Header Ads Widget

ಸರ್ಚ್ ಕೂರ್ಗ್ ಮೀಡಿಯ

ವನ್ಯ ಪ್ರಾಣಿಗಳ ನಿಯಂತ್ರಣ ಬಗ್ಗೆ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಸುಧೀರ್ಘ ಸಮಾಲೋಚನೆ


ಮಡಿಕೇರಿ ಏ.08: ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರೊಂದಿಗೆ ಅರಣ್ಯ ಸಚಿವರಾದ ಉಮೇಶ್ ಕತ್ತಿ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆಯು ಶುಕ್ರವಾರ ನಗರದ ಅರಣ್ಯ ಭವನದಲ್ಲಿ ನಡೆಯಿತು.   

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ, ಪ್ರಮುಖರಾದ ಎಂ.ಸಿ.ನಾಣಯ್ಯ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಾದ ವಿಜಯ್ ಕುಮಾರ್ ಗೋಗಿ, ಸರಸ್ವತಿ ಮಿಶ್ರ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕಾ.ರಾಮೇಶ್ವರಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇತರರು ಇದ್ದರು.  

ಸಭೆಯ ಆರಂಭದಲ್ಲಿ ಮಾತನಾಡಿದ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಾದ ವಿಜಯ್ ಕುಮಾರ್ ಗೋಗಿ ಅವರು ವನ್ಯಜೀವಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಸಮಗ್ರವಾದ ಡಿಪಿಆರ್ ತಯಾರಿಸಲಾಗಿದೆ. ಆ ನಿಟ್ಟಿನಲ್ಲಿ 700 ಕೋಟಿ ರೂ. ಅನುದಾನ ದೊರೆತಲ್ಲಿ ರೈಲು ಬ್ಯಾರಿಕೇಡ್ ನಿರ್ಮಾಣ ಮಾಡಿ ಕಾಡಾನೆ ಹಾವಳಿಯನ್ನು ಶೇ.90ರಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು. 

ಈ ಹಿಂದೆ ಸರ್ಕಾರ ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಲು ಪ್ರತೀ ವರ್ಷ 50 ಕೋಟಿ ರೂ. ಒದಗಿಸುತ್ತಿತ್ತು, ಈ ಬಾರಿ 100 ಕೋಟಿಯನ್ನು ಬಜೆಟಿನಲ್ಲಿ ಘೋಷಿಸಿದೆ. ಆ ನಿಟ್ಟಿನಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಯಲು ಶ್ರಮಿಸಲಾಗುವುದು. ಇದೇ ರೀತಿ ಇನ್ನೂ ಏಳು-ಎಂಟು ವರ್ಷಗಳ ಕಾಲ ಅನುದಾನ ಒದಗಿಸಿದಲ್ಲಿ ವನ್ಯಪ್ರಾಣಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಎಂದರು.  

ಬಳಿಕ ಮಾತನಾಡಿದ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಸಂಚಾಲಕರಾದ ಶರಿ ಸುಬ್ಬಯ್ಯ ಅವರು ಮಾನವ ವನ್ಯಪ್ರಾಣಿಗಳ ಸಂಘರ್ಷ ತಡೆಯುವಲ್ಲಿ ಹಲವು ಕಾರ್ಯಕ್ರಮ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಖಾಯಂ ಆಗಿ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.  

ವನ್ಯಪ್ರಾಣಿಗಳ ಹಾವಳಿ ತಡೆಯುವಲ್ಲಿ ವಿಶೇಷ ಕಾರ್ಯಪಡೆ ರಚನೆ ಮಾಡಬೇಕು. ನಾಗರಹೊಳೆ, ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾವಹಿಸಬೇಕು. ಅರಣ್ಯದಲ್ಲಿ ಬೆಂಕಿ ಬಿದ್ದರೆ ಮಾನವ ಮತ್ತು ವನ್ಯಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಆ ನಿಟ್ಟಿನಲ್ಲಿ ಮುನ್ನೆಚ್ಚರ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.  

ಕೃಷಿಕರಾದ ಉಮೇಶ್ ಅವರು ಕಾಡಂಚಿನ ಗ್ರಾಮಗಳಲ್ಲಿ ತೋಟಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಹುಲಿ ಮತ್ತು ಕಾಡಾನೆಗಳ ಭಯದಿಂದ ಬದುಕು ದೂಡುವಂತಾಗಿದೆ ಎಂದು ಅವರು ಅವಲತ್ತುಕೊಂಡರು. 

ವನ್ಯಪ್ರಾಣಿಗಳ ಹಾವಳಿಗೆ ತುತ್ತಾದ ಕುಟುಂಬದವರಿಗೆ 7.50 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತದೆ. ಆದರೆ ಕುಟುಂಬದ ಆಧಾರ ಸ್ತಂಭವೇ ಇಲ್ಲದಿದ್ದರೆ ಬದುಕುವುದು ಹೇಗೆ. ವನ್ಯಪ್ರಾಣಿ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು  ಎಂದು ಅವರು ಮನವಿ ಮಾಡಿದರು.  

ಬಿರುನಾಣಿ-ಕೂಟಿಯಾಲ ಸೇತುವೆ, ರಸ್ತೆ ಸರಿಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು. ಗಣೇಶ್ ಕುಟುಂಬದವರಿಗೆ ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದರು. 

ಬಲ್ಲಚಂಡ ಲೋಕನಾಥ್ ಅವರು ಮಾತನಾಡಿ ನಾಗರಹೊಳೆ ವ್ಯಾಪ್ತಿಯಲ್ಲಿ 15 ಕ್ಕೂ ಹೆಚ್ಚು ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿದೆ. ಈ ನರಭಕ್ಷಕ ಹುಲಿಯನ್ನು ಕೊಲ್ಲಲು ಅವಕಾಶ ಮಾಡಬೇಕು ಎಂದು ಕೋರಿದರು. 

ರೈತ ಸಂಘದ ಪ್ರಮುಖರಾದ ಹೇಮಚಂದ್ರ ಅವರು ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿ ಮತ್ತು ಪಕ್ಷಿಗಳಿಗೆ ಬೇಕಾದ ಗಿಡ ಮರ ಬೆಳೆಸಬೇಕು. ತೇಗ ಅಳಿಸಿ, ವನ್ಯಪ್ರಾಣಿಗಳನ್ನು ಉಳಿಸಬೇಕು. ತೇಗ ಮತ್ತು ನೀಲಗಿರಿ ಮರಗಳು ವನ್ಯಪ್ರಾಣಿಗಳ ಶತ್ರುವಾಗಿದ್ದು, ತೇಗ ಮತ್ತು ನೀಲಗಿರಿ ಮರಗಳನ್ನು ತೆರವುಗೊಳಿಸಿ ಬಿದಿರನ್ನು ನೆಡಬೇಕು ಎಂದು ಅವರು ಸಲಹೆ ಮಾಡಿದರು. 

ಅರಣ್ಯ ಪ್ರದೇಶದಲ್ಲಿ ಜಿಂಕೆಗಳ ಸಂಖ್ಯೆಯು ಅವನತಿಯತ್ತ ಸಾಗಿದೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಗಳಿಗೆ ಬೇಕಿರುವ ಬಿದಿರು ಮತ್ತು ಹಣ್ಣು ಹಂಪಲು ಗಿಡಗಳನ್ನು ಬೆಳೆಯಬೇಕು ಎಂದರು. 

ಕಾಡಂಚಿನ ಗ್ರಾಮಗಳಲ್ಲಿ ಸುಭದ್ರವಾದ ಕೊಟ್ಟಿಗೆ ನಿರ್ಮಿಸಲು ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಕೋರಿದರು. 

ಕೊಡಗು ಕಾಫಿ ಬೆಳೆಗಾರರ ಸಂಘದ ಪ್ರಮುಖರು ಮಾತನಾಡಿ ಕೊಡಗಿನ ಕೃಷಿ ಪದ್ಧತಿ ಉಳಿಸಬೇಕು. ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಬೇಕು ಎಂದರು. 

ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ವಿಶ್ವನಾಥ ಅವರು ಕಾಲ ಮಿತಿಯಲ್ಲಿ ವನ್ಯಪ್ರಾಣಿಗಳಿಂದ ರಕ್ಷಣೆ ಮಾಡಬೇಕು. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ‘ಇಪಿಟಿ’ ಅಳವಡಿಸಬೇಕು. ಆ ನಿಟ್ಟಿನಲ್ಲಿ ಸರಿಯಾದ ರೂಪುರೇಷ ತಯಾರು ಮಾಡಬೇಕು ಎಂದು ಅವರು ಹೇಳಿದರು. 

ಸಣ್ಣ ಬೆಳೆಗಾರರ ಸಂಘದ ಪ್ರತಿನಿಧಿ ನಂದ ಸುಬ್ಬಯ್ಯ ಅವರು ಮಾತನಾಡಿ ಕೊಡಗಿನಲ್ಲಿ ಭತ್ತ ಮತ್ತು ಕಾಫಿ ಪ್ರಮುಖ ಬೆಳೆಯಾಗಿದೆ. ಆದರೆ ಕಾಡಾನೆ ಹಾವಳಿಯಿಂದ ಭತ್ತ ಬೆಳೆಯುವುದು ಕಡಿಮೆಯಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಪ್ರದೇಶದಲ್ಲಿ ಬಿದಿರು ಬೆಳೆಯಬೇಕು. ಜಿಲ್ಲೆಯಲ್ಲಿರುವ ಜಂಗಲ್ ಲಾಡ್ಜ್‍ಗಳನ್ನು ಮುಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು. 

ರೈತರಾದ ಲಕ್ಷ್ಮಣ ಅವರು ವರ್ಷದಿಂದ ವರ್ಷಕ್ಕೆ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ವನ್ಯಪ್ರಾಣಿಗಳಿಗೆ ‘ಸಂತಾನ ಹರಣ ಶಸ್ತ್ರ ಚಿಕಿತ್ಸೆ’ ಮಾಡಬೇಕು ಎಂದು ಅವರು ಸಲಹೆ ಮಾಡಿದರು. 

‘ರೈತ ಸಂಘದ ಅಧ್ಯಕ್ಷರಾದ ಮನು ಸೋಮಯ್ಯ ಅವರು ಮಾತನಾಡಿ ಅರಣ್ಯ ವ್ಯಾಪ್ತಿಯಲ್ಲಿನ ಪ್ರವಾಸಿ ಸ್ಥಳಗಳನ್ನು ಮುಚ್ಚಿಸಬೇಕು. ಇಲ್ಲದಿದ್ದಲ್ಲಿ ವನ್ಯಪ್ರಾಣಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.’ 

ನರಭಕ್ಷಕ ಹುಲಿಯನ್ನು ಕೊಲ್ಲಲು ಅವಕಾಶ ಮಾಡಬೇಕು. ವನ್ಯಪ್ರಾಣಿಗಳ ಹಾವಳಿಯಿಂದ ತುತ್ತಾದ ಕುಟುಂಬಗಳಿಗೆ ನೀಡುವ ಪರಿಹಾರ ಕುಟುಂಬ ನಿರ್ವಹಣೆಗೆ ಸಾಲುವುದಿಲ್ಲ. ಮನುಷ್ಯನ ಜೀವ ಅತೀ ಮುಖ್ಯ ಎಂದು ಅವರು ಹೇಳಿದರು.  

ಆದಿವಾಸಿ ಮುಖಂಡರಾದ ಜೆ.ಟಿ.ಅಯ್ಯಪ್ಪ ಅವರು ತಿತಿಮತಿ ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದ ಜೇನುಕುರುಬ, ಕಾಡುಕುರುಬ, ಯರವ ಸೇರಿದಂತೆ ಸುಮಾರು 184 ಕುಟುಂಬಗಳನ್ನು ಕಳೆದ ಮೂರು ವರ್ಷದಲ್ಲಿ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಭೀಮನಹಳ್ಳಿ ಮಾಸ್ತಿಗುಡಿ ಪುನರ್‍ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆ ಸಂದರ್ಭದಲ್ಲಿ 3 ಎಕರೆ ಜಮೀನು ನೀಡುವ ಭರವಸೆ ನೀಡಲಾಗಿತ್ತು, ಆದರೆ ಯಾವುದೇ ರೀತಿಯ ಪುನರ್ವಸತಿ ಕಲ್ಪಿಸದೆ ಅತಂತ್ರ ಬದುಕು ಅನುಭವಿಸುವಂತಾಗಿದೆ ಎಂದು ಅರಣ್ಯ ಸಚಿವರ ಗಮನಕ್ಕೆ ತಂದರು.   

‘ಮೂರುವರೆ ವರ್ಷವಾದರೂ ಸಹ ಸಮರ್ಪಕ ಪುನರ್ ವಸತಿ ಕಲ್ಪಿಸದೆ ಸಂಕಷ್ಟ ಬದುಕು ದೂಡುವಂತಾಗಿದೆ. ಆ ನಿಟ್ಟಿನಲ್ಲಿ ಏಪ್ರಿಲ್, 13 ರಂದು ‘ಎಚ್‍ಡಿಕೋಟೆಯಿಂದ ಮತ್ತೆ ನಾಗರಹೊಳೆ ಕಡೆಗೆ’ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಅಯ್ಯಪ್ಪ ಅವರು ಸಚಿವರ ಗಮನಕ್ಕೆ ತಂದರು.’ 

ಪ್ರಮುಖರಾದ ಪೊನ್ನಪ್ಪ ಅವರು ಮಾತನಾಡಿ ಸ್ವಂತ ಜಾಗದಲ್ಲಿ ಮರ ಕಡಿಯಲು ಅನುಮತಿಗಾಗಿ ಅರಣ್ಯ ಕಚೇರಿಗೆ ಅಲೆಯಬೇಕಿದೆ. ಇದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ವಲಯ ಅರಣ್ಯಾಧಿಕಾರಿ ಹಂತದಲ್ಲಿಯೇ ಅನುಮತಿ ನೀಡುವಂತಾಗಬೇಕು ಎಂದು ಅವರು ಒತ್ತಾಯಿಸಿದರು. 

ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ ಅವರು ಮಾತನಾಡಿ ದೇವರಕಾಡು ಮತ್ತು ಊರುಡುವೆ ಕಾಡನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಅವರು ಸಲಹೆ ಮಾಡಿದರು. 

ಕೃಷಿಕರಾದ ಜಾನ್ಸನ್ ಅವರು ವನ್ಯಪ್ರಾಣಿಗಳ ಹಾವಳಿಗೆ ತುತ್ತಾದ ಕುಟುಂಬದವರಿಗೆ ಅರಣ್ಯ ಇಲಾಖೆಯಲ್ಲಿ ಸರ್ಕಾರಿ ನೌಕರಿ ನೀಡುವಂತಾಗಬೇಕು ಎಂದು ಅವರು ಹೇಳಿದರು. 

ರೈತರಾದ ಪೆಮ್ಮಯ್ಯ ಅವರು ಮಾತನಾಡಿ ಜಮ್ಮಾ ವಲಯಗಳ ಹದ್ದುಬಸ್ತ್ ಮಾಡಿ ಆಸ್ತಿಯ ನಕಾಶೆ ಒದಗಿಸಬೇಕು ಎಂದು ಅವರು ಕೋರಿದರು. 

ಕೃಷಿಕರು-ರೈತರ ಅಭಿಪ್ರಾಯ ಆಲಿಸಿ ಮಾತನಾಡಿದ ಅರಣ್ಯ ಸಚಿವರಾದ ಉಮೇಶ್ ಕತ್ತಿ ಅವರು ಹುಲಿ ದಾಳಿಗೆ ತುತ್ತಾಗಿ ಮೃತಪಟ್ಟ ಕುಟುಂಬದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.  

ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಇನ್ನಷ್ಟು ಚುರುಕುಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಗಮನಹರಿಸಲಾಗುವುದು ಎಂದು ಅರಣ್ಯ ಸಚಿವರು ಹೇಳಿದರು. 

ವನ್ಯಪ್ರಾಣಿಗಳಿಗೆ ತುತ್ತಾದ ಕುಟುಂಬದವರಿಗೆ 7.50 ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ಪರಿಹಾರ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು. ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮರ ಕಡಿಯಲು ಅನುಮತಿ ನೀಡುವ ನಿಟ್ಟಿನಲ್ಲಿ ಸರಳೀಕರಿಸಲಾಗುವುದು ಎಂದು ಉಮೇಶ್ ಕತ್ತಿ ಅವರು ಹೇಳಿದರು.  

ಕಾಡಾನೆ ಹಾವಳಿ ನಿಯಂತ್ರಣ ಸಂಬಂಧ ಬ್ಯಾರಿಕೇಡ್ ನಿರ್ಮಾಣಕ್ಕೆ ಸರ್ಕಾರ ಈ ಬಾರಿ 100 ಕೋಟಿ ರೂ. ಪ್ರಕಟಿಸಿದೆ. ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಹಣ ತರಿಸಲು ಪ್ರಯತ್ನಿಸಲಾಗುವುದು ಎಂದು ಅರಣ್ಯ ಸಚಿವರು ನುಡಿದರು.