ಒಂದು ಗ್ರಾಮ ಪಂಚಾಯಿತಿಯು ಅಭಿವೃದ್ಧಿ ಆಗಬೇಕೆಂದರೆ ಕನಿಷ್ಟ 10 ವರ್ಷಗಳ ಆಡಳಿತ ಇರುವ ಸಕ್ರೀಯ ಆಡಳಿತ ಮಂಡಳಿ ಇರಬೇಕು; ಸಮೀರ್ ಟಿ.ಎಸ್
ಅಧ್ಯಕ್ಷರು: ಮಾಲ್ದಾರೆ ಗ್ರಾಮ ಪಂಚಾಯಿತಿ
ಸಿದ್ದಾಪುರ–ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಅಂದಾಜು 10 ಕಿ.ಮೀ ದೂರದಲ್ಲಿ ಸಿಗುವುದೇ ಮಾಲ್ದಾರೆ ಗ್ರಾಮ ಪಂಚಾಯಿತಿ. ಮಾಲ್ದಾರೆ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 42 ಕಿ.ಮೀ ದೂರದಲ್ಲಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಗೂ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಇರುತ್ತದೆ.
ಮಾಲ್ದಾರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಸಮೀರ್ ಟಿ.ಎಸ್ ರವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ "ನಮ್ಮ ಕೊಡಗು-ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಿತ್ತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಅಧ್ಯಕ್ಷರಾದ ಸಮೀರ್ ಟಿ.ಎಸ್ ರವರು ನಾನು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯ ಪ್ರೇರಣೆ ನನ್ನ ತಾಯಿ ದಿವಂಗತ ಶ್ರೀಮತಿ ಖೈರುನ್ನೀಸ, ನನ್ನ 13 ನೇ ವಯಸ್ಸಿಗೆ ನನ್ನ ತಾಯಿ ರಸ್ ತೆಅಪಘಾತದಲ್ಲಿ ನಿಧನ ಹೊಂದಿದರು ಈ ಘಟನೆಯು ನನಗೆ ತುಂಬಾ ಆಘಾತವನ್ನುಂಟು ಮಾಡಿತು. ಒಂದು ಮನೆಯ ಹಿರಿಯರು ಅಪಘಾತದಂತಹ ಘಟನೆಗಳಲ್ಲಿ ನಿಧನ ಹೊಂದಿದರೆ ಆ ಕುಟುಂಬಕ್ಕೆ ಎಷ್ಟು ನಷ್ಟ ಆಗುತ್ತದೆ ಎಂಬ ಸ್ವತ ಅನುಭವ ನನಗೆ ಇದೆ. ಆದರಿಂದ ಆಗಿನಿಂದ ನಮ್ಮ ಗ್ರಾಮದಲ್ಲಿ ಯಾರಿಗಾದರೂ ಸಮಸ್ಯೆ ಉಂಟಾದಾಗ ಅವರಿಗೆ ಸ್ಪಂದನೆ ಕೊಡಬೇಕೆಂಬ ಹಂಬಲ ಸದಾ ನನ್ನೊಂದಿಗೆ ಇದೆ. ಹಾಗಾಗಿ ನಮ್ಮ ಗ್ರಾಮ ದಲ್ಲಿ ಒಂದು ಯುವಕರ ತಂಡದ ಜೊತೆಗೂಡಿ ಗ್ರಾಮಸ್ಥರ ಹಾಗೂ ಗ್ರಾಮದ ಸಮಸ್ಯೆಗಳಿಗೆ ಹಗಲೂ ರಾತ್ರಿ ಎಂಬ ಸಮಯವನ್ನು ನೋಡದೆ ಸ್ಪಂದಿಸುತ್ತಿದ್ದೇವೆ ಎಂದು ತಿಳಿಸಿದರು.
2020 ರಲ್ಲಿ ಬಂದ ಮೊದಲನೇ ಕೋವಿಡ್ ಅಲೆಯ ಸಮಯದಲ್ಲಿ ನಮ್ಮ ಗ್ರಾಮದ ಸುಮಾರು 68 ಮನೆಗಳನ್ನು 14 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿತ್ತು, ಆ ಸಂದರ್ಭದಲ್ಲಿ ಅವರಿಗೆ ಬೇಕಾದ ಅತ್ಯಾವಶ್ಯಕ ಸಾಮಾಗ್ರಿಗಳು ಔಷಧಿಗಳು, ಆಹಾರ ಕಿಟ್‌ಗಳು, ಗ್ಯಾಸ್ ಸಿಲಿಂಡರ್‌ನ ವ್ಯವಸ್ಥೆ, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನಮ್ಮ ತಂಡದೊಂದಿಗೆ ಕೂಡಿ ನಿರ್ವಹಿಸಿದೆ. ಇದಕ್ಕೆ ಗ್ರಾಮದ ನಿವಾಸಿಯಾದ ಪೋಲೀಸ್ ರತನ್ ಹಾಗೂ ನಿವೃತ್ತ ಸೈನಿಕರಾದ ಮಣಿ ಅವರ ಸಹಕಾರ ತುಂಬಾ ಇತ್ತು. ಈ ನನ್ನ ಕೆಲಸಗಳನ್ನು ಗಮನಿಸಿದ ಗ್ರಾಮಸ್ಥರು ಮುಂದಿನ ಗ್ರಾಮ ಪಂಚಾಯಿತಿಯ ಚುಣಾವಣೆಗೆ ಸ್ಪರ್ದಿಸಲು ನನಗೆ ತಿಳಿಸಿದರು. ನನಗೆ ರಾಜಕೀಯ ಜೀವನದಲ್ಲಿ ಆಸಕ್ತಿ ಇರಲ್ಲಿಲ್ಲ, ಆದರೆ ಗ್ರಾಮಸ್ಥರೆಲ್ಲರ ಒತ್ತಾಸೆಯ ಮೇರೆಗೆ ನಮ್ಮ ಗ್ರಾಮದ ನಿಕಟ ಪೂರ್ವ ಸದಸ್ಯರಾದ ಸಜೀ ಥಾಮಸ್ ಅವರ ಮಾರ್ಗದರ್ಶನದಲ್ಲಿ ಚುಣಾವಣೆಗೆ ಸ್ಪರ್ದಿಸಿ ಗೆಲುವನ್ನು ಸಾಧಿಸಿ, ಬಿ.ಜೆ.ಪಿ ಬೆಂಬಲಿತ ಸದಸ್ಯರೊಂದಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ಸಮೀರ್ ತಿಳಿಸಿದರು.
ಸಮೀರ್ ಟಿ.ಎಸ್ ಅವರು 2021ರಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಅವಧಿಯಲ್ಲೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಅಭಿವೃದ್ಧಿ ಕಾಮಗಾರಿಯ ಬಗ್ಗೆ ಮಾತನಾಡಿದ ಸಮೀರ್ ರವರು ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ನಮ್ಮ ಗ್ರಾಮದ ಅಭಿವೃದ್ದಿಯ ಬಗ್ಗೆ ಹೇಳುವುದಾದರೆ ನಾನೊಬ್ಬ ವೈಫಲ್ಯನಾದ ಅಧ್ಯಕ್ಷನೆಂದು ಹೇಳುತ್ತೇನೆ. ಕಾರಣ ನಾನು ಚುಣಾವಣೆಯಲ್ಲಿ ಗೆಲ್ಲುವ ಮೊದಲು ಗ್ರಾಮದಲ್ಲಿ ಒಂದು ಒಳ್ಳೆಯ ಆಟದ ಮೈದಾನ ಮಾಡಲು ಶ್ರಮಿಸುತ್ತೇನೆ ಎಂದು ಹೇಳಿದ್ದೆ, ಗೆದ್ದ ನಂತರ ಮೈದಾನಕ್ಕೆ ನಾನು 4 ಏಕರೆ ಜಾಗವನ್ನು ಕೂಡ ಸರ್ವೇ ಮಾಡಿದರೂ ಇಲ್ಲಿಯವರೆಗೆ ಅಂದರೆ 2 ವರ್ಷಗಳ ನಂತರ ಕೂಡಾ ಅದಕ್ಕೆ ಸಂಭಂದಪಟ್ಟ ಇಲಾಖೆಗಳ ಅಧಿಕಾರಿಗಳ ಸಹಕಾರ ದೊರೆಯದ ಕಾರಣ ಅದು ನೆನೆಗುದಿಗೆ ಬಿದ್ದಂತಾಗಿದೆ. ಇದರಿಂದಾಗಿ ನನಗೆ ಗ್ರಾಮದ ಯುವಕರೊಂದಿಗೆ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ 1 ವರ್ಷಗಳ ನಂತರವೂ ಕೂಡ ನಮ್ಮ ಗ್ರಾಮದಲ್ಲಿ ಆಧಾರ್ ಕಿಟ್ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಿ ಕೊಡುತ್ತಿಲ್ಲ.
ಪಂಚಾಯಿತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 7 ನೀರಿನ ಟ್ಯಾಂಕ್‌ಗಳಿವೆ. ಜಲಜೀವನ್ ಮಿಷನ್ ಮೂಲಕ 3 ಗ್ರಾಮಗಳಲ್ಲಿ ಅಂದರೆ ಮಾಲ್ದಾರೆ ಗಾಮಕ್ಕೆ 1 ಕೋಟಿ 4 ಲಕ್ಷ, ಬಾಡಗ ಬಾಣಂಗಲ ಗಾಮಕ್ಕೆ 2 ಕೋಟಿ ಹಾಗೂ ಶ್ರಿರಂಗಪಟ್ಟಣ ಗ್ರಾಮಕ್ಕೆ 25 ಲಕ್ಷ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ.
ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಡಿಗಳ ಪ್ರದೇಶಗಳಿದ್ದು ಅಂಚೆದಿಟ್ಟು, ಆಸ್ಥಾನ, ಹಣ್ಣಿನ ತೋಟ ಗೇಟ್, ತಟ್ಟಳ್ಳಿ, ದೊಡ್ಡಹಡ್ಲುಎಂಬ 5 ಹಾಡಿಗಳಿವೆ, ಹಾಡಿಗಳಿಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಮಾಡಿ ಕೊಡಲಾಗಿದೆ.
ನಮ್ಮ ಗ್ರಾಮಸ್ಥರಿಗೆ ನನ್ನ ಕೆಲಸ ಕಾರ್ಯಗಳ ಬಗ್ಗೆ ತೃಪ್ತಿಯಿದ್ದರೂ, ನನ್ನ ಮನಸ್ಸಿಗೆ ತೃಪ್ತಿ ಸಿಗುತ್ತಿಲ್ಲ, ಕಾರಣ ನಾನು ಯೋಜನೆ ಮಾಡಿದ ವೇಗದಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ ಎಂಬ ನೋವು ಸದಾ ನನ್ನ ಮನದಲ್ಲಿದೆ.
ನಮ್ಮಲ್ಲಿ ಕಸವಿಲೇವಾರಿಗೆ ಜಾಗದ ಸಮಸ್ಯೆಯಿದ್ದು ಅದಕ್ಕೆ ಸೂಕ್ತಜಾಗವನ್ನೂ ಕೂಡ ನಿಶ್ಚಯಮಾಡಲಾಗಿದೆ, ಆದರೆ ಆ ಜಾಗದ ಮೇಲೆ ನ್ಯಾಯಾಲದಿಂದ ಸ್ಟೇ ಮಾಡಲಾಗಿ ಆದರಿಂದ ಆ ಕಾಮಗಾರಿಯೂ ನಿಂತಿದೆ. ಸದ್ಯ ಕಸವಿಲೇವಾರಿಗೆ ಸ್ಥಳೀಯ ಎಸ್ಟೇಟ್‌ಗಳಲ್ಲಿ ಅವರ ಅನುಮತಿಯ ಮೇರೆಗೆ ಹಸಿಕಸದ ಗುಂಡಿಗಳನ್ನು ಮಾಡಿ ಅಲ್ಲಿ ಹಸಿ ಕಸ ತ್ಯಾಜ್ಯ ವಿಲೇವಾರಿ ಮಾಡಿ ಗೊಬ್ಬರವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಒಣ ಕಸವನ್ನು ರೀಸೈಕ್ಲಿಂಗ್‌ಗಾಗಿ ಮೈಸೂರಿನ ವೆನ್‌ಲಾಕ್ ಗೆ ನಾವು ಹಣ ನೀಡಿ ಕಳಿಸಿಕೊಡುತ್ತಿದ್ದೇವೆ.
ನಮ್ಮ ಪಂಚಾಯಿತಿಯಲ್ಲಿ ಸ್ಚಚ್ಚ ಭಾರತ್ ಯೋಜನೆ ಅಡಿಯಲ್ಲಿ 100 ಪ್ರತಿಶತ ಶೌಚಾಲಯದ ನಿರ್ಮಾಣ ಆಗಿದೆ. ರಸ್ತೆಗಳ ಅಭಿವೃದ್ಧಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರಿಂದ 3ಕೋಟಿ ಅನುದಾನ ಬಿಡುಗಡೆಯಾಗಿದೆ. ನಮ್ಮಲ್ಲಿ ವಿದ್ಯುತ್ ಸಮಸ್ಯೆಇದ್ದು, ಮಳೆಗಾಲದಲ್ಲಿ ಮರಗಳು ಬಿದ್ದು ತೊಂದರೆಗಳು ಆಗುತ್ತಿದೆ. ಆದರೆ, ಬೇಸಿಗೆಯಲ್ಲಿ Voltaģe ಸಮಸ್ಯೆ ಹೆಚ್ಚಿದೆ. ಆದರಿಂದ ಸೆಸ್ಕ್‌ನ ಅಧಿಕಾರಿಗಳಿಗೆ ಹೆಚ್ಚಿನ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಮನವಿ ಮಾಡಲಾಗಿದೆ ಎಂದು ಸಮೀರ್ ತಿಳಿಸಿದರು.
ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲರಿಗೂ ನಿವೇಶನ ದೊರಕಬೇಕೆಂಬುದು ನನ್ನ ಕನಸಾಗಿದೆ ಆದಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದು ಸಮೀರ್, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಸ್ಟೇಟ್ ಕಾರ್ಮಿಕರು ಹೆಚ್ಚಾಗಿದ್ದು ಅವರಿಗೆ ಶಾಶ್ವತವಾದ ಮನೆ ನಿರ್ಮಿಸಲು ನಿವೇಶನಕ್ಕಾಗಿ 7 ಏಕರೆ ಜಮೀನನ್ನು ಗೊತ್ತುಪಡಿಸಲಾಗಿದೆ, ಹಾಗೂ ಮೈದಾನಕ್ಕೆ 2 ಏಕರೆ ಹಾಗೂ ಸ್ಮಶಾನಕ್ಕೆ 1 ಏಕರೆ ಜಾಗವನ್ನು ಗೊತ್ತುಪಡಿಸಿ ಜಾಗದ ಮಂಜೂರಾತಿಗಾಗಿ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ದಾಖಲಾತಿಗಳನ್ನು ತಲುಪಿಸಲಾಗಿದೆ.
ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಹೈನುಗಾರಿಗೆ ಹಾಲು ಡೈರಿಯನ್ನು ಪ್ರಾರಂಭಿಸಲು ಶ್ರಮಿಸಿದೆ ಆದರೆ ನಮ್ಮಲ್ಲಿ 50% ಅರಣ್ಯ ಪ್ರದೇಶವಾಗಿದ್ದು, ನಿಗದಿತ ಮಟ್ಟದಲ್ಲಿ ಹಾಲು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ, ಅಲ್ಲದೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವ ಉದ್ಯೋಗಕ್ಕೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅರಣ್ಯ ಪ್ರದೇಶವಾಗಿರುವುದರಿಂದ ಸಂಜೆ 7 ಗಂಟೆಯ ಮೇಲೆ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಯುವಕರಲ್ಲಿ ಬಹುಜನರು ಉದ್ಯೋಗ ನಿಮಿತ್ತ ಹೊರ ನಗರಗಳಲ್ಲಿ ನೆಲೆಸಿದ್ದಾರೆ.
ಒಂದು ಗ್ರಾಮ ಪಂಚಾಯಿತಿಯು ಅಭಿವೃದ್ಧಿ ಆಗಬೇಕೆಂದರೆ ಕನಿಷ್ಟ 10 ವರ್ಷಗಳ ಆಡಳಿತ ಇರುವ ಸಕ್ರಿಯ ಆಡಳಿತ ಮಂಡಳಿ ಇರಬೇಕು ಆಗ ಗ್ರಾಮದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು ಎಂದು ಸಮೀರ್‌ರವರು ಅಭಿಪ್ರಾಯಪಟ್ಟರು.
ಪಂಚಾಯಿತಿಗೆ ಪ್ರಸ್ತುತ ಲಭಿಸುತ್ತಿರುವ ಅನುದಾನಗಳು ಸಾಕಾಗುವುದಿಲ್ಲ. ಚರಂಡಿ, ರಸ್ತೆ, SC-ST ಮೀಸಲಾತಿ ಇರುವುದರಿಂದ ಕನಿಷ್ಠ ಒಂದು ವಾರ್ಡ್ ಗೆ 10 ಲಕ್ಷ ಅನುದಾನ ಬೇಕು. ಅಲ್ಲದೆ ಪಂಚಾಯಿತಿ ಸದಸ್ಯರಿಗೂ ಸರಿಯಾದ ಗೌರವಧನ ದೊರೆಯುತಿಲ್ಲ.
ನನಗೆ ಮಾಲ್ದಾರೆ ಗ್ರಾಮಸ್ಥರ, ಪಂಚಾಯಿತಿ ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿ ವರ್ಗದ ಸಹಕಾರ ಹಾಗೂ ಪ್ರೋತ್ಸಾಹ ಉತ್ತಮ ರೀತಿಯಲ್ಲಿ ದೊರೆಯುತ್ತಿದೆ. ಇದರಿಂದಾಗಿ ಪಂಚಾಯಿತಿಯ ಅಭಿವೃದ್ಧಿಗೆ ಹೊಸಪ್ರಯತ್ನ ಮಾಡಲು ಶ್ರಮಿಸುತ್ತಿದ್ದೇನೆ ಆದರೆ ಸಂಬಂಧಪಟ್ಟ ಇಲಾಖೆಗಳ ಆಧಿಕಾರಿಗಳ ಸಹಕಾರ ದೊರೆಯುತ್ತಿಲ್ಲ. ನಮ್ಮ ತಾಲೂಕಿನ ತಹಶೀಲ್ದಾರಾದ ಯೋಗಾನಂದ ಮತ್ತು ಶಾಸಕರಾದ ಕೆ.ಜಿ. ಬೋಪಯ್ಯ ಅವರ ಸಹಕಾರ ಉತ್ತಮವಾಗಿ ದೊರಕಿದೆ ಎಂದು ಸಮೀರ್ ಈ ಸಂದರ್ಭದಲ್ಲಿ ತಿಳಿಸಿದರು.
ಪ್ರಸ್ತುತ ಸಾಮಾಜಿಕ ವಿದ್ಯಾಮಾನಗಳ ಬಗ್ಗೆ ಮಾತನಾಡಿದ ಸಮೀರ್ ರವರು ಈಗಿನ ಯುವಶಕ್ತಿಯು ಜಾತಿ ಧರ್ಮದ ವಿಷಯವನ್ನು ಬಿಡಬೇಕು. ಜಾತಿ ಸಂಬಂಧದ ಬದಲು ಸೋದರತ್ವಭಾವ ಕ್ಕೆ, ಗೆಳೆತನಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಬೇಕು. ಜಾತಿ ಮುಕ್ತ ಸಮಾಜದ ನಿರ್ಮಾಣವಾಗಬೇಕಾಗಿದೆ. ಹಾಗಾದರೆ ಮಾತ್ರ ಶಾಂತಿಯುತ ಸಹಬಾಳ್ವೆ ನಡೆಸಲು ಸಾಧ್ಯ. ಈಗಿನ ಶಿಕ್ಷಣದ ವ್ಯವಸ್ಥೆಯನ್ನು ನೋಡಿದರೆ ಸಾಮಾನ್ಯವಾಗಿ ಹಲವಾರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ನಿಶ್ಚಿತ ಜಾತಿ ಅಥವಾ ಧರ್ಮದದವರಾಗಿದ್ದು ಅಲ್ಲಿ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಕೂಡ ಅದೇ ಆಧಾರದ ಮನೋಭಾವನೆಯ ಶಿಕ್ಷಣ ದೊರೆಯುತ್ತಿದೆ. ಆದರಿಂದ ಬೇರೆ ಬೇರೆ ಜಾತಿ ಧರ್ಮಗಳ ಬಗ್ಗೆ ಗೌರವ ಕೊಡುವ ಪ್ರವೃತಿ ಮಕ್ಕಳಲ್ಲಿ ಬೆಳೆಯುತ್ತಿಲ್ಲ. ಅದರ ಬದಲು ತಮ್ಮ ಸಂಸ್ಕೃತಿಯನ್ನು ಆಚರಿಸಿ ಜೊತೆಗೆ ಉಳಿದ ಜಾತಿ ಧರ್ಮಗಳನ್ನು ಗೌರವಿಸುವ ಮನೋಭಾವನೆ ಬೆಳೆದರೆ ಉತ್ತಮವಾದ ಸಮಾಜದ ನಿರ್ಮಾಣ ವಾಗುವುದರಲ್ಲಿ ಸಂಶಯವಿಲ್ಲ ಎಂದು ಸಮೀರ್‌ರವರು ನುಡಿದರು.
ನಮ್ಮಲ್ಲಿ ದೇವಾಲಯ ಮಸೀದಿಗಳ ಸಂಖ್ಯೆ ಹೆಚ್ಚಾಗಿದೆ ಆದರೆ ಮಾನವೀಯ ಸಂಬಂಧಗಳು ಕಮ್ಮಿ ಆಗಿವೆ. ಧರ್ಮದ ಮೂಲಭೂತವಾದ ವನ್ನು ಹೆಚ್ಚಿಸಿ ಯುವಕರನ್ನು ಉತ್ಪ್ರೇಕ್ಷೆಗೊಳಿಸುವುದು ಹಾಗೂ ರಾಜಕೀಯ ಹಿತಾಸಕ್ತಿಗೆ ಧರ್ಮಗಳನ್ನು ಬಳಸುವುದು ಹೆಚ್ಚಾಗಿದೆ. ಇದನ್ನು ಯುವಕರು ತಿಳಿದುಕೊಂಡು ರಾಜಕೀಯ ಹಾಗೂ ದುಷ್ಟ ಮನೋಭಾವದ ವ್ಯಕ್ತಿಗಳೊಂದಿಗೆ ಸೇರದೆ ಮಾನವೀಯತೆಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು “ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡುತ್ತಾ ಮಾಲ್ದಾರೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸಮೀರ್ ರವರು ತಮ್ಮ ಮನದ ಮಾತುಗಳನ್ನು ವ್ಯಕ್ತಪಡಿಸಿದರು.
ಇನ್ನುಳಿದಂತೆ ಸಮೀರ್ ರವರು ಮಾನವ ಹಕ್ಕುಗಳ ಪರಿಷತ್ ಮತ್ತು ಭ್ರಷ್ಟಾಚಾರ ಮುಕ್ಕ ಸಮಾಜ ಇದರ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್‌ನ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ BJP ಕಾರ್ಯಕರ್ತರಾಗಿದ್ದು, ಹುಂಡಿ ಗ್ರಾಮದ ಯೂತ್ ಕ್ಲಬ್ ಇದರ ಸ್ಥಾಪಕರಾಗಿದ್ದಾರೆ.
ಮೂಲತಃ ಕೃಷಿಕರು ಹಾಗೂ ವ್ಯಾಪಾರೋದ್ಯಮಿಯಾಗಿರುವ ಸಮೀರ್ ಟಿ.ಎಸ್ ರವರ ತಂದೆ ತಂದೆ ಸಿದ್ಧೀಕ್ ಹಾಗೂ ತಾಯಿ ದಿ. ಖೈರುನ್ನೀಸ ರವರ ಪುತ್ರರಾಗಿದ್ದಾರೆ. ಪತ್ನಿ ಸನಾ ಅಫೀಫ ಹಾಗೂ ಸಹೋದರರು: ಮುನೀರ್ ಹಾಗೂ ಸೈಫುದ್ದೀನ್
ಸಮೀರ್ ಟಿ.ಎಸ್ ರವರು ಪ್ರಸ್ತುತ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಡಿ ಗ್ರಾಮದ ವಾರ್ಡ್ ನಂ.1 ರಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಶ್ರೀಯುತರ ಕೌಟುಂಬಿಕ ಜೀವನವು, ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
Maldare: ಮಾಲ್ದಾರೆ ಗ್ರಾಮ ಪಂಚಾಯಿತಿ ಬಗ್ಗೆ ಒಂದಿಷ್ಟು ಮಾಹಿತಿ:
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network