Header Ads Widget

ಸರ್ಚ್ ಕೂರ್ಗ್ ಮೀಡಿಯ

ಮುಂಗಾರು ಪರಿಸ್ಥಿತಿ ಎದುರಿಸಲು ಸರ್ಕಾರದಿಂದ ಸಕಲ ಸಿದ್ಧತೆ: ಆರ್.ಅಶೋಕ್


ಮುಂಗಾರು ಪರಿಸ್ಥಿತಿ ಎದುರಿಸಲು ಸರ್ಕಾರದಿಂದ ಸಕಲ ಸಿದ್ಧತೆ: ಆರ್.ಅಶೋಕ್

ಮಡಿಕೇರಿ ಜು.07: ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದ್ದಾರೆ.  

ಸಭಾ ಕಾರ್ಯಕ್ರಮಕ್ಕೂ ಮೊದಲು ಮನೆ ಹಾನಿ ಸಂಬಂಧ ಊರುಬೈಲು ಚೆಂಬುವಿನಲ್ಲಿ ವಾಸ ಮಾಡುತ್ತಿದ್ದ ನೆಲ್ಲಿಮನಿ ಮನೆಯ ಅಕ್ಕಮ್ಮ ಅವರಿಗೆ 24,726 ಸಾವಿರ ರೂ. ಚೆಕ್‍ನ್ನು ಅಕ್ಕಮ್ಮ ಕುಟುಂಬದವರಿಗೆ ವಿತರಿಸಿದ ಬಳಿಕ ಚೆಂಬು ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂದಾಯ ಸಚಿವರು ಮಾತನಾಡಿದರು.   

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, 18 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಉಳಿದಂತೆ ಇಲ್ಲಿಯ ವರೆಗೆ ಮೂರು ಜಿಲ್ಲೆಗಳಲ್ಲಿ (ಕೊಡಗು, ಹಾವೇರಿ, ಶಿವಮೊಗ್ಗ) ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.  

ರಾಜ್ಯದ 13 ಜಲಾಶಯಗಳಲ್ಲಿ 800 ಟಿಎಂಸಿ ನೀರು ಇದ್ದು, ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸದೆ ನದಿಗೆ ನೀರು ಬಿಡುವಂತಾಗಲು ಕ್ರಮವಹಿಸಲಾಗಿದೆ. ಹಾಗೆಯೇ ಹೆಚ್ಚಿನ ಮಳೆಯಾಗುತ್ತಿರುವ ಏಳು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ನಿರಂತರ ಸಂಪರ್ಕ ಸಾಧಿಸಿ ಯಾವುದೇ ರೀತಿಯ ಸಮಸ್ಯೆ ಉದ್ಭವವಾಗದಂತೆ ಗಮನಹರಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು.  

ಸದ್ಯ ಇನ್ನೂ ಮೂರು ದಿನಗಳ ಕಾಲ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ ಎಂದು ಕಂದಾಯ ಸಚಿವರು ತಿಳಿಸಿದರು.

‘ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಮನೆ ಹಾನಿಯಾದಲ್ಲಿ ಈ ಹಿಂದೆ 95 ಸಾವಿರ ರೂ. ನೀಡಲಾಗುತ್ತಿತ್ತು, ಈಗ 5 ಲಕ್ಷ ರೂ.ವರೆಗೆ, ಹಾಗೆಯೇ ಭಾಗಶಃ ಮನೆ ಹಾನಿಯಾದಲ್ಲಿ 5 ಸಾವಿರ ರೂ. ದಿಂದ 50 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ಈ ಸಂಬಂಧ ಕೂಡಲೇ ಸರ್ಕಾರದ ಆದೇಶ ಹೊರಬೀಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.’ 

   ರಾಜ್ಯದ ಯಾವ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ, ಜಾನುವಾರು ಹಾನಿಯಾಗಿದ್ದಲ್ಲಿ ತಕ್ಷಣವೇ ಪರಿಹಾರ ನೀಡಲಾಗುವುದು. ಇದರಲ್ಲಿ ಯಾವುದೇ ಕಾರಣಕ್ಕೂ ವಿಳಂಭ ಮಾಡದಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. 

ಚೆಂಬು ಭಾಗದಲ್ಲಿ ಭೂಕಂಪನ ಸಂಬಂಧಿಸಿದಂತೆ ಮಾಹಿತಿ ಪಡೆದ ಕಂದಾಯ ಸಚಿವರು ಚೆಂಬು ಭಾಗದಲ್ಲಿ ಭೂಕಂಪನದ ತೀವ್ರತೆ ಕಡಿಮೆ ಇದ್ದು, ಯಾವುದೇ ಕಾರಣಕ್ಕೂ ಗಾಬರಿಯಾಗುವ ಅಗತ್ಯ ಇಲ್ಲ ಎಂದು ಒತ್ತಿ ಹೇಳಿದರು. 

ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭೂಕಂಪನ ಮಾಪಕ ಅಳವಡಿಸಲಾಗಿದ್ದು, ಈಗಾಗಲೇ 2.5, 3.3, 1.8, 2.1 ರಿಕ್ಟರ್ ಮಾಪಕದಲ್ಲಿ ಭೂಕಂಪನ ದಾಖಲಾಗಿದೆ. ಭೂಕಂಪನದ ತೀವ್ರತೆ ಕಡಿಮೆ ಇದೆ. ಹಾಗಾಗಿ ಯಾರೂ ಸಹ ಆತಂಕ ಪಡುವ ಅಗತ್ಯವಿಲ್ಲ. ಭೂಕಂಪನ ನಿರ್ವಹಿಸಲು ಈಗಾಗಲೇ ತಾಂತ್ರಿಕ ಭೂವಿಜ್ಞಾನಿಗಳ ತಂಡ ಆಗಮಿಸಿದೆ ಎಂದರು.  

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಚೆಂಬು ಭಾಗದ ಜನರು ಯಾವುದೇ ರೀತಿಯ ಆತಂಕಕ್ಕೆ ಕಿವಿಗೊಡಬಾರದು ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.   

 ಸಂಪಾಜೆ, ಪೆರಾಜೆ, ಚೆಂಬು ಭಾಗದಲ್ಲಿ ಭೂಕಂಪನ ಸಂಬಂಧ ತಾಂತ್ರಿಕ ತಜ್ಞರು ನಿರಂತರವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಯಾರೂ ಸಹ ಆತಂಕ ಪಡಬಾರದು ಎಂದು ಮನವಿ ಮಾಡಿದರು. 

ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಉಪಾಧ್ಯಾಯ ಅವರು ಮಾತನಾಡಿ ಕಳೆದ 15 ದಿನಗಳಿಂದ ಭೂ ಕಂಪನದಿಂದ ಈ ಭಾಗದಲ್ಲಿ ಗ್ರಾಮಸ್ಥರು ಭಯಭೀತರಾಗಿ ಬದುಕು ನಡೆಸುತ್ತಿದ್ದಾರೆ. ಒಂದೇ ದಿನ ಮೂರು ಬಾರಿ ಭೂಕಂಪನ ಉಂಟಾಯಿತು. ಹಿಂದೆ ಈ ರೀತಿ ಇರಲಿಲ್ಲ. ಭೂಕಂಪನದಿಂದಾಗಿ ಅಲ್ಲಲ್ಲಿ ನೀರಿನ ಸೆಳೆತ ಉಂಟಾಗಿದೆ. ಇದರಿಂದ ಅಲ್ಲಲ್ಲಿ ಬರೆಕುಸಿತ ಉಂಟಾಗುತ್ತಿದೆ. ಅಡಿಕೆ ತೋಟ ನಾಶವಾಗಿದೆ. ಪರಿಹಾರ ವಿತರಿಸುವಂತಾಗಬೇಕು ಎಂದು ಅವರು ಕೋರಿದರು. 

ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಡಿಎಫ್‍ಒ ಪೂವಯ್ಯ, ಚೆಂಬು ಗ್ರಾ.ಪಂ.ಅಧ್ಯಕ್ಷರಾದ ಕುಸುಮ ಇತರರು ಇದ್ದರು. ಇದಕ್ಕೂ ಮೊದಲು ಮಡಿಕೇರಿ-ಮಂಗಳೂರು ರಸ್ತೆ ಕರ್ತೋಜಿಗೆ ಭೇಟಿ ನೀಡಿ ಸಚಿವರು ಮಾಹಿತಿ ಪಡೆದರು.