Header Ads Widget

Responsive Advertisement

2022-23 ನೇ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ


2022-23 ನೇ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಜಿಲ್ಲಾ ಅಗ್ರಣೀ ಬ್ಯಾಂಕ್ 2022-23 ನೇ ಸಾಲಿನ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ವಲಯ ಮಹಾ ಪ್ರಬಂಧಕರಾದ ಶ್ರೀ ಅನಂತ ಕೆ ಎಸ್ ಅವರು ಲೀಡ್ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ವಿಶೇಷ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ನಂತರ ಬ್ಯಾಂಕರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಲಾಕ್ ಡೌನ್ ನಂತರದ ಸಂದರ್ಭದಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯು ತೀರಾ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ಅಗತ್ಶವಿರುವವರಿಗೆ ಸಾಲ ವಿತರಿಸುವುದರ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಸಲಹೆ ನೀಡಿದರು. ಈ ಬಾರಿಯ ವಾರ್ಷಿಕ ಸಾಲ ಯೋಜನೆಯು “value addition of the Plantation and horticulture produce by setting up of food processing units” ಗೆ ಹೆಚ್ಚಿನ ಒತ್ತು ನೀಡಿದ್ದು ಜಿಲ್ಲೆಯ ಕೃಷಿಕರಿಗೆ ವರದಾನವಾಗಲಿದೆ ಎಂದು ಸಭೆಗೆ ತಿಳಿಸಿದರು. 2022-23 ನೇ ಸಾಲಿಗೆ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ವಯ ರೂ.5900/- ಕೋಟಿ ಗುರಿ ನಿಗದಿಪಡಿಸಿದ್ದು, ಅದರಲ್ಲಿ 78 ಪ್ರತಿಶತ (ರೂ. 4600/- ಕೋಟಿ) ಆದ್ಯತಾ ವಲಯಕ್ಕೆ ಮೀಸಲಿಟ್ಟಿದ್ದು ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.3100/- ಕೋಟಿ,(67 ಪ್ರತಿಶತ) ಹಾಗೂ ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.750/- ಕೋಟಿ,(16 ಪ್ರತಿಶತ) ಮತ್ತು ಇತರೆ ಆದ್ಯತಾ ವಲಯಕ್ಕೆ ರೂ.750/- ಕೋಟಿ,(16 ಪ್ರತಿಶತ)ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ಮುಖ್ಯಸ್ಥರಾದ ಶ್ರೀ ಆರ್.ಕೆ.ಬಾಲಚಂದ್ರ ಮಾತನಾಡಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಜನರಿಗೆ ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಗುರಿಯನ್ನು ಸಾಧಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ಈ ಕ್ರಿಯಾ ಯೋಜನೆಯು ನಬಾರ್ಡ್ ಸಂಸ್ಥೆಯು  ಬಿಡುಗಡೆ ಮಾಡಿದ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯ ನೆರವನ್ನು ಪಡೆದು ಬ್ಯಾಂಕುಗಳ ವಲಯವಾರು ಹಂಚಿಕೆಗಳಿಗನುಸಾರವಾಗಿ ಜೊತೆಗೆ, ಹಿಂದಿನ ವರ್ಷದ ಆಯಾ ಬ್ಯಾಂಕುಗಳ ಸಾಧನೆಯನ್ನು ಮಾನದಂಡವಾಗಿಟ್ಟುಕೊಂಡು ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರಲ್ಲದೆ ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಕೃಷಿ ಮತ್ತು ಆದ್ಯತಾ ವಲಯಕ್ಕೆ ಒತ್ತು ನೀಡುವ ಉದ್ದೇಶದಿಂದ ಗುರಿಯನ್ನು ನಿಗದಿಪಡಿಸಲಾಗಿದೆ ಹಾಗೂ 2022-23 ನೇ ವರ್ಷವು “value addition of the Plantation and horticulture produce by setting up of food processing units” ಎಂಬುದು ಘೋಷವಾಕ್ಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ಸಹಾಯಕ ಮಹಾ ಪ್ರಬಂಧಕರಾದ  ಶ್ರೀ ಯು ಸೆಲ್ವಕುಮಾರ್,  ಲೀಡ್ ಬ್ಯಾಂಕಿನ  ವ್ಯವಸ್ಥಾಪಕರಾಗಿ ನಿಯುಕ್ತರಾದ ಶಿವಕುಮಾರ, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ದ ಕೊನೆಯಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥ ರಾದ ಆರ್ ಕೆ ಬಾಲಚಂದ್ರ ರವರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ವಲಯ ಮಹಾ ಪ್ರಬಂಧಕರಾದ ಶ್ರೀ ಅನಂತ ಕೆ ಎಸ್. ರವರು ಎಲ್ಲಾ ಬ್ಯಾಂಕರುಗಳ ಪರವಾಗಿ ಸನ್ಮಾನಿಸಿ ಮುಂದಿನ ಜೀವನ ಕ್ಕೆ ಶುಭ ಹಾರೈಸಿದರು.