ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ
ಮಡಿಕೇರಿ ಮೇ.27: ರಿವರ್ ರ್ಯಾಪ್ಟಿಂಗ್ ನಡೆಸುವಲ್ಲಿ ಹೊಸದಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಸ್ಥಳ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಂತಳ್ಳಿ ಹೋಬಳಿ ಕುಮಾರಹಳ್ಳಿ ಗ್ರಾಮದ ಕುಮಾರಧಾರ ನದಿಯಲ್ಲಿ ಮತ್ತು ಕುಶಾಲನಗರ ತಾಲ್ಲೂಕಿನ ಕಾವೇರಿ ನದಿಯ ತೆಪ್ಪದಕಂಡಿಯಲ್ಲಿ ಹೊಸದಾಗಿ ರಿವರ್ ರ್ಯಾಪ್ಟ್ ನಡೆಸಲು ಅರ್ಜಿ ಸಲ್ಲಿಕೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಯತೀಶ್ ಉಳ್ಳಾಲ್ ಮಾಹಿತಿ ನೀಡಿದರು.
ದುಬಾರೆ ಮತ್ತು ಬರ್ಪುಹೊಳೆಯಲ್ಲಿ ರಿವರ್ ರ್ಯಾಪ್ಟಿಂಗ್ ಪರವಾನಿಗೆ ನವೀಕರಿಸುವ ಸಂಬಂಧ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ನವೀಕರಣ ಮಾಡಲು ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ದುಬಾರೆಯಲ್ಲಿ 13 ಮತ್ತು ಬರ್ಪುಹೊಳೆಯಲ್ಲಿ 03 ರಿವರ್ ರ್ಯಾಪ್ಟಿಂಗ್ ಪರವಾನಿಗೆ ನವೀಕರಿಸಲು ಒಟ್ಟು 16 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ಪರಿಶೀಲಿಸಿ ಪರವಾನಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಿವರ್ ರ್ಯಾಪ್ಟಿಂಗ್ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರವಾಸಿಗರಿಗೆ ಯಾವುದೇ ಕಿರಿಕಿರಿ ಉಂಟಾಗದಂತೆ ರಿವರ್ ರ್ಯಾಪ್ಟ್ ಮಾಲೀಕರು ಮತ್ತು ಆಪರೇಟರ್‍ಗಳು ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಬೋಟ್‍ಗಳಲ್ಲಿ ಈಗಾಗಲೇ ನೀಡಲಾಗಿರುವ ಪ್ರಮಾಣ ಪತ್ರದ ಸಂಖ್ಯೆಯನ್ನು ನಮೂದಿಸಬೇಕು. ರಿವರ್ ರ್ಯಾಪ್ಟ್ ಗೈಡ್‍ಗಳು ಸಮವಸ್ತ್ರ ಮತ್ತು ಹೆಲ್ಮೆಟ್ ಬಳಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಪ್ರವಾಸಿಗರ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಈ ಸಂಬಂಧ ವಾರದ ದಿನಗಳಲ್ಲಿ ಮತ್ತು ವಾರಾಂತ್ಯದಲ್ಲಿ ಅಗತ್ಯ ಮಾರ್ಗದರ್ಶಕರನ್ನು ನಿಯೋಜಿಸುವಂತೆ ಸಂಬಂಧಪಟ್ಟ ಪಿಡಿಒಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿ ಬೋಟ್‍ಗಳನ್ನು ನಡೆಸುವವರಿಗೆ ಪ್ರಮಾಣ ಪತ್ರ ಇರಬೇಕು. ರಿವರ್ ರ್ಯಾಪ್ಟ್ ಮಾಡುವಾಗ ಪ್ರತಿಯೊಬ್ಬರೂ ಸುರಕ್ಷತಾ ಕವಚ(ಲೈಪ್ ಜಾಕೇಟ್) ಬಳಸಬೇಕು. ರಿವರ್ ರ್ಯಾಪ್ಟ್ ಗೈಡ್‍ಗಳಿಗೆ ಹೆಲ್ಮೇಟ್ ಇರಬೇಕು ಎಂದು ತಿಳಿಸಿದರು.
ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿಯಿಂದ ರಿವರ್ ರ್ಯಾಪ್ಟಿಂಗ್ ನಡೆಸುವವರಿಗೆ ಗುರುತಿನ ಚೀಟಿ ನೀಡಲಾಗುವುದು. ಫಿಟ್ನೆಸ್ ಪ್ರಮಾಣ ಪತ್ರದಲ್ಲಿ ಆಪರೇಟರ್ ಅವರ ಫೋಟೋ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ರಿವರ್ ರ್ಯಾಪ್ಟ್‍ಗಳ ಫಿಟ್‍ನೆಸ್ ಪ್ರಮಾಣ ಪತ್ರವನ್ನು ಈ ಹಿಂದಿನಂತೆಯೇ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂಬಂಧ ಬಂದರು ಮತ್ತು ಒಳನಾಡು ಇಲಾಖೆಯ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ನಿರಂಜನ ಅವರು ಕರ್ನಾಟಕ ಇನ್‍ಲ್ಯಾಂಡ್ ವೆಸಲ್(ವಿಇಎಸ್‍ಎಸ್‍ಇಎಲ್) ಕಾಯ್ದೆ ಪ್ರಕಾರ ಫಿಟ್‍ನೆಸ್ ಪ್ರಮಾಣ ಪತ್ರವನ್ನು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಪಡೆಯಬೇಕಿದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಸಲಹೆ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಈ ಬಗ್ಗೆ ಮಾಹಿತಿ ನೀಡಿ ಬೋಟ್‍ಗಳ ಫಿಟ್‍ನೆಸ್ ಪ್ರಮಾಣ ಪತ್ರವನ್ನು ತರಲು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಹೋಗಲು ಕಷ್ಟಸಾಧ್ಯವಾಗಿದೆ. ಆದ್ದರಿಂದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಈ ಹಿಂದಿನಂತೆಯೇ ಕೊಡಿಸುವಂತಾಗಬೇಕು ಎಂದು ಸದಸ್ಯರಾದ ರತೀಶ್ ಮತ್ತು ವಸಂತ ಅವರು ಕೋರಿದರು.
ಬರಪೊಳೆಯ ರಿವರ್ ರ್ಯಾಪ್ಟ್ ಆಪರೇಟರ್ ಆದ ರತನ್ ಅವರು ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿಗೆ ಆಹ್ವಾನಿತ ಸದಸ್ಯರನ್ನಾಗಿ ಬರಪೊಳೆಯವರಿಗೆ ಅವಕಾಶ ಮಾಡಬೇಕು ಎಂದು ಕೋರಿದರು. ಕೊಡಗು ಜಿಲ್ಲೆಯಲ್ಲಿಯೇ ಬೋಟ್‍ಗಳ ಫಿಟ್‍ನೆಸ್ ಪ್ರಮಾಣ ಪತ್ರ ನೀಡುವಂತಾಗಬೇಕು ಎಂದು ಕೋರಿದರು.
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಲಹೆಗಾರರಾದ ಎಂ.ಆರ್.ಮಂಜುನಾಥ್ ಅವರು ಬೋಟ್‍ಗಳ ಫಿಟ್‍ನೆಸ್ ಪ್ರಮಾಣ ಪತ್ರ ನೀಡುವ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದರು.
ರಿವರ್ ಬೋಟ್‍ಗಳ ಫಿಟ್ನೆಸ್ ಸಂಬಂಧ ಪರಿಶೀಲನೆಯನ್ನು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಪರಿಶೀಲಿಸಲಿದೆ. ಬಳಿಕ ರ್ಯಾಂಡಮ್ ಆಗಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಪರಿಶೀಲಿಸಲಿದೆ. ನವೀಕರಣ ಸಂದರ್ಭದಲ್ಲಿ ರಿವರ್ ಗೈಡ್‍ಗಳು ಮತ್ತು ಆಪರೇಟರ್‍ಗಳ ಅರ್ಹತೆ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಒಂದು ತಿಂಗಳಲ್ಲಿ ರಿವರ್ ರ್ಯಾಪ್ಟ್‍ಗಳನ್ನು ಪರಿಶೀಲಿಸಲಾಗುವುದು. ಗುಣಮಟ್ಟದ ಲೈಪ್ ಜಾಕೇಟ್‍ಗಳನ್ನು ಬಳಸಬೇಕು ಎಂದರು.
ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಗ್ರಾ.ಪಂ.ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಪೊಲೀಸರ ಸಹಕಾರ ಪಡೆಯಬೇಕು. ಇಲ್ಲದಿದ್ದಲ್ಲಿ ಸಮಿತಿ ವಹಿಸಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು. ದುಬಾರೆಯಲ್ಲಿ ಗೈಡ್/ರ್ಯಾಪ್ಟ್‍ದಾರರೊಂದಿಗೆ ಸಮಾಲೋಚನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‍ಗೆ ಸಲಹೆ ಮಾಡಿದರು.
ತೂಗುಸೇತುವೆ ನಿರ್ಮಾಣವನ್ನು ಅರಣ್ಯ ಇಲಾಖೆಯಿಂದಲೇ ಕೈಗೆತ್ತಿಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ಗೆ ಸಲಹೆ ಮಾಡಿದರು.
ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲಸ್ತುವಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಯತೀಶ್ ಉಳ್ಳಾಲ್ ಅವರು ದುಬಾರೆಯಲ್ಲಿ 64 ರ್ಯಾಪ್ಟ್‍ಗಳು ಕಾರ್ಯನಿರ್ವಹಿಸುತ್ತಿವೆ. ನವೀಕರಣಕ್ಕಾಗಿ 16 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ಮಾಹಿತಿ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ ಅವರು ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣ ಸಂಬಂಧ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿದೆ ಎಂದು ತಿಳಿಸಿದರು.
ಅಗ್ನಿಶಾಮಕ ಇಲಾಖೆ ಅಧಿಕಾರಿ ಪಿ.ಚಂದನ್, ಡಿವೈಎಸ್‍ಪಿ ಶೈಲೇಂದ್ರ ಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್ ಮಹೇಶ್ ಅವರು ದುಬಾರೆ ರಿವರ್ ರ್ಯಾಪ್ಟ್ ಬಗ್ಗೆ ಹಲವು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ಹಾರಂಗಿ ಜಲಾಶಯ ಇಇ ಪುಟ್ಟಸ್ವಾಮಿ, ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network