Header Ads Widget

ಸರ್ಚ್ ಕೂರ್ಗ್ ಮೀಡಿಯ

ರಸಗೊಬ್ಬರ ಸರಬರಾಜು ಮತ್ತು ಮಾರಾಟಗಾರರ ಜೊತೆ ನಡೆದ ಸಭೆ


ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ: ಡಾ.ಬಿ.ಸಿ.ಸತೀಶ 

ಮಡಿಕೇರಿ ಮೇ.10: ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ರಸಗೊಬ್ಬರ ಸರಬರಾಜು ಮತ್ತು ಮಾರಾಟಗಾರರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.    

        ನಗರದ ಜಿ.ಪಂ.ಸಭಾಂಗಣದಲ್ಲಿ ರಸಗೊಬ್ಬರ ಸರಬರಾಜು ಮತ್ತು ಮಾರಾಟಗಾರರ ಜೊತೆ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

        ಪ್ರಸ್ತುತ ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು, ಮುಂಗಾರು ಹಂಗಾಮಿನಲ್ಲಿ ಬೇಡಿಕೆ, ಹಿಂದಿನ ವರ್ಷದ ಬೇಡಿಕೆ ಮತ್ತು ಪೂರೈಕೆ, ಪಿಒಎಸ್ ದಾಸ್ತಾನು ಮತ್ತು ಕಾಪು ದಾಸ್ತಾನು ಮತ್ತಿತರ ವಿಷಯಗಳ ಕುರಿತು ಸುದೀರ್ಘವಾಗಿ ಸಮಾಲೋಚನೆ ನಡೆಸಿದರು.  

        ದಾಸ್ತಾನು ಮಾಡಿಕೊಂಡ ರಸಗೊಬ್ಬರವನ್ನು ಕೃಷಿಕರಿಗೆ ಪೂರೈಸುವುದು. ಕೃಷಿಕರಿಗೆ ಯಾವುದೇ ರೀತಿ ವ್ಯತ್ಯಯವಾಗದಂತೆ ರಸಗೊಬ್ಬರ ಸರಬರಾಜು ಮಾಡುವುದು, ಮತ್ತಿತರ ಬಗ್ಗೆ ಗಮನಹರಿಸುವಂತೆ ರಸಗೊಬ್ಬರ ಸರಬರಾಜು ಮತ್ತು ಮಾರಾಟಗಾರರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.  

     ರಸಗೊಬ್ಬರ ಪೂರೈಸುವಲ್ಲಿ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು. ಗೊಂದಲಗಳಿಗೆ ಅವಕಾಶ ಮಾಡಬಾರದು. ರಸಗೊಬ್ಬರವನ್ನು ಕಾಲಮಿತಿಯಲ್ಲಿ ಸಮರ್ಪಕವಾಗಿ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.  

        ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷರಾದ ಮೋಹನ್ ದಾಸ್ ಅವರು ಪೂರ್ವ ಮುಂಗಾರು ಸಂದರ್ಭದಲ್ಲಿ ಡಿಎಪಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. 

        ರಸಗೊಬ್ಬರ ಮಾರಾಟಗಾರರಾದ ನಂದಕುಮಾರ್ ಅವರು ಕೊಡಗು ಜಿಲ್ಲೆಯಲ್ಲಿ 15 ದಿನದಲ್ಲಿ ಎಲ್ಲಾ ರೀತಿಯ ರಸಗೊಬ್ಬರಗಳು ಪೂರೈಕೆಯಾಗಲಿದೆ. ಪೊಟ್ಯಾಸ್, ಡಿಎಪಿ, ಕಾಂಪ್ಲೆಕ್ಸ್, ಯೂರಿಯಾ, ಎಂಒಪಿ ಹೀಗೆ ಹಲವು ರೀತಿಯ ರಸಗೊಬ್ಬರಗಳು ಪೂರೈಕೆಯಾಗಲಿವೆ. ಸದ್ಯ ಹಾಸನ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಲಾರಿ ಮೂಲಕ ರಸಗೊಬ್ಬರ ತರಿಸಿಕೊಳ್ಳಬೇಕಿದೆ. ಇದರಿಂದಾಗಿ ಎಂಆರ್‍ಪಿ ದರಕ್ಕಿಂತ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಲಿದೆ ಎಂದು ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. 

        ವಿಷ್ಣುಮೂರ್ತಿ ಅವರು ಸದ್ಯ ಕೊಡಗು ಜಿಲ್ಲೆಯಲ್ಲಿ ದಾಸ್ತಾನು ಇರುವ ರಸಗೊಬ್ಬರವನ್ನು ಮಾರಾಟ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು. 

        ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು 2021 ರ ಮುಂಗಾರು ಹಂಗಾಮಿನಲ್ಲಿ ಏಪ್ರಿಲ್ ತಿಂಗಳಲ್ಲಿ 12,107 ಟನ್ ಬೇಡಿಕೆಗೆ 6,540 ಟನ್ ಸರಬರಾಜು ಆಗಿತ್ತು,  ಮೇ ತಿಂಗಳಲ್ಲಿ 12,902 ಟನ್ ಬೇಡಿಕೆಗೆ 11,572 ಟನ್ ಸರಬರಾಜು ಆಗಿತ್ತು,  ಜೂನ್ ತಿಂಗಳಲ್ಲಿ 14,179 ಟನ್ ಬೇಡಿಕೆಗೆ 8,118 ಟನ್ ರಸಗೊಬ್ಬರ ಸರಬರಾಜು ಆಗಿತ್ತು. ಜುಲೈ ತಿಂಗಳಲ್ಲಿ 13,980 ಟನ್ ಬೇಡಿಕೆಗೆ 5,671 ಟನ್ ಸರಬರಾಜು ಆಗಿತ್ತು, ಆಗಸ್ಟ್ ತಿಂಗಳಲ್ಲಿ 13,739 ಟನ್ ಬೇಡಿಕೆಗೆ 7,266 ಟನ್ ರಸಗೊಬ್ಬರ ಸರಬರಾಜು ಆಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 13,581 ಟನ್ ಬೇಡಿಕೆಗೆ 350 ಟನ್ ಸರಬರಾಜು ಆಗಿತ್ತು, ಒಟ್ಟಾರೆ 1,20,007 ಟನ್ ಬೇಡಿಕೆಗೆ 39,519 ಟನ್ ರಸಗೊಬ್ಬರ ಪೂರೈಕೆಯಾಗಿತ್ತು ಎಂದು ಮಾಹಿತಿ ನೀಡಿದರು. 

        ಪ್ರಸಕ್ತ 2022-23 ನೇ ಸಾಲಿಗೆ ಏಪ್ರಿಲ್ ತಿಂಗಳಲ್ಲಿ 14,146 ಟನ್, ಮೇ ತಿಂಗಳಲ್ಲಿ 17,162 ಟನ್, ಜೂನ್ ತಿಂಗಳಲ್ಲಿ 12,516 ಟನ್, ಜುಲೈ ತಿಂಗಳಲ್ಲಿ 7,466 ಟನ್, ಆಗಸ್ಟ್ ತಿಂಗಳಲ್ಲಿ 13,349 ಟನ್, ಸೆಪ್ಟೆಂಬರ್ ತಿಂಗಳಲ್ಲಿ 16,472 ಟನ್ ಒಟ್ಟು 81,111 ಟನ್ ವಿವಿಧ ರಸಗೊಬ್ಬರಕ್ಕೆ (ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‍ಎಸ್‍ಪಿ) ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.         

        ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಾರಾಯಣ ರೆಡ್ಡಿ ರಸಗೊಬ್ಬರ ಸರಬರಾಜು ಮತ್ತು ಮಾರಾಟ ಬಗ್ಗೆ ಹಲವು ಮಾಹಿತಿ ನೀಡಿದರು. 

      ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ,  ನಬಾರ್ಡ್ ವ್ಯವಸ್ಥಾಪಕರಾದ ರಮೇಶ್ ಬಾಬು, ಡಿಡಿಪಿಐ ವೇದಮೂರ್ತಿ, ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಇತರರು ಇದ್ದರು.