Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿ ಬೆಳೆಗಾರರ ಗಮನಕ್ಕೆ


ಕಾಫಿ ಬೆಳೆಗಾರರ ಗಮನಕ್ಕೆ 

ಮಡಿಕೇರಿ ಜು.07: ಪ್ರಸ್ತುತ ಕಾಫಿ ಬೆಳೆಯುವ ಪ್ರದೇಶಗಳಲ್ಲಿ, ನಿರಂತರವಾಗಿ ಮುಂಗಾರು ಮಳೆಯಾಗುತ್ತಿದೆ. ಮುಂಗಾರು ಮಳೆಯಲ್ಲಿ, ಬರುವ ರೋಗಗಳಾದ ಕಪ್ಪು ಕೊಳೆ ಮತ್ತು ಕಾಯಿ ತೊಟ್ಟು ಕೊಳೆ ರೋಗಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಬಿಸಿಲು ಇಲ್ಲದ ಬಿಡುವಿಲ್ಲದ ಮಳೆ, ತಂಪಾದ ತಾಪಮಾನ, ಹೆಚ್ಚಿನ ಆದ್ರ್ರತೆ (ವಾತಾವರಣದ ತೇವಾಂಶ), ಮೋಡ ಕವಿದ ವಾತಾವರಣ ಮತ್ತು ಅಸಮರ್ಪಕ ಚರಂಡಿ, ನಿರಂತರ ಭಾರಿ ಮಳೆಯಿಂದಾಗಿ ತೋಟಗಳಲ್ಲಿ ನೀರು ನಿಂತಿರುವುದು ಅಥವಾ ವೆಟ್ ಫೀಟ್ ಸ್ಥಿತಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಎರಡರಲ್ಲೂ, ಕೊಳೆ ರೋಗ ಉಂಟಾಗಿ, ಉಲ್ಬಣಗೊಂಡು ಹರಡಲು ಸಹಾಯ ಮಾಡುತ್ತವೆ. 

ಈ ರೋಗಗಳು ಕಣಿವೆ ಪ್ರದೇಶದ ತೋಟಗಳು ಹಾಗೂ ಸಿಲ್ವರ್ ಹೆಚ್ಚಿರುವ ತೋಟಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ, ಸರಿಯಾದ ಸಮಯದಲ್ಲಿ ಈ ರೋಗಗಳನ್ನು ನಿಯಂತ್ರಿಸದಿದ್ದಲ್ಲಿ, ಶೇ 10-20 ರಷ್ಟು ಫಸಲು ನಷ್ಟ ಉಂಟಾಗಬಹುದು, ಆದ್ದರಿಂದ, ಫಸಲು ನಷ್ಟವನ್ನು ಕಡಿಮೆ ಮಾಡಲು ಬೆಳೆಗಾರರು ಕ್ರಮಗಳನ್ನು ಕೂಡಲೇ ಕೈಗೊಳ್ಳಲು ಸಲಹೆ ನೀಡಲಾಗಿದೆ.

 ರೋಗವು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಕೊಳೆ ರೋಗ ಪೀಡಿತ ಎಲೆಗಳು ಹಾಗೂ ಕಾಯಿಗಳನ್ನು ತೆಗೆದುಹಾಕಿ ನಾಶಮಾಡುವುದು. ತೋಟಗಳಲ್ಲಿ ಉತ್ತಮವಾಗಿ ಗಾಳಿಯಾಡಲು, ನೆತ್ತಿ ಬಿಡಿಸುವುದು, ಕಾಫಿ ಗಿಡಗಳ ಮೇಲೆ ಬಿದ್ದಿರುವ ನೆರಳು ಮರಗಳ ಎಲೆಗಳನ್ನು ತೆಗೆದು ಹಾಕಿ ಕಂಬ ಚಿಗುರುಗಳನ್ನು ತೆಗೆದು ಹಾಕುವುದು. ತಕ್ಷಣವೇ ನೀರಿನ ನಿಲ್ಲುವಿಕೆ ಅಂದರೆ ವೆಟ್ ಫೀಟ್ ತಡೆಗಟ್ಟಲು ಮತ್ತು ಮಳೆಗಾಲದಲ್ಲಿ ನೀರಿನ ಬಸಿಯುವಿಕೆ ಮತ್ತು ಆವಿಯಾಗುವಿಕೆಯನ್ನು ಹೆಚ್ಚಿಸಲು, ಕಾಫಿ ಗಿಡಗಳ ಬುಡದಲ್ಲಿ ಇರುವ ದರಗು ಮತ್ತು ಬಿದ್ದಿರುವ ಹಸಿರೆಲೆಗಳನ್ನು ತೆಗೆದು ನಾಲ್ಕು ಗಿಡಗಳ ಮಧ್ಯ ಭಾಗಕ್ಕೆ ರಾಶಿ ಮಾಡಬೇಕು. ನೀರು ನಿಲ್ಲದಂತೆ ಚರಂಡಿಗಳನ್ನು ಮಾಡುವುದು.

 1 ಲೀಟರ್ ನೀರಿಗೆ 1 ಮಿಲಿ ಪಾಲಿಕ್ಯೂರ್ 25.9 ಇಸಿ (ಟೆಬುಕೊನಝೋಲ್ 25.6 ಎಸ್.ಸಿ.), 200 ಮಿಲಿ ಅಂಟು ದ್ರಾವಣ ಬೆರೆಸಿ ಕಪ್ಪು ಕೊಳೆ ಮತ್ತು ಕಾಯಿ ತೊಟ್ಟು ಕೊಳೆ ರೋಗಗಳು ಕಂಡ ಸ್ಥಳಗಳಲ್ಲಿ, ಸಿಂಪರಣೆ ಮಾಡುವುದು ಅಥವಾ 200 ಲೀಟರ್ ನೀರಿಗೆ 200 ಮಿಲಿ ಬಾವಿಸ್ಟಿನ್ ಬೆರೆಸಿ, ಕಪ್ಪು ಕೊಳೆ ಮತ್ತು ಕಾಯಿ ತೊಟ್ಟು  ಕೊಳೆ ರೋಗಗಳು ಕಂಡ ಸ್ಥಳಗಳಲ್ಲಿ ಸಿಂಪರಣೆ ಮಾಡುವುದು. ಆರೋಗ್ಯಕರ ಕಾಯಿ ಬೆಳವಣಿಗೆಗೆ ಮತ್ತು ಬಲಿಯದ ಕಾಯಿಗಳ ಉದುರುವಿಕೆಯನ್ನು ತಡೆಯಲು ಮಳೆಯ ಬಿಡುವಿನ ಸಮಯದಲ್ಲಿ, ಅಂದರೆ ಎಕರೆಗೆ ಒಂದು ಚೀಲ ಯೂರಿಯಾ ರಸಗೊಬ್ಬರವನ್ನು ಕಾಫಿ ಗಿಡಗಳ ಸುತ್ತ ಒಂದು ಅಡಿ ದೂರದಲ್ಲಿ ಹಾಕಬೇಕು ಎಂದು ಗೋಣಿಕೊಪ್ಪ ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ  ಅವರು ತಿಳಿಸಿದ್ದಾರೆ.