Header Ads Widget

ಸರ್ಚ್ ಕೂರ್ಗ್ ಮೀಡಿಯ

2021-22 ನೇ ಸಾಲಿನ ‘ಗಡಿ ಸಾಂಸ್ಕøತಿಕ ಉತ್ಸವ’ ಸಮಾರಂಭಕ್ಕೆ ಚಾಲನೆ


ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಪ್ರಾಶಸ್ತ್ಯ: ಅಪ್ಪಚ್ಚು ರಂಜನ್ 

ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೇ: ಶಾಂತೆಯಂಡ ರವಿಕುಶಾಲಪ್ಪ

ಮಡಿಕೇರಿ ಮೇ.25: ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಪ್ರಾಶಸ್ತ್ಯ. ಆ ನಿಟ್ಟಿನಲ್ಲಿ ನಾಡಿನ ಯಾವ ಗಡಿ ಪ್ರದೇಶದಲ್ಲಿಯೂ ಸಹ ಕನ್ನಡ ಮರೆಯುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದ್ದಾರೆ.    

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ 2021-22 ನೇ ಸಾಲಿನ ‘ಗಡಿ ಸಾಂಸ್ಕøತಿಕ ಉತ್ಸವ’ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಕನ್ನಡ ಭಾಷೆಗೆ ತನ್ನದೇ ಆದ ಪಾರಂಪರಿಕ, ಸಾಂಸ್ಕøತಿಕ ಮತ್ತು ಐತಿಹಾಸಿಕ ಇತಿಹಾಸವಿದೆ. ಆ ನಿಟ್ಟಿನಲ್ಲಿ ಅನಾದಿ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ಕನ್ನಡ ಭಾಷೆಯನ್ನು ಮತ್ತಷ್ಟು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಪ್ರತಿಪಾದಿಸಿದರು. 

ಜಿಲ್ಲೆಯ ಗಡಿ ಭಾಗ ಕುಟ್ಟ, ಮಾಕುಟ್ಟ, ಕರಿಕೆ ಮತ್ತಿತರ ಕಡೆಗಳಲ್ಲಿ ಕನ್ನಡ ಭಾಷಾ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಕನ್ನಡ ಭಾಷಾ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕರು ಹೇಳಿದರು. 

ರಾಷ್ಟ್ರಕವಿ ಕುವೆಂಪು ಅವರು ಎಲ್ಲಾದರೂ ಇರು, ಎಂತಾದರೂ ಇರು, ನೀ ಎಂದೆಂದಿಗೂ ಕನ್ನಡವಾಗಿರು ಹೇಳಿರುವಂತೆ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕರು ಹೇಳಿದರು. 

ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೇ. ಪ್ರತಿಯೊಬ್ಬರಿಗೂ ಅರ್ಥವಾಗುವ ಭಾಷೆ ಕನ್ನಡವಾಗಿದೆ. ಆದ್ದರಿಂದ ಕನ್ನಡ ಭಾಷೆಗೆ ಸರ್ಕಾರ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ ಎಂದು ತಿಳಿಸಿದರು. 

ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಎಲ್ಲರಲ್ಲಿ ಕನ್ನಡ ಭಾಷಾಭಿಮಾನ ಇದ್ದಾಗ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ಉಳಿಯಲು ಸಾಧ್ಯ ಎಂದು ಅವರು ನುಡಿದರು. 

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ದೊರೆಯಬೇಕು. ಪ್ರಾದೇಶಿಕ ಅಸಾಮಾನ್ಯತೆ, ಗಡಿ ಸಮಸ್ಯೆಗಳನ್ನು ಸರಿಪಡಿಸಬೇಕು. ಕೊಡಗಿನ ಗಡಿ ಪ್ರದೇಶದಲ್ಲಿ ಕನ್ನಡ ಕಲಿಕೆಗೆ ಮತ್ತಷ್ಟು ಒತ್ತು ನೀಡಬೇಕು ಎಂದು ಅವರು ಸಲಹೆ ಮಾಡಿದರು. 

ಜಿಲ್ಲೆಯಲ್ಲಿ ಕೊಡಗು ಉತ್ಸವ, ಗಡಿ ಸಾಂಸ್ಕøತಿಕ ಉತ್ಸವ, ಜಾನಪದ ಉತ್ಸವಗಳು ನಡೆಯುವ ಹಾಗೆ ಕಾರ್ಯಕ್ರಮ ರೂಪಿಸಬೇಕು. ಗಡಿ ತಾಲ್ಲೂಕುಗಳಲ್ಲಿ ಸಾಂಸ್ಕøತಿಕ ಭವನ ನಿರ್ಮಾಣ ಆಗಬೇಕು. ಕನ್ನಡ ನಾಮ ಫಲಕಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಟಿ.ಪಿ.ರಮೇಶ್ ಅವರು ತಿಳಿಸಿದರು. 

ಗಡಿಭಾಗದಲ್ಲಿ ನಾಗರಿಕರ ಸಮಿತಿ ರಚಿಸಿ ಕಾಲ ಕಾಲಕ್ಕೆ ಸಭೆ ಸೇರಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಭಾಷೆ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.  

‘ಗಡಿಭಾಗದ ಜನ ಜೀವನ ಸುಧಾರಿಸಬೇಕಿದ್ದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಆಸ್ಪತ್ರೆ, ಗುಣಮಟ್ಟದ ಸರ್ಕಾರಿ ಶಾಲೆ, ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಗಡಿ ಪ್ರದೇಶದ ಜನರು ಮುಖ್ಯವಾಹಿನಿಯಿಂದ ದೂರ ಇದ್ದೇವೆ ಎಂಬ ಭಾವನೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಟಿ.ಪಿ.ರಮೇಶ್ ಅವರು ಸಲಹೆ ಮಾಡಿದರು.’ 

ಜಿಲ್ಲೆಯ ಪೊನ್ನಂಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ ಕೇರಳ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ  19 ಗ್ರಾ.ಪಂ.ಗಳ ಅಭಿವೃದ್ಧಿಗೆ ಪೂರಕವಾಗಿ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಗಡಿಭಾಗದ ಜನರ ಜೀವನ ಸುಧಾರಣೆಗೆ ಶ್ರಮಿಸಬೇಕಿದೆ ಎಂದು ಟಿ.ಪಿ.ರಮೇಶ್ ಅವರು ಕರೆ ನೀಡಿದರು. 

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಕನ್ನಡ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕನ್ನಡ ಮಾತೃ ಭಾಷೆಯಾಗಿದೆ. ಆದ್ದರಿಂದ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಕನ್ನಡ ಭಾಷೆಯಲ್ಲಿ ಕವನ, ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು. 

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾದ ಮನು ಶೆಣೈ, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಪೌರಾಯುಕ್ತರಾದ ರಾಮದಾಸ್ ಇತರರು ಇದ್ದರು.

ಮುನೀರ್ ಅಹ್ಮದ್ ಸ್ವಾಗತಿಸಿದರು. ಡಾ.ಸಿ.ಆರ್.ರಾಘವೇಂದ್ರ ತಂಡದವರು ನಾಡಗೀತೆ ಹಾಡಿದರು. ಕಡ್ಲೇರ ತುಳಸಿ ಮೋಹನ್ ಮತ್ತು ರೇವತಿ ರಮೇಶ್ ನಿರೂಪಿಸಿದರು. ಟಿ.ಜಿ.ಪ್ರೇಮ್ ಕುಮಾರ್ ವಂದಿಸಿದರು.