Header Ads Widget

ಸರ್ಚ್ ಕೂರ್ಗ್ ಮೀಡಿಯ

ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗಳು ಹಾಗೂ ಮಾಲೀಕರ ಜೊತೆ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಸಂಬಂಧ ನಡೆದ ಸಭೆ


ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗಳು ಹಾಗೂ ಮಾಲೀಕರ ಜೊತೆ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಸಂಬಂಧ ನಡೆದ ಸಭೆ

ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸಲು ಮುಂದಾಗಿ: ಕುಮುದ 

ಮಡಿಕೇರಿ ಆ.17: ರಾಜ್ಯ ಚುನಾವಣಾ ಆಯೋಗವು ಎಲ್ಲಾ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ. ಆ ನಿಟ್ಟಿನಲ್ಲಿ ಮತದಾರರು ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‍ನ ಪ್ರತಿಯನ್ನು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ನೀಡಿದರೆ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಅವರು ತಿಳಿಸಿದ್ದಾರೆ. 

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮಡಿಕೇರಿ ತಾಲ್ಲೂಕು ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗಳು ಹಾಗೂ ಮಾಲೀಕರ ಜೊತೆ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.  

ಪಡಿತರ ಚೀಟಿಯಲ್ಲಿ ಅರ್ಹ ಫಲಾನುಭವಿಗಳು ಇಕೆವೈಸಿ ಮಾಡಿಸಿಕೊಳ್ಳಲು ಬಿಟ್ಟು ಹೋಗಿದ್ದಲ್ಲಿ ಇಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆ ನಿಟ್ಟಿನಲ್ಲಿ ಫಲಾನುಭವಿಗಳು ಕಡ್ಡಾಯವಾಗಿ ಇಕೆವೈಸಿ ಮಾಡಿಸಿಕೊಳ್ಳುವಂತೆ ತಿಳಿಸಿದರು. 

ಪ್ರಸ್ತುತ ಸರ್ಕಾರದ ಆದೇಶದಂತೆ ಇ-ಕೆವೈಸಿ(ಜೀವ ಮಾಪಕ ಮರು ದೃಡೀಕರಣ) ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದ್ದು, ಈ ಹಿಂದೆ ಇ-ಕೈವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ, (ಎಎವೈ) ಆದ್ಯತಾ ಪಡಿತರ ಚೀಟಿ) ಬಿಪಿಎಲ್, ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ (ಎಪಿಎಲ್) ಸೇರ್ಪಡೆಗೊಂಡಿರುವ ಸದಸ್ಯರುಗಳು ಕೂಡಲೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ತಮ್ಮ ಬೆರಳಚ್ಚನ್ನು  ನೀಡಿ ಇ-ಕೆವೈಸಿಯನ್ನು (ಜೀವ ಮಾಪಕ ಮರು ದೃಡೀಕರಣ) ಮಾಡಿಸಿಕೊಳ್ಳುವಂತೆ ಕುಮುದ ಅವರು ಕೋರಿದರು.  

ಪಡಿತರ ಚೀಟಿಯಲ್ಲಿ ಈಗಾಗಲೇ ಆಧಾರ್ ಕಾರ್ಡ್ ಜೋಡಣೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ. ಆ ನಿಟ್ಟಿನಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಿಸಲು ಸರ್ಕಾರದ ಆದೇಶವಿದೆ. ವೋಟರ್ ಹೆಲ್ಫ್‍ಲೈನ್ ಆ್ಯಪ್ ಮೂಲಕ ಸ್ಮಾರ್ಟ್ ಪೋನ್ ಬಳಕೆದಾರರು ತಮ್ಮ ಮತ್ತು ಕುಟುಂಬದವರ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವುದರ ಜೊತೆಗೆ ಮತ್ತೊಬ್ಬರ  ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಿಸಬಹುದು ಎಂದು ಅವರು ತಿಳಿಸಿದರು.

ಸ್ಮಾರ್ಟ್ ಪೋನ್ ಹೊಂದಿರದ ಹಾಗೂ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸಲು ತಿಳಿಯದೇ ಇರುವವರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಿದರೆ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.

ಪಡಿತರ ಅಂಗಡಿಯ ಮಾಲೀಕರು ಮತದಾರರಿಂದ ಪಡೆದ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಕ್ರೋಢೀಕರಿಸಿ ಸಂಬಂಧಪಟ್ಟ ಗ್ರಾಮ ಲೆಕ್ಕಿಗರಿಗೆ ಅಥವಾ ಬಿಎಲ್‍ಒಗಳಿಗೆ ನೀಡಿದರೆ ಅವರು ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುತ್ತಾರೆ ಎಂದರು. 

ಮತದಾರರ ಗುರುತಿನ ಚೀಟಿ ಹೊಂದಿರುವವರು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬಂದು ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಸಲು ಕಷ್ಟವಾಗಬಹುದು. ಆ ನಿಟ್ಟಿನಲ್ಲಿ ಮತದಾರರಿಗೆ ಸಹಾಯವಾಗಲು ಗ್ರಾಮ ಮಟ್ಟದಲ್ಲಿಯೇ ದಾಖಲೆಗಳನ್ನು ಪಡೆದು ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಅವರು ಹೇಳಿದರು. 

ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗೆ ಪಡಿತರವನ್ನು ಪಡೆಯಲು ಬಂದ ಸಂದರ್ಭದಲ್ಲಿ ಅಗತ್ಯ ದಾಖಲಾತಿಗಳನ್ನು ನೀಡಿ ಸಹಕರಿಸಬೇಕು. ನ್ಯಾಯಬೆಲೆ ಅಂಗಡಿಯ ಮಾಲೀಕರು ಪಡಿತರ ವಿತರಣೆಗೆ ಮೊದಲನೇ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಪಡಿತರ ವಿತರಣೆಯಲ್ಲಿ ವಿಳಂಭವಾಗಬಾರದು ಎಂದು ಅವರು ಹೇಳಿದರು.

ಪಡಿತರ ಅಂಗಡಿ ಮಾಲೀಕರು ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.

ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಪೊನ್ನಂಪೇಟೆ ತಾಲ್ಲೂಕಿನ ಸಾಯಿ ಶಂಕರ ಪದವಿ ಪೂರ್ವ ಕಾಲೇಜು, ಸಿಐಟಿ ಕಾಲೇಜು, ಅರಣ್ಯ ಮಹಾವಿದ್ಯಾಲಯ ಸೇರಿದಂತೆ ಇತರೆ ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಸಂಬಂಧಿಸಿದಂತೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರು, ಆಹಾರ ಶಿರಸ್ತೆದಾರರ ನೇತೃತ್ವದಲ್ಲಿ ಈ ಸಂಬಂಧ ಅಭಿಯಾನ ನಡೆಯಿತು.

ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಪಿ.ಎಸ್.ಮಹೇಶ್, ಮಡಿಕೇರಿ ತಾಲ್ಲೂಕು ಆಹಾರ ನಿರೀಕ್ಷಕರಾದ ಯು.ಪಿ.ವೀಣಾ. ಮಡಿಕೇರಿ ತಾಲ್ಲೂಕು ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗಳು ಹಾಗೂ ಮಾಲೀಕರು ಇತರರು ಇದ್ದರು.