Header Ads Widget

ಸರ್ಚ್ ಕೂರ್ಗ್ ಮೀಡಿಯ

ಜಿಲ್ಲಾಧಿಕಾರಿ ಅವರೊಂದಿಗೆ ಒಂದು ದಿನ; ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಅವಕಾಶ


ಜಿಲ್ಲಾಧಿಕಾರಿ ಅವರೊಂದಿಗೆ ಒಂದು ದಿನ; ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಅವಕಾಶ

ಮಡಿಕೇರಿ ಆ.22: ಐಎಎಸ್ ಅಧಿಕಾರಿ ಅದರಲ್ಲೂ ಜಿಲ್ಲಾಧಿಕಾರಿ ಅವರ ದಿನಚರಿ ಹೇಗಿರುತ್ತದೆ? ನಿತ್ಯ ಏನೆಲ್ಲ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಸಿ ಕೊಂಡಿರುತ್ತಾರೆ" ಎಂಬುದನ್ನು ತಿಳಿಯುವ ಕೌತುಕ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ಎಲ್ಲರಿಗೂ ಅದನ್ನು ಹತ್ತಿರದಿಂದ ನೋಡುವ, ತಿಳಿಯುವ ಅವಕಾಶ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೋನಿಷಾ ಡಿ.ಆರ್. ಅವರಿಗೆ ಸೋಮವಾರ ಈ ಅವಕಾಶ ದೊರೆಕಿತು.  

ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರೊಂದಿಗೆ ಮೋನಿಷಾ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ  ನಡೆದ ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಅವರ ಕಾರ್ಯಚಟುವಟಿಕೆ ಬಗ್ಗೆ ತಿಳಿದುಕೊಂಡರು.  

ಜಿಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿದ್ಯಾರ್ಥಿನಿಗೆ ಕೌಶಲ್ಯ ಕರ್ನಾಟಕ ಪುಸ್ತಕ ನೀಡಿ, ವಿದ್ಯಾರ್ಥಿಗಳು ಯಾವುದೇ ಸಾಧನೆ ಮಾಡಲು ಛಲ ಇರಬೇಕು ಎಂದು ಅವರು ಹೇಳಿದರು. 

‘ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು, ಸರ್ಕಾರ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಒದಗಿಸಿಕೊಟ್ಟಿದೆ. ಅದರಂತೆ ಜಿಲ್ಲಾಧಿಕಾರಿ ಅವರ ಜೊತೆ ಸಭೆ, ಸಮಾರಂಭ ಹಾಗೂ ಕಡತ ವಿಲೇವಾರಿ ಬಗ್ಗೆ ದಿನಚರಿಯನ್ನು ಹತ್ತಿರದಿಂದ ಪರಿವೀಕ್ಷಣೆ ಮಾಡುವ ಸದಾವಕಾಶ ಮೋನಿಷಾಗೆ ದೊರೆತಿದೆ.’ 

 ವಿದ್ಯಾರ್ಥಿನಿ ಮೋನಿಷಾ.ಡಿ.ಆರ್ ಅವರು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದಲ್ಲಿ ಬಿಎಸ್‍ಸಿ ಅರಣ್ಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

 ವಿದ್ಯಾರ್ಥಿನಿ ಮೋನಿಷಾ ಅವರು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಕಳೆಯುವುದು ಒಂದು ಸುವರ್ಣ ಅವಕಾಶವಾಗಿದೆ ಎಂದು ಅವರು ಹೇಳಿದರು. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಉಮಾ, ಕೌಶಲ್ಯ ಅಭಿವೃದ್ಧಿ ಸಹಾಯಕ ನಿರ್ದೇಶಕರಾದ ರೇಖಾ ಗಣಪತಿ ಅವರು ಇದ್ದರು.