Header Ads Widget

Responsive Advertisement

ಜೂ. 5ರಂದು ಬಾಳುಗೋಡಿನಲ್ಲಿ ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್-2022


ಜೂ. 5ರಂದು ಬಾಳುಗೋಡಿನಲ್ಲಿ ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್-2022

ಮಳೆಯ ಕಾರಣದಿಂದ ಮುಂದೂಡಲಾಗಿದ್ದ ಸ್ಪರ್ಧೆಯ ದಿನಾಂಕ ನಿಗದಿ

ಪೊನ್ನಂಪೇಟೆ, ಜೂ.02: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಆಯೋಜಿಸಲು ಉದ್ದೇಶಿಸಿ ಮಳೆಯ ಕಾರಣದಿಂದ  ಮುಂದೂಡಲ್ಪಟ್ಟಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ "ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್-2022"ಅನ್ನು ಇದೇ ತಿಂಗಳ 5ರಂದು ಭಾನುವಾರ ಹಿಂದೆ ನಿಗದಿಯಾಗಿದ್ದ ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಪುನರ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎ.ಪಿ. ದಿನೇಶ್ ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ದಾನಿಗಳ ನೆರವಿನೊಂದಿಗೆ  ಮೊದಲ ಬಾರಿಗೆ  ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆಯನ್ನು  ಏರ್ಪಡಿಸಲಾಗಿದೆ. ಈ ಸ್ಪರ್ಧೆಯು ಕಳೆದ ತಿಂಗಳ 22ರಂದು ನಿಗದಿಯಾಗಿತ್ತು. ಆದರೆ ಮಳೆಯ ಕಾರಣದಿಂದ ಅನಿವಾರ್ಯವಾಗಿ ಮುಂದೂಡಬೇಕಾಯಿತು. ಆದ್ದರಿಂದ ಇದೀಗ ಮತ್ತೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಉದ್ದೇಶಿತ ನಿಸರ್ಗ ಜೆಸಿಐ ಶೂಟಿಂಗ್ ಪೇಸ್ಟ್ ನಲ್ಲಿ  ಸ್ಪರ್ಧೆಗಳನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ 0.22 ರೈಫಲ್ ಶೂಟಿಂಗ್, 12ನೇ ಬೋರಿನ ಗನ್ ಶೂಟಿಂಗ್ ಹಾಗೂ ಏರ್ ಗನ್ ಮೂಲಕ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ತಲಾ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಆಕರ್ಷಕ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ದಿನೇಶ್ ಅವರು ಮಾಹಿತಿ ನೀಡಿದ್ದಾರೆ.

0.22 ರೈಫಲ್ ಶೂಟಿಂಗ್ ನಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ. 25 ಸಾವಿರ, 20ಸಾವಿರ,15ಸಾವಿರ, 12ನೇ ಬೋರಿನ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ.20 ಸಾವಿರ, 15ಸಾವಿರ,10 ಸಾವಿರ ಹಾಗೂ ಏರ್ ಗನ್ ಮೂಲಕ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ. 5 ಸಾವಿರ, 4ಸಾವಿರ, 3ಸಾವಿರ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಪರ್ಧೆಯ ಎಲ್ಲಾ ಮೂರು ವಿಭಾಗಗಳಲ್ಲಿ ಪಾಲ್ಗೊಂಡು ಅತಿಹೆಚ್ಚು ಸುತ್ತುಗಳಿಗೆ ಪ್ರವೇಶ ಪಡೆದು ಗಮನ ಸೆಳೆಯುವ ಅತಿ ಕಿರಿಯ ವಯಸ್ಸಿನ ಶೂಟರ್ಸ್ ಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿರುವ ದಿನೇಶ್ ಅವರು , ಕಾರ್ಯಕ್ರಮದಂದು ಬೆಳಿಗ್ಗೆ 9 ಗಂಟೆಯಿಂದಲೇ ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶವಿದೆ. ಪಾಲ್ಗೊಳ್ಳುವ ಆಸಕ್ತ ಶೂಟರ್ ಗಳು 0.22 ರೈಫಲ್ ಶೂಟಿಂಗ್ ಮತ್ತು 12ನೇ ಬೋರಿನ ಗನ್ ಶೂಟಿಂಗ್ ಸ್ಪರ್ಧೆಗಳಿಗೆ ತಲಾ ರೂ. 250, ಏರ್ ಗನ್ ನಿಂದ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಗೆ ರೂ.100 ಅನ್ನು ಪ್ರವೇಶ ಶುಲ್ಕವಾಗಿ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಗಳಾದ 9148978919, 9972538030 ಅಥವಾ 9449255081ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಸ್ಪರ್ಧೆಯ ಯೋಜನಾ ನಿರ್ದೇಶಕರಾದ ಎ. ಎಸ್. ಟಾಟು ಮೊಣ್ಣಪ್ಪ, ಸಂಸ್ಥೆಯ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ ಉಪಸ್ಥಿತರಿದ್ದರು.