Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಡ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲು ಕೊಡಗು ಜಿಲ್ಲಾಡಳಿತಕ್ಕೆ ಸಹಕಾರ ಭಾರತಿ ಒತ್ತಾಯ


ಬಡ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲು ಕೊಡಗು ಜಿಲ್ಲಾಡಳಿತಕ್ಕೆ ಸಹಕಾರ ಭಾರತಿ ಒತ್ತಾಯ

ಜಿಲ್ಲೆಯಲ್ಲಿ ಬಹಳಷ್ಟು ಕುಟುಂಬಗಳು ಬಿ.ಪಿ.ಎಲ್ ಕಾರ್ಡ್ ಹೊಂದಲು ಅರ್ಹರಾಗಿದ್ದರೂ, ಎ.ಪಿ.ಎಲ್ ಕಾರ್ಡ್‌ದಾರರಿಗೆ ಬಿ.ಪಿ.ಎಲ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಈಗಾಗಲೇ ಸ್ಥಗಿತಗೊಳಿಸಿರುವುದರಿಂದ ಬಹಳಷ್ಟು ಜನರಿಗೆ ತೊಂದರೆಯಾಗಿದೆ ಎಂದು ದೂರಿರುವ ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಎನ್.ಎ.ರವಿಬಸಪ್ಪ ಹಾಗೂ ಜಿಲ್ಲಾ ಪದಾಧಿಕಾರಿಗಳು, ಆದಷ್ಟು ಶೀಘ್ರ ಈ ಸಂಬಂಧ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಬಹಳಷ್ಟು ಕುಟುಂಬಗಳು ಬಿ.ಪಿ.ಎಲ್ ಕಾರ್ಡ್ ಹೊಂದಲು ಅರ್ಹರಾಗಿದ್ದರೂ, ಅವರುಗಳು ಎ.ಪಿ.ಎಲ್ ಕಾರ್ಡನ್ನು ಹೊಂದಿರುವುದರಿಂದ ಸರಕಾರದಿಂದ ಸಿಗುವ ಸವಲತ್ತಿನಿಂದ ವಂಚಿತರಾಗಿದ್ದಾರೆ.ಈ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಸಹಕಾರ ಭಾರತಿಗೆ ಬಂದಿದ್ದು ಈ ಬಗ್ಗೆ ಆದಷ್ಟು ಶೀಘ್ರ ಕ್ರಮ ಕೈಗೊಂಡು ಬಡ ಕುಟುಂಬಗಳಿಗೆ ಪ್ರಯೋಜನವಾಗುವಂತೆ ಮಾಡಬೇಕೆಂದು ಅವರುಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸೀಮೆಎಣ್ಣೆ ಒದಗಿಸಿ: ಕೊಡಗು ಜಿಲ್ಲೆಯು ವಿಭಿನ್ನ ಹವಾಮಾನ ಹೊಂದಿರುವ ಜಿಲ್ಲೆಯಾಗಿದ್ದು, ವರ್ಷದ 8 ತಿಂಗಳು ಮಳೆಯ ವಾತಾವರಣವಿರುವುದರಿಂದ ಇಲ್ಲಿಯ ಜನರ ಜೀವನ ದುಸ್ತರವಾಗಿರುತ್ತದೆ.ಕಳೆದ 3 ವರ್ಷದಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಇಲ್ಲಿಯ ಜನತೆಗೆ ಜೀವನ ಸಾಗಿಸಲು ಅಕ್ಕಿ ಸೇರಿದಂತೆ ಅವಶ್ಯಕ ವಸ್ತುಗಳ ಜೊತೆಗೆ ಸೀಮೆಎಣ್ಣೆಯ ಅಗತ್ಯವಿದೆ. ಆದರೆ ಸುಮಾರು 6 ತಿಂಗಳಿಂದ ಜಿಲ್ಲೆಗೆ ಸೀಮೆಎಣ್ಣೆ ಬಾರದೆ ಸಾರ್ವಜನಿಕರು‌ ತೊಂದರೆಯಲ್ಲಿದ್ದಾರೆ. ಅಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ಮಳೆಗಾಲ ಆರಂಭದ ಮುನ್ಸೂಚನೆಯಿದ್ದು, ವಿದ್ಯುತ್ ಕೂಡಾ‌ ಸಮರ್ಪಕವಾಗಿ ಸರಬರಾಜಾಗದಿರುವುದರಿಂದ ಸೀಮೆಎಣ್ಣೆಯನ್ನೇ ಅವಲಂಬಿಸಬೇಕಿದೆ ಎಂದು ರವಿ ಬಸಪ್ಪ, ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಉಮೇಶ್ ಉತ್ತಪ್ಪ, ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಕನ್ನಂಡ ಸಂಪತ್, ಸಾಮಾಜಿಕ ಜಾಲತಾಣ ಪ್ರಮುಖ ಚೇನಂಡ ಗಿರೀಶ್ ಪೂಣಚ್ಚ ಹಾಗೂ ಜಿಲ್ಲಾ ಸಮಿತಿ ಸದಸ್ಯ ದಿನೇಶ್ ಹಾಲೇರಿ ಅವರುಗಳು ಹೇಳಿದ್ದಾರೆ.

ಕಂಪೆನಿಯಲ್ಲಿ ಸೀಮೆಎಣ್ಣೆ ದಾಸ್ತಾನಿದ್ದರೂ, ಬೆಲೆ ಹೆಚ್ಚಾಗಿರುವುದರಿಂದ‌ ಜಿಲ್ಲೆಗೆ ಎಣ್ಣೆ ಸರಬರಾಜಾಗುತ್ತಿಲ್ಲ. ಸೀಮೆಎಣ್ಣೆ ಬೆಲೆಯನ್ನು ಜಿಲ್ಲಾಡಳಿತ ನಿಗದಿ ಮಾಡಿದರೆ ವಿತರಣೆದಾರರು ವಿತರಣೆಗೂ ಸಿದ್ಧರಿದ್ದಾರೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ದೂರಿದ್ದಾರೆ.

ಈ ಬಗ್ಗೆ ಬಹಳಷ್ಟು ಸಂಘಸಂಸ್ಥೆಗಳು, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಕ್ರಮವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಸಹಕಾರ ಭಾರತಿ ಪದಾಧಿಕಾರಿಗಳು, ಈ ಬಗ್ಗೆ ಉಸ್ತುವಾರಿ ಸಚಿವರಿಗೂ ಪತ್ರ ಬರೆಯಲಾಗುವುದು. ಅಲ್ಲದೆ 10 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಸಹಕಾರ ಭಾರತಿಯ ವತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.