Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿ ಬೆಳೆಗಾರರು ಏಪ್ರಿಲ್-ಮೇ ತಿಂಗಳಲ್ಲಿ ತೋಟಗಳಲ್ಲಿ ಮಾಡಬೇಕಾದ ಕೆಲಸಗಳು


ಕಾಫಿ ಬೆಳೆಗಾರರು ಏಪ್ರಿಲ್-ಮೇ ತಿಂಗಳಲ್ಲಿ ತೋಟಗಳಲ್ಲಿ ಮಾಡಬೇಕಾದ ಕೆಲಸಗಳು

1. ಕಾಫಿ ಗಿಡ ನೆಡಲು ಸಾಲುಗಳನ್ನು ಗುರುತು ಮಾಡುವುದು( ಲೈನ್ ಮಾರ್ಕಿಂಗ್)

2.  ಕಾಫಿ ಗುಂಡಿಗಳು ಫಿಟ್ಟಿಂಗ್

3. ಕಾಂಡ ಕೊರಕದ ನಿರ್ವಹಣೆ

4. ಗಿಡ ಕಸಿ

5. ಮುಂಗಾರು ಮುಂಚಿನ ಗೊಬ್ಬರ ಹಾಕುವಿಕೆ

6. ಮುಂಗಾರು ಮಳೆ ಮುನ್ನ ಬೋರ್ಡೋ ದ್ರಾವಣ ಸಿಂಪರಣೆ

7. ಮರಗಸಿ

8. ತೊಟ್ಟಿಲು ಗುಂಡಿ /ನೀರು ಗುಂಡಿಗಳ ನವೀಕರಣ

9. ಕಳೆ ತೆಗೆಯುವುದು

10. ತಿಗಣೆಗಳ ನಿರ್ವಹಣೆ.

1. ಕಾಫಿ ಗಿಡ ನೆಡಲು ಸಾಲುಗಳನ್ನು ಗುರುತು ಮಾಡುವುದು

ಕಾಫಿ ನೆಡಲು ಯೋಜಿಸಿರುವ ಜಾಗಗಳಲ್ಲಿ, ಎತ್ತರ(ಎಲಿವೇಶನ್), ಇಳಿಜಾರು, ಮಳೆ, ಗಾಳಿಯ ಬೀಸುವಿಕೆ ಹಾಗೂ ಸಂಚಾರ ಸೌಲಭ್ಯಗಳ ಲಭ್ಯತೆಯನ್ನು ಯಾವಾಗಲೂ ಗಣನೆಗೆ ತೆಗೆದುಕೊಳ್ಳಬೇಕು. ಉತ್ತರ ಮತ್ತು ಪೂರ್ವ ಮಗ್ಗಲುಗಳು ಕಾಫಿಗೆ ಸೂಕ್ತ. ಪಶ್ಚಿಮ ಮಗ್ಗಲಿನಲ್ಲಿ ಸೂರ್ಯನ ತಾಪ ಅತಿಯಾಗಿದ್ದು ಗಿಡಗಳು ಇದರಿಂದ ಬಳಲುತ್ತವೆ. ಇಂತಹ ಸಂದರ್ಭಗಳಲ್ಲಿ ಸೂರ್ಯನ ತಾಪದಿಂದ ಗಿಡಗಳನ್ನು ಕಾಪಾಡಲು ತೋಟದ ಸುತ್ತ ನೆರಳಿನ ಮರಗಳನ್ನು ದಟ್ಟವಾಗಿ ನೆಡಬೇಕಾಗುತ್ತದೆ. ಕಾಫಿ ಗಿಡ ನೆಡುವ ಮೊದಲು ಸೂಕ್ತ ಪ್ರಮಾಣದ ನೆರಳಿನ ಅವಕಾಶವನ್ನು ಮಾಡಿಕೊಳ್ಳಬೇಕು. ಕಾಫಿ ನೆಡುವ ಜಮೀನನ್ನು ಗುರುತಿಸಿಕೊಂಡ ನಂತರ, ಅನುಕೂಲಕ್ಕೆ ತಕ್ಕಂತೆ ಪಟ್ಟೆಗಳನ್ನು ಮಾಡಿ ಮಧ್ಯೆ ಮಧ್ಯೆ ರಸ್ತೆ ಹಾಗೂ ಕಾಲು ದಾರಿಗಳನ್ನು ಮಾಡಬೇಕು. 

ಈ ಪಟ್ಟೆಗಳಲ್ಲಿ ಕೆಳಮಟ್ಟದ ನೆರಳಿಗಾಗಿ ಪಾಲುವಾಣದ ಕಂಬಗಳನ್ನು15 ಅಡಿ ಅಂತರದಲ್ಲಿ ಜೂನ್ ತಿಂಗಳಲ್ಲಿ ನೀಡಬೇಕು. ಪ್ರತಿ ಪಟ್ಟಿಯಲ್ಲಿಯೂ ಕಾಫಿ ನೀಡುವ ಸ್ಥಳವನ್ನು ಸಾಲುಗಳು ಮತ್ತು ಗಿಡಗಳ ಅಂತರವನ್ನು ಗುರುತುಮಾಡಿ ನಿಶ್ಚಯಿಸಬೇಕು.(ಅರೇಬಿಕಾ ಎತ್ತದ ಗಿಡಗಳಿಗೆ 7*7, 7*6 ಅಥವಾ 6*6 ಅಡಿ). ಗಿಡ್ಡ ತಳಿಗಳನ್ನು 5*5 ಅಂತರದಲ್ಲಿ ನೆಡುವುದು. ಅಂತಹ ತೋಟಗಳಲ್ಲಿ ಪರಿಶ್ರಮ ಪೂರ್ವ (ಇನ್‌ಟೆನ್ಸಿವ್) ಬೇಸಾಯವನ್ನು ಮಾಡಬೇಕಾಗುತ್ತದೆ. ಪರೀಕ್ಷಿಸಿ ಸುಣ್ಣವನ್ನು ಪಟ್ಟಿಗಳಲ್ಲಿ ಹರಡಬೇಕು.‌ ಮಟ್ಟವಾದ ಮತ್ತು ಕಡಿಮೆ ಇಳಿಜಾರು ಪ್ರದೇಶಗಳಲ್ಲಿ ಸಮಪಾತಳಿ ವಿಧಾನದಲ್ಲಿ ಗಿಡಗಳನ್ನು ನೆಡಬೇಕು. ಹೆಚ್ಚು ಇಳಿಜಾರು ಪ್ರದೇಶಗಳಲ್ಲಿ ಕಾಂಟೂರ್ ಮಾದರಿಯಲ್ಲಿ ಕಾಫಿ ನಡಬೇಕು. ಹೀಗೆ ಮಾಡುವುದರಿಂದ ತೋಟದ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ‌ ಹಾಗೂ ಮಣ್ಣಿನ ಸವಕಳಿ ಮತ್ತು ಕೊಚ್ಚಿ ಹೋಗುವಿಕೆಯಿಂದ ಗಿಡಗಳನ್ನು ರಕ್ಷಿಸಬಹುದು.

2. ಕಾಫಿ ಗುಂಡಿಗಳು (ಫಿಟ್ಟಿಂಗ್)

ಕಾಫಿ ಗುಂಡುಗಳನ್ನು ಸಾಮಾನ್ಯವಾಗಿ ಮಾರ್ಚ್ ತಿಂಗಳಿಂದ ಸ್ವಲ್ಪ ಮಳೆ ಬಿದ್ದ ನಂತರ ತೆಗೆಯಲು ಆರಂಭಿಸಬೇಕು. ಒಂದು ವೇಳೆ ಬೇಸಿಗೆ ಮಳೆ ಬರುವುದು ತಡವಾದರೆ ಈ ಕೆಲಸವನ್ನು ಮಳೆ ಬರುವ ತನಕ ಮುಂದೂಡಬಹುದು. ಸಾಮಾನ್ಯವಾಗಿ ಕಾಫಿಗಿಡ ನೆಡುವ ಗುಂಡಿಗಳು 1.5ʼ*1.5ʼ*1.5ʼ ಉದ್ದ, ಅಗಲ ಮತ್ತು ಆಳವಾಗಿರಬೇಕು. ಗುಂಡಿಗಳನ್ನು ತೆಗೆದ ನಂತರ ಆ ಗುಂಡಿಗಳನ್ನು ಗಾಳಿಯಾಡಲು ಸುಮಾರು ಹದಿನೈದರಿಂದ ಇಪ್ಪತ್ತು ದಿನ ಬಿಡಬೇಕು ನಂತರ ಸುತ್ತಲಿರುವ ಮೇಲ್ಮಣ್ಣನ್ನು ತುಂಬಿ ಗುಂಡಿಯನ್ನು ಮುಚ್ಚಬೇಕು.

ಮಣ್ಣನ್ನು ತುಂಬಿಸುವಾಗ ಗುಂಡಿಗಳಲ್ಲಿ ಅಂದರೆ ಗುಂಡಿಗೆ ಒಂದರಿಂದ ಒಂದೂವರೆ ಕಿಲೋ. ಗ್ರಾಂ. ಕಾಂಪೋಸ್ಟ್ ಅಥವಾ ಕೊಟ್ಟಿಗೆ ಗೊಬ್ಬರ ಮತ್ತು 50-100 ಗ್ರಾo ಗಳಷ್ಟು ರಾಕ್ ಪಾಸ್ಪೆಟ್ ಹಾಕಿ ಮುಚ್ಚಬೇಕು. ಗುಂಡಿ ಗುರುತಿಗಾಗಿ ಪ್ರತಿ ಗುಂಡಿಯಲ್ಲಿ ಬಿದಿರಿನ ಅಥವಾ ಮರದ ಕೋಲುಗಳನ್ನು ಮಧ್ಯಭಾಗದಲ್ಲಿ ಹೂಳಬೇಕು.

3. ಕಾಂಡಕೊರಕದ ನಿರ್ವಹಣೆ:

ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕಾಫಿ ಕಾಂಡಕೊರಕ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲಾ ಕ್ರಮಗಳನ್ನು ಮುಂದುವರಿಸಬೇಕು. ನೆರಳು ಕಡಿಮೆ ಮತ್ತು ಹೆಚ್ಚಾಗಿ ಸಿಲ್ವರ್ ನೆರಳು ಮರಗಳು ಇರುವ ಜಾಗಗಳಲ್ಲಿ ಕಾಂಡಕೊರಕ ಹಾವಳಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ನೆರಳನ್ನು ಒದಗಿಸುವ ಕಾರ್ಯವನ್ನು ಮಾಡಬೇಕು. ಹದವಾದ ನೆರಳಿನಡಿ ಗಿಡಗಳು ಆರೋಗ್ಯವಾಗಿ ಬೆಳೆದು ಹೆಚ್ಚು ಸದೃಢವಾಗುತ್ತದೆ ಮತ್ತು ಹೆಚ್ಚಾಗಿ ಕಾಂಡ ಕೊರಕದ ಹಾವಳಿಗೆ ತುತ್ತಾಗುವುದಿಲ್ಲ. ಏಪ್ರಿಲ್ ತಿಂಗಳಲ್ಲಿ ಕೆಲವು ತೋಟಗಳಲ್ಲಿ ಮರ ಗಸಿ ಮಾಡುವ ಕಾರ್ಯಕ್ರಮಗಳಿರುತ್ತವೆ.  ಒಂದು ವೇಳೆ ಸರಿಯಾಗಿ ಹೂಮಳೆ ಮತ್ತು ಹಿಮ್ಮಳೆ ಬಾರದ ಪಕ್ಷದಲ್ಲಿ ಮರಗಸಿ ಕೆಲಸಗಳನ್ನು ಮಾಡಬಾರದು. ಹೀಗೆ ಮಾಡುವುದರಿಂದ ತೋಟದಲ್ಲಿ ತಂಪು ವಾತಾವರಣವನ್ನು ಕಲ್ಪಿಸಲು ಉಪಯೋಗವಾಗಿ ಕಾಂಡಕೊರಕದ ಚಟುವಟಿಕೆಗಳನ್ನು ಕಡಿಮೆಮಾಡಬಹುದು.

ಬೋರರ್ ಹಿಡಿದ ಗಿಡಗಳನ್ನು ಹುಡುಕಿ ಕಿತ್ತು ಕೂಡಲೇ ಸುಡುವುದು. ಕಾಫಿ ಕಾಂಡ ಮತ್ತು ದಪ್ಪ ರೆಕ್ಕೆಗಳನ್ನು ನಯವಾಗಿ ಉಜ್ಜಿ ಶೇಕಡ 10 ರ ಸುಣ್ಣದ ದ್ರಾವಣವನ್ನು ಲೇಪಿಸುವುದು. ಹದವಾದ ನೆರಳನ್ನು ತೋಟಗಳಲ್ಲಿ ಕಲ್ಪಿಸುವುದರಿಂದ ಬೋರರ್ ಹುಳದ  ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಬಹುದು. ಬೋರರ್ ಗಿಡಗಳನ್ನು ತೋಟದಲ್ಲಿ ಬಿಡುವುದರಿಂದ ಲಾಭಕ್ಕಿಂತ ಹೆಚ್ಚಿನ ಆರ್ಥಿಕ ನಷ್ಟ ಉಂಟಾಗುತ್ತದೆ. ಬೋರರ್ ಹಾವಳಿ ಅತಿಹೆಚ್ಚಿನ ಮಟ್ಟದಲ್ಲಿದ್ದರೆ ಅಂತಹ ತೋಟಗಳಲ್ಲಿ ಫೆರೋಮೋನ್ ಜಾಲದ ಬಳಕೆ ಮಾಡಬಹುದು.

4.‌ ಗಿಡ ಕಸಿ

ಬೇಸಿಗೆ ಮಳೆ ಬಂದಾಗ ಗಿಡಗಳಲ್ಲಿ ಚಿಗುರುಗಳು ಒಡೆಯುತ್ತವೆ. ಈ ಸಮಯದಲ್ಲಿ ಗಿಡ ಕಸಿಯನ್ನು ಮಾಡಲು ಪ್ರಾರಂಭ ಮಾಡಬಹುದು. ಕೆಲವಡೆ ಕೊಯ್ಲು ಮುಗಿದ ಕೂಡಲೇ ಗಿಡ ಕಸಿ ಮಾಡುವ ಪದ್ಧತಿಯಿದ್ದು, ಅದನ್ನು ವಾತಾವರಣ ಪರಿಸ್ಥಿತಿ ನೋಡಿಕೊಂಡು ಮಾಡಬೇಕು. ವಾತಾವರಣದಲ್ಲಿ ಒಣಹವೆ ಇದ್ದು ಮಣ್ಣಿನಲ್ಲಿ ತೇವಾಂಶ ಕೊರತೆ ಇದ್ದರೆ ಗಿಡ ಕಸಿಯನ್ನು ಒಂದೆರಡು ಬೇಸಿಗೆ ಮಳೆ (ಕನಿಷ್ಠ ಎರಡು ಇಂಚು) ಬರುವತನಕ ಮುಂದೂಡಬೇಕು. ಒಣ ಹವೆಯಿದ್ದಾಗ ಗಿಡ ಕಸಿ ಮಾಡಿದರೆ ಮೊದಲೆ ಕುಯಿಲಿನಿಂದ ಅಘಾತವಾದ ಗಿಡಗಳಿಗೆ ನೀರಿನ ತೇವಾಂಶ ಇಲ್ಲದಿರುವುದರಿಂದ ಮರು ಆಘಾತವಾಗಿ ಮುಂಬರುವ ರೆಕ್ಕೆಗಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಆದರೆ 3500 ಅಡಿ ಎತ್ತರದಲ್ಲಿರುವ ಮತ್ತು ಹೆಚ್ಚಿನ ನೆರಳು ಇರುವ ಅರೇಬಿಕ ತೋಟಗಳಲ್ಲಿ ಹೆಚ್ಚಿನ ಸಮಯಗಳಲ್ಲಿ ತಂಪು ವಾತಾವರಣ ಇರುವುದರಿಂದ ಇಂತಹ ತೋಟಗಳಲ್ಲಿ ಗಿಡ ಕಸಿಯನ್ನು ಕುಯಿಲು ಮುಗಿದ ಕೂಡಲೇ ಮಾಡಬಹುದು. ಆದರೆ ತೀವ್ರವಾದ ಬಳಲಿದ ಗಿಡಗಳನ್ನು ಸಾಕಷ್ಟು ಮಳೆ ಬಿದ್ದ ನಂತರ ಮಾತ್ರ ಕಸಿ ಮಾಡಬೇಕು ಕಸಿ ಮಾಡುವಾಗ ಗೊಡ್ಡು ರೆಕ್ಕೆ, ನೂಲು ರಕ್ಕೆ, ರೋಗ ಪೀಡಿತ ಮತ್ತು ಬಳಲಿದ ರೆಕ್ಕೆಗಳನ್ನು ತೆಗೆಯಬೇಕು. ಹೀಗೆ ಮಾಡುವುದರಿಂದ ಬೆಳಕು ಹಾಗೂ ಗಾಳಿ ಗಿಡದ ಎಲ್ಲ ಭಾಗಗಳಿಗೂ ಬೀಳಲು ಅವಕಾಶವಾಗಿ ಗಿಡಗಳಲ್ಲಿ ಉಳಿದ ರೆಂಬೆಗಳು ಸದೃಢವಾಗಿ ಬೆಳೆದು ವರುಷ ವರುಷ ಏರುಪೇರುಗಳಿಲ್ಲದೆ. ಹೆಚ್ಚಿನ ಫಸಲು ಬಿಡುತ್ತದೆ.

5. ಮುಂಗಾರು ಮುಂಚಿನ ಗೊಬ್ಬರ ಹಾಕುವಿಕೆ

ಕಾಫಿ ಹಣ್ಣು ಕೊಯ್ದು ಗಿಡ ಕಸಿ ಮಾಡಿದಾಗ ಗಿಡಗಳು ಬಹಳ ದುರ್ಬಲ ಅವಸ್ಥೆಯಲ್ಲಿ ಇರುತ್ತದೆ. ಬೇಸಿಗೆ ಮಳೆ ಬಿದ್ದ ನಂತರ ಕಾಫಿ ಗಿಡಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡು ಬಂದು ಹೊಸ ಚಿಗುರುಗಳು ಬಿಡಲು ಪ್ರಾರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಗಿಡಗಳಿಗೆ ಅವಶ್ಯಕವಾದ ಪೋಷಕಾಂಶಗಳನ್ನೊಳಗೊಂಡ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನ ಮೂಲಕ ಕೊಡಬೇಕು.

ಪ್ರತಿ ತೋಟದಲ್ಲಿ ಬೆಳೆದು ನಿಂತ ಕಾಫಿ ಗಿಡಗಳಿಗೆ ಅವುಗಳ ಬೆಳವಣಿಗಾಗಿ, ಕಡ್ಡಾಯವಾಗಿ ಹೆಕ್ಟರ್ ಒಂದಕ್ಕೆ 50:50:50 ಕಿಲೋಗ್ರಾಂಗಳಷ್ಟು ಸಾರಜನಕ‌, ರಂಜಕ ಮತ್ತು ಪೊಟ್ಯಾಷ್ ಅಂಶಗಳು ಅವಶ್ಯಕತೆ ಇರುತ್ತದೆ. ಇಷ್ಟು ಪ್ರಮಾಣದಲ್ಲಿ ಪ್ರತಿ ತೋಟಗಳಿಗೆ ಕಡ್ಡಾಯವಾಗಿ  ಗೊಬ್ಬರವನ್ನು ಕೊಡಬೇಕಾಗುತ್ತದೆ. ಈ ರೀತಿ ಕೊಟ್ಟ ಗೊಬ್ಬರದ ಪ್ರಮಾಣವು ಕಾಫಿ ಗಿಡದಲ್ಲಿರುವ ಫಸಲಿನ ಮೇಲೆ ಆಧಾರಿತವಾಗಿಲ್ಲ. ಹೀಗೆ ಕೊಟ್ಟ ಗೊಬ್ಬರದ ಅಂಶವನ್ನು ನಾವು ಸಸ್ಪೆನ್ಸ್ ಸುಸ್ಥಿರ ಡೋಸ್‌ ಎಂದು ಕರೆಯುತ್ತೇವೆ. ಈ ಗೊಬ್ಬರದ ಅಂಶ ಗಿಡಗಳ ಬೇರು, ರಂಬೆ, ಕಾಂಡ ಹಾಗೂ ಎಲೆಗಳ ಬೆಳವಣಿಗೆಗೆ ಅತ್ಯವಶ್ಯಕ.

ಕಾಫಿ ಗಿಡಗಳಿಗೆ ಒಂದು ವರ್ಷಕ್ಕೆ ಬೇಕಾದ ಗೊಬ್ಬರದ ಪ್ರಮಾಣವನ್ನು ಮಣ್ಣು ಪರೀಕ್ಷೆ ಮಾಡಿ ಮಣ್ಣಿನ ಫಲವತ್ತತೆ ಮತ್ತು ಫಸಲಿನ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ. ಈ ರೀತಿ ನಿಗದಿ ಮಾಡಿದ ಗೊಬ್ಬರದ ಪ್ರಮಾಣವನ್ನು ಒಂದು ವರ್ಷದಲ್ಲಿ ಎರಡು ಅಥವಾ ಮೂರು ಕಂತುಗಳಲ್ಲಿ ಕಾಫಿ ತೋಟಗಳಿಗೆ ಕೊಡಬೇಕು. ಸಾಮಾನ್ಯವಾಗಿ ಹೂಮಳೆ ಮುಂಚೆ(ಮಾರ್ಚ್) ಮುಂಗಾರು ಮಳೆ ಮುಂಚೆ (ಮೇ) ಮತ್ತು ಮುಂಗಾರುಮಳೆ ನಂತರದ(ಸೆಪ್ಟೆಂಬರ್) ಸಮಯದಲ್ಲಿ ಈ ಗೊಬ್ಬರವನ್ನು ಕಾಫಿ ತೋಟಗಳಲ್ಲಿ ಕೊಡಲು ಶಿಫಾರಸು ಮಾಡಲಾಗಿದೆ. ಬಳಸಬೇಕಾದ ಗೊಬ್ಬರದ ಪ್ರಮಾಣವು ಹಿಂದಿನ ಸಾರಿ ಹಾಕಿದ ಗೊಬ್ಬರ, ಕಾಫಿಗಿಡಗಳು ವಯಸ್ಸು, ಆರೋಗ್ಯ, ಮಣ್ಣಿನ ಫಲವತ್ತತೆ ಮತ್ತು ಹಿಂದಿನ 5 ಸಾಲಿನಲ್ಲಿ ಪಡೆದ ಫಸಲು ಸರಾಸರಿ ಆಧಾರಿತವಾಗಿದೆ.

ಮುಂಗಾರು ಮುಂಚಿನ ಗೊಬ್ಬರವನ್ನು ಹಾಕವ ಮೊದಲು ಬೆಳೆಗಾರರು ಕೆಲವು ಸಿದ್ಧತಾ ಕ್ರಮಗಳನ್ನು ಕೈಗೊಳ್ಳಬೇಕು. ಅವುಗಳೆಂದರೆ ತೋಟಗಳಲ್ಲಿನ ಕಳೆ ತೆಗೆಯಬೇಕು. ಗಿಡಗಳಲ್ಲಿ ಅನಪೇಕ್ಷಿತ ಮತ್ತು ಅನುತ್ಪಾದಕ ಬೆಳವಣಿಗೆಯನ್ನು ತೆಗೆದುಹಾಕಬೇಕು.(ಗಿಡ ಕಸಿ) ಮತ್ತು ತೋಟದಲ್ಲಿ ಸಾಕಷ್ಟು ತೇವಾಂಶವನ್ನು ಹದವಾದ ನೆರಳಿನ ವ್ಯವಸ್ಥೆ ಮಾಡಿ ಹಿಡಿದಿಟ್ಟುಕೊಳ್ಳಬೇಕು. ಗೊಬ್ಬರವನ್ನು ಬೆರೆಸುವ ಮುಂಚಿತವಾಗಿ, ತೋಟದ ವಿಸ್ತೀರ್ಣ, ತೋಟಕ್ಕೆ  ಶಿಫಾರಸು ಮಾಡಿರುವ ಗೊಬ್ಬರದ ಪ್ರಮಾಣವನ್ನು ಮನಸ್ಸಿನಲ್ಲಿಟ್ಟುಕೊಂಡು, ಅಪೇಕ್ಷಿತ ಗೊಬ್ಬರವನ್ನು ಯಥೋಚಿತ ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. 

ಗೊಬ್ಬರ ಹಾಕುವ ಕಾರ್ಮಿಕರಿಗೆ ಲೆಕ್ಕಹಾಕಿದ ಪ್ರಮಾಣದಲ್ಲಿ ಸರಿಯಾದ ವಿಧಾನದಲ್ಲಿ ಹಾಕುವಂತೆ ಸೂಚಿಸಬೇಕು. ಕಾಫಿಯಲ್ಲಿ ಗೊಬ್ಬರ ಹಾಕಬೇಕಾದರೆ ಗಿಡದ ಬುಡದಿಂದ ರೆಂಬೆ ಬೆಳೆದಿರುವ ವರ್ತುಲಾಕಾರದ ಜಾಗದವರೆಗೂ ಇರುವ ಕಸಕಡ್ಡಿ ಮತ್ತು ತರಗೆಲೆಗಳನ್ನು ಬದಿಗೆ ಸರಿಸಬೇಕು. ಗಿಡದ ಕಾಂಡದ ಬುಡದಿಂದ ಸುತ್ತ ಒಂದು ಅಡಿ ಬಿಟ್ಟು ಮುಂದಕ್ಕೆ ಮಣ್ಣನ್ನು ಸಣ್ಣದಾಗಿ ಸಡಿಲಿಸಬೇಕು. ಮತ್ತು ಗೊಬ್ಬರದ ಅಂಶವನ್ನು ಅದರಲ್ಲಿ ಸುತ್ತ ಹರಡಬೇಕು. ನಂತರ ಮಣ್ಣನ್ನು ತಳಮೇಲು ಮಾಡಿ ಸರಿಸಿದ ಕಸಕಡ್ಡಿ ಮತ್ತು ತರಗೆಲೆಗಳಿಂದ ಪುನಃ ಮುಚ್ಚಬೇಕು. ಯಾವುದೇ ಕಾರಣಕ್ಕೂ ಒಂದು ಹೆಕ್ಟರ್‌ಗೆ 100:75:100 ಕಿಲೋ.ಗ್ರಾಂ. ಸಾರಜನಕ, ರಂಜಕ,ಪೊಟ್ಯಾಶ್ ಗಿಂತಲೂ ಹೆಚ್ಚಿನ ಗೊಬ್ಬರವನ್ನು ಒಂದೇ ಕಂತಿನಲ್ಲಿ ಕೊಡಬಾರದು. ಹೀಗೆ ಒಂದೇ ಸಲ ಹೆಚ್ಚಾಗಿ ಗೊಬ್ಬರವನ್ನು ಕೊಡುವುದರಿಂದ ಗೊಬ್ಬರದ ಅಂಶ ಬಿಸಿಲಿನ ಶಾಖದಿಂದ ನಷ್ಟ ಹೊಂದುತ್ತದೆ. ಹೆಚ್ಚು ಫಸಲು ಕೊಡುತ್ತಿರುವ ಪಟ್ಟೆಗಳಿಗೆ ಗೊಬ್ಬರ ಹಾಕುವ ಕಂತುಗಳು 3-4 ಕ್ಕಿಂತ ಹೆಚ್ಚಾಗಿರುತ್ತದೆ. ಯಾವುದೇ ಕಾರಣಕ್ಕೂ ಮುಂಗಾರುಮಳೆ ಮುಂಚೆ ಕೊಡುವ ಗೊಬ್ಬರದಲ್ಲಿ ರಂಜಕದ ಕಡಿತವನ್ನು ಮಾಡಬಾರದು. ರಂಜಕದ ಅಂಶ ಈ ಕಾಲದಲ್ಲಿ ಕಾಫಿ ಗಿಡಗಳಿಗೆ ಬೇರು ಬೆಳೆಯಲು  ಬಹಳ ಅವಶ್ಯಕವಾಗಿರುತ್ತದೆ.

ಕಾಫಿ ತೋಟಗಳಲ್ಲಿ ಕಾಫಿಗೆ ಹಾಕಬೇಕಾದ ಗೊಬ್ಬರದ ಪ್ರಮಾಣದ ಪಟ್ಟಿಯಲ್ಲಿ ಕಾಫಿ ಹಣ್ಣಿನ ಸಿಪ್ಪೆ, ಅಂಟೂ ಹಾಗೂ ಒಟ್ಟು ಹೀರಿಕೊಳ್ಳುವ ಪೌಷ್ಟಿಕಾಂಶವನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದುದರಿಂದ ಎಲ್ಲಾ ಬೆಳೆಗಾರರು ಫಸಲಿನ ಸಂಸ್ಕರಣೆಯಲ್ಲಿ ಹೊರಬಂದ ತ್ಯಾಜ್ಯ ವಸ್ತುಗಳನ್ನು ಚೆನ್ನಾಗಿ ಕಾಂಪೋಸ್ಟ್ ಮಾಡಿ ತೋಟಕ್ಕೆ ಹಾಕಿ ಮರುಬಳಕೆ ಮಾಡಬೇಕು.

6. ಮುಂಗಾರು ಮಳೆ ಮುನ್ನ ಬೋಡೋ ದ್ರಾವಣ ಸಿಂಪರಣೆ:

ಏಪ್ರಿಲ್-ಮೇ ತಿಂಗಳು ಕಾಫಿ ಎಲೆ ತುಕ್ಕು ರೋಗವು ಹಬ್ಬವ ಕಾಲ. ಏಪ್ರಿಲ್-ಮೇ ತಿಂಗಳಲ್ಲಿ ಕಾಫಿ ಎಲೆ ತುಕ್ಕು ರೋಗವನ್ನುಂಟು ಮಾಡುವ ಶಿಲೀಂದ್ರವು ಹಳೆ  ಎಲೆಗಳಿಂದ ಹೊಸ ಚಿಗುರು ಎಲೆಗಳಿಗೆ ಮತ್ತು ಗಿಡದಿಂದ ಗಿಡಗಳಿಗೆ ತೀವ್ರವಾಗಿ ಹರಡುತ್ತವೆ.  ಮುಂಗಾರು ಮಳೆ ಮುಂಚೆ ಮತ್ತು ಮಳೆಗಾಲದಲ್ಲಿ ನೆರಳು ತೆಳುವಾಗಿರುವುದು ಮತ್ತು ನೆರಳು ಇಲ್ಲದಿರುವಂತಹ ಸನ್ನಿವೇಶಗಳು ಈ ರೋಗ ಹರಡಲು ಸಹಾಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ರೋಗದ ಪಸರಿಕೆಯನ್ನು ತಡೆಗಟ್ಟಲು, ರಕ್ಷಣಾತ್ಮಕ ಶೇಕಡ 0.5 ರ ಬೋರ್ಡೋ ದ್ರಾವಣವನ್ನು ಎಲೆಗಳ ಅಡಿ ಭಾಗಗಳಿಗೆ ಸಿಂಪಡಿಸಬೇಕು. ಪ್ರತಿ ಹೆಕ್ಟರ್‌ಗೆ 15 ಬ್ಯಾರೆಲ್ ದ್ರಾವಣದ ಅವಶ್ಯಕತೆ ಇರುತ್ತದೆ. ಮೇ ತಿಂಗಳ  ಎರಡನೇ ವಾರದಿಂದ ಪ್ರಾರಂಭಿಸಿ, ಜೂನ್ ಮೊದಲ ವಾರದ ಒಳಗೆ ಈ ಸಿಂಪರಣಾ ಕಾರ್ಯಕ್ರಮವನ್ನು ಮುಗಿಸಬೇಕು. ಆಗ ತಾನೇ ತಯಾರಿಸಿದ ಬೋರ್ಡೋ ದ್ರಾವಣವನ್ನೇ ಉಪಯೋಗಿಸಬೇಕು ಹಾಗೂ ದ್ರಾವಣದ ಕ್ಷಾರತೆ (ph) 9 ದಿಂದ 10 ರ ಒಳಗೆ ಇರುವಂತೆ ನೋಡಿಕೊಳ್ಳಬೇಕು. ಬೋರ್ಡೋ ದ್ರಾವಣದಲ್ಲಿ ಯಾವುದೇ ಅನ್ಯ ಪದಾರ್ಥಗಳನ್ನು ಸೇರಿಸುವುದು ಉಚಿತವಲ್ಲ. ಸೇರಿಸಿದರೆ ದ್ರಾವಣದ ಕಾರ್ಯ ಸಮರ್ಥತೆಯಲ್ಲಿ ಕುಂಠಿತವಾಗುತ್ತದೆ. ಆದರೆ 1 ಬ್ಯಾರೆಲ್ ಬೋರ್ಡೋ ದ್ರಾವಣದಲ್ಲಿ 350 ಗ್ರಾಂ ಪೊಟ್ಯಾಶ್ ಸೇರಿಸಿದರೆ ಬೋರ್ಡೋ ದ್ರಾವಣದ ಶಕ್ತಿಯಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಕೆಲವು ಬೆಳೆಗಾರರು ಈ ದ್ರಾವಣದಲ್ಲಿ ಯೂರಿಯಾವನ್ನು ಮಿಶ್ರಣ ಮಾಡುತ್ತಾರೆ. ಹೀಗೆ ಮಾಡಿದಾಗ ಸಾರಜನಕದ ಅಂಶ ನಷ್ಟವಾಗುತ್ತದೆ ಕೊಳೆ ರೋಗ ಪೀಡಿತ ಜಾಗದಲ್ಲಿ ಶೇಕಡಾ 1ರ ಬೋರ್ಡೋ ದ್ರಾವಣವನ್ನು ಕೊನೆಯಲ್ಲಿ(ಜೂನ್ ಮೊದಲ ವಾರ) ಸಿಂಪಡಿಸಬೇಕು.

ಒಂದು ವೇಳೆ ಹೂಮಳೆ ತಡವಾದರೆ(ಮೇ 2ರಿಂದ ಮೂರನೇ ವಾರದವರೆಗೆ) ಅಂತಹ ಸಮಯದಲ್ಲಿ ಹೊಸ ಚಿಗುರುಗಳು ಬಂದಿರದ ಕಾರಣ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುವುದಿಲ್ಲ. ಆದುದರಿಂದ ಇಂತಹ ಸಮಯದಲ್ಲಿ ಮುಂಗಾರು ಮಳೆಯ ಮಧ್ಯದ ಬಿಡುವಿನ ಕಾಲದಲ್ಲಿ ಅಂತರ್ವ್ಯಾಪಿ  ಶಿಲಿಂದ್ರ ನಾಟಕಗಳಾದ ಬೆಲಟಾನ್ (25wp 0.02%)160 gram ಅಥವಾ ಕಾಂಟಾಫ್ (5‌ Ec  0.01%) 400. ಮಿ.ಲಿ. ನಂತೆ ಬ್ಯಾರೆಲ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಅಂತರ್ವ್ಯಾಪಿ ಶಿಲೀಂದ್ರನಾಶಕ ದ್ರಾವಣ ಸುಮಾರು 7‌ ರಿಂದ 8 ಬ್ಯಾರೆಲ್-1  ಹೆಕ್ಟರ್‌ಗೆ ಬೇಕಾಗುತ್ತದೆ.

7.  ಮರಗಸಿ

 ಕಾಫಿಗೆ ಹಿತಕರವಾದ ತೆಳ್ಳನೆಯ ಜರಡಿ ಹಿಡಿದಂತಿರುವ ನೆರಳು ಬಿಳಲು ಅವಕಾಶವಾಗುವಂತೆ ಕಸಿ ಮಾಡುವುದು ಮತ್ತು ರೆಂಬೆಗಳನ್ನು ಕತ್ತರಿಸುವುದು ಅನಿವಾರ್ಯ. ನೆರಳಿನ ಮರಗಳ ನಿಯಂತ್ರಣಕ್ಕೆ ಮುಂಗಾರುಮಳೆ ಮುಂಚಿನ ತಿಂಗಳು ಬಹಳ ಅನುಕೂಲಕರವಾದ ಅವಧಿ. ಓಣ ತೇವ ರಹಿತ ಗಾಳಿ, ಹೆಚ್ಚಿನ ವಾತಾವರಣದ ಉಷ್ಣಾಂಶ ಹಾಗೂ ತೇವರಹಿತ ಮಣ್ಣು ಇರುವಂತಹ ಸಮಯದಲ್ಲಿ ಮರಗಸಿ ಮಾಡಬಾರದು.  ಹೀಗೆ ಮಾಡಿದಲ್ಲಿ ಮಣ್ಣಿನಲ್ಲಿರುವಂತಹ ಸ್ವಲ್ಪ ತೇವಾಂಶ ನಶಿಸಿ ಕಾಫಿಗಿಡಗಳು ಬಳಲುತ್ತವೆ ಮತ್ತು ಹೊಸಚಿಗುರು ಬಿಡುವ ಚಟುವಟಿಕೆ ಕುಂಠಿತವಾಗಿ ಮುಂಬರುವ ಫಸಲಿನ ಮೇಲೆ ಪರಿಣಾಮ ಉಂಟುಮಾಡುತ್ತವೆ. ಇದರ ಜೊತೆಗೆ ಕಾಫಿ ಕಾಂಡಕೊರಕದ ಹಾವಳಿಯೂ ಅತಿ ಆಗುವ ಸಂಭವವಿದೆ ಆದುದರಿಂದ ಕಡಿಮೆ ಎಂದರೆ ನಾಲ್ಕರಿಂದ ಐದು ಇಂಚು ಮಳೆಯಾಗುವ ನಂತರವೇ ಮರ ಗಸಿಯನ್ನು ಮಾಡಬೇಕು. ವಿವೇಚನಾ ಪೂರಿತವಾಗಿ ಮಾಡಿದ ಮರಗಸಿಯಿಂದ ಕಾಫಿ ಗಿಡಗಳಲ್ಲಿ ಉತ್ತಮ ಫಸಲು ನೀಡುವ ರೆಂಬೆ, ರೆಕ್ಕೆಗಳು ಬರುತ್ತವೆ ಹಾಗೂ ಫಸಲಿನಲ್ಲಿ ವರ್ಷದಿಂದ ವರ್ಷಕ್ಕೆ ಆಗುವ ಏರಿಳಿತ, ಗಿಡಗಳ ಬಳಲಿಕೆ ಮತ್ತು ಸುಳಿಯಿಂದ ಹಿಂದಕ್ಕೆ ಒಣಗುವ(ಡೈಬ್ಯಾಕ್) ದೋಷಗಳನ್ನು ತಪ್ಪಿಸಬಹುದು. ಮರಗಸಿ ಮಾಡುವಾಗ‌, ನೆರಳಿನ ಮರಗಳ ಕೊಂಬೆಗಳು ಕಾಫಿ ಗಿಡಗಳ ನೆತ್ತಿಯಿಂದ ಸುಮಾರು 9 ರಿಂದ 12 ಮೀಟರ್ ಎತ್ತರದಲ್ಲಿರುವಂತೆ ನಿಯಂತ್ರಣಮಾಡಬೇಕು.

ಇದರಂತೆಯೇ ಕೆಳಗಿನ ಹಂತದ ನೆರಳಿನ ಮರಗಳಾದ ಪಾಲುವಾಣದ ಗಿಡಗಳನ್ನು ನಿಯಂತ್ರಿಸಬೇಕು. ಮಳೆಗಾಲ ಪ್ರಾರಂಭವಾದ ಕೂಡಲೇ ಹಾಲುವಾಣ ರೆಕ್ಕೆಗಳನ್ನು ಪೂರ್ತಿಯಾಗಿ ಕತ್ತರಿಸಿ ಹಾಕಿ ಮಳೆಗಾಲದಲ್ಲಿ ಪೂರ್ತಿ ಪ್ರಮಾಣದ ಬೆಳಕು ಕಾಫಿ ಗಿಡಗಳ ಮೇಲೆ ಬೀಳುವಂತೆ ಮಾಡಬೇಕು. ಮಳೆಗಾಲದ ನಂತರ ಅವಶ್ಯಕತೆಗನುಸಾರವಾಗಿ ಹಾಲುವಾಣ ರೆಕ್ಕೆಗಳನ್ನು ಕತ್ತರಿಸಿ ಅದರ ಬೆಳವಣಿಗೆಯನ್ನು ನಿಯಂತ್ರಿಸಬೇಕು. ಕತ್ತರಿಸಿದ ಹಾಲುವಾಣದ ಕಂಬಗಳನ್ನು ಬೇರೆ ಪ್ರದೇಶಗಳಲ್ಲಿ ಗಿಡ ಬೆಳೆಸಲು ಉಪಯೋಗಿಸಬಹುದು ಇದಕ್ಕೆ ಜೂನ್-ಜುಲೈ ತಿಂಗಳು ಬಹಳ ಸೂಕ್ತ. ಕತ್ತರಿಸಿದ ಚಿಕ್ಕ-ಚಿಕ್ಕ ರೆಂಬೆ ಮತ್ತು ಹಾಲುವಾಣದ ಎಲೆಗಳನ್ನು ತೋಟದಲ್ಲಿಯೆ ಹರಡಿ ಕೊಳೆಯಲು ಬಿಡಬೇಕು. ಇದು ಉತ್ತಮ ಗೊಬ್ಬರವಾಗುತ್ತದೆ.

8. ತೊಟ್ಟಿಲುಗುಂಡಿ/ನೀರು ಗುಂಡಿಗಳ ನವೀಕರಣ

ಇಳಿಜಾರಾದ ಕಾಫಿ ಪ್ರದೇಶಗಳಲ್ಲಿ ತೊಟ್ಟಿಲುಗುಂಡಿ ಹಾಗೂ ನೀರು ಇಂಗುವ ಗುಂಡಿಗಳನ್ನು ಸಾಮಾನ್ಯವಾಗಿ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ತೆರೆಯಲಾಗುತ್ತದೆ. ಈ ಗುಂಡಿಗಳು ನಂತರದ ಹಿಂಗಾರು ಮತ್ತು ಮುಂಗಾರು ಮಳೆ ನೀರಿನಿಂದ ತುಂಬುವುದರಿಂದ ಇಂತಹ ಗುಂಡಿಗಳನ್ನು ನವೀಕರಿಸ ಬೇಕಾಗುತ್ತದೆ. ಈ ನವೀಕರಣ ಎರಡು ಮೂರು ವರ್ಷಗಳಿಗೊಮ್ಮೆ ಮಾಡಬೇಕು. ಈ ಗುಂಡಿಯಲ್ಲಿ ತುಂಬಿರುವ ಮಣ್ಣು ಕಸ ಕಡ್ಡಿ ಹಾಗೂ ತರಗೆಲೆಗಳನ್ನು ತೆಗೆದು ಸ್ವಚ್ಛ ಮಾಡಬೇಕು. ಮುಂಗಾರುಮಳೆ ಪ್ರಾರಂಭವಾಗುವ ಮೊದಲು ಅಂದರೆ ಏಪ್ರಿಲ್-ಮೇ ತಿಂಗಳು ಇದಕ್ಕೆ ಸೂಕ್ತ ಮಳೆಗಾಲ ಶುರುವಾಗುವ ಮುಂಚೆ ಕಾಫಿತೋಟಗಳಲ್ಲಿ ನೀರು ಹರಿದುಹೋಗುಲು ಮಾಡಿರುವ ಚರಂಡಿಗಳನ್ನು ನವೀಕರಿಸಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ನೀರು ನಿಂತು ಮಟ್ಟ ಪ್ರದೇಶಗಳಲ್ಲಿ ಮಣ್ಣಿನ ಶೈತ್ಯಾಂಸ ಹೆಚ್ಚಾಗಿ ಕಾಫಿ ಬೇರುಗಳಿಗೆ ಹಾನಿಯಾಗಿ ವೆಟ್‌ಪೀಟ್ ರೋಗ ತಗಲುತ್ತದೆ ಹಾಗೂ ಎಲೆಗಳು ಉದುರುತ್ತವೆ. ಮಟ್ಟವಾದ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು 1.5 ಅಡಿ ಅಗಲ ಮತ್ತು 1 ಅಡಿ ಆಳದ ನೀರು ಗಾಲುವೆಗಳನ್ನು ಗಿಡಗಳ ಸಾಲಿನ ನಡುವೆ ಸೂಕ್ತ ಅಂತರಗಳಲ್ಲಿ ತೆಗೆಯಬೇಕು. ಇಂತಹ ಕಾಲುವೆಗಳನ್ನು ದೂರದಲ್ಲಿ ತೆಗೆದಿರುವ ಗುಂಡಿಗಳಿಗೆ ಸಂಪರ್ಕಿಸಬೇಕು. ಹೀಗೆ ಮಾಡುವುದರಿಂದ ಮಣ್ಣಿನ ತೇವಾಂಶ ರಕ್ಷಣೆ ಮತ್ತು ಭೂಮಿಯಲ್ಲಿನ ಅಂತರ್ಜಲ ಮಟ್ಟ ಏರುತ್ತದೆ.

9. ಕಳೆ ತೆಗೆಯುವುದು 

ಮಳೆಗಾಲದ ಮುಂಚೆ ತೋಟಗಳಲ್ಲಿ ಕಳೆಯಿದ್ದರೆ ಅದನ್ನು ದಬ್ಬೆಯ ಮೂಲಕ ನಾಶಪಡಿಸಬೇಕು. ದಬ್ಬೆ ಯ ಮೂಲಕ ಕೊಚ್ಚಿ ತೆಗೆದ ಕಲೆಯನ್ನು ಗಿಡಗಳ ಬುಡಗಳಲ್ಲಿ ಹರಡಬೇಕು.

10. ತಿಗಣೆಗಳ ನಿರ್ವಹಣೆ 

ಹಸಿರು ತಿಗಣೆಯು ವಿಶೇಷವಾಗಿ ಅರೇಬಿಕಾ ಕಾಫಿಗೆ ತಗಲುವ ಗಂಭೀರ ಕೀಟವಾಗಿದೆ. ಇರುವೆಗಳು ಈ ಕೀಟದ ಹಬ್ಬುವಿಕೆಯಲ್ಲಿ ಪಾತ್ರ ವಹಿಸುವುದರಿಂದ ಇರುವೆಗಳನ್ನು ನಿಯಂತ್ರಣದಲ್ಲಿ ಇಡಬೇಕಾಗುತ್ತದೆ. ಮ್ಯಾಲತಿಯಾನ್ ಶೇಕಡ 5ರ ಪುಡಿಯನ್ನು ಉಪಯೋಗಿಸಿ ಇರುವೆ ಗೂಡು ಹಾಗೂ ಬಾಲವಿರುವ ಇರುವೆಗಳನ್ನು ನಾಶಪಡಿಸಬೇಕು.

ಏಕಲಕ್ಸ್ 25 ಇ.ಸಿ (120 ಮಿ.ಲೀ.) ಅಥವಾ ಮೆಟಾಸಿಡ್ 50 ಇ.ಸಿ.(120 ಮಿ.ಲೀ.) ಯನ್ನು 200 ಲೀಟರ್ ನೀರು ಮತ್ತು 200 ಮಿ.ಲೀ. ಅಂಟುದ್ ರಾವಣದಲ್ಲಿ ಬೆರೆಸಿ ಕೀಟ ಪೀಡಿತ  ಭಾಗಗಳಿಗೆ ಸಿಂಪಡಿಸಬೇಕು.

ಮಾಹಿತಿ: 

ಸಂಶೋಧನಾ ನಿರ್ದೇಶಕರು

ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ

ಕಾಫಿ ಸಂಶೋಧನಾ ಕೇಂದ್ರ

ಚಿಕ್ಕಮಗಳೂರು.