Header Ads Widget

Responsive Advertisement

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ


ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ

ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆಗೆ ಒತ್ತು ನೀಡಿ: ಡಾ.ಬಿ.ಸಿ.ಸತೀಶ

ಮಡಿಕೇರಿ: ಜಿಲ್ಲೆಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಕಡೆಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತ ತಪ್ಪಿಸುವಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರಗಳು ರಸ್ತೆ ಸುರಕ್ಷತೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. 

      ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

      ಕುಶಾಲನಗರದಿಂದ ಸಂಪಾಜೆವರೆಗಿನ ರಾಷ್ಟ್ರೀಯ ಹೆದ್ದಾರಿಯ(275) ನಗರದ ಚೈನ್‍ಗೇಟ್ ಬಳಿ ಇತ್ತೀಚೆಗೆ ಕಾರ್ಮಿಕರೊಬ್ಬರು ಬೈಕ್‍ನಲ್ಲಿ ಸಂಚರಿಸುತ್ತಿದ್ದಾಗ ಮೃತಪಟ್ಟರು. ಹೀಗೆ ಹಲವು ಅಪಘಾತಗಳಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಸ್ತೆ ಸುರಕ್ಷತೆ ಸಂಬಂಧ ಅಗತ್ಯ ಕ್ರಮವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‍ಗೆ ಸೂಚಿಸಿದರು.   

      ಅಗತ್ಯವಿರುವೆಡೆ ಉಬ್ಬುಗಳ ನಿರ್ಮಾಣ, ಜೀಬ್ರಾ ಕ್ರಾಸ್ ಹಾಗೂ ರಸ್ತೆ ಸುರಕ್ಷತಾ ಸೂಚನಾ ಫಲಕ ಅಳವಡಿಸುವುದು. ಹೀಗೆ ಹಲವು ಮಾಹಿತಿಯನ್ನು ಬರೆಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. 

    ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ಮಾಹಿತಿಯ ಫಲಕ ಅಳವಡಿಸುವುದು, ಅಗತ್ಯವಿರುವೆಡೆ ಉಬ್ಬುಗಳ ನಿರ್ಮಾಣ ಮಾಡಿ, ಜೀಬ್ರಾ ಕ್ರಾಸ್ ಬರೆಸುವುದು, ಹೀಗೆ ಮಾಹಿತಿಯನ್ನು ಒದಗಿಸಿ ಅಪಘಾತ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.  

     ಜಿಲ್ಲೆಯಲ್ಲಿ ಸುಮಾರು 3,900 ಆಟೋಗಳು ಸಂಚರಿಸುತ್ತಿವೆ. ಆಟೋ ಚಾಲಕರು ಸರ್ಕಾರದ ನಿಯಮ ಪಾಲಿಸಬೇಕು. ಆಟೋ ಚಾಲಕರು ಸಮವಸ್ತ್ರದಲ್ಲಿ ಕೆಲಸ ನಿರ್ವಹಿಸಬೇಕು ಎಂದರು.  

      ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಡಿಕೇರಿ ಸೇರಿದಂತೆ ಇತರೆಡೆಗಳಲ್ಲಿ ಅಫಘಾತ ವಲಯಗಳನ್ನು ಗುರುತಿಸಲಾಗಿದೆ. ಈ ಸಂಬಂಧ ಸಂಬಂಧಪಟ್ಟ ಇಲಾಖೆಯಿಂದ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಬೇಕು ಎಂದರು. 

      ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆಗೆ ಎಲ್ಲೆಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಟ್ಟಿ ಒದಗಿಸುವಂತೆ ಪೌರಾಯುಕ್ತರಿಗೆ ತಿಳಿಸಿದರು.  

      ಈ ಸಂದರ್ಭದಲ್ಲಿ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಅವರು ಕಾಲೇಜು ರಸ್ತೆಯಲ್ಲಿ ವಾಹನ ನಿಲುಗಡೆ ಸಂಬಂಧ ವೇಳೆ ನಿಗಧಿ ಮಾಡಬೇಕು ಎಂದು ಸಲಹೆ ಮಾಡಿದರು. 

     ವಾರಾಂತ್ಯದಲ್ಲಿ ರಾಜಸೀಟು ಮಾರ್ಗದಲ್ಲಿ ಪ್ರವಾಸಿಗರು ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವುದರಿಂದ ಖಾಸಗಿ ಬಸ್ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.      ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಹಾಗೂ ಪೊಲೀಸ್ ಇನ್ಸ್‍ಪೆಕ್ಟರ್ ಐ.ಪಿ.ಮೇದಪ್ಪ ಅವರು ಹಲವು ಮಾಹಿತಿ ನೀಡಿದರು. 

     ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಾರ್ವಜನಿಕರು ಬಸ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡುತ್ತಾರೆ. ಈ ಸಂಬಂಧ ಕೆಎಸ್‍ಆರ್‍ಟಿಸಿ ಅಥವಾ ಖಾಸಗಿ ಬಸ್‍ನವರು ಕುಗ್ರಾಮಗಳಿಗೂ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಸಲಹೆ ಮಾಡಿದರು.  

     ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಸಂಪರ್ಕದಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವುದು ಅತೀ ಮುಖ್ಯ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಹೊಸೂರು ರಮೇಶ್ ಜೋಯಪ್ಪ ಅವರು ಕುಶಾಲನಗರದಿಂದ ಸಂಪಾಜೆಯವರೆಗೆ ಹೆದ್ದಾರಿ ಮಾರ್ಗ ಹೊರತುಪಡಿಸಿ ಉಳಿದೆಡೆ ಖಾಸಗಿ ಬಸ್ ಸಂಚರಿಸುತ್ತಿವೆ ಎಂದರು. 

     ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರು ಕೊಡಗು ಜಿಲ್ಲೆಯ 55 ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಬೇಕು. ಈಗಾಗಲೇ 21 ಕಡೆಗಳಲ್ಲಿ ಬಸ್ ಸಂಚಾರ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸ್ಪಂದಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಅವಕಾಶ ಮಾಡಬೇಕು ಎಂದರು.

     ಅರುವತ್ತೋಕ್ಲು, ಪಾಲೂರು ಕಡೆ ಖಾಸಗಿ ಬಸ್‍ಗಳು ಸಂಚರಿಸುತ್ತಿಲ್ಲ. ಹಾಗಾಗಿ ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸುತ್ತಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಹೇಳಿದರು. 

     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದಾಗ ಸಾರ್ವಜನಿಕರಿಗೆ ಸ್ಪಂದಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳು ಸಂಚಾರ ಮಾಡಲಿ. ಸಾರ್ವಜನಿಕರಿಗೆ ಉಪಯುಕ್ತವಾಗುವುದು ಮುಖ್ಯ ಎಂದರು. 

     ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ ಅವರು ಆದಾಯ ಇರುವ ಕಡೆ ಮಾತ್ರ ಖಾಸಗಿ ಬಸ್‍ಗಳು ಸಂಚರಿಸುತ್ತವೆ. ಕೆಎಸ್‍ಆರ್‍ಟಿಸಿ ಬಸ್‍ಗಳು ಜಿಲ್ಲೆಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕುಗ್ರಾಮಗಳಿಗೂ ಬಸ್ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗಿದೆ. ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದಿಂದ 92 ಮಾರ್ಗದಲ್ಲಿ ಬಸ್ ಸಂಚರಿಸುತ್ತಿವೆ ಎಂದರು.

      ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಾರ್ವಜನಿಕರಿಗೆ ಬಸ್ ಸೇವೆಯನ್ನು ಸಮರ್ಪಕವಾಗಿ ಒದಗಿಸಬೇಕು. ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸುವುದು ಅತ್ಯಗತ್ಯ ಎಂದರು.       ಖಾಸಗಿ ಬಸ್ ಮಾಲೀಕರಾದ ಪುಟ್ಟಸ್ವಾಮಿ, ಆಟೋ ಚಾಲಕ ಸಂಘದವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.  

      ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಪಿ.ಆರ್.ರಾಜಗೋಪಾಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಲೋಕೋಪಯೋಗಿ ಇಲಾಖೆ ಎಇಇ ಎಚ್.ವಿ.ಶಿವರಾಮ್, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಎಇಇ ನಾಗರಾಜು, ಸಹಾಯಕ ಎಂಜಿನಿಯರ್ ಎಸ್.ಮುರುಗೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಜಿ.ಶ್ರೀನಿವಾಸ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನಯನಾ ನಾಯ್ಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಸಿನ್ ಪಾಷಾ, ಆರ್‍ಟಿಒ ಕಚೇರಿಯ ರೀಟಾ ಇತರರು ಇದ್ದರು.