Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಆವರಣದಲ್ಲಿ ಜೂನ್, 06 ರವರೆಗೆ ಮಾವು ಮೇಳ; ಶಾಸಕರಿಂದ ಮಾವು ಮೇಳಕ್ಕೆ ಚಾಲನೆ


ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಆವರಣದಲ್ಲಿ ಜೂನ್, 06 ರವರೆಗೆ ಮಾವು ಮೇಳ; ಶಾಸಕರಿಂದ ಮಾವು ಮೇಳಕ್ಕೆ ಚಾಲನೆ 

ಮಡಿಕೇರಿ ಜೂ.03: ಕೊಡಗು ಜಿಲ್ಲಾ ಹಾಪ್‌ಕಾಮ್ಸ್, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಆವರಣದಲ್ಲಿ ಜೂನ್, 06 ರವರೆಗೆ ಏರ್ಪಡಿಸಲಾಗಿರುವ ‘ಮಾವು ಮೇಳ’ಕ್ಕೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಚಾಲನೆ ನೀಡಿದರು.  

ಬಳಿಕ ಮಾವುಮೇಳ ವೀಕ್ಷಿಸಿದ ಶಾಸಕರು, ಮಾವು ಖರೀದಿಸಿ ಸವಿದರು. ಬಳಿಕ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ರೈತರು ಕಾಲ ಕಾಲಕ್ಕೆ ಬೆಳೆದ ತರಕಾರಿ, ಹಣ್ಣುಗಳಿಗೆ ಸೂಕ್ತ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಹಾಫ್‌ಕಾಮ್ಸ್ ಮೂಲಕ ಮಾವು ಮೇಳ ಆಯೋಜಿಸಲಾಗಿದೆ ಎಂದರು. 

ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾವು ಬೆಳೆಗಾರರು ಮಾವು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಈ ಅವಕಾಶವನ್ನು ಗ್ರಾಹಕರು ಪಡೆದುಕೊಳ್ಳುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಕರೆ ನೀಡಿದರು. 

ಕಾಲ ಕಾಲಕ್ಕೆ ಬೆಳೆಯುವ ಹಣ್ಣು ಮೇಳ ಏರ್ಪಡಿಸುವುದರಿಂದ ಕೃಷಿಕರು ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಸರ್ಕಾರ ಹಾಫ್ ಕಾಮ್ಸ್ ಮೂಲಕ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮುಂದಾಗಿದೆ ಎಂದರು. 

ಶಾಸಕರಾದ ಎಂ.ಪಿ.ಅಪ್ಪಚ್ಚುರAಜನ್ ಅವರು ಮಾತನಾಡಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸುವಲ್ಲಿ ಹಾಫ್‌ಕಾಮ್ಸ್ನಿಂದ ಮಾವು ಮೇಳ ಏರ್ಪಡಿಸಲಾಗಿದೆ. ಮಾವು ಮೇಳದ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳು ವಂತಾಗಬೇಕು. ಇದರಿಂದ ತೋಟಗಾರಿಕಾ ಬೆಳೆಗಾರರು ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಸಲಹೆ ಮಾಡಿದರು. 

ಜಿಲ್ಲಾ ಹಾಫ್‌ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ ಅವರು ಮಾತನಾಡಿ ರೈತರು ಬೆಳೆದ ಬೆಳೆಯನ್ನು ಸ್ವತಃ ತಾವೇ ಮಾರಾಟ ಮಾಡುವಂತಾಗಲು ಮಾವುಮೇಳ ಏರ್ಪಡಿಸಲಾಗಿದೆ. ನೈಸರ್ಗಿಕವಾಗಿ ಯಾವುದೇ ರೀತಿಯ ರಸಾಯನ ಬಳಸದೆ ಮಾವು ಹಣ್ಣು ಮಾಡಲಾಗಿದ್ದು, ಗ್ರಾಹಕರು ಖರೀದಿಸಲು ಉಪಯುಕ್ತವಾಗಿದೆ ಎಂದು ಅವರು ಹೇಳಿದರು. 

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸಿ.ಎಂ.ಪ್ರಮೋದ್ ಅವರು ಮಾತನಾಡಿ ಮಾವು ಮೇಳದಲ್ಲಿ ಸುಮಾರು 14 ಮಳಿಗೆಗಳು ಇದ್ದು, 14 ಮಳಿಗೆಯಲ್ಲಿ ಕೊಡಗು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿಂದ ಮಾವು ಬೆಳೆಗಾರರು ಆಗಮಿಸಿ ಮಾವು ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು. 

ಮಾವು ಮೇಳದಲ್ಲಿ ಬಾದಾಮಿ, ರಸಪುರಿ, ಸಿಂಧೂರ, ತೋತಾಪುರಿ, ದಾಶೇರಿ, ಕೊಡಗಿನ ಕಾಡು ಮಾವು, ಮಲ್ಗೋವ, ಮಲ್ಲಿಕಾ, ಬೈಗನ್‌ಪಲ್ಲಿ ಹೀಗೆ ಹತ್ತಕ್ಕೂ ಹೆಚ್ಚು ರೀತಿಯ ಮಾವು ಮೇಳದಲ್ಲಿ ಇದೆ ಎಂದು ಅವರು ಮಾಹಿತಿ ನೀಡಿದರು.  

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಹಾಪ್ ಕಾಮ್ಸ್ನ ಉಪಾಧ್ಯಕ್ಷರಾದ ಮಲ್ಲಂಡ ಮಧುದೇವಯ್ಯ, ನಿರ್ದೇಶಕರು ಇತರರು ಇದ್ದರು.