Header Ads Widget

Responsive Advertisement

ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಮಳೆಹಾನಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ನಡೆದ ಸಭೆ


ಜನ-ಜಾನುವಾರು ರಕ್ಷಣೆಗೆ ಮುಂದಾಗಿ: ಬಿ.ಸಿ.ನಾಗೇಶ್

ಮಡಿಕೇರಿ: ಮುಂಗಾರು ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಅಗತ್ಯ ಮುನ್ನೆಚ್ಚರ ವಹಿಸಬೇಕು. ಜನ-ಜಾನುವಾರು ರಕ್ಷಣೆಗೆ ಮುಂದಾಗಬೇಕು ಎಂದು ಎಲ್ಲಾ ಹಂತದ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

      ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಮಳೆಹಾನಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಹಾಗೂ ವಿವಿಧ ಇಲಾಖೆಗಳ ಪ್ರಗತಿ ಸಂಬಂಧ ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.  

      2018, 2019, 2020 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಮನಗಂಡು ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ., ತಾ.ಪಂ. ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಹಂತದಲ್ಲಿ ಕಾರ್ಯಪಡೆಯನ್ನು ರಚಿಸಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. 

      ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರಾಕೃತಿಕ ವಿಕೋಪವನ್ನು ಎದುರಿಸಲು ಸಜ್ಜಾಗಿರಬೇಕು. ಮೊಬೈಲ್‍ನ್ನು ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಮಾಡಬಾರದು. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.  

      ಎಲ್ಲಾ ಹಂತದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆದು ಸ್ಥಳೀಯವಾಗಿ ಪ್ರಾಕೃತಿಕ ವಿಕೋಪ ಎದುರಿಸಬೇಕು. ಕರೆ ಮಾಡಿದ ತಕ್ಷಣವೇ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.  

      ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಘಟಕ ನಿರ್ಮಾಣ ಸಂಬಂಧಿಸಿದಂತೆ ತ್ವರಿತವಾಗಿ ಕ್ರಮಕೈಗೊಳ್ಳಬೇಕು. ಮಳೆಗಾಲದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಬಿ.ಸಿ.ನಾಗೇಶ್ ಅವರು ತಿಳಿಸಿದರು.  

      ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ವಿದ್ಯುತ್ ಮಾರ್ಗಗಳಲ್ಲಿ ಕಾಡನ್ನು ಕಡಿಯಬೇಕು. ಪೂರ್ವ ಮುಂಗಾರು ಸಂದರ್ಭದಲ್ಲಿ ಗಾಳಿ ಮಳೆಗೆ ಬಿದ್ದಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ಗ್ಯಾಂಗ್ ಮೆನ್‍ಗಳನ್ನು ನಿಯೋಜಿಸಿಕೊಳ್ಳುವಂತೆ ಶಾಸಕರು ಸಲಹೆ ಮಾಡಿದರು. 

     ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕಳೆದ ಬಾರಿ ಎಲ್ಲೆಲ್ಲಿ ಎಷ್ಟು ತೊಂದರೆಯಾಗಿತ್ತು ಅಂತಹ ಕಡೆಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದರು.  

     ಸಚಿವರಾದ ಬಿ.ಸಿ.ನಾಗೇಶ್ ಅವರು ಸ್ಥಳೀಯ ಶಾಸಕರ ಸಲಹೆ, ಮಾರ್ಗದರ್ಶನ ಪಡೆದು ಸೆಸ್ಕ್ ಹಾಗೂ ವಿದ್ಯುತ್‍ಚ್ಛಕ್ತಿ ಮಂಡಳಿಯ ಕೆಲಸ-ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. 

     ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಲಾಗಿದೆ. ಅದೇ ರೀತಿ ಗ್ರಾ.ಪಂ.ಮಟ್ಟದಲ್ಲಿಯೂ ಸಹ ಕಾರ್ಯಪಡೆ ಸಮಿತಿ ಸಭೆ ನಡೆಸುವಂತೆ ಸಲಹೆ ಮಾಡಿದರು. 

        ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಗ್ರಾ.ಪಂ., ತಾ.ಪಂ., ಮಟ್ಟದಲ್ಲಿ ಸಭೆ ನಡೆದಿದ್ದು, ಜಿಲ್ಲಾ ಮಟ್ಟದಲ್ಲಿ ಮೇ, 16 ರಂದು ಸಭೆ ನಡೆಯಲಿದೆ ಎಂದು ತಿಳಿಸಿದರು.  

      ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ ಅವರು ಮಾತನಾಡಿ ನದಿ ಪಾತ್ರದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು. 

      ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು 2018 ರಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಬಾಕಿ ಇದೆ. ಕೂಡಲೇ ಪರಿಹಾರ ವಿತರಿಸುವಂತೆ ಸೂಚಿಸಿದರು. 

     ಪರಿಹಾರ ವಿತರಿಸುವಲ್ಲಿ ಗ್ರಾಮ ಲೆಕ್ಕಿಗರು ಉದ್ದೇಶ ಪೂರ್ವಕವಾಗಿ ಬಾಕಿ ಉಳಿಸಿಕೊಂಡಿದ್ದಾರೆ. ಕಳೆದ ವಾರ ಮಳೆ ಹಾಗೂ ಗಾಳಿಗೆ ಹಲವು ಕಡೆಗಳಲ್ಲಿ ಮನೆಗಳು ಹಾನಿಯಾಗಿದ್ದು, ಅದಕ್ಕೂ ಪರಿಹಾರ ನೀಡುವಂತೆ ನಿರ್ದೇಶನ ನೀಡಿದರು. 

     ಮನೆ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸತಾಯಿಸಬಾರದು ಎಂದು ಕೆ.ಜಿ.ಬೋಪಯ್ಯ ಅವರು ಸೂಚಿಸಿದರು. 

     ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ ಎಲ್ಲಾ ಸೊಸೈಟಿಗಳಲ್ಲೂ ರಸಗೊಬ್ಬರ ದಾಸ್ತಾನು ಕಡಿಮೆ ಇದೆ. ಆದ್ದರಿಂದ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಬೇಕು. ರಸಗೊಬ್ಬರವನ್ನು ಕೇರಳಕ್ಕೆ ಸಾಗಿಸುತ್ತಿದ್ದವರ ಪರವಾನಿಗೆಯನ್ನು ರದ್ದು ಮಾಡುವಂತೆ ಶಾಸಕರು ಸೂಚಿಸಿದರು. ಜಿಲ್ಲೆಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ 20 ಸಾವಿರ ಟನ್ ರಸಗೊಬ್ಬರ ಅಗತ್ಯವಿದೆ ಎಂದರು.   

    ಈ ಬಗ್ಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ರಸಗೊಬ್ಬರ ಕೊರತೆ ಉಂಟಾಗದಂತೆ ಗಮನಹರಿಸಲಾಗುವುದು ಎಂದರು. 

     ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರ ಕೊರತೆ ಇದೆ. ಆ ನಿಟ್ಟಿನಲ್ಲಿ ತರಿಸಿಕೊಳ್ಳುವಂತೆ ಸಲಹೆ ಮಾಡಿದರು. 

     ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚುವರಿ ಸೀಮೆ ಎಣ್ಣೆ ಒದಗಿಸಬೇಕು. ಜಿ.ಪಂ. ಎಂಜಿನಿಯರಿಂಗ್ ವಿಭಾಗದಲ್ಲಿ ಆಗಿರುವ ಕಾಮಗಾರಿಗಳಿಗೆ ಮಾತ್ರ ಬಿಲ್ಲು ಪಾವತಿಸುವಂತೆ ಸೂಚಿಸಿದರು. 

      ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾಹಿತಿ ನೀಡಿ ಜಿಲ್ಲಾಧಿಕಾರಿ ಕಚೇರಿ(1077) ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ 16 ಹೋಬಳಿ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿ ಸೇರಿದಂತೆ ಒಟ್ಟು 20 ಕಡೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸದ್ಯದಲ್ಲೇ ಎನ್‍ಡಿಆರ್‍ಎಫ್ ತಂಡ ಜಿಲ್ಲೆಗೆ ಆಗಮಿಸಲಿದೆ ಎಂದು ಮಾಹಿತಿ ನೀಡಿದರು. 

      ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಅಗತ್ಯವಿರುವೆಡೆ ಪರಿಹಾರ ಕೇಂದ್ರ ತೆರೆಯಲಾಗುವುದು. ಹಾಗೆಯೇ ತಾತ್ಕಾಲಿಕ ಗೋಶಾಲೆ ತೆರೆಯಲು ಕ್ರಮವಹಿಸಲಾಗುವುದು ಎಂದರು. 

     ತಾ.ಪಂ.ಇಒ ಶೇಖರ್ ಅವರು ಪಂಚಾಯಿತಿಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಿರುವ ಕಡೆ ಗ್ರಾ.ಪಂ.ಗೆ ಒಂದರಂತೆ ಜೆ.ಸಿಬಿಯನ್ನು ಕಾಯ್ದಿರಿಸಿಕೊಳ್ಳಲಾಗಿದೆ. ಹೊಳೆ ಬದಿ ವಾಸಿಸುವ ಜನರನ್ನು ಸ್ಥಳಾಂತರಿಸಬೇಕು ಎಂದು ಅವರು ಹೇಳಿದರು.  

      ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಸಹಾಯವಾಣಿ ಕೇಂದ್ರಗಳು ನಿರಂತರ ಕಾರ್ಯಚಟುವಟಿಕೆಯಿಂದ ಇರಬೇಕು. ಯಾರೇ ದೂರವಾಣಿ ಸಂಪರ್ಕಿಸಿದರು ಸಹ ಸ್ಪಂದಿಸಬೇಕು ಎಂದು ಹೇಳಿದರು. 

       ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಇತರರು ಇದ್ದರು.