‘ಹ್ಯಾಪಿ ಟೀತ್’ ಆಧುನಿಕ ದಂತ ಚಿಕಿತ್ಸಾಲಯ ಉದ್ಘಾಟನೆಯಲ್ಲಿ ಹಿರಿಯರ ಅಭಿಮತ
ಮಡಿಕೇರಿ, ಜೂ. 1: ವೈದ್ಯಕೀಯ ಕ್ಷೇತ್ರದಲ್ಲಿ ನೈತಿಕತೆ ಮತ್ತು ಸಮರ್ಪಣಾ ಭಾವ ಅತ್ಯವ್ಯಕವಾಗಿದ್ದು, ದಶಕಗಳ ಹಿಂದಿನ ವೈದ್ಯರುಗಳ ನಿಸ್ವಾರ್ಥ ಸೇವಾ ಭಾವ ಮರುಕಳಿಸುವಂತಾಗಲಿ ಎಂದು ಜಿಲ್ಲೆಯ ಹಿರಿಯ ದಂತ ವೈದ್ಯ ಡಾ. ಅನಿಲ್ ಚೆಂಗಪ್ಪ ಆಶಿಸಿದರು.
ಡಾ. ಅನಿಲ್ ಚೆಂಗಪ್ಪ ಅವರು ಇಲ್ಲಿನ ಮಾರುಕಟ್ಟೆ ಹಿಂಭಾಗದ ರಸ್ತೆಯಲ್ಲಿ (ಹಿಲ್ರೋಡ್) ಆರಂಭಗೊಂಡ ‘ಹ್ಯಾಪಿ ಟೀತ್’ ದಂತ ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.
ದಶಕಗಳ ಹಿಂದಿನ ದಂತ ಚರಿತ್ರೆ ಬಿಚ್ಚಿದ ಅವರು, ಅಂದು ಭಾರತದಲ್ಲೆಲ್ಲೂ ದಂತ ವೈದ್ಯಕೀಯ ಕಾಲೇಜು ಇರಲಿಲ್ಲ ಎಂಬ ಅಂಶ ಬಯಲು ಮಾಡಿದರು. ಆ ಸಂದರ್ಭ ಕರಾಚಿಯಲ್ಲಿದ್ದ ಅಮೇರಿಕಾದ ದಂತವೈದ್ಯ ಕಾಲೇಜಿನಲ್ಲಿ ಓದಿ, ಮಡಿಕೇರಿಯ ಕೊಡಂದೇರ ಮಾಚಯ್ಯ ಅವರು ಏಕೈಕ ದಂತ ವೈದ್ಯರಾಗಿ ಹೊರಹೊಮ್ಮಿ ಕೊಡಗಿನಲ್ಲಿ ಸೇವೆ ಸಲ್ಲಿಸಿದ ಕುರಿತು ಹೇಳಿದರು.
ಹುಟ್ಟೂರಿನಲ್ಲೇ ಕ್ಲಿನಿಕ್ ಸ್ಥಾಪಿಸಲು ಮುಂದಾದ ಡಾ. ಅನುಶ್ರೀ ಅನಂತಶಯನ ಅವರ ತೀರ್ಮಾನವನ್ನು ಡಾ. ಅನಿಲ್ ಚೆಂಗಪ್ಪ ಶ್ಲಾಘಿಸಿದರು.
ಸಸಿಗೆ ನೀರೆರೆದು ಮಾತನಾಡಿದ ಹಿರಿಯ ನಾಯಕ, ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸುವುದು ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳುವದು ವೈದ್ಯಕೀಯ ಕ್ಷೇತ್ರದಲ್ಲಿ ಅವಶ್ಯ ಎಂದರು. ‘ಶಕ್ತಿ’ ಕುಟುಂಬದೊಂದಿಗಿನ ತಮ್ಮ ಒಡನಾಟ, ಸ್ಥಾಪಕ ಸಂಪಾದಕ ದಿ. ಬಿ.ಯಸ್. ಗೋಪಾಲಕೃಷ್ಣ ಅವರೊಂದಿಗಿನ ತಮ್ಮ ಸ್ನೇಹವನ್ನು ಸ್ಮರಿಸಿದ ಅವರು, ವೈದ್ಯಕೀಯ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಹಿಂದೆ ಮಡಿಕೇರಿಯಲ್ಲಿ ಡಾ. ಬೋಪಯ್ಯ, ಡಾ. ಐಯ್ಯಪ್ಪ ಹಾಗೂ ಡಾ. ಸುಬ್ಬಯ್ಯ - ಮೂವರ ಹೆಸರೇ ಕೇಳುತ್ತಿದ್ದು, ಬಳಿಕ ಕೊಡಂದೇರ ಮಾಚಯ್ಯ ಅವರೂ ಮೇಲ್ಬಂದರು ಎಂದು ಸ್ಮರಿಸಿದರು.
ದಂತ ತಜ್ಞೆ ಹ್ಯಾಪಿ ಟೀತ್ ಕ್ಲಿನಿಕ್ ಮುಖ್ಯಸ್ಥೆ ಡಾ. ಅನುಶ್ರೀ ಮಾತನಾಡಿ, ಬದಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಅನ್ವೇಷಣೆಗಳ ಕುರಿತು ಹೇಳಿದರು. ಆಧುನಿಕ ಸೇವೆಯನ್ನು ಹುಟ್ಟೂರಿನಲ್ಲೂ ಒದಗಿಸುವದು ತನ್ನ ಉದ್ದೇಶ ಎಂದರು.
ಸ್ಕೌಟ್ಸ್ ಕಮಿಷನರ್ ಬೇಬಿ ಮ್ಯಾಥ್ಯು, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಗೋಪಾಲಕೃಷ್ಣ, ಜಮಾಅತ್ ಅಹ್ಮದೀಯ ಮಸೀದಿಯ ಅಧ್ಯಕ್ಷ ಜಹೀರ್ ಅಹ್ಮದ್, ಶಕ್ತಿಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ರಾಜ್ಯ ಬೆಳೆಗಾರರ ಸಂಘದ ಕೆ.ಕೆ. ವಿಶ್ವನಾಥ್, ನೂತನ ರೋಟರಿ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿದರು. ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಶ್ರೀಮತಿ ರಾಜಲಕ್ಷ್ಮಿ ಗೋಪಾಲಕೃಷ್ಣ, ಪ್ರೊ. ಡಾ. ಎಂ.ಎನ್. ಕುಟ್ಟಪ್ಪ ಸಸಿಗೆ ನೀರೆರೆದರು.
‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಸ್ವಾಗತಿಸಿದರು. ಸಂಪಾದಕ ಜಿ. ಚಿದ್ವಿಲಾಸ್ ವಂದಿಸಿದರು. ಹ್ಯಾಪಿ ಟೀತ್ ಕ್ಲಿನಿಕ್‌ನ ಸಿಬ್ಬಂದಿ, ದಂತ ವೈದ್ಯೆ ಮೆಗಾನ, ಜಾನಪದ ಕಲಾವಿದೆ ಅಂಬೆಕಲ್ ಸುಶೀಲ ಕುಶಾಲಪ್ಪ, ಉದ್ಯಮಿ ಯೂಸುಫ್, ಮುನೀರ್ ಅಹ್ಮದ್ ಹಾಗೂ ಇತರರು ಹಾಜರಿದ್ದರು.
ಸಂತೆಯಲ್ಲೇ ವೈದ್ಯರಿಂದ ಸಲಹೆ !
ಹಿಂದಿನ ಕೊಡಗು ಹೇಗಿತ್ತೆಂದರೆ, ವೈದ್ಯರು ಸಂತೆಯಲ್ಲಿ ಸಿಕ್ಕರೆ, ಅಲ್ಲಿಯೇ ತಮ್ಮ ಸಮಸ್ಯೆಗಳನ್ನು ಜನ ಹೇಳಿಕೊಳ್ಳುತ್ತಿದ್ದರು. ಈ ಬಗ್ಗೆ ಬೆಳಕು ಚೆಲ್ಲಿದ ಹಿರಿಯರಾದ ಯಂ.ಸಿ. ನಾಣಯ್ಯ ಅವರು, ಆಗಿನ ಕಾಲದಲ್ಲಿ ಡಾ. ಬೋಪಯ್ಯ ಅವರು ಮಡಿಕೇರಿಗೆ ಸಂತೆಗೆ ಬಂದರೆ ಜನ ಅವರನ್ನು ಅಲ್ಲಿಯೇ ಸುತ್ತುವರಿಯುತ್ತಿದ್ದರು ಎಂಬ ಸ್ವಾರಸ್ಯ ತೆರೆದಿಟ್ಟರು. ಜನರ ಅಹವಾಲನ್ನು ಸಮಾಧಾನದಿಂದಲೇ, ಕೋಪಿಸಿಕೊಳ್ಳದೆ ಆಲಿಸುತ್ತಿದ್ದ ಅವರು, ಅಲ್ಲಿಯೇ ಸ್ಟೆತೋಸ್ಕೋಪ್ ತೆಗೆದು, ಪರಿಶೀಲಿಸಿ, ಔಷಧಿ ಬರೆದುಕೊಡುತ್ತಿದ್ದರು ಎಂದು ನಕ್ಕು ನುಡಿದರು. ಅಂತಹ ಸಮರ್ಪಣಾ ಭಾವ ಇಂದು ಮರೆಯಾಗುತ್ತಿದೆ ಎಂದು ವಿಷಾಧಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network