ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳಕ್ಕೆ ಸಂಬಂದಿಸಿದಂತೆ ಸೋಮವಾರ ನಡೆದ ಜಿಲ್ಲಾ ಸಮನ್ವಯ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಮೇಳ ಸಂಬಂಧ ತಾಲ್ಲೂಕು ಮಟ್ಟದಲ್ಲಿಯೂ ಮಾಹಿತಿ ನೀಡುವಂತಾಗಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಹಂತದ ವೈದ್ಯಾಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಆಯುಷ್ಮಾನ್ ಆರೋಗ್ಯ ಕಾರ್ಯಕ್ರಮದಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಗೂ ಪೌರ ಕಾರ್ಮಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಇತರೆ ಇಲಾಖೆಗಳ ಯೋಜನೆಗಳಿದ್ದಲ್ಲಿ ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಆರೋಗ್ಯ ಮೇಳದಲ್ಲಿ ಮಳಿಗೆ ತೆರೆಯಲು ಅವಕಾಶ ಕಲ್ಪಿಸಬೇಕು ಹಾಗೂ ಪೋಷಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಒದಗಿಸುವ ಮಳಿಗೆ ತೆರೆಯಲು ಸೂಕ್ತ ಕ್ರಮ ವಹಿಸುವಂತೆ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ಆರೋಗ್ಯ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಈ ಸಂಬಂಧ ಇತರೆ ಇಲಾಖೆಗಳ ಸಹಕಾರ ಪಡೆಯುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ವೆಂಕಟೇಶ್ ಅವರು ಮಾತನಾಡಿ ಏಪ್ರಿಲ್ 18 ರಿಂದ 22 ರ ಒಳಗೆ ಆರೋಗ್ಯ ಮೇಳ ಆಯೋಜಿಸಲು ನಿರ್ದೇಶನ ನೀಡಲಾಗಿದೆ. ಆ ನಿಟ್ಟಿನಲ್ಲಿ ಏಪ್ರಿಲ್ 20 ರಂದು ನಗರದ ಒಳಾಂಗಣ ಕ್ರೀಡಾಂಗಣ ಬಳಿಯ ಫುಟ್‍ಬಾಲ್ ಮೈದಾನ (ಡಿಡಿಪಿಐ ಕಚೇರಿ ಎದುರು), ಕುಶಾಲನಗರದ ಮತ್ತು ಗೋಣಿಕೊಪ್ಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಆರೋಗ್ಯ ಮೇಳದಲ್ಲಿ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ರಕ್ತದೊತ್ತಡ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮೇಳದಲ್ಲಿ ನಡೆಸಲಾಗುವುದು ಹಾಗೂ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮಾಹಿತಿ ನೀಡಿದರು.
ಈ ಮೇಳವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಂಘ ಸಂಸ್ಥೆಗಳು ನಡೆಸುತ್ತಿರುವ ವಿವಿಧ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಸಹಾಯ ಮಾಡುತ್ತದೆ. ಆಯುಷ್ಮಾನ್ ಆರೋಗ್ಯ ಕಾರ್ಡ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ಡಾ.ಆರ್.ವೆಂಕಟೇಶ್ ಅವರು ತಿಳಿಸಿದರು.
ಆರೋಗ್ಯ ಮೇಳದಲ್ಲಿ ಹೆಸರು ನೋಂದಣಿ, ಎನ್‍ಸಿಡಿ ಮತ್ತು ಟಿಬಿ ಸ್ಕ್ರೀನಿಂಗ್, ಆರೋಗ್ಯ ಶಿಕ್ಷಣದ ಬಗ್ಗೆ ಆಪ್ತ ಸಮಾಲೋಚನೆ, ಆಯುಷ್ ಕ್ಲಿನಿಕ್, ವೈದ್ಯಕೀಯ ಆರೈಕೆ, ಪ್ರಯೋಗಾಲಯ ಮತ್ತು ವಿಕಿರಣ ಸೇವೆಗಳು, ಔಷಧ ವಿತರಣೆ, ಆಯುಷ್ ಔಷಧ ವಿತರಣೆ ಹಾಗೂ ಆರೋಗ್ಯ ಸೇವೆಗಳ ಜಾಗೃತಿ ಸೇರಿದಂತೆ ವಿವಿಧ ಮಳಿಗೆಗಳು ಆರೋಗ್ಯ ಮೇಳದಲ್ಲಿ ಇರಲಿವೆ ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ.ಉಪಕಾರ್ಯದರ್ಶಿ ಲಕ್ಷ್ಮೀ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಆರ್‍ಸಿಹೆಚ್ ಅಧಿಕಾರಿ ಡಾ.ಗೋಪಿನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network