ಒಂದು ಮೊಟ್ಟೆಯ ಕಥೆ... !!!
( 26-08-2022 ರ ಶುಕ್ರವಾರದಂದು ಮಡಿಕೇರಿಯಲ್ಲಿ ಮೊಟ್ಟೆ ಮಾರಾಟ ನಿಷೇಧವಂತೆ ಹೌದಾ..?)
ಮೊಟ್ಟೆಯಲ್ಲಿ ಔಷಧೀಯ ಗುಣ ಇದೆಯಂತೆ..
ಮೊಟ್ಟೆ ಶಕ್ತಿವಧ೯ಕವಂತೆ..
ಮೊಟ್ಟೆ ಸೇವನೆ ಲವಲವಿಕೆಗೆ ಕಾರಣವಾಗುತ್ತಂತೆ.
ಇದೇ ಮೊಟ್ಟೆ ಈಗ ರಾಜಕೀಯ ಪಕ್ಷಗಳ ಕಿತ್ತಾಟ, ರಾಜಕೀಯ ನಾಯಕರ ಶಕ್ತಿವಧ೯ನೆಗೂ ಕಾರಣವಾಗುತ್ತಿದೆ.
ಹೌದಲ್ಲ.. ಮೊಟ್ಟೆ ಎಷ್ಟೇ ಚಿಕ್ಕಗಾತ್ರದ್ದಾಗಿದ್ದರೂ ತಾನು ಎಂಥ ಪವರ್ ಫುಲ್ ಎಂದು ಸಾಬೀತು ಪಡಿಸಿದೆ.
ಇನ್ನು ಮುಂದೆ ಮೊಟ್ಟೆ ಎಂದರೆ ನಿಲ೯ಕ್ಷ್ಯ ವಹಿಸಬೇಕಾಗಿಲ್ಲ. ಬದಲಿಗೆ.. ಮೊಟ್ಟೆ ಎಂದರೆ ಹುಷಾರಾಗಿ ನೋಡುವಂತಾಗಿದೆ.
ಕೊಡಗಿನ ಮೊಟ್ಟೆಗೆ ದೇಶವ್ಯಾಪಿ ಸುದ್ದಿಯಾಗುವ ಮಾನ್ಯತೆ ದೊರಕಿದೆ…
ಮೊಟ್ಟೆ ಕಥೆ ಶುರುವಾಗುವುದೇ...ಹೀಗೆ..
ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆಂದು ಸಿದ್ದರಾಮಯ್ಯ ಇತರ ನಾಯಕರ ಜತೆ ಕೊಡಗಿಗೆ ಬಂದರು. ಟಿಪ್ಪು ಜಯಂತಿ, ಕೊಡಗರು ದನದ ಮಾಂಸ ತಿನ್ನುತ್ತಾರೆ ಎಂಬೆಲ್ಲಾ ಸಿದ್ದು ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ಪ್ರತಿಭಟನೆಗೆ ಕಾಯುತ್ತಿದ್ದರು. ಇದರ ಜತೆ ಜತೆಗೆಯೇ ಸಿದ್ದು ಹಚ್ಚಿದ್ದ ಸಾವಕ೯ರ್ ಫೋಟೋ ವಿವಾದದ ಕಿಚ್ಚು ಕೂಡ ಇತ್ತು.
ಸಿದ್ದರಾಮಯ್ಯ ಸಾಗಿದಂತೆಲ್ಲಾ ಕಪ್ಪು ಬಾವುಟ ಹಿಡಿದು ಬಿಜೆಪಿ ಕಾಯ೯ಕತ೯ರು ಪ್ರತಿಭಟನೆಗೆ ಮುಂದಾದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಸರ್ಕಲ್‌ನಲ್ಲಿ ಸಿದ್ದರಾಮಯ್ಯ ಕಾರು ಸಾಗುತ್ತಿದ್ದಂತೆಯೇ ಎಲ್ಲಿಂದಲೋ ಗಾಳಿಯಲ್ಲಿ ತೂರಿಬಂದ ಮೊಟ್ಟೆ ಕಾರ್ ಪಕ್ಕದಲ್ಲಿ ಸಾಗಿ ಪತ್ರಿಕಾಛಾಯಾಗ್ರಾಹಕ ಲಕ್ಷ್ಮೀಶ್ ಶಟ್೯ ಮೇಲೆ ಬಿದ್ದು ಶಟ್೯ ಪೂತಿ೯ ಮೊಟ್ಟೆಯೊಳಗಿನ ಲೋಳೆ ಹಳದಿಯು ಆವರಿಸುವಂತೆ ಮಾಡಿತ್ತು.
ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮೊಟ್ಟೆ ಎಸೆತದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಮೊಟ್ಟೆ ಎಸೆದರಾ.. ಎಲ್ಲಿ. ಯಾವಾಗ ಎಂದು ಪ್ರಶ್ನಿಸಿದ್ದೂ ಆಯಿತು.
ಸಂಜೆ ಮಡಿಕೇರಿಯಿಂದ ಕುಶಾಲನಗರಕ್ಕೆ ಸಾಗುವಾಗ ಗುಡ್ಡೆಹೊಸೂರು ಬಳಿ ಸಂಪತ್ ಎಂಬ ಸೋಮವಾರಪೇಟೆ ನಿವಾಸಿ ಮೊಟ್ಟೆಯೊಂದನ್ನು ಸಿದ್ದರಾಮಯ್ಯ ಕಾರ್‌ಗೆ ಎಸೆದೇ ಬಿಟ್ಟ.... ಮೊಟ್ಟೆ ಎಸೆದದ್ದೇ ಎಸೆದದ್ದು, ಕೊಡಗಿಗಿಂತ ಮೊದಲೇ ಬೆಂಗಳೂರಿನ ಕಾಂಗ್ರೆಸ್ ಕಚೇರಿ ಜಾಗ್ರತಗೊಂಡಿತು. ಮೊಟ್ಟೆ ಎಸೆತವನ್ನು ಅಪಮಾನ ಎಂದು ಆಕ್ರೋಷದಿಂದ ಹೇಳತೊಡಗಿದ ರಾಜ್ಯ ಕಾಂಗ್ರೆಸ್ ನಾಯಕರು, ಬಿಜೆಪಿ ವಿರುದ್ದ ಹರಿಹಾಯತೊಡಗಿದರು.
ಸಂಜೆ ವೇಳೆ ಸೋಮವಾರಪೇಟೆ ತಲುಪಿದ ಸಿದ್ದರಾಮಯ್ಯ ಮೊಟ್ಟೆ ಎಸೆತ ತಡೆಯುವಲ್ಲಿ ವಿಫಲರಾದ, .. ಅದರಲ್ಲಿಯೂ ಪ್ರತಿಪಕ್ಷ ಮುಖಂಡನಾದ ತನಗೇ ಸೂಕ್ತ ಭದ್ರತೆ ನೀಡುವಲ್ಲಿ ವಿಫಲರಾದ ಕೊಡಗು ಪೊಲೀಸ್ ಮೇಲೆ ಹರಿಹಾಯ್ದರು. ಎಸ್ ಪಿ ಕಛೇರಿಗೇ ಆ. 26 ರಂದು ಶುಕ್ರವಾರ ಮುತ್ತಿಗೆ ಹಾಕುವುದಾಗಿ ಘೋಷಿಸಿದರು. ಸಿದ್ದು ಘೋಷಣೆ ರಾಜ್ಯವ್ಯಾಪಿ ಮೊಳಗತೊಡಗಿತು. 70 ಶಾಸಕರು, 20 ಎಂಎಲ್. ಸಿ ಗಳು ಮಡಿಕೇರಿ ಚಲೋ....ಗೆ ಬರೋದಾಗಿ ಪ್ರಕಟಿಸಲಾಯಿತು.
ಗುರುವಾರ ರಾತ್ರಿಯಿಂದಲೇ ಕಾಂಗ್ರೆಸ್ ನಾಯಕರ ಟೀಕಾಸ್ತ್ರಗಳ ಸುರಿಮಳೆಯಾಗತೊಡಗಿತು. ಬಿಜೆಪಿ ಮುಖಂಡರೂ ಛೇ.. ಮೊಟ್ಟೆ ಎಸೆಯಬಾರದಿತ್ತು ಎಂದು ಘಟನೆ ಖಂಡಿಸಿ ಹೇಳಿಕೆ ನೀಡತೊಡಗಿದರು. ಮೊಟ್ಟೆ ಎಸೆತಕ್ಕೆ ತಿಪ್ಪೆ ಸಾರಿಸತೊಡಗಿದರು...
ಘಟನೆ ದಿನ ಬೆಂಗಳೂರಿನಲ್ಲಿದ್ದ ಜಿಲ್ಲೆಯ ಇಬ್ಬರೂ ಬಿಜೆಪಿ ಶಾಸಕರು ಕೊಡಗಿಗೆ ಬಂದರು. ಶುಕ್ರವಾರ ಮಡಿಕೇರಿ ಚಲೋದ ಟ್ರೈಯಲ್ ರನ್ ಎಂಬಂತೆ ಜಿಲ್ಲಾ ಕಾಂಗ್ರೆಸ್ ನಾಯಕರು ಮಡಿಕೇರಿಯಲ್ಲಿ ಎಸ್ ಪಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಎಸ್ ಪಿ ವಿರುದ್ದ ಧಿಕ್ಕಾರ ಘೋಷಣೆ ಮೊಳಗಿದವು. ಕೊಡಗಿನವರೇ ಆದ ಎಸ್ ಪಿ. ಕ್ಯಾಪ್ಟನ್ ಅಯ್ಯಪ್ಪ "ನನ್ನ ಮೇಲೆ ಯಾರದ್ದೇ ಒತ್ತಡವಿಲ್ಲ" ಎಂದು ಸಮಾಜಾಯಿಸಿಕೆ ನೀಡಿದರು.
ಮೊಟ್ಟೆ ಎಸೆದಾತ ಬಿಜೆಪಿಯವನಲ್ಲ.. ಮೊಟ್ಟೆ ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ತಿರುಗೇಟು ನೀಡಲಾರಂಭಿಸಿತು.
ಬೋಪಯ್ಯ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ "ನನ್ನ ಮನೆ ನಾಯಿಗಳು ನಿಮ್ಮನ್ನು ಸ್ವಾಗತಿಸುತ್ತವೆ" ಎಂದು ಶಾಸಕ ಬೋಪಯ್ಯ ಮೊಟ್ಟೆ ಪ್ರಕರಣಕ್ಕೆ ನಾಯಿಗಳನ್ನೂ ಎಳೆದು ತಂದದ್ದೂ ಆಯಿತು. ಶನಿವಾರ ಕೂಡ ಕಾಂಗ್ರೆಸ್ - ಬಿಜೆಪಿ ನಾಯಕರಲ್ಲಿ ಜಿದ್ದಾ ಜಿದ್ದಿನ ಹೇಳಿಕೆ ನಿರೀಕ್ಷೆ ಮಾಡಲಾಗಿತ್ತು.
ಕಹಾನಿ ಮೇ ಟ್ವಿಸ್ಟ್ ಎಂಬಂತೆ.. ಒಂದು ರೋಮಾಂಚನಕಾರಿ ಸಿನಿಮಾ ಕಥೆಯಂತೆ ಶನಿವಾರ ಮಧ್ಯಾಹ್ನದ ವೇಳಿಗೆ ಪ್ರಕರಣ ಟ್ವಿಸ್ಟ್ ಪಡೆಯಿತು. ಮೊಟ್ಟೆ ಎಸೆದಿದ್ದ ಸೋಮವಾರಪೇಟೆ ಮೂಲದ ಸಂಪತ್ ಎಂಬಾತ ಕುಶಾಲನಗರ ನ್ಯಾಯಾಲಯಕ್ಕೆ ಬಂದು ಜಾಮೀನು ಪಡೆದುಕೊಂಡ. ನಾನು ಕಾಂಗ್ರೆಸ್ಸಿನವನು, ಸಿದ್ದರಾಮಯ್ಯ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದ ಹಿನ್ನಲೆಯಲ್ಲಿ ಸಿ್ಟ್ಟುಗೊಂಡಿದ್ದೆ. ಹೀಗಾಗಿ ಬೇರೇನೋ ಕೆಲಸಕ್ಕೆಂದು ಗುಡ್ಡೆಹೊಸೂರಿಗೆ ಬಂದಿದ್ದವ ಮೊಟ್ಟೆ ಎಸೆದೆ ಎಂದು ಹೇಳಿಕೆ ನೀಡಿಯೇ ಬಿಟ್ಟ..
ಈ ಮಧ್ಯೆ ಮಡಿಕೇರಿ ಚಲೋ ದಿನದಂದೇ ಬಿಜೆಪಿ ಕೂಡ ಮಡಿಕೇರಿಯಲ್ಲಿ ಜನಜಾಗೃತಿ ಸಮಾವೇಶ ಆಯೋಜಿಸುವುದಾಗಿ ಘೋಷಿಸಿತು. 1 ಲಕ್ಷ ಜನ ಸೇರಿಸುತ್ತೇವೆ ಎಂದು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪ್ರಕಟಿಸಿದರು.
ಆ.26 ಶುಕ್ರವಾರ - ಕಾಂಗ್ರೆಸ್ಸಿಗರು 1 ಲಕ್ಷ, ಬಿಜೆಪಿಯವರು 1 ಲಕ್ಷ,,,
ಅಯ್ಯೋ.. ನಮ್ ಪುಟ್ಟ ಮಡಿಕೇರಿಯಲ್ಲಿ 2 ಲಕ್ಷ ಜನ ಸೇರಿದರೆ ಊರಿನ ಗತಿಯೇನು ಎಂದು ಕೇಳಿದರೆ... ಡೋಂಟ್ ವರಿ.. ಪೊಲೀಸರು ಎಲ್ಲಾ ನೋಡಿಕೊಳ್ಳುತ್ತಾರೆ ಎಂದು ಶಾಸಕರು ಉತ್ತರಿಸಿದರು.
ಹೌದಲ್ಲ....
ಪೊಲೀಸರ ಮುಂದಿನ ನಡೆ ಏನಿರಬಹುದು..
2 ಲಕ್ಷ ಜನ ಹೋಗಲಿ.. 50 ಸಾವಿರ ಜನ ಸೇರಿದರೂ ಮಡಿಕೇರಿಗೆ ತಡೆದುಕೊಳ್ಳಲು ಸಾಧ್ಯವೇ? ಹೀಗಿದ್ದ ಮೇಲೆ ಪೊಲೀಸರು ಏನು ತಂತ್ರ ಮಾಡಿಯಾರು? ಸಾಧ್ಯತೆ ಏನೆಂದರೆ.. ಕಾಂಗ್ರೆಸ್ ಮತ್ತು ಬಿಜೆಪಿಯವರು -ಎರಡೂ ಪರಸ್ಪರ ದ್ವೇಷಿಸುತ್ತಿರುವ ಪಕ್ಷಗಳು ಒಂದೇ ದಿನ... ಒಂದೇ ಸಮಯದಲ್ಲಿ... ಒಂದೇ ಊರಿನಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ಕಾನೂನು ಭಂಗವಾಗುವ ಸಾಧ್ಯತೆಯಿದೆ. ಹೀಗಾಗಿ ಎರಡೂ ಸಮಾವೇಶಗಳಿಗೂ ಅನುಮತಿ ನೀಡುವುದು ಸೂಕ್ತ ಅಲ್ಲ ಎಂದು ಗುಪ್ತಚರ ಇಲಾಖೆ ವರದಿ ಆಧರಿಸಿ ಗೖಹ ಇಲಾಖೆಗೆ ತಿಳಿಸಬಹುದು.
ರಾಜ್ಯ ಗೖಹ ಇಲಾಖೆ ಕೊಡಗು ಪೊಲೀಸ್ ಮಾಹಿತಿ ಆಧರಿಸಿ ಸಮಾವೇಶಕ್ಕೆ ಅವಕಾಶ ನೀಡಲಾಗದು ಎಂದು ಹೇಳಬಹುದು. ಬೇಕಿದ್ದರೆ ಗುರುವಾರ ರಾತ್ರಿಯಿಂದಲೇ ಮಡಿಕೇರಿಯಲ್ಲಿ 1 ದಿನಗಳ ಕಾಲ ಸೆ. 144 ನಿಶೇಧಾಜ್ಞೆ ವಿಧಿಸುವ ಎಲ್ಲಾ ಸಾಧ್ಯತೆಯಿದೆ.
ಇದೇ ದಾರಿ ಪೊಲೀಸ್ ಮತ್ತು ಜಿಲ್ಲಾಡಳಿತ ಹಾಗೂ ಸಕಾ೯ರದ ಮುಂದಿರುವ ಸುರಕ್ಷಿತ ಮಾಗ೯, ಉಪಾಯ.!
ರಾಜ್ಯ ಬಿಜೆಪಿ ಸಕಾ೯ರಕ್ಕೆ ಮಡಿಕೇರಿ ಚಲೋವನ್ನು ಬಗ್ಗು ಬಡಿಯಲು ಇದೇ ದಾರಿ ಇರುವುದು ಕೂಡ. ನೀವೂ ಸಮಾವೇಶ ಮಾಡಬೇಡಿ, ನಾವೂ ಮಾಡೋದಿಲ್ಲ ಎಂದು ಸಮಾವೇಶ ಮತ್ತು ಪ್ರತಿಭಟನೆಯ ಎಲ್ಲಾ ದಾರಿ ಮುಚ್ಚಿಸುವ ತಂತ್ರಗಾರಿಕೆ ಇದು.
ನಾನು ಕಾಂಗ್ರೆಸ್ಸಿಗ ಎಂಬ ಮೊಟ್ಟೆ ಎಸೆದಾತನ ಹೇಳಿಕೆಯಿಂದ ಮುಜುಗರಕ್ಕೆ ಈಡಾಗಿರುವ ಕಾಂಗ್ರೆಸ್ ಮೊಟ್ಟೆ ಮೂಲಕ ತನಗೆ ಕೊಡಗಿನಿಂದ ಸಿಕ್ಕಿರುವ ಬೂಸ್ಟರ್ ಪ್ರಚಾರವನ್ನು ಸುಲಭವಾಗಿ ಬಿಡಲೂ ಸಿದ್ದವಿಲ್ಲ. ಹೀಗಾಗಿ ಕಾಂಗ್ರೆಸ್ ಕೂಡ ಹೊಸ ತಂತ್ರಗಾರಿಕೆ ಹೆಣೆಯಲಿದೆ.
ಮೊಟ್ಟೆ ಎಸೆದ ಸಂಪತ್ ನಮ್ಮವನಲ್ಲ ನಿಮ್ಮ ಪಾರ್ಟಿ ಯವನು ಎಂದು ಎರಡು ಪಕ್ಷದವರು ಸಂಪತ್ ನನ್ನು ಎಳೆದಾಡಿಕೊಳ್ತಾ ಇದ್ದಾರೆ. ಕಾಂಗ್ರೆಸ್ ಬಿಜೆಪಿ ಮೊಟ್ಟೆ ರಾಜಕೀಯದಲ್ಲಿ ಕೊಡಗು ಪೊಲೀಸ್ ಆಮ್ಲೆಟ್ ರೀತಿ ಆಗಿದೆ..
ರೆಡ್ಡಿ ಬ್ರದರ್ ಗಳ ವಿರುದ್ದ ಈ ಹಿಂದೆ ಬಳ್ಳಾರಿ ಚಲೋ ಮಾಡಿ ಕಾಂಗ್ರೆಸ್ ಪ್ರಬಲವಾಗಿತ್ತು. ಕಳೆದ ತಿಂಗಳು ದಾವಣಗೆರೆಯಯಲ್ಲಿ ಸಿದ್ದರಾಮೋತ್ಸವ ಮಾಡಿ ಭಜ೯ರಿ ಯಶಸ್ಸುಗಳಿಸಿ ಬಿಜೆಪಿಯವರು ಬೆಚ್ಚಿ ಬೀಳುವಂತೆ ಮಾಡಲಾಗಿತ್ತು. ಮೂರನೇ ಪ್ರಯತ್ನವಾಗಿ, ಅಥಾ೯ತ್ ಮೂರನೇ ಬೂಸ್ಟರ್ ಡೋಸ್ ಆಗಿ ಮಡಿಕೇರಿ ಚಲೋವನ್ನು ಸುಲಭವಾಗಿ ಕೈ ಬಿಡಲು ಕಾಂಗ್ರೆಸ್ ಸಿದ್ದವಿಲ್ಲ.
ಹೀಗಾಗಿ ಹೊಸ ತಂತ್ರಗಾರಿಕೆ ಕಾಂಗ್ರೆಸ್ ಗೆ ಅತ್ಯಗತ್ಯ, ಅನಿವಾಯ೯ ಕೂಡ. ಹೀಗಾಗಿ ಕಾಂಗ್ರೆಸ್ ತಂತ್ರಗಾರಿಕೆ ನಡೆ ಈಗ ಕುತೂಹಲ ಸೖಷ್ಟಿಸಿದೆ.
ಮೊಟ್ಟೆಯೊಂದು ಕಾಂಗ್ರೆಸ್, ಬಿಜೆಪಿ ನಾಯಕರಲ್ಲಿ ಕಿಡಿ ಹೊತ್ತಿಸಿ ತಾನು ಮಾತ್ರ ಎಲ್ಲವನ್ನೂ ಕಳಚಿಕೊಂಡು ರಸ್ತೆಯಲ್ಲಿ ಅಂಗಾತವಾಗಿ ಬಿದ್ದೇ ಬಿಟ್ಟಿದೆ. ದಾರಿ ಹೋಕರು ರಸ್ತೆಯಲ್ಲಿ ಒಡೆದು ಬಿದ್ದ ಮೊಟ್ಟೆಯ ವಾಸನೆಯಿಂದ ಥೂ....ಗತಿಗೆಟ್ಟ ಮೊಟ್ಟೆ ಎಂದು ಮೂಗು ಮುಚ್ಚಿಕೊಂಡು ನಡೆಯಲಾರಂಭಿಸಿದ್ದಾರೆ....!!!!
ಅಂದಂತೆ, ಈ ಮೊಟ್ಟೆ ಎಸೆತ ಪ್ರಕರಣ ತಂದ ಆಪತ್ತು ಏನ್ ಗೊತ್ತಾ? - ಮುಂದಿನ ದಿನಗಳಲ್ಲಿ ಯಾವುದೇ ಪ್ರತಿಭಟನೆ ರಾಜ್ಯದ ಎಲ್ಲಿಯೇ ನಡೆಯಲಿ... ಅಂಥ ಪ್ರತಿಭಟನೆಯಲ್ಲಿ ಯಾರೇ ಆಗಲಿ ಮೊಟ್ಟೆಯನ್ನು ತಂದಿದ್ದರೆ ಅಂಥವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇಲ್ಲದಿಲ್ಲ.!! - ಈ ಕಾಯ೯ಕ್ರಮಕ್ಕೆ ಮೊಟ್ಟೆ ತರುವಂತಿಲ್ಲ ಎಂದು ಪ್ರತ್ಯೇಕ ಹೇಳಿಕೆ ನೀಡುವ ಸಾಧ್ಯತೆಯಿದೆ.!!
*ಪ್ರತಿಭಟನೆ ಸಂದಭ೯, ಗಣ್ಯರು ಸಾಗುವಾಗ ರಸ್ತೆಬದಿಯಲ್ಲಿ ಮನೆಗೆ ಮೊಟ್ಟೆ ಕೊಂಡೊಯ್ಯುತ್ತಿರುವವರು ಜಾಗ್ರತರಾಗಿರಬೇಕು.!!
*ಅದರಲ್ಲಿಯೂ ಹತ್ತಾರು ಮೊಟ್ಟೆಗಳನ್ನು ಕೊಂಡೊಯ್ಯುವಾತನನ್ನು ಸಂಶಯದಿಂದ ನೋಡುವ ಸ್ಥಿತಿ ನಿಮಾ೯ಣವಾಗಿದೆ.
ಸಮಾರಂಭಗಳಲ್ಲಿ ಯಾರಾದರೂ ವೇದಿಕೆ ಮುಂಭಾಗ ಮೊಟ್ಟೆ ಹಿಡಿದುಕೊಂಡು ಕುಳಿತಿದ್ದರೆ ತಮ್ಮ ಮೇಲೆ ಯಾವುದೇ ಕ್ಷಣದಲ್ಲಿಯೂ ಮೊಟ್ಟೆ ಬೀಳಬಹುದು ಎಂದು ವೇದಿಕೆಯಲ್ಲಿರುವ ಗಣ್ಯರು ಭಯಭೀತರಾಗಿಯೇ ಬೆವರೊರೆಸಿಕೊಳ್ಳುತ್ತಾ ಕೂರಬೇಕಾದ ಸ್ಥಿತಿ ಬಂದೊದಗಿದೆ.!!
*ರಾಜಕಾರಣಿಗಳು, ಗಣ್ಯರು ಯಾವುದೇ ಕ್ಷಣದಲ್ಲಿಯೂ ಮೊಟ್ಟೆಯನ್ನು ಮೈ ಮೇಲೆ ಬೀಳಿಸಿಕೊಳ್ಳಬೇಕಾದ ದುಸ್ಶಿತಿಯನ್ನು ಎದುರಿಸಬೇಕಾದೀತು.!!
*ಕೊಳೆತ ಮೊಟ್ಟೆಗಳು.. ಎಸೆಯಲು ದೊರಕುತ್ತದೆ ಎಂದು ಅಂಗಡಿಗಳಲ್ಲಿ ಪ್ರತ್ಯೇಕ ಬೋಡ್೯ ಕಾಣಬಹುದೇನೋ..!!
*ಕೊಡಗಿನ ಮೊಟ್ಟೆಗಳು ಎಂದು ಪ್ರಚಾರ ನೀಡಿದರೆ ರಾಜ್ಯವ್ಯಾಪಿ ಮೊಟ್ಟೆಗಳಿಗೆ ಮಾರುಕಟ್ಟೆ ದೊರಕೀತು. ಅಷ್ಟೊಂದು ಪ್ರಚಾರ ಕೊಡಗಿನಲ್ಲಿ ಬಿದ್ದ ಮೊಟ್ಟೆಗೆ ದೊರಕಿದೆ.!!
ಮಹಾ ಮಳೆ ನಿಂತ ಕೊಡಗಿನಲ್ಲಿ ಈಗ ಮೊಟ್ಟೆ ಸದ್ದು.. ಸುದ್ದಿಗೆ ಕಾರಣ ಆಗಿದೆ.
ಮುಂದಿನ ಚುನಾವಣೆ ಮುಗಿಯುವವರೆಗೆ ಮೊಟ್ಟೆ ಮತ್ತು ಇತರ ವಿಷಯಗಳು ಕೊಡಗಿನ ಜನರ ನೆಮ್ಮದಿ ಕೆಡಿಸಲಿದೆ.
ಕೊನೆಯದಾಗಿ ಮೊಟ್ಟೆ ಹೇಳಿದ ಕಥೆ....
ಮುಂಬರುವ ಶುಕ್ರವಾರ ಮಡಿಕೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಭಟನಾ ಸಮಾವೇಶ ಆಯೋಜಿಸಿದ್ದೇ ಆದಲ್ಲಿ ಮಡಿಕೇರಿ ನಗರಸಭೆ ಅಂದು ಮಡಿಕೇರಿ ವ್ಯಾಪ್ತಿಯಲ್ಲಿ ಮೊಟ್ಟೆ ಮಾರಾಟ, ಮೊಟ್ಟೆ ಖರೀದಿ, ಮೊಟ್ಟೆ ಸಾಗಾಣೆ ನಿಷೇಧಿಸಲಿದೆ ಎಂಬ ಸುದ್ದಿ ಕೇವಲ ವದಂತಿ.. !!
ಯಾವುದಕ್ಕೂ ಮೊಟ್ಟೆ ವಿಚಾರದಲ್ಲಿ ಹುಷಾರಾಗಿರಿ...
ಬರಹ: ✍️.... ಅನಿಲ್ ಎಚ್.ಟಿ.
( ಪತ್ರಕರ್ತರು )
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network