Header Ads Widget

Responsive Advertisement

ಪ್ರಾಣಿ ದಯಾ ಸಂಘದ ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸಭೆ


ಪ್ರಾಣಿ ದಯಾ ಸಂಘದ ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸಭೆ

ಮಡಿಕೇರಿ ಜು.05: ಪ್ರಾಣಿ ದಯಾ ಸಂಘದ ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ನಗರದ ಪಶುಪಾಲನಾ ಇಲಾಖೆ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಗೋಶಾಲೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಆಗಸ್ಟ್ ತಿಂಗಳಲ್ಲಿ ಉದ್ಘಾಟಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದರು. 

ಗೋಶಾಲೆಯಲ್ಲಿ ಜಾನುವಾರುಗಳಿಗೆ ನೀರು, ಮೇವು, ವಿದ್ಯುತ್ ಸಂಪರ್ಕ, ಗೋಶಾಲೆ ನಿರ್ವಹಣೆಗಾಗಿ ಹೊರಗುತ್ತಿಗೆಯಡಿ ಸೇವೆ ಪಡೆಯುವುದು ಇತರ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ಈ ಕುರಿತು ಮಾತನಾಡಿದ ಪಶುಪಾಲನಾ ಇಲಾಖಾ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು 50 ಜಾನುವಾರುಗಳ ಗೋಶಾಲೆ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಶೆಡ್ ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ತೊಟ್ಟಿ, ಟ್ಯಾಂಕ್ ಮತ್ತಿತರವನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು. 

ಜಾನುವಾರು ಸಾಗಾಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಚೆಕ್‍ಪೋಸ್ಟ್‍ಗಳಲ್ಲಿ ಅಗತ್ಯ ತಪಾಸಣೆ ಮಾಡುವಂತಾಗಲು ಪೊಲೀಸ್ ಇಲಾಖೆ ಜೊತೆ ಸಮನ್ವಯ ಸಾಧಿಸಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ಕುಟ್ಟ, ಮಾಕುಟ್ಟ, ಕರಿಕೆ ಚೆಕ್‍ಪೋಸ್ಟ್‍ಗಳಲ್ಲಿ ಪಶುಪಾಲನಾ ಇಲಾಖೆಯ ಸಿಬ್ಬಂದಿಗಳು ಸಹ ಇದ್ದು ಪರಿಶೀಲಿಸಬೇಕು ಎಂದರು. 

ಶ್ರೀಕೃಷ್ಣ ಗೋಶಾಲೆಯ ಹರೀಶ್ ಆಚಾರ್ಯ ಅವರು 140 ಜಾನುವಾರುಗಳನ್ನು ಸಾಕಾಲಾಗುತ್ತದೆ. ಗೋಶಾಲೆ ನಿರ್ವಹಣೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ಅನಿಮಲ್ ವೆಲ್ಪೇರ್ ವಾರ್ಡನ್ ಶಿವಶಂಕರ ಅವರು ಗೋವು ಸಾಕಾಣಿಕೆಗೆ ವಿಫುಲ ಅವಕಾಶವಿದೆ. ಆದರೆ ಸರಿಯಾದ ರೀತಿಯಲ್ಲಿ ಗಮನಿಸಬೇಕಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 5 ಖಾಸಗಿ ಗೋಶಾಲೆಗಳು ಇದ್ದು, ಕಾಮಧೇನು ಗೋಶಾಲೆಯಲ್ಲಿ 36, ಅಮ್ಮ ಗೋಶಾಲೆಯಲ್ಲಿ 38, ಕಾವೇರಿ ಗೋಶಾಲೆಯಲ್ಲಿ 13 ಜಾನುವಾರುಗಳು ಇವೆ ಎಂದು ಡಾ.ಸುರೇಶ್ ಭಟ್ ಅವರು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಆದ್ಯತೆ ಮೇಲೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ಮಾಡಿದರು.

ಅಂತರರಾಜ್ಯ ಚೆಕ್‍ಪೋಸ್ಟ್‍ಗಳಲ್ಲಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಹೊರಗುತ್ತಿಗೆಯಡಿ ಸೇವೆ ಪಡೆಯಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಸಮಿತಿ ಸದಸ್ಯರಾದ ಅಯ್ಯಪ್ಪ, ಪಾಲಿಕ್ಲೀನಿಕ್ ಉಪ ನಿರ್ದೇಶಕರಾದ ಡಾ.ಚಿದಾನಂದ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಪ್ರಸನ್ನ, ಡಾ.ನವೀನ್ ಕುಮಾರ್, ಡಾ.ಬಾದಾಮಿ, ಡಾ.ಶಾಂತೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಇತರರು ಇದ್ದರು.