ಮೂಲನಿವಾಸಿ ಜೇನುಕುರುಬ ಜನಾಂಗದವರ ಅಭಿವೃದ್ಧಿ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆ
ಅನುದಾನಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸಿ: ಡಾ.ಬಿ.ಸಿ.ಸತೀಶ
ಮಡಿಕೇರಿ ಜೂ.06: ಜೇನು ಕುರುಬರು ವಾಸಿಸುವ ಹಾಡಿಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮೂಲ ನಿವಾಸಿ ಫಲಾನುಭವಿಗಳಿಂದ ಅರ್ಜಿಗಳು ಬಂದಿದ್ದು, ಅದನ್ನು ಪರಿಶೀಲಿಸಿ ಅನುದಾನಕ್ಕೆ ತಕ್ಕಂತೆ ಕಾರ್ಯಕ್ರಮ ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೂಲನಿವಾಸಿ ಜೇನುಕುರುಬ ಜನಾಂಗದವರ ಅಭಿವೃದ್ಧಿ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಿವರ್ ರ್ಯಾಪ್ಟಿಂಗ್ ಉದ್ದೇಶಕ್ಕಾಗಿ ಈಗಾಗಲೇ ಹಲವಾರು ಅರ್ಜಿಗಳು ಬಂದಿದೆ. ಆ ನಿಟ್ಟಿನಲ್ಲಿ ಮೂಲ ನಿವಾಸಿಗಳಿಂದ 12 ಅರ್ಜಿಗಳು ಬಂದಿದ್ದು. ಅವರ ವೈಯಕ್ತಿಕ ಮಾಹಿತಿ ಪಡೆದು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹಾಡಿಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಜಲಜೀವನ ಮಿಷನ್ ಅಡಿ ಎಲ್ಲಾ ಹಾಡಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಹಾಡಿಗಳಲ್ಲಿ ಶಿಕ್ಷಣದಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಪರಿಶಿಷ್ಟ ಪಂಗಡದ ಮೂಲ ನಿವಾಸಿ ಸಮುದಾಯಗಳ ಜೇನುಕುರುಬ ಮತ್ತು ಕೊರಗ ಸಮುದಾಯದವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಗಧಿಯಾಗಿರುವ ಕಾರ್ಯಕ್ರಮಗಳಿಗೆ ವಿವಿಧ ಉದ್ದೇಶಕ್ಕಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಕೆಲವು ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಉಳಿದ ಫಲಾನುಭವಿಗಳನ್ನು ಅವರ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸಭೆಯಲ್ಲಿ ಮೂಲ ನಿವಾಸಿಗಳ ವಿವಿಧ ಸೌಲಭ್ಯಗಳಾದ ರ್ಯಾಪ್ಟಿಂಗ್ ಬೋಟ್ ಮತ್ತು ಸಲಕರಣೆ ವಿತರಣೆ, ಅಂಗಡಿ ವ್ಯಾಪಾರ, ಕೃಷಿ ಉದ್ದೇಶಕ್ಕಾಗಿ ಡೀಸೆಲ್, ಮೋಟಾರು ಮತ್ತು ಪೈಪುಗಳ ಸರಬರಾಜು, ಪಂಪ್‍ಸೆಟ್, ಕುರಿ ಸಾಕಾಣಿಕೆ, ತಂತಿ ಬೇಲಿ, ಹಂದಿ ಸಾಕಾಣಿಕೆ, ಹಸು ಸಾಕಾಣಿಕೆ, ಸರಕು ವಾಹನ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಅವರು ರ್ಯಾಪ್ಟಿಂಗ್ ಬೋಟ್ ಮತ್ತು ಸಲಕರಣೆಗಳಿಗೆ ಸಂಬಂಧಿಸಿದಂತೆ 12 ಅರ್ಜಿಗಳು ಬಂದಿದ್ದು, ಅದರಲ್ಲಿ 10 ಅರ್ಜಿದಾರರು ಪೂರ್ಣ ಮಾಹಿತಿ ನೀಡಿದ್ದು, ಇನ್ನು 2 ಅರ್ಜಿದಾರರ ಬಳಿ ಯಾವುದೇ ದಾಖಲೆ ಇರುವುದಿಲ್ಲ ಎಂದರು.
ಅಂಗಡಿ ವ್ಯಾಪಾರಕ್ಕೆ 10 ಅರ್ಜಿಗಳು ಬಂದಿದ್ದು, ಅವರಲ್ಲಿ 7 ಜನರು ಪೂರ್ಣ ದಾಖಲಾತಿಯನ್ನು ನೀಡಿದ್ದಾರೆ. ಇನ್ನು ಬಾಕಿ ಉಳಿದ ಮೂವರು ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ ಎಂದು ತಿಳಿಸಿದರು.
ಕೃಷಿ ಉದ್ದೇಶಕ್ಕಾಗಿ ಡೀಸೆಲ್, ಮೋಟಾರು ಮತ್ತು ಪೈಪುಗಳ ಸರಬರಾಜು, ಪಂಪ್ ಸೆಟ್‍ಗಳಿಗೆ 27 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 14 ಅರ್ಜಿದಾರರ ಬಳಿ ಪೂರ್ಣ ದಾಖಲಾತಿ ಸಲ್ಲಿಸಿದ್ದು, ಇನ್ನೂ ಮೂವರು ಯಾವುದೇ ದಾಖಲಾತಿ ನೀಡಿರುವುದಿಲ್ಲ ಎಂದರು.
ಕುರಿ ಸಾಕಾಣಿಕೆಗಾಗಿ 34 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 13 ಜನರು ಪೂರ್ಣ ದಾಖಲಾತಿ ನೀಡಿದ್ದು, ಉಳಿದ 27 ಮಂದಿ ಯಾವುದೇ ದಾಖಲಾತಿ ನೀಡಿರುವುದಿಲ್ಲ. ತಂತಿ ಬೇಲಿ ನಿರ್ಮಿಸಿಕೊಡುವಂತೆ 39 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 17 ಮಂದಿ ಪೂರ್ಣ ದಾಖಲಾತಿ ನೀಡಿದ್ದಾರೆ. ಉಳಿದ 22 ಮಂದಿ ಪೂರ್ಣ ಮಾಹಿತಿ ನೀಡಿರುವುದಿಲ್ಲ ಎಂದರು.
ಹಂದಿ ಸಾಕಾಣಿಕೆಯ ಉದ್ದೇಶಕ್ಕಾಗಿ 46 ಮಂದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 27 ಮಂದಿ ಪೂರ್ಣ ಮಾಹಿತಿ ನೀಡಿದ್ದಾರೆ. ಹಸು ಸಾಕಾಣಿಕೆ ಉದ್ದೇಶಕ್ಕಾಗಿ 30 ಮಂದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 15 ಮಂದಿ ಪೂರ್ಣ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಸೋಮವಾರಪೇಟೆ ಸಮಿತಿ ಸದಸ್ಯರಾದ ಚಂದ್ರು ಅವರು ಮಾತನಾಡಿ ಕೋವಿಡ್ ನಿಂದಾಗಿ ಯಾವುದೇ ರೀತಿಯ ಕಾಮಗಾರಿಗಳು ನಡೆದಿರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಹೇಳಿದರು.
ಹಾಡಿಗಳಲ್ಲಿ ಅಕ್ರಮವಾಗಿ ಮಾರಾಟವಾಗುವ ಮದ್ಯದ ಬಗ್ಗೆ ಸೂಕ್ತ ಕ್ರಮವಹಿಸಬೇಕು. ಸೋಮವಾರಪೇಟೆ ಸಮಿತಿ ಸದಸ್ಯರಾದ ಕೀರ್ತನಾ ಅವರು ಮಾತನಾಡಿ ಜೇನುಕುರುಬರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ಒದಗಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಶಾಲೆಗೆ ಹೋಗುವ ಮಕ್ಕಳನ್ನು ಕೂಡ ಅವರ ಪೋಷಕರು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಅಂತವರಿಗೆ ಜಿಲ್ಲಾಡಳಿತ ವತಿಯಿಂದ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಪಶುಪಾಲಾನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಚಂದ್ರಶೇಖರ್, ಜಿ.ಪಂ. ಇಇ ಶ್ರೀಕಂಠಯ್ಯ, ತಾಲ್ಲೂಕು ಸಮಿತಿಯ ಸದಸ್ಯರು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network