್ಮ ಕುಲದೇವರುಗಳಾಗಿ ಪೂಜಿಸುತ್ತೇವೆ. ನಮ್ಮ ಕುಟುಂಬ(ಜನಾಂಗ)ದ ದೇವರುಗಳಾಗಿ ನಮ್ಮ ಕಾಟೋಳ ಕುಞಬೊಳ್ತು ಮತ್ತು ಚಟ್ಟಿ ಅಚ್ಚಪ್ಪ ದೇವರುಗಳನ್ನು ನಾವು ಪೂಜಿಸುತ್ತೇವೆ.

ಈ ಎಲ್ಲಾ ವಿಷಯಗಳು ಕಾಪಾಳ ಜನಾಂಗಕ್ಕೆ ಸಂಬಂದಪಟ್ಟಿದ್ದು, ಕಾಪಾಳ ಜನಾಂಗವನ್ನು, ಕೊಡಗಿನ ರಾಜರು ನಿರ್ಣಯಿಸಿದಂತೆ ದಲಿತ ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿಯಡಿಯಲ್ಲಿ ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾಪಾಳ ಜನಾಂಗಕ್ಕೆ ಅವಕಾಶ ಮಾಡಬೇಕಾಗಿ ನಾವೆಲ್ಲರೂ ವಿನಂತಿಸಿಕೊಳ್ಳುತ್ತಿದ್ದೇವೆ.