ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಮೃದ್ಧಿಯ ಬದುಕು: ಸಹನಾ ಕಾಂತಬೈಲು
ನಗರದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಡಾ.ವಿಜಯ ಅಂಗಡಿ ಅವರು ಜಿಲ್ಲೆಯ ಕೃಷಿಕರೊಂದಿಗೆ ನಡೆಸಿರುವ ನೇರ ಸಂವಾದ ಕುರಿತು ಬರೆದಿರುವ ‘ರೈತ ನುಡಿ’ ಪುಸ್ತಕವನ್ನು ಆಕಾಶವಾಣಿ ಸಭಾಂಗಣದಲ್ಲಿ ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೃಷಿ, ತೋಟಗಾರಿಕೆ, ಪಶುಪಾಲನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಮ್ಮೆಯಿಂದ ತೊಡಗಿಸಿಕೊಂಡಲ್ಲಿ ಉತ್ತಮ ಬದುಕು ಕಾಣಬಹುದು ಎಂದು ಸಹನಾ ಕಾಂತಬೈಲು ಅವರು ಹೇಳಿದರು.
ಕೃಷಿಯಲ್ಲಿ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ, ಒಂದು ರೀತಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವುದು ಕಡಿಮೆಯಾಗುತ್ತಿದ್ದು, ವಾಣಿಜ್ಯ ಬೆಳೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಅವಲೋಕನ ಮಾಡಬೇಕಿದೆ ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಡಾ.ವಿಜಯ ಅಂಗಡಿ ಅವರು ಮಾತನಾಡಿ ರೈತ ನುಡಿ ಪುಸ್ತಕವು ಕೊಡಗು ಜಿಲ್ಲೆಯ ನೂರಾರು ರೈತರ ಅನುಭವದ ಧ್ವನಿಯಾಗಿದೆ. ಆಕಾಶವಾಣಿಯಲ್ಲಿ ಕೃಷಿ ಆಧಾರಿತ ಕಾರ್ಯಕ್ರಮ ಪ್ರಸಾರವಾಗುತ್ತವೆ. ಜಿಲ್ಲೆಯಲ್ಲಿ ಆಕಾಶವಾಣಿ ಕೇಳುಗರು ಸಂಖ್ಯೆ ಹೆಚ್ಚು ಇದೆ ಎಂದರು.
ಅತಿಯಾದ ಮಳೆ, ಗಾಳಿ, ಸಂಚರಿಸಲು ಸಂಪರ್ಕದ ಕೊರತೆ, ಕಾರ್ಮಿಕರ ಅಭಾವ, ಬೆಲೆ ಕುಸಿತ, ಕಾಡು ಪ್ರಾಣಿಗಳ ಕಾಟ, ದಾಸ್ತಾನಿನ ಸಮಸ್ಯೆ ಹೀಗೆ ಹತ್ತಾರು ಅಡೆತಡೆಗಳ ಮಧ್ಯದಲ್ಲೂ ಅನುಕರಣೀಯವಾದ ಕಾಯಕ ಮಾಡುತ್ತಿರುವ ಕೊಡಗಿನ ನೂರು ಕೃಷಿಕರನ್ನು ನೇರವಾಗಿ ಸಂದರ್ಶಿಸಿ ಅವರ ಅನುಭವ ಮತ್ತು ನಡೆದು ಬಂದ ಹಾದಿಯನ್ನು ರೈತ ನುಡಿ ಪುಸ್ತಕದಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.
ರೈತಧ್ವನಿ ಕಿಸಾನ್‍ವಾಣಿ ಕಾರ್ಯಕ್ರಮದಲ್ಲಿ ನಗರದ ಆಕಾಶವಾಣಿ ಕೇಂದ್ರದಿಂದ ಸಾಧಕ ರೈತರೊಂದಿಗೆ ಸಂವಾದ, ಕೃಷಿ ರಸ ಪ್ರಶ್ನೆಗಳ ನೇರ ಪ್ರಸಾರ ‘ಕೃಷಿ ಸಿರಿ’, ವಾರದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಸಾರ ‘ಮುನ್ನೋಟ’, ಪ್ರಸ್ತುತ ಪರಿಸ್ಥಿತಿಯ ಅವಲೋಕನದ ಕಾರ್ಯಕ್ರಮ ‘ನಾಡುನಾಡಿ’, ಕೃಷಿ ಗೀತೆಗಳನ್ನು ಆಧರಿಸಿದ ‘ಕೃಷಿ ಕಳಸ’ ಕಾರ್ಯಕ್ರಮ, ಕೃಷಿ ತಜ್ಞರೊಂದಿಗೆ ನೇರ ಸಂವಾದ ‘ರೈತ ನುಡಿ’, ಕೃಷಿ ಪರಿಸರದ ಸಂಗತಿಗಳೊಂದಿಗೆ ಮನೋರಂಜನೆ ನೀಡುವ ‘ಕೃಷಿ ಪುಂಜ’ ಕಾರ್ಯಕ್ರಮ, ಕೊಡಗಿ ಕಾಫಿ ಕೃಷಿ ಕುರಿತ ಮಾಲಿಕೆ ‘ಕಾಫಿ ಕನ್ನಡಿ’, ಕೊಡಗು ಜಿಲ್ಲೆಯ ಭತ್ತದ ಕೃಷಿ ಕುರಿತ ಪರಿಚಯಾತ್ಮಕ ಕಾರ್ಯಕ್ರಮ ‘ಭತ್ತ ಚಿತ್ತ’, ಕೃಷಿ ನಿರತ ಮಹಿಳೆಯ ಕಾರ್ಯಕ್ರಮ ‘ನಾರಿದಾರಿ’ ಹೀಗೆ ಕೃಷಿ ಕಾರ್ಯಕ್ರಮಗಳು ಭಿತ್ತರಗೊಳ್ಳುತ್ತಿವೆ ಎಂದು ಅವರು ತಿಳಿಸಿದರು.
ಆಕಾಶವಾಣಿಯ ಸಹಾಯಕ ಎಂಜಿನಿಯರ್ ಶ್ರೀನಿವಾಸನ್ ಅವರು ಮಾತನಾಡಿ ಆಕಾಶವಾಣಿಯಲ್ಲಿ ಕೃಷಿ ಕಾರ್ಯಕ್ರಮವನ್ನು ಹೆಚ್ಚು ಜನರು ಕೇಳುಗರಿದ್ದಾರೆ. ಕೃಷಿ ಪ್ರಸಾರ ಉಪಯುಕ್ತವಾದ ಕಾರ್ಯಕ್ರಮವಾಗಿದೆ. ಕೃಷಿ ನುಡಿ ಪುಸ್ತಕವು ಸಕಾಲಿಕ ಹಾಗೂ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.
ಮದೆ ಗ್ರಾಮದ ಕೃಷಿಕರಾದ ಲೋಕೇಶ್ ಅವರು ಮಾತನಾಡಿ ಯಾವುದೇ ಬೆಳೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ಪ್ರತಿಯೊಂದು ಬೆಳೆಯೂ ಒಂದಲ್ಲ ಒಂದು ರೀತಿಯಲ್ಲಿ ಮಹತ್ವ ಹೊಂದಿದೆ ಎಂದರು.
ಮರಗೋಡು ಗ್ರಾಮದ ಕೃಷಿಕರಾದ ನಂಜಪ್ಪ ಅವರು ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಾಗ ಉತ್ತಮ ಜೀವನ ನಡೆಸಬಹುದು ಎಂದರು.
ಶಾಂತಕುಮಾರಿ ಅವರು ಮಾತನಾಡಿ ಪರಿಸರ ಸ್ನೇಹಿ ಕೃಷಿ ಪದ್ಧತಿ ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು ಎಂದರು. ಜಿಲ್ಲೆಯ ಹಲವು ಕೃಷಿಕರು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network