ಬಯ್ಗುಳ ಸಾಹಿತ್ಯ ಲೋಕದ ರಾಜ – ಡಾ. ಸಿ. ಪಿ. ನಾಗರಾಜ
ಪ್ರಪಂಚದಲ್ಲಿ ಬಯ್ಗುಳ ಹೊಸದೇನಲ್ಲ. ಬಹು ಭಾಷೆಯ ಭಾರತದಲ್ಲಂತೂ ಬಯ್ಗುಳಗಳ ಬಹುದೊಡ್ಡ ಭಂಡಾರವೇ ಇದೆ. ಬಯ್ಗುಳ ಒಂದು ಜನಪದ ಕೂಡ ಹೌದು. ಸುಸಂಸ್ಕೃತರೆನಿಸಿಕೊಂಡವರಿಂದಾಗಿ ಜನಪದ ಬಯ್ಗುಳಗಳ ಪದಗಳು ಬಹಳಷ್ಟು ಮರೆಯಾಗಿವೆ. ಕೊಡವ ಭಾಷೆಯಲ್ಲಂತೂ ಶೇಕಡ ತೊಂಭತ್ತರಷ್ಟು ಮರೆಯಾಗಿ ಹೋಗಿದೆ.
ಅಂಜಪರವಂಡ ರಂಜು ಎಂಬುವವರು ಕೊಡವ ಭಾಷೆಯ ಒಂದಷ್ಟು ಬಯ್ಗುಳ ಭಂಡಾರವನ್ನು ಪೆಟ್ಟಿಗೆಯಲ್ಲಿ ಜೋಪಾನವಾಗಿಸುವ ಶ್ರಮವಹಿಸಿದ್ದಾರೆ. ಕೇವಲ ಒಂದು ವರ್ಷದ ಹಿಂದೆ ಬಯ್ಗುಳ ಬೇತಾಳದಂತೆ ನನ್ನ ಬೆನ್ನುಬಿದ್ದಿತ್ತು. ಬಯ್ಗುಳ ಎಂಬ ಜನಪದದ ಹಿಂದೆ ಯಾರೂ ಕೆಲಸ ಮಾಡಿಲ್ಲ, ಬಯ್ಗುಳ ಸಾಹಿತ್ಯದ ಬಗ್ಗೆ ಯಾರೂ ಗಮನ ಹರಿಸಿಲ್ಲ ಎಂದೇ ಭಾವಿಸಿದ್ದೆ. ಹಾಗಾಗಿ ಈ ಸಾಹಿತ್ಯದ ಬಗ್ಗೆ ಒಂದು ಕಾರ್ಯಕ್ರಮ ಮಾಡುವ ಹುಚ್ಚು ಆಲೋಚನೆಯೊಂದು ಮನಸ್ಸಿಗೆ ಬಂದಿತ್ತು.
ನಾನೂ ಬಯ್ಗುಳದ ಬೆನ್ನು ಹತ್ತಿದ ಪರಿಣಾಮ ಬಯ್ಗುಳದ ಬಗ್ಗೆ ಪಿ.ಹೆಚ್.ಡಿ. ಮಾಡಿದವರೊಬ್ಬರಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಅಲ್ಲದೆ ಅವರನ್ನು ಕೋವಿಡ್ ಸಮಯದಲ್ಲಿ ಬೇಟೆಯಾಡಿ, ಅಲ್ಲಾರಂಡ ರಂಗಚಾವಡಿ ಹಾಗು ಸಿರಿಗನ್ನಡ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ “ಬಯ್ಗುಳ ಹಬ್ಬ” ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಿದ್ದೆ. ಬಯ್ಗುಳದ ಬಗ್ಗೆ ಪಿ.ಹೆಚ್.ಡಿ. ಮಾಡಿದ ಸಿ. ಪಿ. ನಾಗರಾಜ ಹಾಗು ಕೊಡವ ಭಾಷೆಯ ಬಯ್ಗುಳ ಬಂಡಾರವನ್ನು ಕೆದಕಿದ ಅಂಜಪರವಂಡ ರಂಜು ಇವರುಗಳು ಬಯ್ಗುಳದ ಬಗ್ಗೆ ಮಾತಾಡಿದ್ದರು.
ಇದೀಗ ಸಿ. ಪಿ. ನಾಗರಾಜರ “ಕನ್ನಡ ಬಯ್ಗುಳ ಓದು” ಎಂಬ 266 ಪುಟಗಳ ಪುಸ್ತಕವನ್ನು ಬೆಂಗಳೂರಿನ “ನಾಗು ಪ್ರಕಾಶನ”ದವರು ಪ್ರಕಟಿಸಿದ್ದಾರೆ. ಬಯ್ಗುಳಗಳ ಸಂಗ್ರಹಕ್ಕಾಗಿ ಅವರು ಪಟ್ಟಿರುವ ಶ್ರಮವನ್ನು ಅವರ ಅಕ್ಷರಗಳೇ ಸಾಕ್ಷಿ ನುಡಿಯುತ್ತವೆ.
ಬಯ್ಗುಳವನ್ನು ಬಳಸುವ ಸಂದರ್ಭದಲ್ಲಿ ಮನುಷ್ಯನ ಮಾನಸಿಕ ಸ್ಥಿತಿ ಗತಿಯ ಬಗ್ಗೆ ನಾಗರಾಜರವರು ಅಧ್ಯಯನ ಮಾಡಿದ್ದಾರೆ. ಬಯ್ಗುಳ ಕೂಡ ಒಂದು ಗಾದೆ ಮಾತಿನಂತೆ ಇರುವುದನ್ನು ಗಮನಿಸಿ ಅದರ ಅರ್ಥವನ್ನು ಗ್ರಹಿಸಿದ್ದಾರೆ. ಯಾವ ಬಯ್ಗುಳ ಯಾವ ಸಂದರ್ಭದಲ್ಲಿ ಯಾರು ಬಳಸುತ್ತಾರೆ ಎಂಬುದನ್ನು ತಿಳಿಸಿಕೊಡುವ ಪುಸ್ತಕ “ಕನ್ನಡ ಬಯ್ಗುಳ ಓದು”
ಓದಿಗೆ ಮುನ್ನುಡಿ ಬರೆದಿರುವ ಬೆಂಗಳೂರಿನ ಕೆ. ವಿ. ನಾರಾಯಣ್ ಇವರಂತೂ ಓದನ್ನು ಆಳವಾಗಿ ಗ್ರಹಿಸಿ ಬಯ್ಗುಳ ಅದೊಂದು “ನುಡಿಗೆಲಸ – ಸ್ಪೀಚ್ ಆಕ್ಟ್” ಎಂಬುದಾಗಿ ವಿಶ್ಲೇಷಿಸಿದ್ದಾರೆ.
ನಾಗರಾಜರವರು ಈ “ನುಡಿಗೆಲಸ” ಅಧ್ಯಯನವನ್ನು ಅದೆಷ್ಟು ಗಂಭೀರವಾಗಿ ಅಧ್ಯಯಿಸಿದ್ದಾರೆ ಎಂದು ಹೇಳುವುದಾದರೆ, ನುಡಿಗೆಲಸದ ಸಂದರ್ಭದಲ್ಲಿ ಅವರುಗಳ ಮುಖಚರ್ಯೆ, ಆಂಗಿಕ ಕ್ರಿಯೆ ಇತ್ಯಾದಿ ಇತ್ಯಾದಿಗಳನ್ನು ಆಳವಾಗಿ ಅಭ್ಯಾಸ ಮಾಡಿ ಓದಿನಲ್ಲಿ ದಾಖಲಿಸಿದ್ದಾರೆ.
ಬಯ್ಗುಳ ಎಂಬ ಜನಪದವನ್ನು ಜನರ ನಡುವಿನಿಂದಲೇ ಹೆಕ್ಕಿರುವ ನಾಗರಾಜರು, ಆ ಪದಗಳ ಒಳಗಿರುವ ಸೊಗಡು, ಬಳಸುವ ಸಮಯ, ಬುದ್ಧಿವಂತಿಕೆ, ಶಿಕ್ಷಣದ ಹಾಗು ಜ್ಞಾನ (ನೆನಪಿನ ಶಕ್ತಿ) ಇತ್ಯಾದಿಗಳನ್ನು ಈ ಜನಪದ ಶಬ್ದಗಳ ಮೂಲಕ ತಿಳಿಹೇಳುವ ಪ್ರಯತ್ನವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕಾಳಮುದ್ದನದೊಡ್ಡಿಯ ಭಾರತಿ ಕಾಲೇಜು ಸೇರಿದಂತೆ ಕೆಲವು ಕಾಲೇಜುಗಳಲ್ಲಿ 1971 ರಿಂದ 2021 ರವರೆಗೆ ಕನ್ನಡ ಅಧ್ಯಾಪಕರಾಗಿದ್ದ ನಾಗರಾಜರವರು, ತಮ್ಮ ನಿವೃತ್ತ ಜೀವನದಲ್ಲೂ ಕಾರ್ಯಶೀಲರಾಗಿರುವುದು, ಈ ಪುಸ್ತಕ ಹಾಗು ಅವರು ಆನ್‌ಲೈನ್‌ನಲ್ಲಿ ನಡೆಸಿಕೊಡುತ್ತಿರುವ “ವಚನಗಳ ಓದು” ವ್ಯಾಖ್ಯಾನ ಸಾಕ್ಷಿಯಾಗಿದೆ.
ಜಾನಪದ ಮತ್ತು ಭಾಷಾ ವಿಜ್ಞಾನದ ಶಿಸ್ತಿಗೆ ಒಳಪಟ್ಟಿರುವ “ಕನ್ನಡ ಬಯ್ಗುಳ ಓದು” ಪುಸ್ತಕಕಿಂತ ಮೊದಲು, ಕನ್ನಡದಲ್ಲಿ ಬಯ್ಗುಳಕ್ಕೆ ಸಂಬಂಧಿಸಿದಂತೆ ಮೃತ್ಯುಂಜಯ ಹೊರಕೇರಿಯವರ “ಉತ್ತರ ಕರ್ನಾಟಕದ ಬಯ್ಗುಳಗಳು”, ಎಂ. ಎಂ. ಕಲಬುರ್ಗಿಯವರ “ಸಮಗಾರ ದೇವರಿಗೆ ಮಚ್ಚಿಪೆಟ್ಟು”, ಪಿ. ಕೆ. ಕೃಷ್ಣಭಟ್ಟರ “ಬೈಗುಳ – ಒಂದು ಅಧ್ಯಯನ”, ಹರಿಕೃಷ್ನಭಟ್ಟರ “ದಕ್ಷಿಣ ಕನ್ನಡ ಹವ್ಯಕರ ಬೈಗುಳಗಳು”, ಕಾವ್ಯಜೀವಿಯವರ “ಜನಪದ ಬೈಗುಳ – ಒಂದು ಅಧ್ಯಯನ”, ಬಸವರಾಜ ನೆಲ್ಲಿಸರ ಇವರ “ಗ್ರಾಮ ಜೀವನದಲ್ಲಿ ಬಯ್ಗುಳ”, ಎಂ. ಚಿದಾನಂದ ಮೂರ್ತಿಯವರ “ಶಬ್ದಕೋಶ ಪ್ರಪಂಚದ ಅಗ್ನಿಕುಂಡ ಬೈಗುಳಗಳು”, ಮೃತ್ಯುಂಜಯ ಹೊರಕೇರಿಯವರ “ಬೈಗುಳ – ಜನಪದ ಸಾಹಿತ್ಯದ ಒಂದು ಪ್ರಕಾರ”, ತಪಸ್ವಿಕುಮಾರರ “ಗ್ರಾಮ್ಯ ಬಯ್ಗುಳ ಬನಿ” ಇತ್ಯಾದಿ ಕೆಲವು ಬಯ್ಗುಳಕೆ ಸಂಬಂಧಿಸಿದಂತೆ ಕೆಲವಾರು ಬರಹ ಸಂಗ್ರಹ ಲೇಖನಗಳು ಪ್ರಕಟಗೊಂಡಿದ್ದರೂ, ಸಿ. ಪಿ. ನಾಗರಾಜರು ಬಯ್ಗುಳದ ಬಗ್ಗೆಯೇ ಪಿ.ಹೆಚ್.ಡಿ. ಮಾಡಿರುವುದರಿಂದ “ಕನ್ನಡ ಬಯ್ಗುಳ ಓದು” ಪುಸ್ತಕ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುವಲ್ಲಿ ಸಂಶಯವಿಲ್ಲ.
ಅರೋಪದ, ಶಾಪರೂಪದ ಮತ್ತು ಕಾಮದ ನಂಟಿನ ಬಯ್ಗುಳಗಳ ಬಳಕೆ, ಅದರ ಬಗೆಗಳು ಮತ್ತು ಸಂದರ್ಭ, ಗಾದೆ ಮಾತಿನಂತಿರುವ ಆ ಜನಪದ ಭಾಷೆಗಳ ಅರ್ಥವನ್ನು ಲೇಖಕರು ವಿವರಿಸುವ ಪ್ರಯತ್ನಮಾಡಿದ್ದಾರೆ. ಕರ್ನಾಟಕದ ಸೀಮಿತ ಸ್ಥಳಗಳಲ್ಲಿ ಮಾತ್ರ ಸಂಶೋಧನೆ ನಡೆಸಿರುವುದು ಓದುಗರಿಗೆ ಮನವರಿಕೆಯಾಗುತ್ತದೆ. ಆದರೆ ನಾವ್ಯಾಕೆ ಬಯ್ಯುತ್ತೇವೆ? ಬಯ್ಯುವಿಕೆ ಹಾಗು ಮೆದುಳಿನ ನರಮಂಡಲ, ಮಾನಸಿಕ ಬೆಳವಣಿಗೆ, ಸಮಾಜದ ರಚನೆ ಮತ್ತು ಸಂಸ್ಕೃತಿ ಆಚರಣೆಗಳು, ಜಾತಿ ಮತ್ತು ವರ್ಗ, ಗಂಡಸು ಮತ್ತು ಹೆಂಗಸು, ಬಯ್ಯುವಿಕೆಯಲ್ಲಿ ದೇಹದ ಚಹರೆಗಳು, ಬೈಗುಳದ ಬಗೆಗಿನ ಸಾಮಾಜಿಕ ನಿಲುವು ಮತ್ತು ನಂಬಿಕೆ ಇತ್ಯಾದಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದು ಪುಸ್ತಕದ ಪ್ರತೀ ಅಕ್ಷರಗಳು ತಿಳಿಸುತ್ತದೆ.
ಕನ್ನಡ ಭಾಷೆಯು “ಬಯ್ಗುಳ ಸಾಹಿತ್ಯ ಲೋಕ”ಕ್ಕೆ ಮಾತ್ರವಲ್ಲ, ಜನಪದ ಮತ್ತು ಭಾಷಾ ವಿಜ್ಞಾನಕ್ಕೂ ಸಿ. ಪಿ. ನಾಗರಾಜರು “ಕನ್ನಡ ಬಯ್ಗುಳ ಓದು” ಅಧ್ಯಯನ ಕೃತಿ ರಚನೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.
ಬಯ್ಗುಳ nothing but ಪ್ರತಿಭಟನೆ ಅಥವ ಧಿಕ್ಕಾರ ಕೂಗುವಿಕೆ. ನಾವ್ಯಾಕೆ ಬಯ್ಯುತ್ತೀವಿ?
1. ಮನದಲ್ಲಿ ಮೂಡುವ ಹತಾಶೆ, ಕೋಪ, ಸಂಕಟ, ನೋವು, ಅಸೂಯೆ, ಹೊಟ್ಟೆಕಿಚ್ಚಿನ ಭಾವನೆಗಳನ್ನು ಹೊರಹಾಕುವುದಕ್ಕಾಗಿ ಬಯ್ಯುತ್ತೇವೆ.
2. ಇತರರ ವರ್ತನೆಗಳನ್ನು ನಮ್ಮ ಇಚ್ಛೆಗೆ ತಕ್ಕಂತೆ ಹತೋಟಿಯಲ್ಲಿಡುವುದಕ್ಕಾಗಿ ಬಯ್ಯುತ್ತೇವೆ.
3. ಇತರರಿಂದ ಅಡಚಣೆ ಇಲ್ಲವೇ ಹಾನಿಯುಂಟಾಗದಂತೆ ತಡೆಯುವುದಕ್ಕಾಗಿ ಬಯ್ಯುತ್ತೇವೆ.
4. ಇತರರ ಜೊತೆ ಹೊಂದಿರುವ ಒಲವು ನಲಿವನ್ನು ತೋರಿಸುವುದಕ್ಕಾಗಿ ಬಯ್ಯುತ್ತೇವೆ.
5. ಇತರರ ಆಕ್ರಮಣ ಇಲ್ಲವೇ ಹಲ್ಲೆಯಿಂದ ಪಾರಾಗುವುದಕ್ಕಾಗಿ ಬಯ್ಯುತ್ತೇವೆ.
6. ಎದುರಾಳಿಯನ್ನು ಕೀಳಾಗಿ ಕಾಣುವುದು ಇಲ್ಲವೇ ಅಪಮಾನಗೊಳಿಸುವುದಕ್ಕಾಗಿ ಬಯ್ಯುತ್ತೇವೆ.
7. ಕಣ್ಣ ಮುಂದಿನ ಸಮಾಜದಲ್ಲಿ ನಡೆಯುತ್ತಿರುವ ಆಚರಣೆಗಳನ್ನು ಮತ್ತು ಜನ ಸಮುದಾಯದ ನಡೆನುಡಿಗಳನ್ನು ಒರೆಹಚ್ಚಿ ನೋಡುವಾಗ ಬಯ್ಯುತ್ತೇವೆ.
8. ನಮ್ಮ ನಡೆ ನುಡಿಯಲ್ಲಿನ ತಪ್ಪುಗಳಿಂದಾಗಿ ಕಷ್ಟ ನಷ್ಟಗಳಿಗೆ ಒಳಗಾದಾಗ ನಮ್ಮನ್ನು ನಾವೇ ಬಯ್ದುಕೊಳ್ಳುತ್ತೇವೆ.
9. ಇತರರ ನಡೆ ನುಡಿಯಲ್ಲಿನ ತಪ್ಪುಗಳನ್ನು ತಿದ್ದಿ ಸರಿಪಡಿಸುವುದಕ್ಕಾಗಿ ಬಯ್ಯುತ್ತೇವೆ.
ಒಟ್ಟಿನಲ್ಲಿ ಬೇಕೆಂಬುದನ್ನು ಪಡೆದುಕೊಳ್ಳುವ ಮಗುವಿನ ಕೂಗು, ಆಕ್ರೋಷದ ಪದಗಳ ಬಯ್ಗುಳ, ಅಸಂಸ್ಕೃತವಲ್ಲ ಅದು ಒಂದು ಜನಪದ ಎಂಬುದನ್ನು ನಾಗರಾಜರು ಗಟ್ಟಿಯಾಗಿಯೇ ದಾಖಲಿಸಿದ್ದಾರೆ.
ಪುಸ್ತಕಕ್ಕಾಗಿ ಸಂಪರ್ಕಿಸಿ : ಸಿ. ಪಿ. ನಾಗರಾಜ, ಮೊ: 9986347521
✍️.... ಅಲ್ಲಾರಂಡ ವಿಠಲ ನಂಜಪ್ಪ
ಸಂಪರ್ಕಿಸಿ: 9448312310
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network