Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ


ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ

ಹಾಡಿಯ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಿರಿ: ಗಣ್ಯರ ಅಭಿಮತ 

ಮಡಿಕೇರಿ ಜೂ.14: ಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ವಿರಾಜಪೇಟೆ, ವಕೀಲರ ಸಂಘ, ಚೈಲ್ಡ್‍ಲೈನ್-1098, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕೊಡಗು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮವು ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ವ್ಯಾಪ್ತಿಯಲ್ಲಿರುವ ತುಂಡುಮುಂಡಗೆಕೊಲ್ಲಿಯ ಗದ್ದೆಹಾಡಿಯಲ್ಲಿ ನಡೆಯಿತು.

      ನಾಗರಹೊಳೆಯಲ್ಲಿರುವ ಗಿರಿಜನ ಆಶ್ರಯ ಶಾಲೆಯ ಆವರಣದಿಂದ ಜಾಥವು ಪ್ರಾರಂಭಗೊಂಡು ಹಾಡಿಯ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸಿ ಶಿಕ್ಷಣದ ಮಹತ್ವದ ಬಗ್ಗೆ ಘೋಷವಾಕ್ಯ ಮೂಲಕ ಜಾಗೃತಿ ಮೂಡಿಸಲಾಯಿತು.  

      ನಂತರ ತುಂಡುಮುಂಡಗೆಕೊಲ್ಲಿ ಗದ್ದೆಹಾಡಿಯ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ವಿರಾಜಪೇಟೆ ಕಾನೂನು ಸೇವೆಗಳ ಸಮಿತಿಯ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಹಾಗೂ ಸದಸ್ಯ ಕಾರ್ಯದರ್ಶಿ ಸಂತೋಷ ಕೊಠಾರಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

      ನಂತರ ಮಾತನಾಡಿದ ಕಾನೂನು ಸೇವೆಗಳ ಸಮಿತಿಯ ಪ್ರಧಾನ ಸಿವಿಲ್ ನ್ಯಾಯಧೀಶರಾದ ಸಂತೋಷ ಕೊಠಾರಿ ಅವರು ಸಂವಿಧಾನದಲ್ಲಿರುವ ವ್ಯವಸ್ಥೆಗೆ ತಕ್ಕಂತೆ ವಿವಿಧ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಮಕ್ಕಳಿಗೆ ಶಾಲಾ ಶಿಕ್ಷಣವನ್ನು ಒದಗಿಸುವುದು ಪ್ರತಿ ನಾಗರಿಕರ ಕರ್ತವ್ಯವಾಗಿದೆ ಹಾಗೂ ಬಾಲಕಾರ್ಮಿಕ ಪದ್ಧತಿಯನ್ನು ಪ್ರತಿಯೊಬ್ಬರೂ ವಿರೋಧಿಸುವ ಮೂಲಕ ಜವಾಬ್ದಾರಿಯುತ ನಾಗರಿಕನಾಗಬೇಕು ಎಂದು ಅವರು ಹೇಳಿದರು. 

       ಕಾರ್ಮಿಕ ಇಲಾಖೆ ಅಧಿಕಾರಿ ಅನಿಲ್ ಬಿ.ಬಗಟಿ ಅವರು ಮೊದಲಿಗೆ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರತಿಜಾÐವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು ಕಾರ್ಮಿಕ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು ಹಾಗೂ ಅರ್ಹರು ಇದರ ಸೌಲಭ್ಯಗಳನ್ನು ಪಡೆದು ಜೀವನ ಸುಧಾರಿಸಿಕೊಳ್ಳಲು ತಮ್ಮ ಮಕ್ಕಳನ್ನು ಯಾವುದೇ ಕೆಲಸಗಳಿಗೆ ಕಳುಹಿಸದೆ ಕಡ್ಡಾಯವಾಗಿ ಶಾಲೆಗಳಿಗೆ ಕಳುಹಿಸಲು ಕರೆ ನೀಡಿದರು.

       ವಿಶೇಷ ಮಕ್ಕಳ ಪೊಲೀಸ್ ಘಟಕದ ಸುಮತಿ ಅವರು ಮಾತನಾಡಿ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಬೇಡಿ. ಮಕ್ಕಳು ಶಿಕ್ಷಣದಿಂದ ಹೊರಗುಳಿದರೆ ಸಮಾಜದ ಮೇಲೆ ದುಷ್ಪಾರಿಣಾಮವಾಗುತ್ತದೆ. ಇದರಿಂದ ಮಕ್ಕಳು ಬಾಲಕಾರ್ಮಿಕರಾಗಿ, ಬಾಲ್ಯ ವಿವಾಹ, ಮಕ್ಕಳ ಮೇಲೆ ದೌರ್ಜನ್ಯ, ಮಕ್ಕಳ ಸಾಗಾಣಿಕೆಗೆ ತುತ್ತಾಗುವ ಸಾಧ್ಯತೆಗಳು ಇದೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಾವೆಲ್ಲ ಒಂದಾಗಿ ಕೆಲಸ ಮಾಡೋಣ ಎಂದು ಅವರು ಕಿವಿಮಾತು ಹೇಳಿದರು.

      ಸ್ತ್ರೀ ಶಕ್ತಿ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯಧ್ಯಕ್ಷರಾದ ರೆಹಾನಾ ಸುಲ್ತಾನ ಅವರು ಮಾತನಾಡಿ ಪ್ರತಿ ವರ್ಷ ಜೂನ್ 12 ರಂದು ವಿಶ್ವದಾದ್ಯಂತ ಬಾಲಕಾರ್ಮಿಕ ಪದ್ಧತಿ ದಿನ ಆಚರಿಸಲಾಗುತ್ತಿದೆ. ಈ ಅನಿಷ್ಠ ಪದ್ಧತಿಯಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಶೋಷಣೆಯಾಗುವ ಜೊತೆಗೆ ಅವರ ಮೂಲಭೂತ ಹಕ್ಕಾದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರ್ಕಾರ ಹಾಗೂ ಇಲಾಖೆಗಳ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಪೋಷಕರ ಹಾಗೂ ಸಾರ್ವಜನಿಕರ ಸಹಕಾರ ಮತ್ತು ಪಾತ್ರ ಮಹತ್ವದ್ದು ಎಂದು ತಿಳಿಸಿದರು. 

      ಬಡತನ ಹಾಗೂ ಇತರೆ ಯಾವುದೋ ಅಸಹಾಯಕತೆಯಿಂದ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡದೆ ಅವರ ಮುಂದಿನ ಭವಿಷ್ಯವನ್ನು ಮನಗಂಡು ಮಕ್ಕಳ ಆರೋಗ್ಯ, ಕಡ್ಡಾಯ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. 14 ವರ್ಷದ ಮಕ್ಕಳು ಬಾಲಕಾರ್ಮಿಕರಾಗಿ ಕಂಡುಬಂದರೆ ಮಕ್ಕಳ ಸಹಾಯವಾಣಿ 1098 ಉಚಿತ ದೂರವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವಲ್ಲಿ ಸಹಕರಿಸಬೇಕೆಂದು ಕೋರಿದರು. 

      ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯು ಅವರು ಮಾತನಾಡಿ  ಬಡಮಕ್ಕಳಿಗೆ ಉನ್ನತ ಮಾರ್ಗದರ್ಶನ ಮತ್ತು ವಿದ್ಯೆ ಕಲ್ಪಿಸಿದಲ್ಲಿ ಮಕ್ಕಳು ಉತ್ತಮ ಜೀವನ ಮಾರ್ಗ ಕಂಡುಕೊಳ್ಳುವರು. ಸರ್ಕಾರದ ಸವಲತ್ತುಗಳು ಸರ್ವರಿಗೂ ಲಭಿಸಬೇಕು. ಇದರಿಂದ ಬಡತನ ರೇಖೆಯಿಂದ ಮುಂದೆ ಬಂದು ತಮ್ಮ ಮಕ್ಕಳಿಗೆ ಉನ್ನತ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು. 

      ನಾಗರಹೊಳೆ ಅರಣ್ಯ ಹಕ್ಕು ಸಮಿತಿ ಹಾಗೂ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾದ ಶಿವು ಜೆ.ಎ. ಕರಡಿಕಲ್ಲು, ಅವರು ಮಾತನಾಡಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಸರ್ಕಾರ ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚಿನ ಹಾಡಿಗಳಲ್ಲಿ ಆಯೋಜಿಸುವಂತಾಗಬೇಕು ಎಂದರು. 

      ನಾಗರಹೊಳೆ ರಾಜ್ಯ ಮೂಲ ನಿವಾಸಿ ವೇದಿಕೆಯ ಉಪಾಧ್ಯಕ್ಷರಾದ ಜೆ.ಕೆ.ತಿಮ್ಮ ಮಾತನಾಡಿ ಗಿರಿಜನ ಸಮುದಾಯದ ಜನರು ಇತ್ತೀಚೀನ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. 

      ಹಾಡಿಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್ ಎನ್,  ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಆರ್. ಶೀರಾಜ್ ಅಹ್ಮದ್, ನಾಲ್ಕೇರಿ ಗ್ರಾ.ಪಂ.ಅಧ್ಯಕ್ಷರಾದ ಎಚ್.ಆರ್. ಮೀನಾ, ಪೊನ್ನಂಪೇಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರೀತಿ ಚಿಕ್ಕಮಾದಯ್ಯ, ಪೊನ್ನಂಪೇಟೆ ತಾಲ್ಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ನಾಲ್ಕೇರಿ ಗ್ರಾ.ಪಂ.ಉಪಾಧ್ಯಕ್ಷರಾದ ಸಿ.ಸಿ.ಸಚಿನ್ ಕುಮಾರ್, ನಾಗರಹೊಳೆ ಗದ್ದೆಹಾಡಿಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾದ ಜೆ.ಬಿ. ಮನು, ಕೊಡಗು ಗ್ರಾಮಿಣಾಭಿವೃದ್ದಿ ಸಂಸ್ಥೆ ಹಾಗೂ ಚೈಲ್ಡ್‍ಲೈನ್-1098 ನಿರ್ದೇಶಕರು ವಿ.ಎಸ್. ರಾಯ್ ಡೇವಿಡ್, ಕುಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ್ಕೌಟ್ ಮತ್ತು ಗೈಡ್ಸ್ ತಂಡದ ತರಬೇತಿದಾರರು (ದೈಹಿಕ ಯೋಗ ಶಿಕ್ಷಣ) ಡಾ.ಅಲಿಮಾ ಪಿ.ಹೆಚ್ ಇತರರು ಪಾಲ್ಗೊಂಡಿದ್ದರು.