Header Ads Widget

Responsive Advertisement

ಕಾರ್ಮಿಕ ಅದಾಲತ್‍ಗೆ ಜಿನರಾಳಕರ ಭೀಮರಾವ್ ಲಗಮಪ್ಪ ಅವರಿಂದ ಚಾಲನೆ


ಕಾರ್ಮಿಕ ಅದಾಲತ್‍ಗೆ ಜಿನರಾಳಕರ ಭೀಮರಾವ್ ಲಗಮಪ್ಪ ಅವರಿಂದ ಚಾಲನೆ

ಮಡಿಕೇರಿ ಜು.07: ಕಾರ್ಮಿಕ ಅದಾಲತ್ 2.0 ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿನರಾಳಕರ ಭೀಮರಾವ ಲಗಮಪ್ಪ ಅವರು ಚಾಲನೆ ನೀಡಿದರು. 

ಕಾರ್ಮಿಕ ಅದಾಲತ್ 2.0 ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿನರಾಳಕರ ಭೀಮರಾವ ಲಗಮಪ್ಪ ಅವರು ಕಾರ್ಮಿಕರ ಅಹವಾಲು ಸಮಸ್ಯೆ ಆಲಿಸಿ ಪರಿಹರಿಸಲು ಕಾರ್ಮಿಕ ಇಲಾಖೆ ಕಾರ್ಮಿಕ ಅದಾಲತ್ 2.0 ನ್ನು ಜುಲೈ, 15 ರಿಂದ ಆಗಸ್ಟ್, 15 ರವರೆಗೆ ಹಮ್ಮಿಕೊಂಡಿದ್ದು, ಎಲ್ಲಾ ವಲಯದ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸುವುದರೊಂದಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಹಾಗೂ ಇಲಾಖೆಯ ಅಧಿಕಾರಿಗಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾನೂನು ಪ್ರಕಾರ ಪರಿಹಾರ ಒದಗಿಸಬೇಕು ಎಂದು ಕರೆ ನೀಡಿದರು.  

ಕಾರ್ಮಿಕ ಅದಾಲತ್ 2.0 ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಅವರು ಪಾಲ್ಗೊಂಡು ಕಾರ್ಮಿಕ ಇಲಾಖೆ ಹಾಗೂ ಇಲಾಖೆಯ ಅಧೀನದಲ್ಲಿ ಬರುವ ಮಂಡಳಿಗಳಿಗೆ ಸಂಬಂಧಿಸಿದ ಬಾಕಿ ಉಳಿದ ಅರ್ಜಿಗಳು/ ಪ್ರಕರಣಗಳನ್ನು ತ್ವರಿತ ವಿಲೇವಾರಿ ಮಾಡಿ ಕಾರ್ಮಿಕರಿಗೆ ನ್ಯಾಯೋಚಿತವಾಗಿ ದೊರಕಬೇಕಾದ ಪರಿಹಾರಗಳನ್ನು ದೊರಕಿಸಿಕೊಡಬೇಕೆಂದು ಹಾಗೂ ಅರ್ಹ ಕಾರ್ಮಿಕರು ತಮಗೆ ದೊರಕಬೇಕಾದ ಪರಿಹಾರದ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಾರ್ಮಿಕರ ಯಾವುದೇ ಅರ್ಜಿಗಳು ಬಂದರೆ ಅವುಗಳನ್ನು ಆಧ್ಯತೆಯ ಮೇರೆಗೆ ಕಾನೂನುಬದ್ಧವಾಗಿ ಅರ್ಹ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಂತ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ಕಾರ್ಮಿಕರು ತಾವು ಅರ್ಜಿ ಸಲ್ಲಿಸಿ ಇತ್ಯರ್ಥವಾಗದೆ ಬಾಕಿ ಉಳಿದುಕೊಂಡಿದ್ದರೆ ತಾವು ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿ ತ್ವರಿತವಾಗಿ ಪರಿಹರಿಸಿಕೊಳ್ಳಬೇಕೆಂದು ಹಾಗೂ ತ್ವರಿತವಾಗಿ ಅರ್ಜಿ ವಿಲೇವಾರಿಯನ್ನು ಮಾಡುತ್ತೇವೆ ಎಂದು ತಿಳಿಸಿದರು.

ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಮಿಕ ಸಚಿವರ  ನಿರ್ದೇಶನದಂತೆ ಹಾಗೂ ಕಾರ್ಮಿಕ ಆಯುಕ್ತರವರ ಆದೇಶದಂತೆ ಕಾರ್ಮಿಕ ಇಲಾಖೆ ಹಾಗೂ ಇಲಾಖೆಯ ಅಧೀನದಲ್ಲಿ ಬರುವ ಮಂಡಳಿಗಳಿಗೆ ಸಂಬಂಧಿಸಿದ ಬಾಕಿ ಉಳಿದ ಅರ್ಜಿಗಳು/ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ರಾಜ್ಯದಾದ್ಯಂತ 2021 ಆಗಸ್ಟ್, 16 ರಿಂದ ಸೆಪ್ಟೆಂಬರ್, 15 ರವರೆಗೆ ಒಂದು ತಿಂಗಳ ಅವಧಿಗೆ ಕಾರ್ಮಿಕ ಅದಾಲತ್‍ನ್ನು ಆಯೋಜಿಸಿ ಸಹಸ್ರಾರು ಅರ್ಜಿಗಳು/ ಪ್ರಕರಣಗಳು ವಿಲೇವಾರಿಯಾಗಿ ಕಾರ್ಮಿಕ ಅದಾಲತ್-1.0 ಅಭೂತಪೂರ್ವ ಯಶಸ್ಸು ಕಂಡಿರುವುದರಿಂದ ಪ್ರಸ್ತುತ ಸಾವಿರಾರು ಫಲಾನುಭವಿಗಳು ವಿವಿಧ ಪ್ರಕರಣಗಳಲ್ಲಿ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. 

ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡುವುದು ಅತ್ಯವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ, ಕಾರ್ಮಿಕ ಸಚಿವರು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು 2022 ಜುಲೈ, 15 ರಿಂದ ಆಗಸ್ಟ್, 15 ರವರೆಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಇಲಾಖೆಯಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳು/ ಪ್ರಕರಣಗಳನ್ನು ಇತ್ಯರ್ಥ ಮಾಡಲು ಅಗತ್ಯ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲು ಹಾಗೂ ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಂಡು, ಕಡತ ವಿಲೇವಾರಿ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಮಿಕ ಅದಾಲತ್-2.0 ಮೂಲಕ ಸೂಕ್ತ ಕ್ರಮವಹಿಸಲು ಇಲಾಖೆಗೆ ನಿರ್ದೇಶನ ನೀಡಿದೆ. 

ಇಲಾಖೆಯ ಎಲ್ಲಾ ಅಧಿಕಾರಿಗಳು/ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಅದಾಲತ್-2.0 ಬಗ್ಗೆ ಸಂಬಂಧಿಸಿದ ಭಾಗೀದಾರರಿಗೆ ಅರಿವು ಮೂಡಿಸಲು ವ್ಯಾಪಕ ಮಾಹಿತಿ ನೀಡಿ, ವಿವಿಧ ಕಾರ್ಮಿಕ ಕಾಯ್ದೆಗಳಡಿ ಹಾಗೂ ವಿವಿಧ ಮಂಡಳಿಗಳ ಮೂಲಕ ಅನುಷ್ಠಾನಗೊಳಿಸುವ ಯೋಜನೆಗಳಡಿ ಸ್ವೀಕೃತವಾಗಿರುವ, ಇತ್ಯರ್ಥವಾಗದೆ ಈವರೆಗೆ ಬಾಕಿ ಉಳಿದಿರುವ ಪ್ರಕರಣಗಳನ್ನು/ಕಡತಗಳನ್ನು ಹಾಗೂ ವಿವಿಧ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಆದೇಶಿಸಿರುವುದರಿಂದ ಕಾರ್ಮಿಕ ಅದಾಲತ್ 2.0ರ ಪ್ರಚಾರ ಕಾರ್ಯಕ್ರಮವನ್ನು ಅಟೋ ರಿಕ್ಷಾ ಮತ್ತು ಟಾಟಾ ಏಸಿ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.