ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಪ್ರಯುಕ್ತ ಜಾಥ
ಮಡಿಕೇರಿ: ರಾಷ್ಟ್ರೀಯ ಡೆಂಗ್ಯು ದಿನಾಚರಣೆಯ ಅಂಗವಾಗಿ ಡೆಂಗ್ಯೂ ಜ್ವರದ ಮುಂಜಾಗ್ರತಾ ಕ್ರಮಗಳ ಬಗ್ಗೆ “ಡೆಂಗೀ ತಡೆಗಟ್ಟಬಹುದು: ಬನ್ನಿ ಎಲ್ಲರೂ ಕೈಜೋಡಿಸೋಣ” ಎಂಬ ಧ್ಯೇಯ ವಾಕ್ಯದೊಂದಿಗೆ” ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಜಾಥಗೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಚಾಲನೆ ನೀಡಿದರು.
ಜಾಥವು ನಗರದ ಬಾಲಭವನದಿಂದ ಪ್ರಾರಂಭವಾಗಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತದವರೆಗೆ ನಡೆಯಿತು. ಜಾಥದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಕರಪತ್ರ, ಭಿತ್ತಿಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಇತರರು ಇದ್ದರು.
ಮತ್ತಷ್ಟು ಮಾಹಿತಿ: ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಡೆಂಗೀ ಜ್ವರವು ಹೆಚ್ಚಾಗಿ ಹರಡುವ ಸಂಭವವಿರುವುದರಿಂದ, ಪೂರ್ವಭಾವಿ ಕ್ರಮವಾಗಿ ಆರೋಗ್ಯ ಇಲಾಖೆಯೊಂದಿಗೆ ಇತರ ವಲಯಗಳ/ಇಲಾಖೆಗಳ ಮತ್ತು ಸಮುದಾಯದ ಸಹಕಾರವನ್ನು ಪಡೆಯುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಡೆಂಗೀ ತಡೆಗಟ್ಟಬಹುದು: ಬನ್ನಿ ಎಲ್ಲರೂ ಕೈ ಜೋಡಿಸೋಣ” ಎಂಬ ಘೋಷ ವಾಕ್ಯದೊಂದಿಗೆ, ರಾಷ್ಟ್ರೀಯ ಡೆಂಗೀ ದಿನ” ಆಚರಿಸಲಾಯಿತು.
ಡೆಂಗೀ ಜ್ವರದ ವಸ್ತುಸ್ಥಿತಿ. ಡೆಂಗಿ ಮತ್ತು ಚಿಕುಂಗುನ್ಯ ರೋಗಗಳು;-ಡೆಂಗಿ ಮತ್ತು ಚಿಕುಂಗುನ್ಯ ರೋಗಗಳು ವೈರಾಣುವಿನಿಂದ ಬರುವ ಖಾಯಿಲೆಗಳು. ಇವು ಈಡೀಸ್ ಈಜಿಪ್ಟೈ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಡೆಂಗೀ ಜ್ವರವು ಒಂದು ಮಾರಕವಾದ ಖಾಯಿಲೆ, ಆದರೆ ಚಿಕುಂಗುನ್ಯ ಮಾರಣಾಂತಿಕವಲ್ಲ. ಡೆಂಗಿ ರೋಗದಲ್ಲಿ ಮೂರು ಸ್ವರೂಪಗಳಿವೆ. ಡೆಂಗಿ ಜ್ವರ(ಸಾಮಾನ್ಯ), ಡೆಂಗಿ ರಕ್ತಸ್ರಾವ ಜ್ವರ (ಡಿಹೆಚ್‍ಎಫ್), ಡೆಂಗಿ ಆಘಾತಕರ ಸ್ವರೂಪ (ಡಿ.ಎಸ್.ಎಸ್).ಡೆಂಗಿ ಜ್ವರ: ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು.
ಡೆಂಗಿ ರಕ್ತಸ್ರಾವ ಜ್ವರ: ಮೇಲೆ ಹೇಳಿದ ಲಕ್ಷಣಗಳ ಜೊತೆಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು, ಕಪ್ಪು ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿಕೊಂಡ ಚರ್ಮ, ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದು. ಜ್ವರ ಬಂದ 3-5 ದಿನಗಳಲ್ಲಿ ಮೂಗು ಮತ್ತು ವಸಡಿನಲ್ಲಿ ರಕ್ತಸ್ರಾವದ ಚಿನ್ಹೆಗಳು ಕಂಡು ಬರುತ್ತದೆ. 5-6 ದಿನಗಳ ನಂತರವೂ ಜ್ವರ ಮುಂದುವರೆದಲ್ಲಿ ಮಧ್ಯದಲ್ಲಿ ಸ್ವಲ್ಪ ಕಡಿಮೆಯಾಗಿ ಮತ್ತೆ ಹೆಚ್ಚಾಗುತ್ತದೆ.
ಚಿಕುಂಗುನ್ಯ ರೋಗದ ಲಕ್ಷಣಗಳು: ಇದ್ದಕ್ಕಿದ್ದಂತೆ ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಉಂಟಾಗುವುದು. ಚಿಕಿತ್ಸೆ: ಡೆಂಗಿ ಮತ್ತು ಚಿಕುನ್‍ಗುನ್ಯಾ ರೋಗಗಳಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿದಲ್ಲಿ ಡೆಂಗಿ ರೋಗದ ಲಕ್ಷಣಗಳನ್ನು ಪರಿಹರಿಸಿ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದು. ಡೆಂಗಿ ಜ್ವರದಲ್ಲಿ ಆಸ್ಪಿರಿನ್ ಮತ್ತು ಬ್ರೂಫಿನ್ ಮುಂತಾದ ಔಷಧಿಗಳನ್ನು ಕೊಡಬಾರದು. ಇವು ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ವೈದ್ಯರ ಸಲಹೆ ಮೇರೆಗೆ “ಪ್ಯಾರಸಿಟಮಾಲ್”ಕೊಡಬಹುದು. ಡೆಂಗಿ ರಕ್ತಸ್ರಾವ ಜ್ವರದ ಲಕ್ಷಣಗಳು ಒಂದಕ್ಕಿಂತ ಹೆಚ್ಚು ಕಂಡು ಬಂದಲ್ಲಿ ರೋಗಿಯನ್ನು ತುರ್ತಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಬೇಕು.
ಸೊಳ್ಳೆಗಳ ಉತ್ಪತ್ತಿ ತಾಣಗಳು: ಈ ಸೊಳ್ಳೆಗಳು ಹಗಲು ಹೊತ್ತು ಕಚ್ಚುತ್ತದೆ. ಡ್ರಮ್, ಬ್ಯಾರೆಲ್, ನೀರಿನ ತೊಟ್ಟಿ, ಏರ್ ಕೂಲರ್, ಅನುಪಯುಕ್ತ ಟೈರ್, ಒಡೆದ ಮಡಕೆ, ತೆಂಗಿನ ಚಿಪ್ಪು, ತಾರಸಿ ಮನೆಗಳ ಮೇಲ್ಚಾವಣಿ, ಘನತ್ಯಾಜ್ಯ ವಸ್ತುಗಳು, ಅಡಿಕೆ ತೋಟಗಳಲ್ಲಿ ಬಿದ್ದಿರುವ ಹಾಳೆಗಳು, ರಬ್ಬರ ತೋಟಗಳಲ್ಲಿ ರಬ್ಬರ ಸಂಗ್ರಹಿಸುವ ಕಫ್, ಹೂವಿನ ಕುಂಡ, ಇತ್ಯಾದಿಗಳಲ್ಲಿ ನೀರು ನಿಂತು ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ.
ಡೆಂಗಿ ಮತ್ತು ಚಿಕುಂಗುನ್ಯ ರೋಗಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ:-ಮನೆ ಪರಿಸರ, ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿಯೂ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಸೊಳ್ಳೆಗಳು ಪ್ರವೇಶಿಸದಂತೆ ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸುವುದು. ಹೊರಾಂಗಣದಲ್ಲಿ ಮಲಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಹಾಗೂ ವಿಶ್ರಾಂತಿ ಪಡೆಯುವಾಗ ಮತ್ತು ಮಲಗುವಾಗ ವಿಶೇಷವಾಗಿ ಗರ್ಭಿಣಿಯರು/ ವಯಸ್ಕರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು. ನೀರಿನ ತೊಟ್ಟಿ/ಟ್ಯಾಂಕ್‍ನ್ನು ಕನಿಷ್ಟ ಪಕ್ಷ ವಾರಕ್ಕೊಮ್ಮೆಯಾದರೂ ಪೂರ್ತಿ ಖಾಲಿ ಮಾಡಿ ತಿಕ್ಕಿ ತೀಡಿ ತೊಳೆಯುವುದು. ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್, ಎಳೆ ನೀರಿನಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು. ಸಾಧ್ಯವಾದಷ್ಟು ಮೈ ಮುಚ್ಚುವಂತೆ ಬಟ್ಟೆಯನ್ನು ಧರಿಸುವುದು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು. ಸೊಳ್ಳೆ ಕಚ್ಚದಂತೆ ಎಲ್ಲಾ ರೀತಿಯ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network