ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ಸಾಂಬಾರ ಬೆಳೆ ಅಭಿವೃದ್ಧಿ ಕುರಿತು ರೈತರಿಗೆ ನಡೆದ ತರಬೇತಿ ಕಾರ್ಯಗಾರ
ಸಾಂಬಾರ ಬೆಳೆ ಬೆಳೆಯಲು ಹೆಚ್ಚಿನ ಉತ್ತೇಜನ: ಡಾ.ಅಂಕೇಗೌಡ
ಮಡಿಕೇರಿ ಜೂ.14: ಭಾರತ ಸರ್ಕಾರ ಸಾಂಬಾರ ಬೆಳೆ ಬೆಳೆಯಲು ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಆ ನಿಟ್ಟಿನಲ್ಲಿ ಕಾಫಿ ಬೆಳೆ ಜೊತೆಗೆ ಕರಿಮೆಣಸು, ಏಲಕ್ಕಿ ಸೇರಿದಂತೆ ಬಹು ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ತಿಳಿಸಿದ್ದಾರೆ.
ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ಸಾಂಬಾರ ಬೆಳೆ ಅಭಿವೃದ್ಧಿ ಕುರಿತು ರೈತರಿಗೆ ಮಂಗಳವಾರ ನಡೆದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಸಾಂಬಾರ ಬೆಳೆಗಳಲ್ಲಿ ಏಲಕ್ಕಿ, ಕರಿಮೆಣಸು ಪ್ರಮುಖವಾಗಿದೆ. ಕಾಫಿ ಜೊತೆಗೆ ಕರಿಮೆಣಸನ್ನು ಬಹು ಬೆಳೆಯಾಗಿ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕರಿಮೆಣಸು ಮತ್ತು ಅಡಿಕೆಗೆ ಉತ್ತಮ ಬೆಲೆಯಿದೆ. ಏಲಕ್ಕಿಗೆ ಸಾಧಾರಣ ಬೆಲೆ ಇದ್ದು, ಆ ದಿಸೆಯಲ್ಲಿ ಬಹು ಬೆಳೆ ಬೆಳೆಯುವಂತಾಗಬೇಕು ಎಂದು ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರು ಹೇಳಿದರು.
ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರದಿಂದ 10 ಸಾವಿರ ಏಲಕ್ಕಿ ಗಿಡಗಳನ್ನು ವಿತರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಗಳಲ್ಲಿಯೂ ಸಹ ಏಲಕ್ಕಿ ಬೆಳೆ ಬೆಳೆಯಲು ಮುಂದಾಗುತ್ತಿದ್ದು, ಸಂಶೋಧನಾ ಸಂಸ್ಥೆಯಿಂದ ಗಿಡಗಳನ್ನು ಪಡೆಯುತ್ತಿದ್ದಾರೆ ಎಂದರು.
ಕಾಫಿ ತೋಟದಲ್ಲಿ ಕಾಳುಮೆಣಸು ಗಿಡವನ್ನು ಹೆಚ್ಚು ನೆಡಬೇಕು. ಕೊಡಗು ಜಿಲ್ಲೆಯ ತೋಟಗಳಲ್ಲಿ ಕಾಳುಮೆಣಸು ಇಳುವರಿ ಉತ್ತಮವಾಗಿದ್ದು, ಗಿಡದ ಬೆಳವಣಿಗೆ ಗಮನಿಸಬೇಕು. ಅರೇಬಿಕಾ ಕಾಫಿ ತೋಟದಲ್ಲಿ 200 ಕ್ಕೂ ಕರಿಮೆಣಸು ಗಿಡಗಳನ್ನು ಬೆಳೆಯಬಹುದು. ಬೇರು ಕೊಳೆ ರೋಗ ಬರದಂತೆ ನಿಯಂತ್ರಣ ಮಾಡಬೇಕು ಎಂದರು.
ಕರಿಮೆಣಸಿನಲ್ಲಿ ಪಣಿಯೂರು, ಶುಭಕರ, ಶ್ರೀಕರ, ಪಂಚಮಿ, ಪೌರ್ಣಮಿ, ಅರ್ಕಕೂರ್ಗ್ ಎಕ್ಸಲ್, ವಿಜಯ್, ಮಲಬಾರ್ ಎಕ್ಸೆಲ್, ಹೀಗೆ ಹಲವು ವಿವಿಧ ಕರಿಮೆಣಸು ಸುಧಾರಿತ ತಳಿಗಳು ಒಳಗೊಂಡಿವೆ ಎಂದು ಡಾ.ಅಂಕೇಗೌಡ ಅವರು ತಿಳಿಸಿದರು.
ಸಾಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲಾಗುವ ಏಲಕ್ಕಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ವಿಶಿಷ್ಟ ಪರಿಮಳದಿಂದಾಗಿ ಏಲಕ್ಕಿಗೆ ಹೆಚ್ಚು ಬೇಡಿಕೆ ಇದ್ದು, ರಾಷ್ಟ್ರದ ದಕ್ಷಿಣ ಭಾಗದ ಪಶ್ಚಿಮಘಟ್ಟಗಳಲ್ಲಿ ಹೆಚ್ಚಾಗಿ ಏಲಕ್ಕಿ ಬೆಳೆಯಲಾಗುತ್ತದೆ ಎಂದರು.
ಏಲಕ್ಕಿ ಸಂಬಂಧಿಸಿದಂತೆ ಕಂದುಗಳ ಮೂಲಕ ಸಸ್ಯ ಅಭಿವೃದ್ಧಿ, ಪ್ರಾಥಮಿಕ ಸಸಿ ಮಡಿ ಹಾಗೂ ನಿರ್ವಹಣೆ, ರಸಗೊಬ್ಬರ ಬಳಕೆ, ಕಾಂಡ ಬೀಜ ಕೋಶ ಕೊರೆಯುವ ಹುಳು, ಬೇರುಕಾಂಡ ಕೊಳೆರೋಗ, ಕಟ್ಟೆರೋಗ, ಕೊಕ್ಕೆಕಂದು ರೋಗ, ವೈರಸ್ ರೋಗ ನಿರ್ವಹಣೆ, ಕೊಯ್ಲು ಮತ್ತು ಕೊಯ್ಲೋತ್ತರ ತಾಂತ್ರಿಕತೆ ಬಗ್ಗೆ ಪಿಪಿಟಿ ಮೂಲಕ ಡಾ.ಅಂಕೇಗೌಡ ಅವರು ಮಾಹಿತಿ ನೀಡಿದರು.
ಕಾಫಿ ಜಾಗೃತಿ ಮಂಡಳಿ ಮಹಿಳಾ ವಿಭಾಗದ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಜೇನುಕೃಷಿ ಕುರಿತು ರಜಿನಿಮಣಿ ಅವರು ಕಿರುಚಿತ್ರ ಮೂಲಕ ಮಾಹಿತಿ ನೀಡಿದರು. ಬೆಳೆಗಾರರಾದ ಬೋಸ್ ಮಂದಣ್ಣ, ಜ್ಯೋತಿಕಾ ಬೋಪಣ್ಣ, ಅನಿತಾ ನಂದ ಅವರು ಮಾತನಾಡಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network