ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಮುಖ್ಯಸ್ಥರಿಂದ ಪಿಡಿಒಗಳ ಜತೆ ಸಂವಾದ
ಮಡಿಕೇರಿ ಜೂ.2: ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‍ನ ನಿರ್ಧಿಷ್ಟ ವ್ಯಾಪ್ತಿಯಲ್ಲಿ ಬರುವ ಯಾವುದೇ ದೂರುಗಳನ್ನು 90 ದಿನಗಳ ಒಳಗೆ ಸೂಕ್ತ ರೀತಿಯಲ್ಲಿ ಮುಕ್ತಾಯ ಮಾಡಲು ಕುಂದು ಕೊರತೆ ನಿವಾರಣಾ ಪ್ರಾಧಿಕಾರ ಸಹಕಾರಿಯಾಗಿದೆ ಎಂದು ಮೈಸೂರು ವಿಭಾಗೀಯ ಕುಂದು-ಕೊರತೆ ನಿವಾರಣಾ ಪ್ರಾಧಿಕಾರದ ಮುಖ್ಯಸ್ಥರಾದ ಕೆ.ಕರಿಯಪ್ಪ ಅವರು ತಿಳಿಸಿದರು.
ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಡಿಕೇರಿ ತಾ.ಪಂ.ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಅವರು ಮಾತನಾಡಿದರು.
ಸರ್ಕಾರದ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೃಹತ್ ಇಲಾಖೆಯಾಗಿದೆ. ಕಳೆದ 1 ದಶಕದಿಂದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಾಗದಂತೆ ಕುಂದು ಕೊರತೆಗಳ ನಿವಾರಣೆಗಾಗಿ ಪ್ರಾಧಿಕಾರ ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಜಿ.ಪಂ.ಕಚೇರಿಗಳಲ್ಲಿ ಕುಂದು-ಕೊರತೆ ನಿವಾರಣಾ ಪ್ರಾಧಿಕಾರವನ್ನು ಆರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತಾಗಿ ಅಥವಾ ಸರ್ಕಾರದ ಯಾವುದೇ ಸೇವೆಯನ್ನು ಪಡೆಯಲು ಸಂಬಂಧಪಟ್ಟ ಅಧಿಕಾರಿಯಿಂದ ತೊಂದರೆ ಆದಲ್ಲಿ ನೇರವಾಗಿ ಕೊಡಗು ಜಿಲ್ಲಾ ಪಂಚಾಯತ್‍ನ ಮೊದಲ ಮಹಡಿಯಲ್ಲಿರುವ ಪ್ರಾಧಿಕಾರದ ಕಚೇರಿಗೆ ಅಥವಾ ಅಂಚೆ ಮೂಲಕ ದೂರು ಸಲ್ಲಿಸಬಹುದು ಎಂದರು.
ಅರೆ ನ್ಯಾಯಿಕ ಸಂಸ್ಥೆಯಾಗಿ ಕುಂದು-ಕೊರತೆ ನಿವಾರಣಾ ಪ್ರಾಧಿಕಾರ ಕಾರ್ಯ ನಿರ್ವಹಿಸಲಿದೆ. ಈ ಸಂಬಂಧ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ ಪ್ರಾಧಿಕಾರದ ಕುರಿತು ಮಾಹಿತಿ ನೀಡಬೇಕು. ಈ ಸಂಬಂಧ ಪ್ರತಿ ಗ್ರಾ.ಪಂ.ಗಳಲ್ಲಿಯೂ ಮಾಹಿತಿ ಫಲಕ ಅಳವಡಿಸುವಂತೆ ತಿಳಿಸಿದರು.
ಸಾರ್ವಜನಿಕ ದೂರಿನ ವಿಚಾರದಲ್ಲಿ ಯಾವುದೇ ಅಧಿಕಾರಿ ಸಮಸ್ಯೆ ಪರಿಹರಿಸುವಲ್ಲಿ ಅನವಶ್ಯಕವಾಗಿ ವಿಳಂಬ ಮಾಡಿದರೆ 25 ಸಾವಿರ ರೂಪಾಯಿಗಳ ವರೆಗೂ ದಂಡ ವಿಧಿಸುವ ಅಧಿಕಾರ ಪ್ರಾಧಿಕಾರಕ್ಕಿದೆ ಎಂದು ಇದೇ ವೇಳೆ ತಿಳಿಸಿದರು.
ಪ್ರಮುಖವಾಗಿ ಕುಡಿಯುವ ನೀರು, ರಸ್ತೆ, ಆರೋಗ್ಯ, ಬೀದಿ ದೀಪ, ನೈರ್ಮಲ್ಯೀಕರಣ ನಿರ್ವಹಣೆ ಹೀಗೆ ಯಾವುದೇ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿನ ಲೋಪದೋಷ, ದಾಸ್ತಾವೇಜುಗಳ ಅಥವಾ ಪ್ರಮಾಣ ಪತ್ರ ಮಂಜೂರು ಮಾಡಬೇಕಿದೆ ಎಂದರು.
ಸರಕುಗಳು ಹಾಗೂ ಸೇವೆಗಳನ್ನು ಒದಗಿಸಲು ನಿರ್ಲಕ್ಷಿಸುವ ವ್ಯಕ್ತಿ ಅಥವಾ ಗ್ರಾಮ ಅಧಿಕಾರಿ ಮತ್ತು ನಿಯಮಿಸಬಹುದಾದ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ಕುಂದು ಕೊರತೆ ನಿವಾರಣಾ ಪ್ರಾಧಿಕಾರ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ತಾ.ಪಂ.ಇಒ ಶೇಖರ್ ಮಾತನಾಡಿ, ಕುಂದು-ಕುರತೆ ನಿವಾರಣೆ ಪ್ರಾಧಿಕಾರದ ಸಂಬಂಧ ಈಗಾಗಲೇ ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿಯೂ ಸಾರ್ವಜಿನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಈ ದಿನದ ಸಂವಾದ ಕಾರ್ಯಕ್ರಮದಿಂದ ಗ್ರಾ.ಪಂ. ಅಧಿಕಾರಿಗಳ ಹಲವು ಸಮಸ್ಯೆಗಳಿಗೆ ಉತ್ತರ ಸಿಕ್ಕಂತಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಹೇಮಂತ್, ಮಡಿಕೇರಿ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network