Header Ads Widget

Responsive Advertisement

‘ಮಾನವಿಯತೆಗಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ಮಡಿಕೇರಿಯಲ್ಲಿ ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ


‘ಮಾನವಿಯತೆಗಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ಮಡಿಕೇರಿಯಲ್ಲಿ ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಮಡಿಕೇರಿ ಜೂ.21: ಸದಾ ಕ್ರಿಯಾಶೀಲತೆ ಮತ್ತು ಚಲನಶೀಲತೆಯಿಂದ ಇರಲು ಯೋಗ ಸಹಕಾರಿ. ಹಾಗೆಯೇ ಮನಸ್ಸಿನ ಏಕಾಗ್ರತೆಗೆ ಮತ್ತು ಒತ್ತಡದ ಬದುಕಿನಿಂದ ದೂರವಿರಲು ಯೋಗ ಅತ್ಯಗತ್ಯ ಎಂದು ಶಾಸಕರಾದ  ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ವತಿಯಿಂದ ‘ಮಾನವಿಯತೆಗಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ಮಂಗಳವಾರ ನಗರದ ಕೆಳಗಿನ ಗೌಡ ಸಮಾಜ ಸಭಾಂಗಣದಲ್ಲಿ ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ  ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯಕ್ಕಾಗಿ ಯೋಗ’. ಪ್ರತಿನಿತ್ಯ ಯೋಗ ಮಾಡಿದ್ದಲ್ಲಿ ಹಲವು ರೋಗಗಳಿಂದ ದೂರವಿರಬಹುದು ಎಂದು ಅವರು ಹೇಳಿದರು.

ಜಗತ್ತಿನ 177 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಜೂನ್, 21 ರಂದು ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ ಎಂದರು. 

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ. ರೇಣುಕಾದೇವಿ ಅವರು ಮಾತನಾಡಿ ಯೋಗವು ಪುರಾತನ ಕಾಲದಿಂದಲೂ ತನ್ನದೇ ಆದ ವೈಶಿಷ್ಟವನ್ನು ಹೊಂದಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗವು ಮಹತ್ತರ ಪಾತ್ರವನ್ನು ವಹಿಸಿಕೊಂಡಿದೆ ಎಂದರು.

ಜಿಲ್ಲೆಯಲ್ಲಿ 03 ಆಯುರ್ವೇದ ತಾಲ್ಲೂಕು ಆಸ್ಪತ್ರೆಗಳಿದ್ದು, ಹೋಮಿಯೋಪತಿ ಮತ್ತು ಆಯುರ್ವೇದ ಚಿಕಿತ್ಸೆಗಳು ಲಭ್ಯವಿದೆ. 07 ಆಯುರ್ವೇದ ಚಿಕಿತ್ಸಾಲಯಗಳಿದ್ದು, ಅದರಲ್ಲಿ ಬಲ್ಲಮಾವಟಿ, ತೊರೆನೂರು, ಶ್ರೀಮಂಗಲ ಆಯುರ್ವೇದ ಕ್ಷೇಮ ಕೇಂದ್ರಗಳಾಗಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.

ಮೆಡಿಕಲ್ ಕಾಲೇಜು ಉಪನ್ಯಾಸಕರಾದ ಡಾ.ಕಾಮತ್ ಅವರು ಮಾತನಾಡಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಯೋಗ ಸಹಕಾರಿ ಎಂದರು. 

ಮನಸ್ಸನ್ನು ನಿಯಂತ್ರಣದಲ್ಲಿಡಲು ಹಾಗೂ ಸಮಸ್ಥಿತಿ ಕಾಪಾಡಲು ಯೋಗ ಒಳ್ಳೆಯದು. ಯೋಗದಿಂದ ಹೃದಯ ಸಂರಕ್ಷಣೆ ಶರೀರ ದೃಢತೆ, ಮಾನಸಿಕ ಸ್ವಾಸ್ಥ್ಯ, ಶರೀರದ ಬೆಳವಣಿಗೆ, ದೃಢತೆ ಹಾಗೂ ರೋಗ ಬಾರದಂತೆ ಶರೀರದಲ್ಲಿ ಪ್ರಕ್ರಿಯೆ ಉಂಟಾಗುತ್ತದೆ ಎಂದು ಅವರು ಹೇಳಿದರು. 

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ ಹೊಳ್ಳ, ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರಾದ ಮೆ| ಬಾಲಸುಬ್ರಹ್ಮಣ್ಯಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಪ್ರಾಂಶುಪಾಲರಾದ ಡಾ.ವಿಶಾಲ್, ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ತಹಶೀಲ್ದಾರ್ ಮಹೇಶ್, ಯೋಗ ಶಿಕ್ಷಕರಾದ ಮಹೇಶ್ ಕುಮಾರ್, ಎನ್‍ಡಿಆರ್‍ಎಫ್ ಸಿಬ್ಬಂದಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇತರರು ಯೋಗ ದಿನಾಚರಣೆಯ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು. 

 ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಕೊಡಗು ಜಿಲ್ಲಾ ಶಾಖೆ ವತಿಯಿಂದ ಏರ್ಪಡಿಸಿದ ಯೋಗದ ಬಗ್ಗೆ 2 ನಿಮಿಷದ ಕಿರು ಜಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ.ಶುಭಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.