ಮಡಿಕೇರಿ ಏ.08: ದಕ್ಷಿಣ ಕೊಡಗಿನ ವಿ.ಬಾಡಗ ಸಮೀಪದ ತೋಟವೊಂದರಲ್ಲಿ ಇತ್ತೀಚೆಗೆ ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹುಲಿ ದಾಳಿಗೆ ತುತ್ತಾಗಿ ಮೃತಪಟ್ಟ ಗದ್ದೆ ಮನೆ ನಿವಾಸಿ ಗಣೇಶ್(ಪುಟ್ಟು) ಅವರ ಅತ್ತೂರು ಬಳಿಯ ಲೈನ್‍ಮನೆಗೆ ಅರಣ್ಯ ಸಚಿವರಾದ ಉಮೇಶ್ ಕತ್ತಿ ಅವರು ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರದಿಂದ 5.50 ಲಕ್ಷ ರೂ. ಚೆಕ್‍ನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಕರ್ನಾಟಕ ಪಶ್ಚಿಮ ಘಟ್ಟ ಕಾರ್ಯಪಡೆಯ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ, ಪ್ರಮುಖರಾದ ರಮೇಶ್ ಹೊಳ್ಳ, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕಾ.ರಾಮೇಶ್ವರಪ್ಪ ಇತರರು ಇದ್ದರು.
ಬಳಿಕ ಮಾತನಾಡಿದ ಉಮೇಶ್ ಕತ್ತಿ ಅವರು ಗಣೇಶ್(ಪುಟ್ಟು) ಅವರ ತಾಯಿ ಮತ್ತು ಪತ್ನಿಗೆ ಸರ್ಕಾರದಿಂದ ದೊರೆಯುವ ಸಾಮಾಜಿಕ ಭದ್ರತಾ ಯೋಜನೆ ಕಲ್ಪಿಸಲಾಗುವುದು. ಜೊತೆಗೆ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವಂತಾಗಲು ಅಗತ್ಯ ಕ್ರಮವಹಿಸಲಾಗುವುದು ಎಂದರು.
ವನ್ಯಪ್ರಾಣಿಗಳ ಹಾವಳಿಯಿಂದ ಕಳೆದ ಒಂದು ವರ್ಷದಿಂದ 5 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದ್ದು, ವನ್ಯಪ್ರಾಣಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಎಲ್ಲಾ ರೀತಿಯ ಪ್ರಯತ್ನಗಳು ಮುಂದುವರಿದಿದೆ. ಆ ನಿಟ್ಟಿನಲ್ಲಿ ಬ್ಯಾರಿಕೇಡ್ ನಿರ್ಮಾಣ, ಸೋಲಾರ್ ತಂತಿ ಬೇಲಿ, ಟ್ರಂಚ್ ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಅಲ್ಲಲ್ಲಿ ವನ್ಯ ಪ್ರಾಣಿಗಳ ಹಾವಳಿ ಕಂಡು ಬರುತ್ತಿದ್ದು, ಇದನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಯಲು ಬಜೆಟಿನಲ್ಲಿ 100 ಕೋಟಿ ರೂ. ಪ್ರಕಟಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಗಣೇಶ್(ಪುಟ್ಟು) ಅವರ ತಾಯಿ ಗೌರಮ್ಮ ಅವರು ಕೊಡಗು ಜಿಲ್ಲೆಯ ನಿವಾಸಿಗಳಾಗಿದ್ದು, ಅಲ್ಲಲ್ಲಿ ಕೂಲಿ ಕೆಲಸಕ್ಕೆ ಹೋಗಿ ಲೈನ್‍ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ. ಸ್ವಂತ ನೆಲೆಯಿಲ್ಲ. ಕೂಲಿ ಮಾಡಿದರೆ ಬದುಕು, ಇಲ್ಲದಿದ್ದರೆ ಜೀವನವೇ ದುಸ್ತರ, ನಮ್ಮನ್ನು ನೋಡಿಕೊಳ್ಳುತ್ತಿದ್ದ ಮಗ ಹುಲಿ ದಾಳಿಗೆ ತುತ್ತಾಗಿ ಮೃತಪಟ್ಟ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇಬ್ಬರು ಮಕ್ಕಳು ಹತ್ತಿರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಯಾವುದೇ ದಾಖಲೆ ಇಲ್ಲ. ಹೀಗೆ ಕಷ್ಟದಲ್ಲಿ ಬದುಕು ದೂಡುವಂತಾಗಿದೆ ಎಂದು ಭಾವುಕರಾದರು.
ಗಣೇಶ್(ಪುಟ್ಟು) ಪತ್ನಿ ಜ್ಯೋತಿ ಅವರು ಹತ್ತು ವರ್ಷಗಳಿಂದ ಲೈನ್‍ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ನಾಳೆ ಪೂಜಾ ಕಾರ್ಯವಿದೆ ಎಂದು ನೋವು ತೋಡಿಕೊಂಡರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network