ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿ: ಡಾ.ಬಿ.ಸಿ.ಸತೀಶ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೋಬಳಿವಾರು ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ.ಇಒಗಳು, ಪೊಲೀಸ್, ಸೆಸ್ಕ್, ಅಗ್ನಿಶಾಮಕ, ಲೋಕೋಪಯೋಗಿ, ಪಂಚಾಯತ್ ರಾಜ್ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳ ಜೊತೆ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಿತು.
ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸುವುದು, ತಮ್ಮ ಇಲಾಖಾ ಹಂತದಲ್ಲಿಯೂ ಸಹ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದರು.
ಪ್ರಾಕೃತಿಕ ವಿಕೋಪ ನಿರ್ವಹಣೆಗಾಗಿ ಪ್ರತೀ ಗ್ರಾ.ಪಂ.ಗೆ 50 ಸಾವಿರ ರೂ. ಹಾಗೂ ತಾಲ್ಲೂಕು ಆಡಳಿತಕ್ಕೆ 25 ಲಕ್ಷ ರೂ. ನೀಡಲಾಗುವುದು. ಅಗ್ನಿಶಾಮಕ ಇಲಾಖೆಗೆ ಅಗತ್ಯ ಗಂಬೂಟ್, ರೈನ್ ಕೋಟ್, ಕೊಡೆ ಮತ್ತಿತರ ಉಪಕರಣಗಳಿಗಾಗಿ ಹಣ ಬಿಡುಗಡೆ ಮಾಡಲಾಗುವುದು. ಆ ನಿಟ್ಟಿನಲ್ಲಿ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
‘ನೋಡಲ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿ ಪರಿಹಾರ/ಕಾಳಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪರಿಹಾರ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಬಿಸಿ ನೀರು ಹಾಗೂ ಎಷ್ಟು ಜನರಿಗೆ ಸ್ಥಳಾವಕಾಶ ಒದಗಿಸಲಾಗುತ್ತದೆ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಅಗತ್ಯವಿರುವೆಡೆ ಗೋಶಾಲೆಗಳನ್ನು ತೆರೆಯುವುದು. ಖಾಸಗಿ ಗೋ ಶಾಲೆಗಳಲ್ಲಿ ಎಷ್ಟು ಗೋವುಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಪ್ರವಾಹ ಸಂಭವಿಸಬಹುದಾದ ಪ್ರದೇಶಗಳಾದ ಭಾಗಮಂಡಲ, ಐಯ್ಯಂಗೇರಿ, ಕರಡಿಗೋಡು, ಸಿದ್ಧಾಪುರ, ನೆಲ್ಯಹುದಿಕೇರಿ, ಕುಶಾಲನಗರ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರವಾಹ ಉಂಟಾದಲ್ಲಿ ಅಲ್ಲಿಯ ಜನರ ಸ್ಥಳಾಂತರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ತಂಡ ರಚಿಸಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಭೂ ಕುಸಿತ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಕ್ರಮ ವಹಿಸಬೇಕು. ಇಂತಹ ಸಂದರ್ಭದಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯ ಕೈಗೊಳ್ಳುವಲ್ಲಿ ಅಗತ್ಯ ಮುನ್ನೆಚ್ಚರ ವಹಿಸಬೇಕು. ಆ ನಿಟ್ಟಿನಲ್ಲಿ ಗ್ರಾ.ಪಂ.ಮಟ್ಟದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಸಭೆ ನಡೆಸಿ ಸ್ಥಳೀಯರಿಂದಲೂ ಅಗತ್ಯ ಸಹಕಾರ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಹೆಚ್ಚಿನ ಮಳೆ ಉಂಟಾದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಬಗ್ಗೆಯೂ ಸಹ ಎಚ್ಚರವಹಿಸಬೇಕು. ಆ ನಿಟ್ಟಿನಲ್ಲಿ ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡುವುದು, ಮತ್ತಿತರ ಬಗ್ಗೆ ಅರಿವು ಮೂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸಲಹೆ ಮಾಡಿದರು.
ಹೆಚ್ಚಿನ ಮಳೆ ಸಂಬಂಧಿಸಿದಂತೆ ಹಾರಂಗಿ ಜಲಾಶಯದ ನೀರಿನ ಮಟ್ಟ, ಜಲಾಶಯದಿಂದ ನೀರನ್ನು ಹೊರಗೆ ಬಿಡುವುದು, ಮತ್ತಿತರ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಿದ್ಧತೆ ಮಾಡಿಕೊಳ್ಳುವ ಸಂಬಂಧ ಇದೇ ಮೇ 28 ರಂದು ‘ಅಣಕು ಪ್ರದರ್ಶನ ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿ ಕಳೆದ 2018, 2019 ಮತ್ತು 2020 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಎದುರಾದ ಸಮಸ್ಯೆಗಳು, ಸವಾಲುಗಳ ಬಗ್ಗೆ ಮಾಹಿತಿ ಒದಗಿಸುವಂತೆ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಗ್ನಿಶಾಮಕ ಇಲಾಖೆ ಅಧಿಕಾರಿ ಪಿ.ಚಂದನ್ ಅವರು ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಸಂಭವಿಸಿದ ಭೂ ಕುಸಿತ ಸಂದರ್ಭದಲ್ಲಿ ಕೈಗೊಳ್ಳಲಾಗಿದ್ದ ರಕ್ಷಣಾ ಕಾರ್ಯದ ಬಗ್ಗೆ ವಿವರಿಸಿದರು.
ಅಗ್ನಿಶಾಮಕ ಇಲಾಖೆಯಲ್ಲಿ ನಾಲ್ಕು ಬೋಟ್ ಗಳಿವೆ, ಹಾಗೆಯೇ ಭಾಗಮಂಡಲದಲ್ಲಿ ಹೋಂ ಗಾರ್ಡ್ ವತಿಯಿಂದ ಒಂದು ಬೋಟ್ ಕಾರ್ಯಾಚರಣೆ ನಡೆಸಲಿದೆ. ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಿಗೆ ಗಂಬೂಟ್, ರೈನ್‍ಕೋಟ್, ಕೊಡೆ, ಟಾರ್ಚ್, ಲೈಪ್ ಜಾಕೇಟ್, ಫೋಕಸ್ ಲೈಟ್ ಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜು ಅವರು ಭೂಕುಸಿತ ಉಂಟಾದ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಳ್ಳುವುದು ಸೇರಿದಂತೆ ಹಲವು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಕಾರ್ಯಪಡೆ ರಚಿಸಿ ಕರ್ತವ್ಯ ನಿರ್ವಹಿಸಲಾಗುತ್ತದೆ ಎಂದರು.
ಪ್ರಾಕೃತಿಕ ವಿಕೋಪ ವಿಭಾಗದ ಸಂಯೋಜಕರಾದ ಅನನ್ಯ ವಾಸುದೇವು ಪ್ರಾಕೃತಿಕ ವಿಕೋಪ ನಿರ್ವಹಣೆ ಮಾಡುವಲ್ಲಿ ಎನ್‍ಡಿಆರ್‍ಎಫ್ ತಂಡವು ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಿದರು. ತಂಡದಲ್ಲಿ 22 ಜನರು ಇರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಶಾಖೆಯ ಎಇಇ ಹೇಮಂತ್ ಕುಮಾರ್ ಅವರು ಪ್ರವಾಹ ಹಾಗೂ ಭೂಕುಸಿತ ಉಂಟಾಗಬಹುದಾದ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಮಳೆಯಾಗುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಡಿಕೇರಿ ನಗರದ ಚಾಮುಂಡೇಶ್ವರಿ ಮತ್ತು ಮಂಗಳಾದೇವಿ ನಗರ ಮತ್ತಿತರ ಕಡೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ಅಗತ್ಯ ಇದ್ದಲ್ಲಿ ಪರಿಹಾರ ಕೇಂದ್ರ ತೆರೆಯಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಗ್ರಾ.ಪಂ.ಸ್ಥಳೀಯ ಸಂಸ್ಥೆಗಳಲ್ಲೂ ಸಹ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಣ್ಣಪುಟ್ಟ ಅವಘಡಗಳು ಸಂಭವಿಸಿದಲ್ಲಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ತಮ್ಮ ತಮ್ಮ ಇಲಾಖಾ ವ್ಯಾಪ್ತಿಯ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಹಾರಂಗಿ ಜಲಾಶಯದ ಇಇ ಪುಟ್ಟಸ್ವಾಮಿ ಅವರು ಹಾರಂಗಿ ಜಲಾಶಯ ನೀರಿನ ಮಟ್ಟ, ಮಳೆ ಹೆಚ್ಚಾದ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ತಹಶೀಲ್ದಾರ್ ಗೋವಿಂದರಾಜು, ಪಿ.ಎಸ್.ಮಹೇಶ್, ಪ್ರಕಾಶ್, ತಾ.ಪಂ.ಇಒ ಶೇಖರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ನೋಡಲ್ ಅಧಿಕಾರಿಗಳಾದ ಪ್ರಮೋದ್, ಹೊನ್ನೇಗೌಡ, ಅಶೋಕ್, ಶ್ರೀನಿವಾಸ್, ಶಬಾನಾ ಎಂ.ಶೇಕ್, ಶಿವಪ್ರಕಾಶ್, ಬಸಪ್ಪ, ಎಸ್.ವಿ.ರಾಮದಾಸ್ ಅವರು ಹಲವು ಮಾಹಿತಿ ನೀಡಿದರು.
‘ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಆರಂಭಿಸಲಾಗಿರುವ ಉಚಿತ ಸಹಾಯವಾಣಿ 1077 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಜೊತೆಗೆ ಮಾಹಿತಿ ಪಡೆಯಬಹುದಾಗಿದೆ.’
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network