Header Ads Widget

Responsive Advertisement

"ವಿಶ್ವ ಪರಿಸರ ದಿನಾಚರಣೆ" ಹಾಗೂ ಜಿಲ್ಲಾಮಟ್ಟದ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ


ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ; ಎಂ.ಪಿ ಅಪ್ಪಚ್ಚು ರಂಜನ್

ಮಡಿಕೇರಿ ಜೂ.05 : ಜಾಗತಿಕ ತಾಪಮಾನಗಳ ವೈಪರೀತ್ಯದಿಂದ ಉಸಿರಾಡಲು ಶುದ್ಧ ಗಾಳಿ ಸಿಗದಂತಹ ಪರಿಸ್ಥಿತಿ ಎದುರಾಗಿದೆ ಆ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಅವರು ಹೇಳಿದರು.

ನಗರದ ಗಾಂಧಿ ಮಂಟಪದ ಬಳಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಅರಣ್ಯ ಇಲಾಖೆ ಕೊಡಗು ವೃತ್ತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಕೊಡಗು ಜಿಲ್ಲಾ ಘಟಕ ವತಿಯಿಂದ "ವಿಶ್ವ ಪರಿಸರ ದಿನಾಚರಣೆ" ಹಾಗೂ ಜಿಲ್ಲಾಮಟ್ಟದ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂಧನ ಬಳಕೆಯನ್ನು ಮಿತಗೊಳಿಸಿ ಸೈಕಲ್ ಬಳಕೆಯೂ ಪರಿಸರ ಸ್ನೇಹಿಯಾಗಿದೆ, ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಸರವನ್ನು ಕೂಡ ರಕ್ಷಿಸಬಹುದು. ಇರುವುದೊಂದು ಭೂಮಿ ಅದನ್ನು ಉಳಿಸಿ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಶಾಸಕರು ಸಲಹೆ ಮಾಡಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿದ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷರಾದ ರವಿಕುಶಾಲಪ್ಪ ಅವರು ಪರಿಸರ ದಿನ ಒಂದು ದಿನದ ಕಾರ್ಯಕ್ರಮವಾಗಬಾರದು, ಪರಿಸರವಿಲ್ಲದೆ ಮನುಷ್ಯ ಜೀವಿಸುವುದು ಕಷ್ಟಕರ, ಮನುಷ್ಯನ ಜೀವನದಲ್ಲಿ ಪರಿಸರವೂ ಒಂದು ಮುಖ್ಯ ಪಾತ್ರ ವಹಿಸಿದೆ ಎಂದರು.

ಕೇವಲ ಪಶ್ಚಿಮ ಘಟ್ಟಗಳು ಮಾತ್ರವಲ್ಲದೇ  ರಾಜ್ಯದ ಎಲ್ಲಾ ಕಡೆ ಪರಿಸರವನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಪರಿಸರ ನಾಶದಿಂದ ಪ್ರಸ್ತುತ ದಿನದಲ್ಲಿ ಉಸಿರಾಡುವ ಗಾಳಿಗೂ ಸಹ ಹಣ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು ಮಾತನಾಡಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವುದರ ಮೂಲಕ ಪರಿಸರದ ಬಗ್ಗೆ ಜನರಲ್ಲಿ  ಜಾಗೃತಿ ಮೂಡಿಸುವ ಕೆಲಸ ಜಿಲ್ಲಾಡಳಿತ ವತಿಯಿಂದ ಮಾಡಲಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ಅವರು ಮಾತನಾಡಿ ಪರಿಸರ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇರುವುದೊಂದೇ ಭೂಮಿ ಈ ಭೂಮಿಯನ್ನು ಸಂರಕ್ಷಿಸುವ ಕೆಲಸವಾಗಬೇಕು ಹಾಗೂ ಅರಣ್ಯಪ್ರದೇಶವನ್ನು ಕೂಡ ನಾವು ಸಂರಕ್ಷಿಸಬೇಕು ಆ ನಿಟ್ಟಿನಲ್ಲಿ  ಜಿಲ್ಲೆಯಲ್ಲಿ ಬೀಜ ಬಿತ್ತುವ ಬಿಜೋತ್ಸವ ಕಾರ್ಯಕ್ರಮವನ್ನು ಇಂದಿನಿಂದ ಜೂನ್ 12ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.

 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅನಿತಾ ಎನ್.ಪಿ. ಅವರು ಮಾತನಾಡಿ ನಮ್ಮ ಕೆಲಸ ಕೇವಲ ಮಾತನಾಡುವುದಲ್ಲ ಬದಲು ಅದನ್ನು ಅನುμÁ್ಠನಗೊಳಿಸುವುದಾಗಬೇಕು. ಮನುಷ್ಯನಿಗೆ ಯಾವ ರೀತಿ ಬದುಕುವ ಹಕ್ಕಿದೆಯೋ, ಅದೇ ರೀತಿ ಎಲ್ಲಾ ಜೀವಸಂಕುಲಗಳಿಗೆ ಪರಿಸರದಲ್ಲಿ ಬದುಕುವ ಹಕ್ಕಿದೆ ಎಂದರು.

ಮನುಷ್ಯನ ದುರಾಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದಾರೆ, ಆ ದಿಸೆಯಲ್ಲಿ ಪರಿಸರವನ್ನು ಉಳಿಸುವ ಸಂರಕ್ಷಿಸುವ ಕೆಲಸವಾಗಬೇಕು. ಇರುವುದೊಂದೇ ಭೂಮಿ ಅದನ್ನು ಉಳಿಸುವ ಕೆಲಸ ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.

      ಪರಿಸರ ಜಾಗೃತಿ ಜಾಥವು ನಗರದ ಪ್ರಮುಖ ಬೀದಿಯಲ್ಲಿ ಸಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ‘ಒಂದೇ ಒಂದು ಭೂಮಿ ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಉದ್ಘೋಷಣೆಯೊಂದಿಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ,ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ಜೈವಿಕ ಇಂಧನ ಭವಿಷ್ಯದ ಇಂಧನ, ಜಲವೇ ಜೀವಜಾಲ-ಹಸಿರೇ ಉಸಿರು,  ಜೀವ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮನೆಗೊಂದು ಮರ ಊರಿಗೊಂದು ವನ, ಸ್ವಚ್ಛ ಶಾಲಾ ಪರಿಸರ ಕಲಿಯಲು ಅನುಕೂಲಕರ, ಪಶ್ಚಿಮಘಟ್ಟ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡಿಗೆ ಬೆಂಕಿ ನಾಡಿಗೆ ಆಪತ್ತು , ನೀರನ್ನು ಮಿತವಾಗಿ ಬಳಸಿ, ಅರಣ್ಯ ಸಂಪತ್ತು ಸಂರಕ್ಷಿಸಿ ವನ್ಯಜೀವಿ ಸಂತತಿ ಉಳಿಸಿ,  ಜೀವಿ ವೈವಿಧ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರ ಸ್ನೇಹಿ ಬೈಸಿಕಲ್ ಬಳಸಿ ಇಂಧನ ಉಳಿಸಿ, ನಿಸರ್ಗ ಸಂರಕ್ಷಣೆ ನಮ್ಮೆಲ್ಲರ ಹೊಣೆ , ಬೈಸಿಕಲ್ ಬಳಸಿ ಇಂಧನ ಉಳಿಸಿ ಪರಿಸರ ಉಳಿಸಿ, ಸ್ವಚ್ಛ ಗ್ರಾಮ ಆರೋಗ್ಯಧಾಮ, ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಗಟ್ಟಿ, ಬೈಸಿಕಲ್ ಬಳಸಿ ಇಂದನ ಉಳಿಸಿ ಕುಡಿಯಿರಿ ಶುದ್ಧಜಲ ಉಳಿಸಿರಿ ಅಂತರ್ಜಲ,  ಕಾಡು ಬೆಳೆಸಿ ನಾಡು ಬೆಳೆಸಿ,  ಭುವಿಯೊಂದೇ ಭವಿಷ್ಯವೊಂದೇ,  ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ,  ಕಾಡೇ ರಾಷ್ಟ್ರದ ಸಂಪತ್ತು,  ಅರಣ್ಯ ಮರ್ದನ, ಮಾನವ ರೋಧನ,  ಬೆಂಕಿಯಿಂದ ಅರಣ್ಯ ರಕ್ಷಿಸಿ, ಮರ ಬೆಳೆಸೋಣ, ವನ್ಯಜೀವಿ ಸಂರಕ್ಷಿಸೋಣ-ಪರಿಸರ ಉಳಿಸೋಣ, ಸಸಿನೆಟ್ಟು ಬೆಳೆಸೋಣ- ಪರಿಸರ ಉಳಿಸೋಣ, ಗಿಡನೆಟ್ಟು ಬೆಳೆಸೋಣ ಬನ್ನಿ, ಪರಿಸರ ಸಂರಕ್ಷಿಸೋಣ ಬನ್ನಿ,  ನಮ್ಮ ನಡೆ ಹಸಿರೆಡೆಗೆ  ಇರುವುದೊಂದೇ ಭೂಮಿ: ಇದೇ ನಮ್ಮ ಇದನ್ನು ಸಂರಕ್ಷಿಸಿ, ಸಂಪೋಷಿಸಿ. ಎಂಬ ಪರಿಸರ ಘೋಷಣೆಯೊಂದಿಗೆ ಜಾಥಾ ಸಾಗಿತು.

      ಇದೇ ವೇಳೆಯಲ್ಲಿ  ಪರಿಸರ ದಿನಾಚರಣೆ ಅಂಗವಾಗಿ ಜೂನ್, 3 ರಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಜಿಲ್ಲಾಮಟ್ಟದಲ್ಲಿ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೆಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಉಪ ವಲಯ ಅರಣ್ಯಾಧಿಕಾರಿ ಪೂವಪ್ಪ, ನಗರಸಭೆ ಆಯುಕ್ತರಾದ ರಾಮದಾಸ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ-ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೆಶಕರಾದ ವೇದಮೂರ್ತಿ ಸ್ಕೌಟ್ ಮತ್ತು ಗೈಡ್ ಮುಖ್ಯ ಆಯುಕ್ತರಾದ ಬೇಬಿ ಮ್ಯಾಥ್ಯು, ಜಿಲ್ಲಾ ಸಂಘಟಕರಾದ ದಮಯಂತಿ, ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಇತರರು ಇದ್ದರು.