Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಸರ್ಕಾರದಿಂದ ಹಲವು ಅಭಿವೃದ್ಧಿ ಕಾರ್ಯಕ್ರಮ: ರವೀಂದ್ರ ಶೆಟ್ಟಿ


ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗೆ 
ಸರ್ಕಾರದಿಂದ ಹಲವು ಅಭಿವೃದ್ಧಿ ಕಾರ್ಯಕ್ರಮ: ರವೀಂದ್ರ ಶೆಟ್ಟಿ

ಮಡಿಕೇರಿ: ರಾಜ್ಯದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗವು ಸುಮಾರು 75 ಲಕ್ಷ ಜನಸಂಖ್ಯೆ ಹೊಂದಿದ್ದು, ಇಂದಿಗೂ ಸಹ ಸ್ಥಿರ ಬದುಕು ಕಂಡುಕೊಂಡಿಲ್ಲ. ಆದ್ದರಿಂದ ಸರ್ಕಾರ ಮತ್ತು ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮವು ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ. 

       ನಗರದ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಕಚೇರಿಗೆ ಭೇಟಿ ನೀಡಿ, ಮಾಹಿತಿ ಪಡೆದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. 

       ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗವು ಬಹಳ ಹಿಂದುಳಿದಿದ್ದು, ಶೋಚನೀಯವಾಗಿ ಬದುಕುತ್ತಿದ್ದಾರೆ. ಇವರಿಗೆ ಧ್ವನಿಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಮತ್ತು ಅಭಿವೃದ್ಧಿ ನಿಗಮ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅಧ್ಯಕ್ಷರು ಹೇಳಿದರು. 

        ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ನಿಗಮದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಇವುಗಳನ್ನು ಬಳಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಸಹ ಒಂದು ಸಾವಿರಕ್ಕೂ ಹೆಚ್ಚು ಜನರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು. 

       ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಜನರ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ಈ ಸಮಾಜದ ಜನರು ಇಂದಿಗೂ ಸಹ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ಸ್ವಂತ ನೆಲ ಕಲ್ಪಿಸಬೇಕು ಎಂಬುದು ನಿಗಮದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ ಎಂದು ರವೀಂದ್ರ ಶೆಟ್ಟಿ ಅವರು ಹೇಳಿದರು. 

       ರಾಜ್ಯದ 25 ಜಿಲ್ಲೆಗಳಿಗೆ ಭೇಟಿ ನೀಡಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಸ್ಥಿತಿಗತಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕಳೆದ 2021-22 ನೇ ಸಾಲಿನಲ್ಲಿ ನಿಗಮದಲ್ಲಿ 2.2 ಕೋಟಿ ರೂ. ಉಳಿಕೆಯಾಗಿತ್ತು, ಈ ಬಾರಿ 6 ಕೋಟಿ ಸೇರಿ 8.2 ಕೋಟಿ ರೂ. ಯೋಜನೆಗೆ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

       ‘ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದಲ್ಲಿ ರಾಜ್ಯಾದ್ಯಂತ ಹಲವು ಪ್ರತಿಭಾವಂತರಿದ್ದು, ಇವರನ್ನು ಪ್ರೋತ್ಸಾಹಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ವೈಯಕ್ತಿಕವಾಗಿ 8 ವಿದ್ಯಾರ್ಥಿಗಳನ್ನು ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ರವೀಂದ್ರ ಶೆಟ್ಟಿ ಅವರು ತಿಳಿಸಿದರು.’

       ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಸಮಾಜದಲ್ಲಿನ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೀಘ್ರ ಬೆಂಗಳೂರಿನಲ್ಲಿ ಸಾಂಸ್ಕøತಿಕ ಕಲೆ ಉತ್ಸವ ಹಮ್ಮಿಕೊಳ್ಳಲಾಗುವುದು ಎಂದರು. 

       ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ, ನೇರ ಸಾಲ ಯೋಜನೆ, ಅರಿವು, ಭೂ ಖರೀದಿ, ಗಂಗಾ ಕಲ್ಯಾಣ, ಉದ್ಯಮಗಳನ್ನು ಸ್ಥಾಪಿಸಲು ಬ್ಯಾಂಕ್ ಮೂಲಕ ಸಾಲ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅರಿವು ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಜನಾಂಗದವರು ಸ್ಥಿರವಾಗಿ ನೆಲೆಸಲು ಭೂ ಖರೀದಿ ಯೋಜನೆ, ಸ್ವ ಸಹಾಯ ಸಂಘಗಳಿಗೆ ಆರ್ಥಿಕ ನೆರವು ಹೀಗೆ ನಿಗಮದಲ್ಲಿ ಸಾಕಷ್ಟು ಯೋಜನೆಗಳು ಇವೆ ಎಂದು ಅವರು ಹೇಳಿದರು. ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಹಾದೇವಿ ಇದ್ದರು.