ಸರ್ಕಾರದ ವಿವಿಧ ಯೋಜನೆ; ರಾಜ್ಯಪಾಲರಿಂದ ಫಲಾನುಭವಿಗಳೊಂದಿಗೆ ಸಂವಾದ
ಮಡಿಕೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳೊಂದಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಸಂವಾದ ನಡೆಸಿದರು.
ನಗರದ ಹೋಟೆಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸ್ವಾಗತಿಸಿ, ಸರ್ಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಫಲಾನುಭವಿ ಮಲ್ಲಮ್ಮ ಅವರು ಹೂ ವ್ಯಾಪಾರ ಮಾಡುತ್ತಿದ್ದು, ನಗರಸಭೆ ವತಿಯಿಂದ 2.70 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿರುವುದರಿಂದ ಬದುಕು ಕಟ್ಟಿಕೊಳ್ಳಲು ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.
ಆ್ಯರಿಸ್ ಅವರು ಮಾತನಾಡಿ ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಡಿ ನಗರಸಭೆ ವತಿಯಿಂದ 10 ಸಾವಿರ ರೂ. ಸಹಾಯಧನ ಕಲ್ಪಿಸಿದ್ದರು, ಇದನ್ನು ಪಾವತಿಸಿದ ನಂತರ 20 ಸಾವಿರ ರೂ. ಸಹಾಯಧನ ಕಲ್ಪಿಸಿದರು. ರೂ.20 ಸಾವಿರ ಪಾವತಿಸಿದ ನಂತರ 50 ಸಾವಿರ ರೂ. ಮಂಜೂರಾಗಿದೆ. ಪಾಸ್ಟ್ ಫುಡ್ ಸ್ವ ಉದ್ಯೋಗ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಪಿ.ಕೆ.ರಂಗಪ್ಪ ಅವರು ಮಾತನಾಡಿ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಉನ್ನತ ಶಿಕ್ಷಣ ಕೊಡಿಸಿದೆ. ಮಗಳು ಕೇಂದ್ರ ನಾಗರಿಕ ಸೇವೆ ತರಬೇತಿ ಪಡೆಯುತ್ತಿದ್ದಾಳೆ. ಇದಕ್ಕಾಗಿ ನಗರಸಭೆಯಿಂದ 1.5 ಲಕ್ಷ ರೂ. ಪ್ರೋತ್ಸಾಹಧನ ಕಲ್ಪಿಸಿದ್ದಾರೆ. ಮಗಳು ಮತ್ತು ಮಗ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಂಜುಂಡ ಅವರು ಮಾತನಾಡಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಗುರುತಿನ ಚೀಟಿ ದೊರೆತಿದೆ. ಪಾಶ್ರ್ವವಾಯು, ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗಳಿದ್ದು, ಗುರುತಿನ ಚೀಟಿ ನೀಡಿರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಫಲಾನುಭವಿ ಯಶೋಧ ಅವರು ಮಾತನಾಡಿ 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡೆ, ಆ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿ ಇದ್ದೆ. ಸರ್ಕಾರ ವಾಸಕ್ಕೆ ಕರ್ಣಂಗೇರಿಯಲ್ಲಿ ಮನೆ ಕಲ್ಪಿಸಿದ್ದು, ಬದುಕು ದೂಡಲು ಸಹಕಾರಿ ಆಗಿದೆ ಎಂದು ಅವರು ಸ್ಮರಿಸಿದರು.
ಚಿರಾಗ್ ಅವರು ಮಾತನಾಡಿ ಎಂಬಿಬಿಎಸ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಿಂದುಳಿದ ವರ್ಗಗಳ ಇಲಾಖೆಯಿಂದ ಶಿಷ್ಯವೇತನ ದೊರೆಯುತ್ತಿರುವುದರಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.
ಎಚ್.ಎಸ್.ಮೋಹನ್ ಅವರು ಮಾತನಾಡಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಲಭ್ಯ ಆಗಿರುವುದರಿಂದ ಶಿಷ್ಯವೇತನ ದೊರೆತಿದೆ ಎಂದು ಹೇಳಿದರು. ಧರಣಿ ಅವರು ಮಾತನಾಡಿ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಧನ ದೊರೆತಿದೆ ಎಂದರು.
ಶರತ್ ಕುಮಾರ್ ಅವರು ಮಾತನಾಡಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಭಿತ್ತನೆ ಬೀಜ ಹಾಗೂ ಇತರೆ ಕೃಷಿಗಾಗಿ 9 ಕಂತಿನಲ್ಲಿ 18 ಸಾವಿರ ರೂ. ಪಾವತಿ ಆಗಿರುವುದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಮೀನಾ ಕುಮಾರಿ ಅವರು ಮಾತನಾಡಿ ಸಂಪಾಜೆಯಲ್ಲಿ ಸಂಜೀವಿನಿ ಒಕ್ಟೂಟದ ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಸಾವಿರ ರೂ. ಸಹಾಯಧನ ಕಲ್ಪಿಸಲಾಗುತ್ತದೆ ಎಂದರು. ಸ್ವ ಸಹಾಯ ಗುಂಪಿನಲ್ಲಿ 58 ಮಂದಿ ಸದಸ್ಯರಿದ್ದು, ಸರ್ಕಾರದಿಂದ ಒಂದಲ್ಲ ಒಂದು ಸೌಲಭ್ಯಗಳು ದೊರೆಯುತ್ತಿವೆ ಎಂದರು.
ನವೀನ್ ಅವರು ಮಾತನಾಡಿ ಪ್ರವಾಸೋದ್ಯಮ ಇಲಾಖೆಯಿಂದ 3 ಲಕ್ಷ ರೂ. ಸಹಾಯಧನದಡಿ ಟ್ಯಾಕ್ಸಿ ದೊರೆತಿದ್ದು, ಇದರಿಂದ ಜೀವನ ಸಾಗಿಸಲು ಸಹಕಾರಿ ಆಗಿದೆ ಎಂದರು.
ಮೋಹನ್ ಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಲವು ಸೌಲಭ್ಯಗಳು ದೊರೆಯುತ್ತಿದೆ ಎಂದರು. ರಶ್ಮಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ವ ಉದ್ಯೋಗ ಕೈಗೊಳ್ಳಲು 69 ಸಾವಿರ ರೂ ಸಹಾಯಧನ ದೊರೆತಿದೆ ಎಂದು ಸಂತಸಪಟ್ಟರು. ಉದ್ಯೋಗಿನಿ ಯೋಜನೆಯಡಿ ಸ್ವ ಉದ್ಯೋಗ ಕೈಗೊಳ್ಳಲು ಸಹಾಯಧನ ದೊರೆತಿದೆ ಎಂದರು.
ಸಂವಾದ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಉತ್ತಮ ಜೀವನ ಕಟ್ಟಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಸತಿ, ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಪಿಂಚಣಿ, ಪುನರ್ವಸತಿ ಯೋಜನೆ, ಶಿಷ್ಯವೇತನ, ಮುದ್ರಾ ಯೋಜನೆ, ಮುಖ್ಯಮಂತ್ರಿ ಅವರ ಅಮೃತ ಯೋಜನೆ, ಉನ್ನತ ಶಿಕ್ಷಣದಡಿ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹಧನ, ಉದ್ಯೋಗಿನಿ ಹೀಗೆ ಸರ್ಕಾರದ ವಿವಿಧ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಸಂವಾದ ನಡೆಸಿಕೊಟ್ಟರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಬಲವರ್ಧನ ಕಾರ್ಯಕ್ರಮ ಪ್ರಯೋಜನ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network