Header Ads Widget

ಸರ್ಚ್ ಕೂರ್ಗ್ ಮೀಡಿಯ

ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ಕಸಬಾ ಹೋಬಳಿಯ ಘಟಕವನ್ನು ಐಗೂರಿನಲ್ಲಿ ಪ್ರಾರಂಭ


ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ಕಸಬಾ ಹೋಬಳಿಯ ಘಟಕ ಐಗೂರಿನಲ್ಲಿ ಪ್ರಾರಂಭ

ಮಡಿಕೇರಿ ಜೂ 14. ಸಾಹಿತ್ಯ ಪರಿಷತ್ತಿನ ನಡಿಗೆ ಹಳ್ಳಿಗಳ  ಕಡೆಗೆ ಎಂದು ತೀರ್ಮಾನಿಸಿ,  ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೇರುಮಟ್ಟದಿಂದ ಗಟ್ಟಿಯಾಗಿ ಕಟ್ಟುವ ಸಲುವಾಗಿ ಸೋಮವಾರಪೇಟೆ ಕಸಬಾ ಹೋಬಳಿಯ ಘಟಕವನ್ನು ಐಗೂರಿನಲ್ಲಿ ಪ್ರಾರಂಭಿಸಲಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ನುಡಿದರು. ಅವರು ಸೋಮವಾರಪೇಟೆ ಹೋಬಳಿ ಐಗೂರು  ಘಟಕದ ಕಸಾಪ ಸದಸ್ಯರ ಪೂರ್ವಭಾವಿ ಸಭೆಯನ್ನು ವಿ.ಎಸ್.ಎಸ್.ಎನ್.ಎಲ್ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಐಗೂರು ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತಿದ್ದರು. ಮುಂದುವರೆದ ಅವರು ಸೋಮವಾರಪೇಟೆ ಹೋಬಳಿಯ ಗ್ರಾಮಗಳಾದ ಚೌಡ್ಲು, ಹಾನಗಲ್, ಕುಸುಬೂರು, ನಗರೂರು, ಮಾದಾಪುರ, ಸೂರ್ಲಬ್ಬಿ, ಗರ್ವಾಲೆ, ಕಿರಗಂದೂರು ಗ್ರಾಮಗಳ ಸದಸ್ಯರನ್ನು ಸೇರಿಸಿ ಈ ಘಟಕ ರಚಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಕಸಾಪದ ಪೂರ್ವಾಧ್ಯಕ್ಷರಾದ  ಟಿ.ಪಿ ರಮೇಶ್ ರವರು ಮಾತನಾಡಿ ಪರಿಷತ್ತು ಬಲಿಷ್ಠವಾಗ ಬೇಕಾದರೆ ಗ್ರಾಮ ಮಟ್ಟದಲ್ಲಿ ಸದಸ್ಯತ್ವ ಆಂದೋಲನ ನಡೆದು ಸದಸ್ಯತ್ವ ಹೆಚ್ಚಿಸಬೇಕು ಮತ್ತು ನಮ್ಮ ಹಿರಿಯರು ಮಾಡಿದ ಸಮಾಜ ಸೇವೆಗಳನ್ನು ಗುರುತಿಸಿ ಅವರ ಹೆಸರಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಬೇಕು ಎಂದರು. ಮುಂದುವರೆದ ಅವರು ಪರಿಷತ್ತಿನ ಸಮಿತಿಗಳನ್ನು ರಚಿಸುವುದು ಜಿಲ್ಲಾಧ್ಯಕ್ಷರ ಅಧಿಕಾರವಾದರೂ ನಮ್ಮ ಜಿಲ್ಲೆಯಲ್ಲಿ ಸಮಿತಿಗಳನ್ನು ಸದಸ್ಯರ ಮುಖಾಂತರ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಮಾಡುವ ಮುಲಕ ರಚಿಸಲಾಗುತಿದೆ ಎಂದರು.

ನಂತರ ನಡೆದ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಐಗೂರಿನ  ನಂಗಾರು ಕೀರ್ತಿ ಪ್ರಸಾದ್ ರವರನ್ನು, ಗೌರವ ಕಾರ್ಯದರ್ಶಿಗಳಾಗಿ ಯೆಡವಾರೆ ಗ್ರಾಮದ ಡಿ.ವಿ.ವಿಶ್ವನಾಥ ರಾಜೆ ಅರಸ್ ಮತ್ತು ಮಾದಾಪುರದ ಸಿ.ಹೆಚ್.ಸುರೇಖಾರವರನ್ನು ಹಾಗೂ ಕೋಶಾಧಿಕಾರಿಯಾಗಿ ಕಿರಗಂದೂರಿನ ಎಸ್. ಎಂ. ಬೆಳ್ಳಿಯಪ್ಪ ರವರನ್ನು ಅವಿರೋಧವಾಗಿ ಆರಿಸಲಾಯಿತು. 

ಉಳಿದಂತೆ ಸಹಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಉಳಿದ ಗ್ರಾಮಗಳಿಂದ ಆರಿಸುವಂತೆ ತೀರ್ಮಾನಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರಾಗಿ ಯಡವಾರೆ ಗ್ರಾಮದ ಎಂ.ಎಲ್ ಉಮೇಶ್, ಕೆ.ವಿ.ಮಂಜುನಾಥ್, ಮಾದಾಪುರದ ಎಸ್.ಪಿ.ವಾಸುದೇವ್, ಐಗೂರಿನ ಹೆಚ್.ಬಿ. ಕೃಷ್ಣಪ್ಪ, ಕಿರಗಂದೂರು ಗ್ರಾಮದ ಕೆ.ಎಂ.ತಿಮ್ಮಯ್ಯರವರನ್ನು ಆರಿಸಲಾಯಿತು. ವೇದಿಕೆಯಲ್ಲಿ ಕೊಡಗು ಕಸಾಪದ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಮತ್ತು ರೇವತಿ ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷರಾದ ಎಸ್.ಡಿ.ವಿಜೇತ್ ವಹಿಸಿಕೊಂಡು ಮಾತನಾಡಿದರು. ಸೋಮವಾರಪೇಟೆ ತಾಲೂಕು ಕಸಾಪದ ಗೌರವ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಅರುಣ್ ನಿರೂಪಿಸಿ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಕೆ.ಪಿ.ದಿನೇಶ್ ವಂದಿಸಿದರು.