ಅಂಗನವಾಡಿ ಕೇಂದ್ರಗಳಲ್ಲಿ ಹಣ್ಣಿನ ಸಸಿ ನೆಡುವ ಅಭಿಯಾನ: ಜಿ.ಪಂ.ವತಿಯಿಂದ ವಿನೂತನ ಕಾರ್ಯ
ಮಡಿಕೇರಿ ಜೂ.05: ವಿಶ್ವ ಪರಿಸರ ದಿನಾಚರಣೆ ಮತ್ತು ರಾಷ್ಟ್ರೀಯ ಪೋಷಣ್ ಅಭಿಯಾನದ ಭಾಗವಾಗಿ ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 104 ಗ್ರಾ.ಪಂ.ಗಳ ಅಂಗನವಾಡಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಿಳಿಸಿದರು.
ಭಾನುವಾರ ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸಿ, ಅಭಿಯಾನದ ಕುರಿತು ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಸಸಿಗಳನ್ನು ಈ ದಿನ ನೆಡಲಾಗಿದೆ ಎಂದರು.
ಸಾಮಾಜಿಕ ಅರಣ್ಯ ಮತ್ತು ತೋಟಗಾರಿಕಾ ಇಲಾಖಾ ವ್ಯಾಪ್ತಿಯ ನರ್ಸರಿಗಳಿಂದ ಉತ್ತಮ ಗುಣಮಟ್ಟದ ಸಸಿಗಳನ್ನು ಗ್ರಾಮಪಂಚಾಯತ್ ಗಳಿಗೆ ನೀಡಲಾಗಿದೆ. ಬಳಿಕ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಸಿಗಳನ್ನು ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿಗಳಿಗೆ ವಿತರಿಸಿ, ಈ ದಿನ ಬಾಲ ವಿಕಾಸ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು ಹಾಗೂ ಅಂಗನವಾಡಿ ಮಕ್ಕಳ ಕೈಯಿಂದ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಎಂದು ಅವರು ಹೇಳಿದರು.
ಈ ಸಂಬಂಧ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ, ಅಗತ್ಯ ಕ್ರಮಕೈಗೊಂಡು ಈ ದಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು. ಮುಖ್ಯವಾಗಿ ಪಪ್ಪಾಯ, ನೆಲ್ಲಿಕಾಯಿ, ಸೀಬೆ, ನೇರಳೆ, ಬಟರ್ ಫ್ರೂಟ್, ಸೀತಾಫಲ, ಅಮೃತ ಬಳ್ಳಿ ಸೇರಿದಂತೆ ಪರಿಸರಕ್ಕೆ ಪೂರಕವಾಗಿರುವ ಸಸಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ನೆಡಲಾಗಿದೆ. ಜಿಲ್ಲೆಯಾದ್ಯಂತ 5 ಸಾವಿರಕ್ಕೂ ಅಧಿಕ ಸಸಿಗಳನ್ನು ಈ ದಿನ ನೆಡಲಾಗಿದೆ ಎಂದು ತಿಳಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಲಕ್ಷ್ಮಿ ಪಿ., ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ತಾ.ಪಂ.ಇಒ ಗಳಾದ ಶೇಖರ್, ಅಪ್ಪಣ್ಣ, ಜಯಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕ ಮುದ್ದಣ್ಣ, ಡಿ.ಎಫ್.ಒ ಪೂರ್ಣಿಮ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ಸೇರಿದಂತೆ ಗ್ರಾ.ಪಂ. ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಜಿ.ಪಂ.ಸಿ.ಇ.ಒ ಅವರು ಸಂತಸ ವ್ಯಕ್ತಪಡಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network