Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೃಷಿ ಪ್ರಶಸ್ತಿಗೆ ರೈತ/ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ


ಕೃಷಿ ಪ್ರಶಸ್ತಿಗೆ ರೈತ/ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

ಮಡಿಕೇರಿ ಜು.07: ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ-ಕೃಷಿ ಉತ್ಪಾದನಾ ಬಹುಮಾನ ಯೋಜನೆಯನ್ನು ಕೃಷಿ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, 2022-23 ನೇ ಸಾಲಿಗೆ ರೈತರಿಂದ ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ. 

ಪ್ರಸ್ತುತ ವರ್ಷದಲ್ಲಿ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಹಾಗೂ ಇತರ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಂದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲಾ ಮಟ್ಟಗಳಿಗೆ ಅನ್ವಯಿಸುವಂತೆ ಸಾಮಾನ್ಯ ರೈತ/ ರೈತ ಮಹಿಳೆಯರಿಗೆ ರೂ.100, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತ/ ರೈತ ಮಹಿಳೆಯರಿಗೆ ರೂ.25 ನೋಂದಣಿ ಶುಲ್ಕವಿದೆ. 

ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಸ್ಪರ್ಧಾ ಬೆಳೆ ಬೆಳೆದಿರಬೇಕು. ಸ್ವಂತ ಜಮೀನು ಇರುವ ಬಗ್ಗೆ ಪಹಣಿ ಪತ್ರ ಹೊಂದಿರಬೇಕು. ಯಾವುದೇ ಹಂತದಲ್ಲಿ ಒಮ್ಮೆ ಬಹುಮಾನ ಪಡೆದ ರೈತ/ ರೈತ ಕುಟುಂಬದವರು ಮುಂದಿನ ಐದು ವರ್ಷಗಳ ಅವಧಿಗೆ ಆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹನಾಗಿರುವುದಿಲ್ಲ. ಆದರೆ ಆ ಬೆಳೆಯ ಮೇಲಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಾಲ್ಲೂಕು ಮಟ್ಟದಲ್ಲಿ ಬಹುಮಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಸ್ಪರ್ಧಿಸಬಹುದು ಮತ್ತು ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದವರು ರಾಜ್ಯ ಮಟ್ಟಕ್ಕೆ ಸ್ಪರ್ಧಿಸಬಹುದು. ಆದರೆ ಕೆಳ ಹಂತದ ಸ್ಪರ್ಧೆಗೆ ಸ್ಪರ್ಧಿಸುವಂತಿಲ್ಲ. ಕಟಾವಿಗೆ 15 ದಿನಗಳ ಮುಂಚಿತವಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಕಟಾವು ದಿನಾಂಕವನ್ನು  ತಿಳಿಸಬೇಕು. 

ತಾಲ್ಲೂಕು ಮಟ್ಟ ಪ್ರಥಮ ರೂ.15 ಸಾವಿರ, ದ್ವಿತೀಯ ರೂ.10 ಸಾವಿರ ಮತ್ತು ತೃತೀಯ ರೂ.5 ಸಾವಿರ, ಜಿಲ್ಲಾ ಮಟ್ಟ ಪ್ರಥಮ ರೂ.30 ಸಾವಿರ, ದ್ವಿತೀಯ ರೂ.25 ಸಾವಿರ ಮತ್ತು ತೃತೀಯ ರೂ.20 ಸಾವಿರ, ರಾಜ್ಯ ಮಟ್ಟದಲ್ಲಿ ಪ್ರಥಮ ರೂ.50 ಸಾವಿರ, ದ್ವಿತೀಯ ರೂ.40 ಸಾವಿರ ಮತ್ತು ತೃತೀಯ ರೂ.35 ಸಾವಿರ ಬಹುಮಾನ ನೀಡಲಾಗುತ್ತದೆ. 

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರೈತ/ ರೈತ ಮಹಿಳೆಯರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಕಂದಾಯ ಇಲಾಖೆಯಿಂದ ಪಡೆದ ಪಹಣಿ ಪತ್ರದೊಂದಿಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ತಿಳಿಸಿದ್ದಾರೆ.