ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಶುಶ್ರೂಷಕರ ದಿನಾಚರಣೆ
ಮಡಿಕೇರಿ ಮೇ.17: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ.ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಶುಶ್ರೂಷಕರ ದಿನಾಚರಣೆ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ನಿರ್ದೇಶಕರು ಹಾಗೂ ಡೀನ್ ಡಾ.ಕಾರ್ಯಪ್ಪ ಅವರು ಮಾತನಾಡಿ ಶುಶ್ರೂಷಕರ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರು ಡಾ. ಮಂಜುನಾಥ್, ಶುಶ್ರೂಷಕ ಅಧೀಕ್ಷಕರಾದ ವೀಣಾ ಮತ್ತು ಆಡಳಿತಾಧಿಕಾರಿ ಲಿಲ್ಲಿ ಅವರು ಉಪಸ್ಥಿತರಿದ್ದರು.
ಶುಶ್ರೂಷಕರು ಜೀವರಕ್ಷಕರು ಎಂಬ ಮಾತು ಚಾಲ್ತಿಯಲ್ಲಿದ್ದರೂ ಅವರ ಸೇವೆ ಜನರಿಗೆ ನಿಜವಾಗಿ ಅರಿವಾಗಿದ್ದು, ಕೋವಿಡ್ ಎಂಬ ಮಹಾಮರಿಯ ಸಮಯದಲ್ಲಿ. ವಿಶ್ವವನ್ನು ತಲ್ಲಣಗೊಳಿಸಿದ್ದ ಕೋವಿಡ್ ನಿಯಂತ್ರಣದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಶುಶ್ರೂಷಕರ ಪಾತ್ರ ಬಹಳ ಹಿರಿಮೆಯದಾಗಿದೆ. ಆರೋಗ್ಯ ಕ್ಷೇತ್ರದಲ್ಲೂ ಸಹ ಶುಶ್ರೂಷಕರ ಪಾತ್ರ ಬಹಳ ಪ್ರಮುಖವಾಗಿದೆ. ಅವರ ಸಾಂತ್ವನದ ನುಡಿಗಳು ರೋಗಿಗಳ ಬದುಕಿನಲ್ಲಿ ಭರವಸೆಯನ್ನು ತರುತ್ತದೆ. ಯಾವುದೇ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲೂ, ಅತೀ ಒತ್ತಡದ ನಡುವೆಯೂ ತಮ್ಮ ಕಾರ್ಯವನ್ನು ತಾಳ್ಮೆಯಿಂದ ನಿರ್ವಹಿಸುತ್ತಾರೆ. ಇವರು ಉತ್ತಮ ಜ್ಞಾನಿ ಮತ್ತು ವೈವಿಧ್ಯಮಯ ಚಿಕಿತ್ಸಾ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ ಎಂದು ನಿರ್ದೇಶಕರಾದ ಡಾ.ಕಾರ್ಯಪ್ಪ ಅವರು ಹೇಳಿದರು.
ವಿಶ್ವವಿಖ್ಯಾತ ಹೆಸರಾದಂತಹ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೆಲ್ ಅವರ ಹುಟ್ಟಿದ ದಿನವನ್ನು ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆ ಸ್ಮರಿಸುವ ಸಲುವಾಗಿ ಮತ್ತು ದಿನನಿತ್ಯ ರೋಗಿಗಳ ಸೇವೆ ಮಾಡುತ್ತಾ ಅದರಲ್ಲಿ ಬದುಕನ್ನು ಕಟ್ಟಿಕೊಂಡಿರುವ ಶುಶ್ರೂಷಕರಿಗೊಂದು ದಿನವನ್ನು ಮೀಸಲಿಡುವ ಮೂಲಕ ಕೊಡಗು ಜಿಲ್ಲೆಯಾದ್ಯಂತ ಶುಶ್ರೂಷಕರ ದಿನಾಚರಣೆ ಆಚರಿಸಲಾಯಿತು.
ಶುಶ್ರೂಷಕ ಅಧೀಕ್ಷಕರಾದ ವೀಣಾ ಅವರು ದೀಪ ಬೆಳಗಿಸಿ ಶುಶ್ರೂಷ ಅಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಶುಶ್ರೂಷಕಿ ಮರಿಯಮ್ಮ ವರ್ಗಿಸ್‍ರವರು ಫ್ಲಾರೆನ್ಸ್ ನೈಟಿಂಗೆಲ್‍ರವರ ಬಗ್ಗೆ ಮತ್ತು ದಿನಾಚರಣೆ ಮಹತ್ವದ ಮಾಹಿತಿ ನೀಡಿದರು. ಗಿರಿಜಾಮಣಿ ಅವರು ಸ್ವಾಗತಿಸಿದರು. ವಿಶಾಲಾಕ್ಷಿ ಅವರು ನಿರೂಪಿಸಿದರು.
ಕೋವಿಡ್-19 ಮಹಾಮಾರಿಯ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬ ಶುಶ್ರೂಷಕರ ಸೇವೆ ಪರಿಗಣಿಸಿ ಅವರಿಗೆ ಬೆಸ್ಟ್ ನರ್ಸಿಂಗ್ ಆಫಿಸರ್ ಸರ್ಟಿಫಿಕೇಟ್ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network